MBBS ಹಾಗೂ ವೈದ್ಯಕೀಯ ಸ್ನಾತಕೋತ್ತರ (PG) ಪದವೀಧರರಿಗೆ ಸರ್ಕಾರ ವಿಧಿಸಿರುವ ಕಡ್ಡಾಯ ಗ್ರಾಮೀಣ ಸೇವೆಯಿಂದ ವಿನಾಯಿತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಜನರಿಗೆ ಸೂಕ್ತ ವೈದ್ಯಕೀಯ ಸೇವೆ ಒದಗಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದ್ದು, ವೈದ್ಯರ ಕಡ್ಡಾಯ ಸೇವಾ ಬಾಂಡ್ ನಿಯಮವು ಕಾನೂನುಬದ್ಧ ಹಾಗೂ ಸಂವಿಧಾನಬದ್ಧವಾಗಿದೆ ಎಂದು ಅತ್ಯುನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಡ್ಡಾಯ ಗ್ರಾಮೀಣ ಸೇವಾ ಬಾಂಡ್ ಷರತ್ತನ್ನು ಪ್ರಶ್ನಿಸಿ ಹಾಗೂ ಬಾಂಡ್ ಅವಧಿಯನ್ನು ರದ್ದುಗೊಳಿಸುವಂತೆ ಕೋರಿ ವಿವಿಧ ರಾಜ್ಯಗಳ ವೈದ್ಯಕೀಯ ಪದವೀಧರರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪೀಠ ವಜಾಗೊಳಿಸಿದೆ.
ಇದನ್ನೂ ಓದಿ: ತಿಪಟೂರು | ಸೇವೆಯ ಮೂಲಕ ಶಿಕ್ಷಣ ಪಡೆಯುವುದು ಸಾರ್ಥಕವಾದುದು : ಗುರುಕುಲಶ್ರೀ
ಹಾಗೆಯೇ ಸಂವಿಧಾನದ ವಿಧಿ 21ರ ಅಡಿಯಲ್ಲಿ ಪ್ರಜೆಗಳಿಗೆ ದೊರೆಯಬೇಕಾದ ಆರೋಗ್ಯ ಹಕ್ಕನ್ನು ಉಲ್ಲೇಖಿಸಿದ ನ್ಯಾಯಪೀಠ, ಗ್ರಾಮೀಣ ಭಾಗದಲ್ಲಿ ವೈದ್ಯರ ತೀವ್ರ ಅಭಾವವನ್ನು ನೀಗಿಸಲು ಈ ನಿಯಮ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರದ ಅನುದಾನ ಮತ್ತು ಸೌಲಭ್ಯಗಳ ಅಡಿಯಲ್ಲಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಪೂರೈಸುವ ವೈದ್ಯರು, ಪ್ರತಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುವುದು ಅವರ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಕೋರ್ಟ್ ಪ್ರತಿಪಾದಿಸಿದೆ.
ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ವಿಷಯಗಳಲ್ಲಿ ಸೂಕ್ತ ನಿಯಮ ರೂಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ. ಹೀಗಾಗಿ ಗ್ರಾಮೀಣ ಸೇವಾ ಬಾಂಡ್ ನಿಗದಿಪಡಿಸಿರುವ ರಾಜ್ಯಗಳ ಕ್ರಮ ಸರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.




