ವಿಜಯಪುರ ನಗರದ ದೌಲತವಾಡಿ ಸರ್ಕಾರಿ ಉರ್ದು ಎಂಪಿಎಸ್ ಶಾಲೆ ಬಾಲಕಿಯರ ತರಗತಿಗಳಿಗಾಗಿ ಐದು ಹೊಸ ಕೊಠಡಿಗಳನ್ನು ಸರ್ಕಾರ ಮಂಜೂರು ಮಾಡಿದೆ. ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಅವರ ಸತತ ಪ್ರಯತ್ನದ ಫಲವಾಗಿ ಈ ಮಂಜೂರಾತಿ ದೊರೆತಿದ್ದು, ಕೊಠಡಿಗಳ ನಿರ್ಮಾಣಕ್ಕೆ ₹85.75 ಲಕ್ಷ ಅನುದಾನ ಒದಗಿಸಲಾಗಿದೆ.
2025ರಲ್ಲಿ ಶಾಲೆಯ ಆವರಣದಲ್ಲಿದ್ದ ಕಟ್ಟಡ ಕುಸಿದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಎಂ.ಬಿ ಪಾಟೀಲ ಅವರು, ಸ್ಥಳೀಯರ ಬೇಡಿಕೆಯಂತೆ ಹೊಸ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಅದರಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕೆ ವಿಷಯವನ್ನು ತಂದು, ಹೊಸ ಕೊಠಡಿಗಳ ನಿರ್ಮಾಣಕ್ಕೆ ಸಚಿವರು ನಿರಂತರ ಪ್ರಯತ್ನ ನಡೆಸಿದ್ದರು. ಇದೀಗ ಸರ್ಕಾರ ಐದು ಕೊಠಡಿಗಳನ್ನು ಮಂಜೂರು ಮಾಡಿದೆ.
ಶಾಲೆಗೆ ಹೊಸ ಕೊಠಡಿಗಳು ಮಂಜೂರಾಗಿರುವುದಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ನುಡಿದಂತೆ ನಡೆದುಕೊಂಡ ಸಚಿವ ಎಂ.ಬಿ ಪಾಟೀಲ ಮತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆ ತಿಳಿಸಿದೆ.




