ಔಷಧ ತಯಾರಿಕಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಬೇಕಾದರೆ ನೂರಾರು ಕೋಟಿ ರೂಪಾಯಿ ವೆಚ್ಚದ ಸ್ವಂತ ಕಾರ್ಖಾನೆಗಳು, ಬೃಹತ್ ರಿಯಾಕ್ಟರ್‌ಗಳು ಹಾಗೂ ಉತ್ಪಾದನಾ ಘಟಕಗಳು ಅತ್ಯಗತ್ಯ ಎಂಬುದು ದಶಕಗಳಿಂದ ನಮ್ಮಲ್ಲಿರುವ ನಂಬಿಕೆ. ಆದರೆ ಹೈದರಾಬಾದ್ ಮೂಲದ ನವೋದ್ಯಮ (ಸ್ಟಾರ್ಟ್‌ಅಪ್) ಸಂಸ್ಥೆಯೊಂದು ನಮ್ಮ ಈ ನಂಬಿಕೆಯನ್ನು ಹುಸಿಯಾಗಿಸಿದೆ.
ಹೈದರಾಬಾದ್ ಮೂಲದ ‘ಹೆಚ್‌ಆರ್‌ವಿ ಫಾರ್ಮಾ’ ಎಂಬ ಈ ಸ್ಟಾರ್ಟ್‌ಅಪ್ ಸಂಸ್ಥೆಯು ಯಾವುದೇ ಸ್ವಂತ ಫ್ಯಾಕ್ಟರಿ ಇಲ್ಲದೆ ಕೇವಲ ಹೊರಗುತ್ತಿಗೆಯ ಬಲದಿಂದಲೇ ಬರೋಬ್ಬರಿ ₹400 ಕೋಟಿಯ ಔಷಧ ಸಾಮ್ರಾಜ್ಯ ಕಟ್ಟಿದೆ. ಈ ಮೂಲಕ ಇಡೀ ಉದ್ಯಮ ಲೋಕವೇ ನಿಬ್ಬೆರಗಾಗಿ ತಿರುಗಿ ನೋಡುವಂತೆ ಮಾಡಿದೆ.
ಇದನ್ನೂ ಓದಿ: ಎರಡು ವರ್ಷದಲ್ಲಿ 28,000 ಸ್ಟಾರ್ಟ್‌ಅಪ್‌ಗಳ ಬಾಗಿಲು ಬಂದ್; ಕಾರಣವೇನು?
ಉದ್ಯಮ ನಡೆಯುವುದಾದರೂ ಹೇಗೆ?
ಈ ಉದ್ಯಮಕ್ಕಾಗಿ ಹೆಚ್‌ಆರ್‌ವಿ ಫಾರ್ಮಾ ‘ಅಸೆಟ್-ಲೈಟ್ ವರ್ಚುವಲ್ ಮಾಡೆಲ್’ (Asset-Light Model) ಅನ್ನು ಅನುಸರಿಸುತ್ತಿದೆ. ಅಂದರೆ ಸಂಸ್ಥೆಯು ಸ್ವತಃ ಯಾವುದೇ ಉತ್ಪಾದನಾ ಯಂತ್ರೋಪಕರಣ ಅಥವಾ ಜಾಗವನ್ನು ಹೊಂದಿರುವುದಿಲ್ಲ. ಬದಲಾಗಿ, ಇಡೀ ಪ್ರಕ್ರಿಯೆಯನ್ನು ಪ್ರಮುಖವಾಗಿ ಮೂರು ಹಂತಗಳಲ್ಲಿ ನಿರ್ವಹಿಸುತ್ತದೆ.
ಮೊದಲನೆಯದಾಗಿ ಸಂಸ್ಥೆಯು ಪ್ರಮುಖವಾಗಿ ಔಷಧದ ಸೂತ್ರೀಕರಣ (Formulation) ಮತ್ತು ತಾಂತ್ರಿಕ ರಹಸ್ಯಗಳನ್ನು ತನ್ನ ಹೆಸರಿನಲ್ಲಿ ನೋಂದಾಯಿಸಿಕೊಂಡು ಬೌದ್ಧಿಕ ಆಸ್ತಿಯನ್ನಾಗಿ ಕಾಯ್ದುಕೊಳ್ಳುತ್ತದೆ. ಅದಾದ ಬಳಿಕ ಎರಡನೆಯ ಹಂತದಲ್ಲಿ ದೇಶಾದ್ಯಂತ ಇರುವ ಸುಮಾರು 53ಕ್ಕೂ ಹೆಚ್ಚು ಗುಣಮಟ್ಟದ ಉತ್ಪಾದನಾ ಪಾಲುದಾರರ ಕಾರ್ಖಾನೆಗಳನ್ನು ಬಳಸಿಕೊಂಡು ತನ್ನ ಫಾರ್ಮುಲಾಗಳ ಆಧಾರದ ಮೇಲೆ ಔಷಧಗಳನ್ನು ಸಿದ್ಧಪಡಿಸುತ್ತದೆ. ಬಳಿಕ ಮೂರನೇ ಹಂತದಲ್ಲಿ ಉತ್ಪಾದನೆಯಾದ ಔಷಧಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ತಾನೇ ನೇರವಾಗಿ ಮಾರಾಟ ಮಾಡುತ್ತದೆ.
ಒಂದು ಫಾರ್ಮಾ ಕಾರ್ಖಾನೆ ಸ್ಥಾಪಿಸಲು ನೂರಾರು ಕೋಟಿ ರೂ. ಬಂಡವಾಳ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಹತ್ತಾರು ಸರ್ಕಾರಿ ಅನುಮತಿಗಳು ಬೇಕಾಗುತ್ತವೆ. ಹೆಚ್‌ಆರ್‌ವಿ ಫಾರ್ಮಾ ಈ ಯಾವುದೇ ವೆಚ್ಚ ಮತ್ತು ತಲೆನೋವಿಲ್ಲದೆ ನೇರವಾಗಿ ಮಾರುಕಟ್ಟೆಗೆ ಪ್ರವೇಶಿಸಿದೆ. ತನಗೆ ಬೇಕಾದ ಗುಣಮಟ್ಟದ ಔಷಧಗಳನ್ನು ಬೇರೆಯವರಿಂದ ಮಾಡಿಸಿಕೊಳ್ಳುವುದರಿಂದ ಇವರ ಸಂಪೂರ್ಣ ಗಮನ ಮಾರ್ಕೆಟಿಂಗ್ ಮತ್ತು ರಿಸರ್ಚ್ ಮೇಲಿರುತ್ತದೆ.
ಹೀಗೆ ಯಾವುದಾದರೂ ಹೊಸ ಔಷಧಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದರೆ, ಸ್ವಂತ ಫ್ಯಾಕ್ಟರಿ ಇರುವವರು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ತಿಂಗಳುಗಟ್ಟಲೆ ಕಾಯಬೇಕು. ಆದರೆ ಇವರು ತಮ್ಮ ಹೊರಗುತ್ತಿಗೆ ಜಾಲದ ಮೂಲಕ ರಾತ್ರೋರಾತ್ರಿ ಉತ್ಪಾದನೆಯನ್ನು ದುಪ್ಪಟ್ಟು ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಹೆಚ್‌ಆರ್‌ವಿ ಫಾರ್ಮಾದ ಈ ಯಶಸ್ಸು ಇಂದಿನ ಆಧುನಿಕ ಉದ್ಯಮ ಜಗತ್ತಿಗೆ ಒಂದು ಅತ್ಯುತ್ತಮ ಉದಾಹರಣೆ. ಉದ್ಯಮ ಆರಂಭಿಸಲು ದೊಡ್ಡ ಮೂಲಸೌಕರ್ಯಕ್ಕಿಂತ ‘ಬೌದ್ಧಿಕ ಆಸ್ತಿ’ ಮತ್ತು ‘ಸಮರ್ಥ ನಿರ್ವಹಣಾ ಜಾಲ’ ಇದ್ದರೆ ಸಾಕು ಎಂಬುದನ್ನು ಈ ಹೈದರಾಬಾದ್ ನವೋದ್ಯಮ ಸಾಬೀತುಪಡಿಸಿದೆ.




