ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಕೋಟಿಗಟ್ಟಲೆ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದನ್ನು ಯಾವುದೇ ರೀತಿಯ ಸಬೂಬುಗಳನ್ನು ಹೇಳಿ ಸಮರ್ಥಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಹೈದರಾಬಾದ್‌ನ ನಾಲ್ಸಾರ್ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ 19ನೇ ನಾಲ್ಸಾರ್-ನ್ಯಾಯಮೂರ್ತಿ ಬಿ.ಆರ್. ಸಾಹ್ನೆ ಸ್ಮಾರಕ ಮೂಟ್ ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. “ಎಸ್‌ಐಆರ್ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಎಸಗುತ್ತಿರುವ ದ್ರೋಹ” ಎಂದು ಬಣ್ಣಿಸಿದ್ದಾರೆ.
“ಭಾರತದ ಸಂವಿಧಾನವು ದೇಶದಲ್ಲಿ ಎರಡು ರೀತಿಯ ಪೌರತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಅಂದರೆ, ‘ಮತದಾನದ ಹಕ್ಕು ಹೊಂದಿರುವ ನಾಗರಿಕರು’ ಮತ್ತು ‘ಮತದಾನದ ಹಕ್ಕಿಲ್ಲದ ನಾಗರಿಕರು’ ಎಂಬ ವಿಭಾಗವೇ ನಮ್ಮ ಸಂವಿಧಾನದಲ್ಲಿ ಇಲ್ಲ. ಯಾವುದೇ ಪ್ರಕ್ರಿಯೆಯು ಕೋಟಿಗಟ್ಟಲೆ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸಿ, ಅವರನ್ನು ಸ್ವಂತ ದೇಶದಲ್ಲೇ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಿದರೆ, ಅಂತಹ ಪ್ರಕ್ರಿಯೆಯು ಸಂಪೂರ್ಣವಾಗಿ ಸಂವಿಧಾನಬಾಹಿರ” ಎಂದಿದ್ದಾರೆ.
“ಇಂತಹ ಪ್ರಕ್ರಿಯೆಯನ್ನು ಯಾವ ರೀತಿಯ ‘ಸಬೂಬು’ಗಳು ಅಥವಾ ತರ್ಕಗಳಿಂದಲೂ ನ್ಯಾಯಸಮ್ಮತಗೊಳಿಸಲು ಸಾಧ್ಯವೇ ಇಲ್ಲ. ಇದು ನಾವು ಅಳವಡಿಸಿಕೊಂಡಿರುವ ಸಾಂವಿಧಾನಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹುದು” ಎಂದು ಅವರು ಎಚ್ಚರಿಸಿದ್ದಾರೆ.
This video cannot be played in your browser. Open the video directly
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಕುರಿತು ಮಾತನಾಡಿದ ನ್ಯಾಯಮೂರ್ತಿ, “ಮೃತಪಟ್ಟ ಮತದಾರರ ಪ್ರಕರಣಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಸಂದರ್ಭದಲ್ಲಿಯೂ ಪೂರ್ವಭಾವಿ ನೋಟಿಸ್ ನೀಡದೆ, ಸೂಕ್ತ ವಿಚಾರಣೆ ನಡೆಸದೆ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಬಾರದು. ಒಬ್ಬ ಭಾರತೀಯ ನಾಗರಿಕನಿಂದ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಅಷ್ಟು ಸುಲಭವಲ್ಲ; ಅದು ವ್ಯಕ್ತಿಯ ದೇಹದಿಂದ ಆತ್ಮವನ್ನು ಹೊರತೆಗೆದಂತೆ” ಎಂದು ಹೇಳಿದ್ದಾರೆ.
“ಮತದಾನದ ಹಕ್ಕು ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ‘ಮೂಲ ರಚನೆ’ ಸಿದ್ಧಾಂತಕ್ಕೆ ಅತ್ಯಂತ ಕೇಂದ್ರಬಿಂದುವಾಗಿದೆ. ಸಂವಿಧಾನಕ್ಕಿಂತ ಮಿಗಿಲಾದದ್ದು ಅಥವಾ ಮೇಲಾದದ್ದು ದೇಶದಲ್ಲಿ ಬೇರೆ ಯಾವುದೂ ಇಲ್ಲ; ಯಾವುದೇ ಪ್ರಾಧಿಕಾರವಾಗಲಿ ಅಥವಾ ನ್ಯಾಯಾಲಯವಾಗಲಿ ಇಂತಹ ಹಕ್ಕು ಕಸಿಯುವಿಕೆಯನ್ನು ಅನುಮೋದಿಸಲು ಸಾಧ್ಯವಿಲ್ಲ” ಎಂದು ಅವರು ಒತ್ತಿಹೇಳಿದ್ದಾರೆ.
ನ್ಯಾಯಮೂರ್ತಿ ಭುಯಾನ್ ಅವರ ಈ ಹೇಳಿಕೆಯು, ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ವ್ಯಕ್ತಪಡಿಸಿದ್ದ ಕಳವಳಕ್ಕೆ ಪೂರಕವಾಗಿದೆ. ನಾರಿಮನ್ ಅವರು ಕೂಡ ಪ್ರಸ್ತುತ ದೇಶದಲ್ಲಿ ಸಾಮಾನ್ಯ ನಾಗರಿಕನ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳು ತೀವ್ರ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದರು.
ಚುನಾವಣಾ ಆಯೋಗವು ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಕೋಟಿಗಟ್ಟಲೆ ಹೆಸರುಗಳನ್ನು ಏಕಪಕ್ಷೀಯವಾಗಿ ತೆಗೆದುಹಾಕಲಾಗಿದೆ ಎಂಬ ಆರೋಪಗಳು ಮತ್ತು ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಯೊಬ್ಬರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.




