ರಾಜ್ಯದ ಶಾಲಾ ಶಿಕ್ಷಣದಲ್ಲಿ ಹಿಂದಿ ಭಾಷೆಗೆ ಅಂಕಗಳ ಬದಲಾಗಿ, ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಆದಾಗ್ಯೂ, ಬಿಜೆಪಿಗರು ಹಿಂದಿ ಪರವಾಗಿ ಮಾತನಾಡುತ್ತಿದ್ದಾರೆ. ಈ ನಡುವೆ, ಉಪಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬಂದಿರುವ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ಹಿಂದಿ ವಿವಾದದ ಕುರಿತು ಮಾತನಾಡಿದ್ದಾರೆ. ‘ಕೇಂದ್ರ ಬಿಜೆಪಿ ಸರ್ಕಾರದ ಹಿಂದಿ ಯಜಮಾನಿಕೆ ಸಲ್ಲದು’ ಎಂದಿದ್ದಾರೆ.
ರಾಜ್ಯಗಳ ಭಾಷಾ ಸ್ವಾಯತ್ತತೆ ಮತ್ತು ಬಹುಭಾಷಾ ನೀತಿಗಳನ್ನು ಬೆಂಬಲಿಸಿರುವ ಅವರು, “ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ‘ಹಿಂದಿ ಹೇರಿಕೆ’ಗೆ ಯತ್ನ ನಡೆಯುತ್ತಿದೆ. ಕೇಂದ್ರ ಸರ್ಕಾರವು ಭಾಷಾ ಏಕತೆಯ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಒತ್ತಡ ಹೇರುತ್ತಿದೆ” ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ವಿಚಾರವನ್ನು ಪ್ರಸ್ತಾಪಿಸಿದ ಸುರ್ಜೇವಾಲಾ, “ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಸಮಗ್ರ ಶಿಕ್ಷಣ ಯೋಜನೆಯಡಿ ತಮಿಳುನಾಡಿಗೆ ದೊರೆಯಬೇಕಿದ್ದ 3,548 ಕೋಟಿ ರೂ. ಅನುದಾನವನ್ನು ಹಿಡಿದಿಟ್ಟಿದೆ. ಇದನ್ನು ಸಹಿಸಲಾಗದು” ಎಂದಿದ್ದಾರೆ.
“ದಕ್ಷಿಣದ ರಾಜ್ಯಗಳಲ್ಲಿ ಕನ್ನಡ, ತಮಿಳು, ಮಲಯಾಳಂ, ತೆಲುಗು ಮುಂತಾದ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸಬೇಕು. ಹಿಂದಿಯನ್ನು ‘ಬಲವಂತವಾಗಿ ಹೇರುವುದು’ ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿದೆ. ರಾಜ್ಯಗಳಿಗೆ ಭಾಷಾ ನೀತಿಯಲ್ಲಿ ಸ್ವಾಯತ್ತತೆ ನೀಡಬೇಕು” ಎಂದು ಸುರ್ಜೇವಾಲಾ ವಾದಿಸಿದ್ದಾರೆ.



