ಕೇವಲ ಮಾವೋವಾದಿ ಸಾಹಿತ್ಯವನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಅಥವಾ ದಿವಂಗತ ಪ್ರೊ. ಜಿ.ಎನ್. ಸಾಯಿಬಾಬಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಟಿಸ್ (TISS – Tata Institute of Social Sciences) ಕ್ಯಾಂಪಸ್‌ನಲ್ಲಿ ಕಳೆದ ವರ್ಷ (2025ರ ಅಕ್ಟೋಬರ್ 12ರಂದು) ಪ್ರೊ. ಸಾಯಿಬಾಬಾ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಪೂರ್ವಾನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪೈಕಿ 7 ವಿದ್ಯಾರ್ಥಿಗಳಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಉಳಿದ ಇಬ್ಬರ ಅರ್ಜಿಯನ್ನು ವಜಾಗೊಳಿಸಿದೆ.
ಯುಎಪಿಎ (UAPA) ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗಿದ್ದ ದಿವಂಗತ ಜಿ.ಎನ್. ಸಾಯಿಬಾಬಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಭೆ ಸೇರಿದ್ದನ್ನು ಕಾನೂನುಬಾಹಿರ ಎಂದು ಕರೆಯಲಾಗದು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ.ಬಿ. ಬೋಹ್ರಾ ಅವರ ಪೀಠ ಅಭಿಪ್ರಾಯಪಟ್ಟಿದೆ. “ಮಾವೋವಾದಿ ಚಿಂತಕರ ಪುಸ್ತಕಗಳನ್ನು ಕೇವಲ ಡೌನ್‌ಲೋಡ್ ಮಾಡಿಕೊಳ್ಳುವುದು ಕೂಡ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರ ಆಧಾರದ ಮೇಲೆ ನಿಕಿತಾ ಡಿಸೋಜಾ, ಉತ್ಕರ್ಷ್, ಯಶ್, ಅವಂತಿಕಾ, ಇಶ್ಪ್ರೀತ್ ಕೌರ್, ಹಾರ್ದಿಕಾ ಭಗತ್ ಮತ್ತು ಸತ್ಯಂ ಯಾದವ್ ಎಂಬ 7 ವಿದ್ಯಾರ್ಥಿಗಳಿಗೆ ಜಾಮೀನು ಒದಗಿಸಲಾಗಿದೆ.
ಅಭಿರೂಪ್ ಪಾಲ್ ಮತ್ತು ಕಾಮಾಖ್ಯ ದಾಸ್ ಎಂಬ ಇಬ್ಬರು ವಿದ್ಯಾರ್ಥಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇವರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ದೇಶ ವಿಭಜನೆಗೆ ಪ್ರಚೋದನೆ ನೀಡುವಂತಹ ಮಾವೋವಾದಿ ಸಿದ್ಧಾಂತದ ಸಾಹಿತ್ಯಗಳು ಪತ್ತೆಯಾಗಿವೆ ಹಾಗೂ ತನಿಖೆಗೆ ಸಹಕರಿಸದೆ ಕೆಲವು ಡೇಟಾಗಳನ್ನು ಡಿಲೀಟ್ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.
ಶ್ರದ್ಧಾಂಜಲಿ ಸಭೆಯಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಬಿಡುಗಡೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಗಿತ್ತು ಎಂಬ ಗಂಭೀರ ಆರೋಪ ಇವರ ಮೇಲಿದೆ. “ವಿದ್ಯಾರ್ಥಿಗಳಾಗಿ ದೇಶದ ಕಾನೂನನ್ನು ಗೌರವಿಸಬೇಕು; ಇಂತಹ ಘೋಷಣೆಗಳನ್ನು ಕೂಗಲು ಇದು ವೇದಿಕೆಯಾಗಿರಲಿಲ್ಲ” ಎಂದು ಹೇಳಿದ ನ್ಯಾಯಾಲಯ, ಈ ಇಬ್ಬರ ಉದ್ದೇಶವನ್ನು ಅರಿಯಲು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ತಿಳಿಸಿದೆ.
ಸಾಮಾನ್ಯವಾಗಿ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಆರು ವಾರಗಳಲ್ಲಿ ವಿಲೇವಾರಿ ಮಾಡಬೇಕು ಎಂಬ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಇದ್ದರೂ, ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಕೆಯಾಗಿ ಬರೋಬ್ಬರಿ 10 ತಿಂಗಳೇ ಕಳೆದಿವೆ (ಅಕ್ಟೋಬರ್ 15, 2025ರಂದು ಅರ್ಜಿ ಸಲ್ಲಿಸಲಾಗಿತ್ತು). ನ್ಯಾಯಾಲಯಗಳಲ್ಲಿನ ವಿಪರೀತ ಪ್ರಕರಣಗಳ ಹೊರೆ ಹಾಗೂ ನ್ಯಾಯಾಧೀಶರ ಕೊರತೆಯಿಂದಾಗಿ ಈ ವಿಳಂಬವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಾಧೀಶರು, ವ್ಯವಸ್ಥೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




