“ಪ್ರತಿಯೊಬ್ಬ ಮಗುವಿಗೂ ಬದುಕುವ ಹಕ್ಕು, ಶಿಕ್ಷಣ ಪಡೆಯುವ ಹಕ್ಕು, ರಕ್ಷಣೆ ಹೊಂದುವ ಹಕ್ಕು ಹಾಗೂ ಅಭಿವೃದ್ಧಿ ಹೊಂದುವ ಹಕ್ಕು ಸಂವಿಧಾನವು ನೀಡಿದೆ. ಇದನ್ನು ಸಾಧಿಸಲು ಸಮಾಜದ ಸಹಭಾಗಿತ್ವ ಅತ್ಯಗತ್ಯ” ಎಂದು ವಕೀಲ ಶಿವಾನಂದ ಆಲಳ್ಳಿ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಯಲಿವಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೊಯೋಲ ವಿಕಾಸ ಕೇಂದ್ರ ಹಾಗೂ ಸಮಗ್ರ ಸುಸ್ಥಿರ ಅಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಮಕ್ಕಳ ಹಕ್ಕುಗಳು ಮತ್ತು ಸುರಕ್ಷತಾ ಕ್ರಮಗಳು ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಲಮಕ್ಕಳ ಮೇಲಿನ ಮಾನಸಿಕ, ದೈಹಿಕ ಹಾಗೂ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ ಕಾನೂನುಗಳು, ಪೊಕ್ಸೋ ಕಾಯ್ದೆಯಡಿ ಇರುವ ಶಿಕ್ಷೆಗಳು, ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾದಲ್ಲಿ ಎದುರಾಗುವ ಕಾನೂನು ಕ್ರಮಗಳು ಹಾಗೂ ಮಕ್ಕಳ ಸುರಕ್ಷತೆಗೆ ಪಾಲಕರು, ಶಿಕ್ಷಕರು ಮತ್ತು ಸಮಾಜ ವಹಿಸಬೇಕಾದ ಜವಾಬ್ದಾರಿಗಳ ಕುರಿತು ಸಮಗ್ರವಾಗಿ ವಿವರಿಸಿ, ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಯೂ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಅತ್ಯಗತ್ಯ” ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರು ಫಾ. ಜೈಸನ್ ಪಾಯ್ಸ್, ಉದ್ಘಾಟಿಸಿ ಮಾತನಾಡಿದ ಅವರು, “ಪ್ರತಿಯೊಂದು ಮಗುವಿಗೂ ಘನತೆಯಿಂದ ಬದುಕುವ, ಶಿಕ್ಷಣ ಪಡೆಯುವ ಹಾಗೂ ಸುರಕ್ಷಿತ ವಾತಾವರಣದಲ್ಲಿ ಬೆಳೆಯುವ ಹಕ್ಕಿದೆ. ಈ ಹಕ್ಕುಗಳ ರಕ್ಷಣೆ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಆತ್ಮವಿಶ್ವಾಸವನ್ನು ಬೆಳೆಸುವ ಮೂಲಕ ಉತ್ತಮ ಭವಿಷ್ಯ ರೂಪಿಸಲು ಕುಟುಂಬ, ಶಾಲೆ ಹಾಗೂ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು, ಪಾಲಕರು ಹಾಗೂ ಶಿಕ್ಷಕರಿಗೆ ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷತಾ ಕ್ರಮಗಳು, ಶಾಲೆಯನ್ನು ಮಕ್ಕಳ ಸ್ನೇಹಿ ಹಾಗೂ ಮಾದರಿ ಶಾಲೆಯಾಗಿ ರೂಪಿಸುವಲ್ಲಿ ಎಸ್‌ಡಿಎಂಸಿ ಮತ್ತು ಪೋಷಕರ ಪಾತ್ರ, ಮಕ್ಕಳ ಕೌಶಲ್ಯ ವಿಕಸನ ಹಾಗೂ ಸುರಕ್ಷಿತ ಶೈಕ್ಷಣಿಕ ವಾತಾವರಣ ನಿರ್ಮಾಣ ಕುರಿತು ವಿಶೇಷ ತರಬೇತಿ ನೀಡಲಾಯಿತು.
ಕಾರ್ಯಕ್ರಮವನ್ನು ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಪೀರಪ್ಪ ಶಿರಸಿ ಆಯೋಜಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಕೊಳ್ಳಿ, ಉಪಾಧ್ಯಕ್ಷೆ ರೇಖಾ ಕುರುಬರ, ಗ್ರಾಮ ಪಂಚಾಯತ್ ಸದಸ್ಯ ಬಸವರಾಜ ಕೊಣತೇರ, ಶಾರದಾ ಹಕ್ಲವ್ವ, ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಪ್ಪ ಬಾಲಪ್ಪ, ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಪಾಲಕರು ಉಪಸ್ಥಿತರಿದ್ದರು. ಶಿವಲಿಂಗಯ್ಯ ಇಟಗಿಮಠ ಕಾರ್ಯಕ್ರಮ ನಿರೂಪಿಸಿ, ಮುಖ್ಯೋಪಾಧ್ಯಾಯ ಮಲ್ಲಪ್ಪ ಬಾಲಪ್ಪ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ ಹುಲ್ಮನಿ ವಂದಿಸಿದರು.





