ಶೌಚಾಲಯಕ್ಕೆ ಹೋಗಲು ಅವಕಾಶ ನೀಡದ ಕಾರಣ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿದ ಐದು ವರ್ಷದ ನರ್ಸರಿ ವಿದ್ಯಾರ್ಥಿಯ ಮರ್ಮಾಂಗಕ್ಕೆ ಶಿಕ್ಷಕಿಯೊಬ್ಬಳು ಬಿಸಿಯಾದ ಚಾಕುವಿನಿಂದ ಬರೆ ಎಳೆದಿರುವ ಅತ್ಯಂತ ಅಮಾನವೀಯ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಈ ಸಂಬಂಧ ಶಿಕ್ಷಕಿ, ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾರಣಾಸಿಯ ಪಾಂಡೆಪುರ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ದೂರಿನ ಪ್ರಕಾರ, ಕೇಸರಿ ಕುಮಾರ್ ಎಂಬುವವರ ಐದು ವರ್ಷದ ಮಗ ಶೌಚಾಲಯಕ್ಕೆ ಹೋಗಲು ಶಿಕ್ಷಕಿ ಪ್ರೀತಿ ಕುಶ್ವಾಹ ಬಳಿ ಅನುಮತಿ ಕೇಳಿದ್ದಾನೆ. ಆದರೆ ಆಕೆ ಅವಕಾಶ ನೀಡದ ಕಾರಣ, ನಿಯಂತ್ರಿಸಲಾಗದ ಬಾಲಕ ತರಗತಿಯಲ್ಲೇ, ಪ್ಯಾಂಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕಿ, ಬಾಲಕನನ್ನು ಬೇರೊಂದು ಕೊಠಡಿಗೆ ಕರೆದೊಯ್ದು ಬಿಸಿಯಾದ ಚಾಕುವಿನಿಂದ ಆತನ ಮರ್ಮಾಂಗಕ್ಕೆ ಬರೆ ಎಳೆದಿದ್ದಾಳೆ. ಅಲ್ಲದೆ, ಬಾಲಕನಿಗೆ ಮನಬಂದಂತೆ ಥಳಿಸಿ, ಮುಂದೆಂದೂ ಹೀಗೆ ಮಾಡದಂತೆ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ.
ಶಾಲೆಯಿಂದ ಮನೆಗೆ ಮರಳಿದ ಬಾಲಕ ತನಗಾದ ಭೀಕರ ಚಿತ್ರಹಿಂಸೆಯನ್ನು ಪೋಷಕರಿಗೆ ವಿವರಿಸಿದ್ದಾನೆ. ಇದನ್ನು ಕೇಳಿ ಆಘಾತಕ್ಕೊಳಗಾದ ಕುಟುಂಬಸ್ಥರು ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಶಿಕ್ಷಕಿ, ಪ್ರಾಂಶುಪಾಲರು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115(2) (ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು), ಸೆಕ್ಷನ್ 118(1) (ಅಪಾಯಕಾರಿ ಆಯುಧಗಳಿಂದ ಗಂಭೀರವಾಗಿ ಗಾಯಗೊಳಿಸುವುದು) ಮತ್ತು ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಅಮಾನವೀಯ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್, “ಇದು ಅತ್ಯಂತ ಗಂಭೀರವಾದ ವಿಚಾರ. ಈ ನೋವು ಮತ್ತು ಭೀಕರ ಘಟನೆಯು ಆ ಮಗುವಿನ ಮೇಲೆ ಜೀವಮಾನವಿಡೀ ದುಷ್ಪರಿಣಾಮ ಬೀರಬಹುದು. ಶಿಕ್ಷಕರು ಮಕ್ಕಳೊಂದಿಗೆ ಸಹಾನುಭೂತಿ ಹಾಗೂ ಮಾನವೀಯತೆಯಿಂದ ವರ್ತಿಸುವ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




