ವಿವಾಹಬಾಹಿರ ಸಂಬಂಧ ಅಥವಾ ವ್ಯಭಿಚಾರದ ಆರೋಪ ಎದುರಿಸುತ್ತಿರುವ ಪತಿಯು, ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ‘ಖಾಸಗಿತನದ ಹಕ್ಕನ್ನು’ ಗುರಾಣಿಯಾಗಿ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನ ಮೇಲಿನ ವ್ಯಭಿಚಾರದ ಆರೋಪವನ್ನು ಸಾಬೀತುಪಡಿಸಲು ಪತ್ನಿಗೆ ಮೊಬೈಲ್ ಕರೆಗಳ ವಿವರ ಮತ್ತು ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ ಮಾಹಿತಿಯನ್ನು ನೀಡುವುದನ್ನು ನಿರಾಕರಿಸಲು, ಖಾಸಗಿತನದ ಹಕ್ಕನ್ನು ಬಳಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಮನ್ಮೋಹನ್ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ನ್ಯಾಯಾಲಯದಲ್ಲಿ ತನ್ನ ಖಾಸಗಿ ಮಾಹಿತಿಯನ್ನು ಬಹಿರಂಗಪಡಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ. ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಪ್ರಕರಣಗಳಲ್ಲಿ ಖಾಸಗಿತನದ ಹಕ್ಕು ಸಂಪೂರ್ಣವಾಗಿರುವುದಿಲ್ಲ, ಬದಲಾಗಿ ಅದು ಕೆಲವು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂಬ ಹೈಕೋರ್ಟ್ ನಿಲುವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಹಿಂದೂ ವಿವಾಹ ಕಾಯ್ದೆಯು ವ್ಯಭಿಚಾರವನ್ನು ವಿಚ್ಛೇದನ ಪಡೆಯಲು ಇರುವ ಒಂದು ಪ್ರಮುಖ ಆಧಾರವೆಂದು ಸ್ಪಷ್ಟವಾಗಿ ಗುರುತಿಸುತ್ತದೆ. ವಿವಾಹದ ಅವಧಿಯಲ್ಲಿ ಪತ್ನಿಯ ಹೊರತಾಗಿ ಬೇರೊಬ್ಬ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿರುವ ವಿವಾಹಿತ ಪುರುಷನಿಗೆ, ಕೇವಲ ‘ಖಾಸಗಿತನದ ಹಕ್ಕಿನ’ ಆಧಾರದ ಮೇಲೆ ನ್ಯಾಯಾಲಯವು ರಕ್ಷಣೆ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಮದುವೆಯ ಹೊರಗಿನ ಒಪ್ಪಿತ ಲೈಂಗಿಕ ಸಂಬಂಧವು ಸಂವಿಧಾನದ 21ನೇ ವಿಧಿಯಡಿ ರಕ್ಷಣೆಗೆ ಅರ್ಹವಲ್ಲ ಎಂಬ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಹಳೆಯ ಆದೇಶವನ್ನೂ ಹೈಕೋರ್ಟ್ ಆಧರಿಸಿತ್ತು.
ಇದನ್ನು ಓದಿದ್ದೀರಾ? ಭಕ್ತಿ ಮತ್ತು ಆರ್ಥಿಕತೆ: ಬದಲಾಗುತ್ತಿರುವ ಧಾರ್ಮಿಕ ಕ್ಷೇತ್ರಗಳ ಸ್ವರೂಪ
ಈ ದಂಪತಿಯು 1998ರಲ್ಲಿ ವಿವಾಹವಾಗಿದ್ದರು ಹಾಗೂ 2000ನೇ ಇಸವಿಯಲ್ಲಿ ಅವರಿಗೆ ಒಬ್ಬ ಮಗಳು ಜನಿಸಿದ್ದಳು. ತನ್ನ ಪತಿ ಜೈಪುರದ ಹೋಟೆಲೊಂದರಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ವಾಸ್ತವ್ಯ ಹೂಡಿದ್ದ ಹಾಗೂ ಆತನಿಗೆ ವಿವಾಹಬಾಹಿರ ಸಂಬಂಧವಿದೆ ಎಂಬುದನ್ನು ಪತ್ನಿ ಪತ್ತೆಹಚ್ಚಿದ್ದರು. ಆ ಬಳಿಕ ಅವರು ಪತಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಿಚ್ಛೇದನಕ್ಕೆ ಕೋರಿದ್ದರು.
ಈ ವಿಚಾರಣೆಯ ವೇಳೆ ಪತಿಯ ಹೋಟೆಲ್ ಬುಕ್ಕಿಂಗ್ ವಿವರ ಹಾಗೂ ಮೊಬೈಲ್ ಕರೆಗಳ ಮಾಹಿತಿಯನ್ನು ಒದಗಿಸುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಪತಿಯು ಮೊದಲು ದೆಹಲಿ ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯ ಹಾಗೂ ಹೈಕೋರ್ಟ್ ತೀರ್ಪಿನಲ್ಲಿ ಯಾವುದೇ ಕಾನೂನು ಲೋಪವಿಲ್ಲ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್, ಪತಿಯ ಮೇಲ್ಮನವಿಯನ್ನು ಇದೀಗ ವಜಾಗೊಳಿಸಿದೆ.




