ಮುಂಡಗೋಡ: ಲೊಯೊಲಾ ವಿಕಾಸ ಕೇಂದ್ರದ ವಸತಿ ನಿಲಯದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಅಕ್ಟೋಬರ್ 2ರಿಂದ 4ರವರೆಗೆ ಮೂರು ದಿನಗಳ ದಸರಾ ರಜಾ ಶಿಬಿರವನ್ನು ಮುಂಡಗೋಡಿನ ಲೊಯೊಲಾ ವಿಕಾಸ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ಪ್ರೇರಣೆ, ಅಧ್ಯಯನ ಕೌಶಲ್ಯ, ಜೀವನ ಕೌಶಲ್ಯ, ಕರಕುಶಲತೆ ಹಾಗೂ ಪಠ್ಯೇತರ ಚಟುವಟಿಕೆಗಳ ಆಸಕ್ತಿ ಬೆಳೆಸುವುದು ಶಿಬಿರದ ಪ್ರಮುಖ ಉದ್ದೇಶವಾಗಿತ್ತು.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ವಜ್ರಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಸಂಗ್ರಹಿಸಿದ್ದ ₹36 ಸಾವಿರ ಮೌಲ್ಯದ ಕಡಿ, ಎಂ-ಸ್ಯಾಂಡ್ ಕಳವು
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೂಪಾ ಅಂಗಡಿ, ಮುಂಡಗೋಡ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸಂತೋಷ್ ಕುಮಾರ್ ಎ.ಎಚ್. ಹಾಗೂ ಲೊಯೊಲಾ ವಿಕಾಸ ಕೇಂದ್ರದ ನಿರ್ದೇಶಕ ಫಾ. ಅನಿಲ್ ಡಿಸೋಜಾ ಉಪಸ್ಥಿತರಿದ್ದರು.
ಅತಿಥಿಗಳು ತಮ್ಮ ಜೀವನದ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು, ಉತ್ತಮ ಶಿಕ್ಷಣದೊಂದಿಗೆ ಸೂಕ್ತ ಮಾರ್ಗದರ್ಶನ ಪಡೆದು ಭವಿಷ್ಯದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. ಜೀವನ ಕೌಶಲ್ಯ, ಜೇಡಿಮಣ್ಣಿನ ಕರಕುಶಲ ಕಲೆ, ಸ್ಥಳೀಯ ಜಾನಪದ, ದೈನಂದಿನ ಜೀವನಶೈಲಿ, ಆರೋಗ್ಯ ಮತ್ತು ನೈರ್ಮಲ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಯಿತು.
ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಹೊರತರಲು ಅವಕಾಶ ಕಲ್ಪಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಪಿ.ಆರ್.ಎಸ್. ವಾಟರ್ ಪಾರ್ಕ್‌ಗೆ ಶೈಕ್ಷಣಿಕ ಹಾಗೂ ಮನರಂಜನಾ ಭೇಟಿಯನ್ನೂ ಆಯೋಜಿಸಲಾಗಿತ್ತು.




