ಪೋಕ್ಸೊ (POCSO) ಕಾಯ್ದೆಯು ಲಿಂಗ ತಟಸ್ಥವಾಗಿದ್ದರೂ, ಅಪ್ರಾಪ್ತರ ನಡುವಿನ ಸಮ್ಮತಿಯ ಸಂಬಂಧಗಳಿಗೆ ಸಂಬಂಧಿಸಿದ ಪ್ರಕರಣಗಳು ಬಹುತೇಕ ಬಾಲಕರ ವಿರುದ್ಧವೇ ದಾಖಲಾಗುತ್ತಿವೆ ಎಂದು ಮದ್ರಾಸ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಎಸ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣನ್ ಅವರಿದ್ದ ಪೀಠ, ಬಾಲಕನನ್ನು ಅನ್ಯಾಯವಾಗಿ ಅಪರಾಧಿಯನ್ನಾಗಿ ಮಾಡುವುದರಿಂದ ಆತನ ಕುಟುಂಬವೂ ಬಾಲ ನ್ಯಾಯ ಮಂಡಳಿ (JJB) ವಿಚಾರಣೆಗೆ ಒಳಗಾಗುತ್ತಿದೆ ಎಂದು ಹೇಳಿದೆ. ಬಾಲಕಿಯ ಪೋಷಕರು ಪ್ರಕರಣ ದಾಖಲಿಸಲು ಒತ್ತಾಯಿಸಿದರೆ, ಬಾಲಕ ಹಾಗೂ ಆತನ ಕುಟುಂಬಕ್ಕೂ ದೂರು ದಾಖಲಿಸುವ ಸಮಾನ ಹಕ್ಕಿದೆ ಎಂಬುದನ್ನು ಪೊಲೀಸರು ಅವರಿಗೆ ತಿಳಿಸಬೇಕು ಎಂದು ಸೂಚಿಸಿದೆ.
ಪೋಕ್ಸೊ ಕಾಯ್ದೆಯ ಅನುಷ್ಠಾನದಲ್ಲಿರುವ ಹಲವು ಲೋಪಗಳನ್ನೂ ನ್ಯಾಯಾಲಯ ಗುರುತಿಸಿದೆ. ನಿಷೇಧಿಸಲಾಗಿರುವ ‘ಟು-ಫಿಂಗರ್ ಟೆಸ್ಟ್’ ಹಾಗೂ ಕನ್ಯಾಪೊರೆ (ಹೈಮನ್) ಪರೀಕ್ಷೆಗಳನ್ನು ಇನ್ನೂ ನಡೆಸುತ್ತಿರುವ ಬಗ್ಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಲೈಂಗಿಕ ಅಪರಾಧಗಳ ಮೇಲ್ಮನವಿಗಳ ವಿಚಾರಣೆಯಲ್ಲೂ ಹೈಮನ್ ಕುರಿತು ಚರ್ಚೆ ನಡೆಯುತ್ತಿರುವುದು ಆತಂಕಕಾರಿ ಎಂದು ಹೇಳಿದೆ.
ವೈದ್ಯಕೀಯ-ಕಾನೂನು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ನಿಯಮಿತ ತಪಾಸಣೆ ನಡೆಸುವುದು ಹಾಗೂ ವೈದ್ಯಕೀಯ ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಸಮ್ಮತಿಯ ಅಪ್ರಾಪ್ತರ ಗರ್ಭಧಾರಣೆ ಪ್ರಕರಣಗಳಲ್ಲೂ ಸೇರಿದಂತೆ, ಸಾಮರ್ಥ್ಯ ಪರೀಕ್ಷೆಗಳನ್ನು (ಪೊಟೆನ್ಸಿ ಟೆಸ್ಟ್) ಕೈಬಿಟ್ಟು ಡಿಎನ್‌ಎ ಸೇರಿದಂತೆ ವೈಜ್ಞಾನಿಕ ವಿಧಾನಗಳನ್ನೇ ಅವಲಂಬಿಸುವಂತೆ ಸಲಹೆ ನೀಡಿದೆ.
ಅಪ್ರಾಪ್ತ ಗರ್ಭಿಣಿಯರು, ವಿಶೇಷವಾಗಿ ಸಮ್ಮತಿಯ ಸಂಬಂಧಗಳು ಅಥವಾ ಸಂಪ್ರದಾಯಬದ್ಧ ಬಾಲ್ಯ ವಿವಾಹದ ಸಂದರ್ಭಗಳಲ್ಲಿ ಗರ್ಭಪೂರ್ವ ಆರೈಕೆ ಅಥವಾ ವೈದ್ಯಕೀಯ ಗರ್ಭಪಾತದ ನೆರವು ಪಡೆಯಲು ಅಡ್ಡಿಯಾಗುತ್ತಿರುವ ಕಡ್ಡಾಯ ವರದಿ ನಿಯಮಗಳ ಬಗ್ಗೆಯೂ ಪೀಠ ಗಮನ ಸೆಳೆದಿದೆ. ಕಾನೂನು ಅನುಮತಿಸುವ ಸಂದರ್ಭಗಳಲ್ಲಿ ಅಪ್ರಾಪ್ತೆಯ ಗುರುತು ಬಹಿರಂಗವಾಗದಂತೆ ವೈದ್ಯರು ಕಡ್ಡಾಯ ವರದಿ ಸಲ್ಲಿಸಲು ಅನುಕೂಲವಾಗುವ ಏಕರೂಪದ ಒಪ್ಪಿಗೆ ನಮೂನೆ ರೂಪಿಸುವಂತೆ ಸೂಚಿಸಿದೆ.
24 ವಾರಗಳ ನಂತರ ಗರ್ಭಧಾರಣೆ ಮುಂದುವರಿದಿರುವ ಪ್ರಕರಣಗಳಲ್ಲಿ ಅಪ್ರಾಪ್ತರಿಗೆ ಗರ್ಭಪಾತದ ಕಾನೂನು ಆಯ್ಕೆಗಳು ಹಾಗೂ ನ್ಯಾಯಾಲಯದ ಮೊರೆ ಹೋಗುವ ಕುರಿತು ಸಮಯಕ್ಕೆ ಸರಿಯಾಗಿ ಮಾಹಿತಿ ಸಿಗುವಂತೆ ಏಕರೂಪದ ರೆಫರಲ್ ವ್ಯವಸ್ಥೆ ರೂಪಿಸುವಂತೆಯೂ ನ್ಯಾಯಾಲಯ ಸಲಹೆ ನೀಡಿದೆ.
ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳಿಗೆ ಜಾಮೀನು ನೀಡುವುದು ಸಾಮಾನ್ಯ ನಿಯಮವಾಗಿದ್ದರೂ, ಅವರನ್ನು ವೀಕ್ಷಣಾ ಗೃಹಗಳಲ್ಲಿ ಅನಗತ್ಯವಾಗಿ ಇರಿಸಲಾಗುತ್ತಿದೆ ಎಂದು ಪೀಠ ಹೇಳಿದೆ. ಎಫ್‌ಐಆರ್‌ನ ಉಚಿತ ಪ್ರತಿಗಳನ್ನು ನೀಡದಿರುವುದು, ರಾತ್ರಿ ವೇಳೆ ವಿಚಾರಣೆ ನಡೆಸುವುದು, ವಿಚಾರಣೆ ವೇಳೆ ಪೋಷಕರ ಅನುಪಸ್ಥಿತಿ ಹಾಗೂ ಮಕ್ಕಳನ್ನು ಅನಗತ್ಯವಾಗಿ ಮಕ್ಕಳ ಕಲ್ಯಾಣ ಸಮಿತಿಗಳ ಮುಂದೆ ಹಾಜರುಪಡಿಸುವುದನ್ನೂ ನ್ಯಾಯಾಲಯ ಪ್ರಶ್ನಿಸಿದೆ.
ಮಕ್ಕಳ ಸಾಕ್ಷ್ಯ ದಾಖಲಿಸುವಲ್ಲಿ ವಿಳಂಬ, ಕೊನೆಯ ಕ್ಷಣದಲ್ಲಿ ಸಮನ್ಸ್ ನೀಡುವುದು, ತೀರ್ಪುಗಳಲ್ಲಿ ಮಕ್ಕಳ ಗುರುತನ್ನು ಸಮರ್ಪಕವಾಗಿ ಗೌಪ್ಯವಾಗಿರಿಸದಿರುವುದು, ಮಕ್ಕಳ ಸಾಕ್ಷ್ಯಕ್ಕೆ ಸೂಕ್ತ ಕೊಠಡಿಗಳ ಕೊರತೆ ಹಾಗೂ ಪ್ರತ್ಯೇಕ ಪೋಕ್ಸೊ ನ್ಯಾಯಾಲಯಗಳ ಕೊರತೆಯನ್ನೂ ಪೀಠ ಗುರುತಿಸಿದೆ. 100ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವ ಜಿಲ್ಲೆಗಳಲ್ಲಿ ಪ್ರತ್ಯೇಕ ಪೋಕ್ಸೊ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದೆ.
ಇದನ್ನೂ ಓದಿ: ಕಲಬುರಗಿ | ಪೋಕ್ಸೊ ಆರೋಪಿ ಪರಾರಿ ಪ್ರಕರಣ; ಪಿಎಸ್‌ಐ ಅಮಾನತು, ಸಿಪಿಐಗೆ ನೋಟಿಸ್
ಈ ಎಲ್ಲ ಸಲಹೆಗಳನ್ನು ಪರಿಶೀಲಿಸಲು ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ನಿರ್ದೇಶಿಸಿದೆ. ನಾಲ್ಕು ತಿಂಗಳೊಳಗೆ ತನ್ನ ಪ್ರತಿಕ್ರಿಯೆಯನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. “ಪ್ರತಿ ಹಂತದಲ್ಲೂ ಮಗುವೇ ಪ್ರಕ್ರಿಯೆಯ ಕೇಂದ್ರಬಿಂದುವಾಗಿರಬೇಕು” ಎಂದು ನ್ಯಾಯಾಲಯ ಹೇಳಿದೆ.
ಎಸ್. ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯಗಳು ವ್ಯಕ್ತವಾಗಿವೆ. 2017ರಲ್ಲಿ ನಡೆದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದಶ್ವಂತ್ ಅವರನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕ್ಯುರೇಟಿವ್ ಅರ್ಜಿ ಸಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ವೆಂಕಟೇಶ್ ಮನವಿ ಮಾಡಿದ್ದರು.
ಆದರೆ, ಮದ್ರಾಸ್ ಹೈಕೋರ್ಟ್‌ನ ಹಿಂದಿನ ತೀರ್ಪನ್ನು ಪರಿಶೀಲಿಸಿದ ಪೀಠ, ಆರೋಪಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅಗತ್ಯ ಅನುಮತಿ ನೀಡಲಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿತು. ಈ ಕುರಿತು ವೆಂಕಟೇಶ್‌ಗೆ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲಾಗಿದ್ದ ಮಾಹಿತಿ ತಪ್ಪಾಗಿತ್ತು ಎಂದು ಹೇಳಿದ ನ್ಯಾಯಾಲಯ, ಅರ್ಜಿಯ ಆಧಾರವೇ ಉಳಿಯುವುದಿಲ್ಲ ಎಂದು ತಿಳಿಸಿತು. ಸರ್ಕಾರವು ಸ್ವತಂತ್ರವಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಈಗಾಗಲೇ ನಿರ್ಧರಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತು. ಅದನ್ನು ದಾಖಲಿಸಿಕೊಂಡ ಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು.




