ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೇರಿದ ಮೇಲೆ, ಅತಿ ಹೆಚ್ಚು ವಿದೇಶಿ ಪ್ರಯಾಣಗಳನ್ನು ಮಾಡಿದ್ದಾರೆ. ಬಹುತೇಕ ಪ್ರಯಾಣಗಳಲ್ಲಿ ಗೌತಮ್ ಅದಾನಿ ಇರುತ್ತಾರೆ. ಅಥವಾ ಪ್ರಧಾನಿಗಳೇ ಅದಾನಿಗಾಗಿ ಯಾವುದೋ ಒಪ್ಪಂದವನ್ನು ಮಾಡಿಕೊಂಡು ಬಂದಿರುತ್ತಾರೆ. ಸ್ವದೇಶದ ಬಗ್ಗೆ ಯೋಚಿಸಿ ಎಂದು ಕರೆಕೊಡುವ ಪ್ರಧಾನಿಗಳು, ತಮ್ಮ ಆಪ್ತಮಿತ್ರ ಗೌತಮ್ ಅದಾನಿಗೆ ಸ್ವದೇಶದಲ್ಲಿಯೇ ಹೂಡಿಕೆ ಮಾಡಲು ಅವಕಾಶ ಮಾಡಿಕೊಡಲಿಲ್ಲವೇ?
ಅತಿ ಹೆಚ್ಚು ವಿದೇಶಿ ಪ್ರಯಾಣ ಮಾಡಿದ ಏಕೈಕ ಭಾರತೀಯ ಪ್ರಧಾನಿ ನರೇಂದ್ರ ಮೋದಿ. ಅವರು ಪ್ರತಿಬಾರಿ ವಿದೇಶಿ ಪ್ರಯಾಣವನ್ನು ಮಾಡಿದಾಗಲೂ, ದೇಶಕ್ಕೆ ಅನುಕೂಲ ಆಗುವುದಕ್ಕಿಂತ, ಮೋದಿ ಅವರ ಆತ್ಮೀಯ ಸ್ನೇಹಿತ ಗೌತಮ್ ಅದಾನಿಗೆ ಹೆಚ್ಚು ಅನುಕೂಲವಾಗಿದೆ. ಅನೇಕ ರಾಜಕೀಯ ವಿಶ್ಲೇಷಕರು, ವಿಪಕ್ಷ ನಾಯಕರು ಈ ಆರೋಪವನ್ನು ಮೊದಲಿನಿಂದಲೂ ಮಾಡುತ್ತಿದ್ದರೂ, ಕೇಂದ್ರ ಸರ್ಕಾರ ತಳ್ಳಿಹಾಕುತ್ತಲೇ ಬಂದಿದೆ. ಪ್ರಧಾನಿ ಮೋದಿ ಅವರು ಇದೇ ಮೇ.15 ರಿಂದ ಮೇ.20ರವರೆಗೆ ಯುಎಇ, ನೆದರ್‌ಲ್ಯಾಂಡ್, ಸ್ವೀಡನ್, ನಾರ್ವೆ ಹಾಗೂ ಇಟಲಿ ದೇಶಗಳ ಪ್ರಯಾಣದಲ್ಲಿದ್ದಾರೆ. ಅಲ್ಲಿನ ರಾಜತಾಂತ್ರಿಕರ ಜೊತೆ ಮಾತುಕತೆ ನಡೆಸಿ, ಭಾರತಕ್ಕೆ ಅನುಕೂಲವಾಗುವ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದಾರೆ. ಮೇ 17ರಂದು ಭಾರತ ಮತ್ತು ನೆದರ್‌ಲ್ಯಾಂಡ್ ನಡುವೆ ರಕ್ಷಣಾ ಪಾಲುದಾರಿಕೆ ಬಲಗೊಳಿಸಲು, ವಿರಳ ಖನಿಜಗಳು ಮತ್ತು ಇತರ ಮಹತ್ವದ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸಲು ಸುಮಾರು 17 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಮೇ 18ರಂದು ಅತ್ಯಂತ ಚಿಕ್ಕ ದೇಶವಾದ ನಾರ್ವೆಗೆ ಮೋದಿ ಭೇಟಿ ನೀಡಿದ್ದಾರೆ. ಭಾರತದ ಪ್ರಧಾನಿಯೊಬ್ಬರು ಸುಮಾರು 43 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿ ನೀಡಿದ್ದಾರೆ. 2026ರ ಫೆಬ್ರವರಿಯಲ್ಲಿ ಭ್ರಷ್ಟಾಚಾರದ ಆರೋಪಗಳಿಂದ ನಾರ್ವೆಯ ಸಾರ್ವಭೌಮ ಸಂಪತ್ತು ನಿಧಿಯು (Norway’s sovereign wealth fund) ಅದಾನಿ ಗ್ರೀನ್ ಎನರ್ಜಿಯನ್ನು ತನ್ನ ಹೂಡಿಕೆಯಿಂದ ಹೊರಗಿಟ್ಟಿರುವ ಅಂಶಕ್ಕೆ ಈ ಭೇಟಿ ಸಂಬಂಧಿಸಿರಬಹುದು ಎಂದು ವಿದೇಶಾಂಗ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅದಾನಿ ಗುಂಪಿನ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಅಮೆರಿಕದಲ್ಲಿ ಬಹಿರಂಗ ಪಡಿಸಿರುವುದರಿಂದ, ಭಾರತದ ಪ್ರಧಾನಿ ಮೋದಿ ಅವರು ಅದನ್ನು ತಿಳಿಗೊಳಿಸುವ ಪ್ರಕ್ರಿಯೆಯಲ್ಲಿರಬಹುದು. ಇದರಿಂದ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ, ಅದಾನಿ ಗ್ರೂಪ್‌ಗೆ ಹೇಗೆ ಸಹಾಯ ಮಾಡುತ್ತಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕುರಿತು ʼದಿ ವೈರ್ʼ ಸುದ್ದಿ ಸಂಸ್ಥೆಯಲ್ಲಿ ʼಗೌತಮ್ ಅದಾನಿ ಭಾರತದ ಆರ್ಥಿಕ ರಾಯಭಾರಿಯೇ?ʼ ಎಂಬ ಶೀರ್ಷಿಕೆಯ ಮೂಲಕ Christophe Jafferlot ಅವರು ಬರೆದಿರುವ ಲೇಖನ, ಮೋದಿಯವರ ಬಹುತೇಕ ವಿದೇಶಿಯಾತ್ರೆಗಳಲ್ಲಿ ಅದಾನಿ ಕಾಣಿಸಿಕೊಳ್ಳುವ ಕುರಿತು ದೀರ್ಘವಾಗಿ ವಿವರಿಸಲಾಗಿದೆ.
ಅದಾನಿ ಗ್ರೂಪ್‌ನ ಮುಖ್ಯಸ್ಥರಾದ ಗೌತಮ್ ಅದಾನಿ ಭಾರತದಿಂದ ಹೊರಗೆ ಹೆಚ್ಚಿನ ಹೂಡಿಕೆಗಳನ್ನು ಮಾಡುತ್ತಿರುವುದರಿಂದ ಮತ್ತು 2014ರ ನಂತರ ಅದಾನಿ ಅವರು ಪ್ರಧಾನಿ ಮೋದಿ ಜೊತೆ ಹೆಚ್ಚಿನ ವಿದೇಶ ಪ್ರವಾಸಗಳಲ್ಲಿ ಕಾಣಿಸಿಕೊಂಡಿರುವುದರಿಂದ ʼವಿದೇಶದಲ್ಲಿ ಭಾರತಕ್ಕೆ ಏನಾದರೂ ಅನುಕೂಲವಾಗಿದೆಯೇ?ʼ, ಇದರ ಜೊತೆಗೆ ಅದಾನಿ ಗ್ರೂಪ್ ವಿದೇಶಗಳಲ್ಲಿ ಬೃಹತ್ ಮಟ್ಟದ ಹೂಡಿಕೆಗಳನ್ನು ಮಾಡುತ್ತಿರುವುದರಿಂದ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಅಡಿಪಾಯ ಹಾಕಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮೋದಿ ಅವರು ವಿದೇಶಗಳಿಗೆ ಹೆಚ್ಚು ಪ್ರಯಾಣ ಮಾಡಿದ್ದರಿಂದ ಸ್ವಾಭಾವಿಕವಾಗಿ ದೇಶಕ್ಕಿಂತ ಅದಾನಿಗೆ ಹೆಚ್ಚು ಅನುಕೂಲವಾಗಿದೆ. ಏಕೆಂದರೆ, ಭಾರತದ ಒಪ್ಪಂದಗಳಲ್ಲಿ ಅದಾನಿಯೇ ಹೆಚ್ಚು ಪಾಲು ಪಡೆದಿದ್ದಾರೆ. ಭಾರತದ ನೆರೆಹೊರೆಯ ರಾಷ್ಟ್ರಗಳಲ್ಲಿ ಆರ್ಥಿಕ ಸಮತೋಲನವನ್ನು ಕಂಡುಕೊಳ್ಳುವ ಉದ್ದೇಶದಿಂದ ಭಾರತವು ವಿದೇಶಿ ಹೂಡಿಕೆಯನ್ನು ಹೆಚ್ಚಿಸಲಾಗಿದೆ. ಅದರಲ್ಲೂ ಭಾರತದಲ್ಲಿ ಚೀನಾದ ಉಪಸ್ಥಿತಿಯನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವೆಂದು ಭಾವಿಸಲಾಗಿದೆ.
ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 2015ರ ಜೂನ್ ತಿಂಗಳಿನಲ್ಲಿ ಭೇಟಿ ನೀಡಿದಾಗ, ಶೇಖ್ ಹಸೀನಾ ಅವರ ಸರ್ಕಾರವು ವಿದ್ಯುತ್ ಸರಬರಾಜುಗಳನ್ನು ತಡೆಯುವಲ್ಲಿನ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರು. ಆ ಒಪ್ಪಂದ ಏರ್ಪಟ್ಟ ಎರಡು ತಿಂಗಳ ನಂತರ ಅದಾನಿ ಗ್ರೂಪ್, ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯ ಜೊತೆ ಸೇರಿ ಜಾರ್ಖಂಡ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿತು. 2017 ರಲ್ಲಿ ಹಸೀನಾ ಅವರ ಭಾರತ ಭೇಟಿಯ ಸಮಯದಲ್ಲಿ ಯೋಜನೆಯ ಅನುಷ್ಠಾನವನ್ನು ಅಧಿಕೃತಗೊಳಿಸಲಾಯಿತು.

ನಮ್ಮ ನೆರೆಯ ಇನ್ನೊಂದು ಪ್ರಮುಖ ರಾಷ್ಟ್ರವಾದ ಶ್ರೀಲಂಕಾದ ವಿಚಾರದಲ್ಲಿ, ಶ್ರೀಲಂಕಾದ ಪ್ರಧಾನ ಮಂತ್ರಿ ಮಹಿಂದ ರಾಜಪಕ್ಸೆ ಅವರು 60 ಬಿಲಿಯನ್ ಡಾಲರ್(57 ಲಕ್ಷ ಕೋಟಿ) ಸಾಲದ ಹೊರೆಗೆ, ಪರಿಹಾರದ ಕುರಿತು ಚರ್ಚಿಸಲು 2020 ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಈ ಭೇಟಿಯ ಸಂದರ್ಭದಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿಯೇ 400 ಮಿಲಿಯನ್ ಡಾಲರ್ (3,854.40 ಕೋಟಿ) ಸಾಲವನ್ನು ಕೋರಿದರು.
ನಂತರ ಶ್ರೀಲಂಕಾ ಸರ್ಕಾರವು ಕೊಲಂಬೊ ಬಂದರನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್‌ಗೆ ಕರೆ ನೀಡಿತ್ತು. ಆ ಮೂಲಕ ಚೀನಾದೊಂದಿಗೆ ಭಾರತವು ತನ್ನ ಹೊಂದಾಣಿಕೆಯನ್ನು ಸ್ವಲ್ಪಮಟ್ಟಿಗೆ ಸಮತೋಲನಗೊಳಿಸಿತು. ಅದಾನಿ ಗ್ರೂಪ್ ಪಶ್ಚಿಮ ಕಂಟೇನರ್ ಟರ್ಮಿನಲ್‌ಗಾಗಿ 35 ವರ್ಷಗಳ ಬಿಒಟಿ (ನಿರ್ಮಾಣ, ನಿರ್ವಹಣೆ, ವರ್ಗಾವಣೆ – Build, Operate, and Transfer) ಒಪ್ಪಂದದಲ್ಲಿ ಬಹುಪಾಲು ಪಾಲನ್ನು ಪಡೆದುಕೊಂಡರು. ಶ್ರೀಲಂಕಾ ಬಂದರು ಪ್ರಾಧಿಕಾರ (ಎಸ್‌ಎಲ್‌ಪಿಎ) ಜೊತೆಗಿನ ಒಪ್ಪಂದವನ್ನು ಅಂತಿಮಗೊಳಿಸಲು ಅದಾನಿ 2021 ರ ಅಕ್ಟೋಬರ್‌ನಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಅಂದಿನ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನೆರೆಯ ದೇಶ ನೇಪಾಳಕ್ಕೆ ಸಂಬಂಧಿಸಿದಂತೆ, ಪೋಖರಾ ಮತ್ತು ಭೈರಹವಾ ವಿಮಾನ ನಿಲ್ದಾಣಗಳ ವಿಚಾರದಲ್ಲಿ ಚೀನಾದ ಹಸ್ತಕ್ಷೇಪದ ಬಗ್ಗೆ ಭಾರತ ಸರ್ಕಾರವು ಕಳವಳ ವ್ಯಕ್ತಪಡಿಸಿತು. ಈ ವಿಮಾನ ನಿಲ್ದಾಣಗಳಲ್ಲಿ ವಾಣಿಜ್ಯ ವ್ಯವಹಾರವನ್ನು ಹಾಳುಗೆಡವಲು ಕೇಂದ್ರ ಸರ್ಕಾರವು ಭಾರತದ ಮೇಲೆ ಕಡಿಮೆ ಎತ್ತರದ ವಿಮಾನಗಳ ಹಾರಾಟವನ್ನು ನಿಷೇಧಿಸಿತು. ಪರಿಣಾಮವಾಗಿ, ನೇಪಾಳಕ್ಕೆ ಸಂಪರ್ಕಿಸುತ್ತಿದ್ದ ಪೋಖರಾ ಮತ್ತು ಭೈರಹವಾ ವಿಮಾನ ನಿಲ್ದಾಣಗಳಿಗೆ ಹೋಗುತ್ತಿದ್ದ ಭಾರತೀಯ ಹಾರಾಟವು ಸ್ಥಗಿತಗೊಂಡಿತು. ನಂತರ, ಪೋಖರಾ ಮತ್ತು ಭೈರಹವಾ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿಗೆ ವಹಿಸಿದ ನಂತರವೇ ಈ ಪರಿಸ್ಥಿತಿ ಬಗೆಹರಿಯಿತು ಎಂದು ನೇಪಾಳದ ಪತ್ರಿಕೆಯೊಂದು ವರದಿ ಮಾಡಿದೆ.
ಜೂನ್ 2023ರಲ್ಲಿ ಭಾರತ ಮತ್ತು ನೇಪಾಳ ಸರ್ಕಾರಗಳು ವಿಮಾನ ಹಾರಾಟದ ವಿಚಾರವನ್ನು ಗಂಭೀರವಾಗಿ ಚರ್ಚಿಸಿದವು. ಚರ್ಚೆಯ ನಂತರ ಜನವರಿ 2024 ರಲ್ಲಿ ನೇಪಾಳದ ಆರ್ಥಿಕ ಸಚಿವರು ಅದಾನಿ ಗ್ರೂಪ್‌ನೊಂದಿಗೆ ದೀರ್ಘವಾದ ಚರ್ಚೆಗಾಗಿ ಗುಜರಾತ್‌ಗೆ ಬಂದರು. ಭಾರತ ಮತ್ತು ನೇಪಾಳ ಗಡಿಯಾದ ಬಾರಾದಲ್ಲಿ ವಿಮಾನ ನಿಲ್ದಾಣದ ಸ್ಥಾಪನೆ, ಜೊತೆಗೆ ಭೈರಹವಾ ವಿಮಾನ ನಿಲ್ದಾಣ ಮತ್ತು ತ್ರಿಭುವನ್ ವಿಮಾನ ನಿಲ್ದಾಣ (ಕಠ್ಮಂಡು) ನಿರ್ವಹಣೆಯನ್ನು ಅದಾನಿ ಗ್ರೂಪ್ ವಹಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಯಿತು. ಮೋದಿ ಅವರ ಕೃಪೆಯಿಂದ ನೇಪಾಳದಲ್ಲಿಯೂ ಅದಾನಿ ಹೂಡಿಕೆ ಮಾಡಲು ಅನುಕೂಲವಾಯಿತು.

ಕೇವಲ ಭಾರತ ಮತ್ತು ಭಾರತ ಸುತ್ತಮುತ್ತಲಿನ ದೇಶಗಳು ಮಾತ್ರವಲ್ಲದೇ, ದಕ್ಷಿಣ ಏಷ್ಯಾದ ಆಚೆಗಿನ ಆಫ್ರಿಕಾದಲ್ಲಿಯೂ ಅದಾನಿ ಗ್ರೂಪ್ ಭಾರತ ಸರ್ಕಾರದ ಜೊತೆ ಕೆಲಸ ಮಾಡಿದೆ. ಪೂರ್ವ ಆಫ್ರಿಕಾ ದೇಶವಾದ ಟಾಂಜಾನಿಯಾ (Tanzania)ದಲ್ಲಿನ ಬಗಾಮೊಯೊ (Bagamoyo)ದಲ್ಲಿ ಮೋದಿ ಮತ್ತು ಅದಾನಿ 2015ರಲ್ಲಿ ಬಂದರು ನಿರ್ಮಿಸಲು ಪ್ರಸ್ತಾಪಿಸಿದರು. ಇಲ್ಲಿ ಬಂದರನ್ನು ನಿರ್ಮಿಸಲು ಯೋಚಿಸಿದ್ದ ಚೀನಾಕ್ಕೆ ಪ್ರತಿಕೂಲ ಪರಿಣಾವಾಯಿತು.
2016ರಲ್ಲಿ ಪ್ರಧಾನಿ ಮೋದಿ, ಟಾಂಜಾನಿಯಾದ ʼದಾರ್ ಎಸ್ ಸಲಾಮ್ʼ (Dar es Salaam)ಗೆ ಅಧಿಕೃತ ಭೇಟಿ ನೀಡಿದರು. 2019ರಲ್ಲಿ ಚೀನಾ ಸರ್ಕಾರವು ಬಾಗಮೊಯೊ ಯೋಜನೆಯಿಂದ ಹಿಂದೆ ಸರಿಯಿತು. 2023 ರಲ್ಲಿ, ಟಾಂಜಾನಿಯದ ನೂತನ ಅಧ್ಯಕ್ಷೆಯಾಗಿದ್ದ ಸಮಿಯಾ ಸುಲುಹು ಹಸನ್ ಭಾರತಕ್ಕೆ ಭೇಟಿ ನೀಡಿದರು. ಭೇಟಿಯ ನಂತರ ಮೇ 2024 ರಲ್ಲಿ, ಅದಾನಿ ಗ್ರೂಪ್, ದಾರ್ ಎಸ್ ಸಲಾಮ್ ಬಂದರಿನಲ್ಲಿ ಟರ್ಮಿನಲ್ ನಿರ್ವಹಣೆಗಾಗಿ ಟಾಂಜಾನಿಯಾ ಅಧಿಕಾರಿಗಳೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿತು.
ಆಫ್ರಿಕಾದ ಇನ್ನೊಂದು ದೇಶವಾದ ಕೀನ್ಯಾದಲ್ಲಿಯೂ ಇದೇ ರೀತಿಯ ಸನ್ನಿವೇಶವು ಸೃಷ್ಟಿಯಾಯಿತು. ಡಿಸೆಂಬರ್ 5, 2023 ರಂದು, ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಭೇಟಿಯ ಸಮಯದಲ್ಲಿ ಗೌತಮ್ ಅದಾನಿಗೆ, ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಅವರನ್ನು ಪರಿಚಯಿಸಲಾಯಿತು. ನಂತರ ಮಾರ್ಚ್ 2024 ರಲ್ಲಿ, ಅದಾನಿ ಗ್ರೂಪ್ ನೈರೋಬಿ ವಿಮಾನ ನಿಲ್ದಾಣವನ್ನು ಆಧುನೀಕರಿಸುವಂತೆ ಕೀನ್ಯಾಕ್ಕೆ ಪ್ರಸ್ತಾಪವನ್ನು ಸಲ್ಲಿಸಿ, ಕೀನ್ಯಾ ಸರ್ಕಾರವು ಅದಾನಿ ಗ್ರೂಪ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿತು.
ಇದೇ ರೀತಿ ಮಧ್ಯಏಷ್ಯಾದಲ್ಲಿನ ಇಸ್ರೇಲ್‌ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಅದಾನಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. 2017 ರ ಆರಂಭದಲ್ಲಿಯೇ ಮೋದಿ ಅವರು ಇಸ್ರೇಲ್‌ನ ಪ್ರಮುಖ ನಗರವಾದ ಟೆಲ್ ಅವೀವ್‌ಗೆ ನೀಡಿದ ಭೇಟಿಯು ಹೊಸ ತಿರುವು ಪಡೆದುಕೊಂಡಿತು. ಅದಾಗಿ ಒಂದು ವರ್ಷದ ನಂತರ, 2018ರ ಆರಂಭದಲ್ಲಿಯೇ, ಅದಾನಿ ಗ್ರೂಪ್ ಮತ್ತು ಇಸ್ರೇಲ್ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕ ಎಲ್ಬಿಟ್ ಸಿಸ್ಟಮ್ಸ್(Elbit Systems) ಕಂಪನಿ, 2022ರ ನಂತರ ಗಾಜಾದಲ್ಲಿ ಬಳಸಲಾಗುತ್ತಿರುವ ಹರ್ಮ್ಸ್ 900 ಯುಎವಿ (Hermes 900 UAV) ಎಂಬ ಡ್ರೋನ್ ತಯಾರಿಸುವ ಘಟಕವೊಂದನ್ನು ಸ್ಥಾಪಿಸಿದವು. 2022ರ ಜುಲೈ ತಿಂಗಳ ವೇಳೆ ಹೈಫಾ ಬಂದರಿನ ಖಾಸಗೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಇಸ್ರೇಲ್ ಸರ್ಕಾರವು, ಅದಾನಿ ಗ್ರೂಪ್‌ಗೆ ಶೇ.70 ರಷ್ಟು ಪಾಲನ್ನು ವಹಿಸಿಕೊಟ್ಟಿತು. ಇದರ ಜೊತೆಗೆ, ಮೋದಿ ಅವರ ಪ್ರಮುಖ ಆರ್ಥಿಕ ವ್ಯವಸ್ಥೆ ಮತ್ತು ಅತ್ಯಂತ ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಒಂದನ್ನೆಂದು ಗುರುತಿಸುವ, ಟವರ್ ಸೆಮಿಕಂಡಕ್ಟರ್ ಅನ್ನು ಸೆಪ್ಟೆಂಬರ್ 2024ರಲ್ಲಿ ಅದಾನಿ ಗ್ರೂಪ್ ಇಸ್ರೇಲ್ ಜೊತೆ ಸೇರಿಕೊಂಡು, ಜಂಟಿ ಉದ್ಯಮವನ್ನು ಸ್ಥಾಪಿಸಲು ನೆರವಾಯಿತು.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಅನ್ನು ಸ್ಥಾಪಿಸಲು, ಇಸ್ರೇಲ್ ಜೊತೆಗಿನ ಭಾರತ ಸಂಬಂಧ ಮತ್ತು ವಿಶೇಷವಾಗಿ ಹೈಫಾ ಬಂದರನ್ನು ತನ್ನ ವಶಕ್ಕೆ ಪಡೆದುಕೊಳ್ಳುವುದು ಮೋದಿ ಸರ್ಕಾರದ ಗುರಿಯಾಗಿದೆ.
ಈ ಕಾರಿಡಾರ್ ಯುರೋಪ್‌ವರೆಗೆ ವಿಸ್ತರಿಸುವ ಉದ್ದೇಶವನ್ನು ಹೊಂದಿರುವುದರಿಂದ, ಚೀನಿಯರು ಈಗಾಗಲೇ ಗ್ರೀಸ್‌ನ ಪ್ರಮುಖ ಬಂದರಾದ ಪಿರಾಯಸ್ ಬಂದರನ್ನು (Port of Piraeus) ಬಳಸಿಕೊಳ್ಳುತ್ತಿದ್ದರಿಂದ, ಭಾರತ ಸರ್ಕಾರವು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅದಾನಿ ಗ್ರೂಪ್ ಮೇಲೆ ಅವಲಂಬಿತವಾಗಿದೆ.
ಇದಕ್ಕಾಗಿಯೇ ಮೋದಿ ಅವರು ಆಗಸ್ಟ್ 2023ರಲ್ಲಿ ಗ್ರೀಸ್‌ಗೆ ಭೇಟಿ ನೀಡಿದರು. ಈ ಭೇಟಿಯು ಭಾರತದ ಪ್ರಧಾನಿಯೊಬ್ಬರು ಸುಮಾರು 40 ವರ್ಷಗಳ ನಂತರ ನೀಡಿದ ಭೇಟಿಯಾಗಿತ್ತು. ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ (Kyriakos Mitsotakis) ಅವರೊಂದಿಗೆ ಪ್ರಧಾನಿ ಮೋದಿ ಅವರು ಕವಾಲಾ, ವೊಲೊಸ್ ಮತ್ತು ಅಲೆಕ್ಸಾಂಡ್ರೌಪೋಲಿ ಬಂದರುಗಳಲ್ಲಿ ಅದಾನಿ ಗುಂಪಿನ ಪಾಲನ್ನು ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಿದರು.
ಅದಾನಿಗೆ ಲಾಭವಾಗಿರುವುದು, ಭಾರತಕ್ಕೆ ಅನುಕೂಲವಾಯಿತೆ?
ಮೋದಿ ಸರ್ಕಾರ ಮತ್ತು ಅದಾನಿ ಗ್ರೂಪ್ ನಡುವಿನ ಅನ್ಯೂನ್ಯತೆ, ಇಸ್ರೇಲ್‌ನಂತಹ ಕೆಲವು ದೇಶಗಳೊಂದಿಗೆ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡಿದೆ. ಆದರೆ ಅದಾನಿ ಗ್ರೂಪ್ ಹೂಡಿಕ ಮಾಡಿದ ಬೇರೆ ದೇಶಗಳಲ್ಲಿ, ಹಲವಾರು ಸಂದರ್ಭಗಳಲ್ಲಿ ಅಲ್ಲಿನ ನಾಯಕತ್ವದ ಬದಲಾವಣೆಯೂ ಅನೇಕ ಒಪ್ಪಂದಗಳಿಗೆ ತೊಡಕುಂಟು ಮಾಡಿವೆ.
2024ರಲ್ಲಿ ಶ್ರೀಲಂಕಾದಲ್ಲಿ ರಾಜಪಕ್ಸೆ ನಂತರ ಆಯ್ಕೆಯಾದ ಅಧ್ಯಕ್ಷ ದಿಸನಾಯಕೆ, ಅದಾನಿ ಗ್ರೂಪ್ ಮನ್ನಾರ್‌ನಲ್ಲಿ ಸುಮಾರು 440 ಮಿಲಿಯನ್ ಡಾಲರ್ (42 ಸಾವಿರ ಕೋಟಿ) ಮೌಲ್ಯದ ಪವನ ವಿದ್ಯುತ್ ಸ್ಥಾವರವನ್ನು (wind farm) ನಿರ್ಮಿಸುವ ಒಪ್ಪಂದವನ್ನು ರದ್ದುಗೊಳಿಸಿದರು. ಭಾರತದ ಪ್ರಧಾನಿ ಮೋದಿ ಅವರು, ಪ್ರಧಾನಿ ರಾಜಪಕ್ಸೆ ಅವರನ್ನು ʼಒತ್ತಡʼಗಳಿಗೆ ಒಳಪಡಿಸಿ ಒಪ್ಪಂದವನ್ನು ಮಾಡಿಸಿಕೊಂಡಿದ್ದಾರೆ ಎಂದು ಶ್ರೀಲಂಕಾದ ಸಿಲೋನ್ ವಿದ್ಯುತ್ ಮಂಡಳಿಯ ಅಧ್ಯಕ್ಷರು ಆರೋಪಿಸಿದ್ದರು. ಇದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಆಕ್ರೋಶವನ್ನು ಹುಟ್ಟುಹಾಕಿತು.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಇದೇ ರೀತಿಯ ಮತ್ತೊಂದು ಒಪ್ಪಂದವನ್ನು ರದ್ದುಗೊಳಿಸಿತು. ಬಾಂಗ್ಲಾದೇಶಿಗಳು ಈಗಾಗಲೇ ಪಾವತಿಸುತ್ತಿರುವುದಕ್ಕಿಂತ ಸುಮಾರು ಐದು ಪಟ್ಟು ಹೆಚ್ಚು ವಿದ್ಯುತ್ ಪಾವತಿಸುತ್ತಾರೆ ಎಂದು ಅಂತರರಾಷ್ಟ್ರೀಯ ತಜ್ಞರು ಸೂಚಿಸಿದ್ದಾರೆ. ಈ ಅನ್ಯಾಯದ ಒಪ್ಪಂದವನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಪ್ರಶ್ನಿಸಿದರು. ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿ (BPDB) ಜೊತೆ ಚರ್ಚಿಸದೆ, ಮೋದಿ ಸರ್ಕಾರವನ್ನು ಮೆಚ್ಚಿಸಲು ಹಸೀನಾ ಇದಕ್ಕೆ ಸಹಿ ಹಾಕಿದ್ದಾರೆ ಎಂದು ವಾದಿಸಿದರು.
ಅದಾನಿ ಗ್ರೂಪ್ ಬಾಂಗ್ಲಾದ ನಾಯಕರಿಗೆ 800 ಮಿಲಿಯನ್ ಡಾಲರ್ (77 ಸಾವಿರ ಕೋಟಿ) ಯೋಜನೆಯ ಒಪ್ಪಂದಕ್ಕಾಗಿ ಬಾಂಗ್ಲಾ ಸರ್ಕಾರದ ಜೊತೆ ಮರು ಮಾತುಕತೆ ನಡೆಸಲು ಪ್ರಯತ್ನಿಸಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಅದಾನಿ ಗ್ರೂಪ್‌ನ ಚಟುವಟಿಕೆಯಿಂದ ಭಾರತಕ್ಕೆ ಹೆಚ್ಚು ಹಾನಿಯನ್ನುಂಟುಮಾಡಿದ ದೇಶವೆಂದರೆ ಆಸ್ಟ್ರೇಲಿಯಾ. 2014ಕ್ಕೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಅದಾನಿ ಗ್ರೂಪ್ ವಿದೇಶಗಳಲ್ಲಿ ಹೂಡಿಕೆ ಮಾಡಿದ್ದ ಕೆಲವೇ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು.
2010 ರಲ್ಲಿ ಅದಾನಿ ಗ್ರೂಪ್ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಲ್ಲಿದ್ದಲು ಗಣಿಯನ್ನು ಸ್ವಾಧೀನಪಡಿಸಿಕೊಂಡಿತು. ಅದನ್ನು ಭಾರತಕ್ಕೆ ಕಲ್ಲಿದ್ದಲನ್ನು ಸಾಗಿಸಲು ಅಬಾಟ್ ಪಾಯಿಂಟ್ ಬಂದರಿಗೆ (Abbot Point) ರೈಲು ಮಾರ್ಗವನ್ನು ನಿರ್ಮಿಸುವ ಯೋಜನೆಯನ್ನು ಕೈಗೊಂಡಿತು. ಈ ಯೋಜನೆಯಿಂದ ಪರಿಸರದ ಮೇಲೆ ಬೀರುವ ಪರಿಣಾಮ ಮತ್ತು ಅಲ್ಲಿನ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯ ಎಂದು ಆರೋಪಿಸಿ ಅನೇಕ ಪ್ರತಿಭಟನೆಗಳು ಮತ್ತು ಕಾನೂನು ಹೋರಾಟಗಳು ನಡೆದವು. ಆಸ್ಟ್ರೇಲಿಯಾದ ಅಧಿಕಾರಿಗಳು, ಅಲ್ಲಿನ ಜನರನ್ನು ಮನವೊಲಿಸಲು ಅನೇಕ ಪ್ರಯತ್ನಗಳನ್ನು ಮಾಡಿದರೂ ಪ್ರತಿಭಟನೆಗಳು ಕಡಿಮೆಯಾಗಲಿಲ್ಲ.
ಪರಿಸರವಾದಿ ಸಂಸದ ಬಾಬ್ ಬ್ರೌನ್ (Bob Brown) ಕ್ಯಾನ್‌ಬೆರಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗೆ ಅನೇಕ ಧರಣಿಗಳನ್ನು ನಡೆಸಿದರು. ಅದಾನಿ ಗ್ರೂಪ್‌ನ ಅನ್ಯಾಯದ ಯೋಜನೆಯಿಂದ ಪರಿಸರ ನಾಶವಾಗುತ್ತಿದೆ ಎಂದು ದೇಶಾದ್ಯಂತ ಸಂಚರಿಸಿ, ಜನರಿಗೆ ಮನವರಿಕೆ ಮಾಡಿಕೊಟ್ಟರು. ಕೊನೆಗೆ, 2024 ರಲ್ಲಿ ಅಮೆರಿಕದಲ್ಲಿ ಅದಾನಿ ಗುಂಪಿನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಯಿತು.
ಒಂದು ವರ್ಷದ ಹಿಂದೆ, ಲೆಕ್ಕಪತ್ರ ವಂಚನೆ, ಷೇರು ಬೆಲೆಯಲ್ಲಿ ಅವ್ಯವಹಾರ ಮತ್ತು ತೆರಿಗೆ ಹಣ ವರ್ಗಾವಣೆ ಆರೋಪಗಳಿಂದಾಗಿ 155 ಬಿಲಿಯನ್ ಡಾಲರ್ (1 ಲಕ್ಷ ಕೋಟಿಗೂ ಹೆಚ್ಚು) ಮಾರುಕಟ್ಟೆಯನ್ನು ಅದಾನಿ ಗ್ರೂಪ್ ಕಳೆದುಕೊಂಡಿತು. ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯಿಂದ ಅದಾನಿ ಗ್ರೂಪ್ ಈಗಾಗಲೇ ಬೆಚ್ಚಿಬಿದಿದೆ. ಅದಾನಿ ಗ್ರೂಪ್ ಮತ್ತು ಫ್ರೆಂಚ್ ಕಂಪನಿ ಟೋಟಲ್ ಎನರ್ಜೀಸ್ ನಡುವಿನ ಜಂಟಿ ಉದ್ಯಮವು ಜನವರಿ ಮತ್ತು ಅಕ್ಟೋಬರ್ 2023 ರ ನಡುವೆ ಅದರ ಮಾರುಕಟ್ಟೆ ಮೌಲ್ಯದ ಶೇ.85% ನಷ್ಟವನ್ನು ಅನುಭವಿಸಿವೆ.
ಬ್ರೂಕ್ಲಿನ್ ಪ್ರಾಸಿಕ್ಯೂಟರ್ (Brooklyn Prosecutor) ಪ್ರಕಾರ, 2020 ಮತ್ತು 2024 ರ ನಡುವೆ, ಅದಾನಿ ಮತ್ತು ಅವರ ಗುಂಪಿನ ಇತರ ಏಳು ಉದ್ಯೋಗಿಗಳು ರಾಜಕಾರಣಿಗಳಿಗೆ ಮತ್ತು ಐಎಎಸ್ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಮೊತ್ತವು ಒಟ್ಟು 250 ಮಿಲಿಯನ್ ಡಾಲರ್ (24 ಸಾವಿರ ಕೋಟಿ)ಗಿಂತಲೂ ಹೆಚ್ಚು ಎಂದು ಬಹಿರಂಗವಾಗಿದೆ.
ಹಿಂಡೆನ್‌ಬರ್ಗ್ ವರದಿ ಮತ್ತು ಬ್ರೂಕ್ಲಿನ್ ಪ್ರಾಸಿಕ್ಯೂಟರ್ ಬಹಿರಂಗಪಡಿಸುವಿಕೆಗಳಿಗೆ ಪ್ರತಿಕ್ರಿಯೆಯಾಗಿ, ಹೈಡ್ರೋಜನ್ ವಲಯದಲ್ಲಿ ಅದಾನಿ ಜೊತೆ ಜಂಟಿ ಯೋಜನೆಯಲ್ಲಿ 50 ಬಿಲಿಯನ್ ಡಾಲರ್ (48 ಲಕ್ಷ ಕೋಟಿ) ಹೂಡಿಕೆ ಮಾಡಲು ತೀರ್ಮಾನಿಸಿದ್ದ ಟೋಟಲ್ ಎನರ್ಜೀಸ್ ಗ್ರೂಪ್ ಎಲ್ಲಾ ಹೊಸ ಹೂಡಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತು.

ಈ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಫೆಬ್ರವರಿ 2023 ರಲ್ಲಿ, ಮೋದಿ ಮತ್ತು ಅದಾನಿ ಅವರು ವಿದೇಶಕ್ಕೆ ಹೋಗುವಾಗ ವಿಮಾನದಲ್ಲಿ ಸಂತೋಷವಾಗಿ ಮಾತನಾಡುತ್ತಿರುವ ಫೋಟೊವನ್ನು ಬಹಿರಂಗಪಡಿಸಿದರು. ಇದರಿಂದ ಅದಾನಿ ಮತ್ತು ಮೋದಿ ಅವರ ವಿದೇಶಿ ಪ್ರಯಾಣ ಮತ್ತು ಮೋದಿ ಅವರು ವಿದೇಶಕ್ಕೆ ಹೋದಾಗೆಲ್ಲ ಅದಾನಿಗೆ ಅನುಕೂಲ ಮಾಡಿಕೊಟ್ಟಿರುವ ಬಗ್ಗೆ ಹೆಚ್ಚು ಚರ್ಚೆ ನಡೆಯಿತು. “ಇದು ಭಾರತದ ವಿದೇಶಾಂಗ ನೀತಿಯಲ್ಲ. ಇದು ಅದಾನಿಯ ವಿದೇಶಾಂಗ ನೀತಿ” ಎಂದು ರಾಹುಲ್ ಪಾರ್ಲಿಮೆಂಟ್‌ನಲ್ಲಿ ಟೀಕಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿದ ಮೇಲೆ, ಅತಿ ಹೆಚ್ಚು ವಿದೇಶಿ ಪ್ರಯಾಣಗಳನ್ನು ಮಾಡಿದ್ದಾರೆ. ಬಹುತೇಕ ಪ್ರಯಾಣಗಳಲ್ಲಿ ಗೌತಮ್ ಅದಾನಿ, ಪ್ರಧಾನಿ ಮೋದಿಯ ಜೊತೆ ಹೋಗಿರುತ್ತಾರೆ. ಅಥವಾ ಪ್ರಧಾನಿ ಅವರೇ ಅದಾನಿ ಗ್ರೂಪ್‌ಗಾಗಿ ಯಾವುದೋ ಒಪ್ಪಂದವನ್ನು ಮಾಡಿಕೊಂಡು ಬಂದಿರುತ್ತಾರೆ. ಸ್ವದೇಶದ ಬಗ್ಗೆ ಯೋಚಿಸಿ ಎಂದು ಕರೆಕೊಡುವ ಪ್ರಧಾನಿಗಳು, ತಮ್ಮ ಆಪ್ತಮಿತ್ರ ಗೌತಮ್ ಅದಾನಿಗೆ ಸ್ವದೇಶದಲ್ಲಿಯೇ ಹೂಡಿಕೆ ಮಾಡಲು ಅವಕಾಶ ಮಾಡಿಕೊಡಲಿಲ್ಲವೇ?.



