ಎಥನಾಲ್ ಮಿಶ್ರಿತ ‘E20’ ಪೆಟ್ರೋಲ್ ಬಳಕೆಯನ್ನು ಕಡ್ಡಾಯಗೊಳಿಸುವ ಸರ್ಕಾರದ ನೀತಿಯ ವಿರುದ್ಧ ಸಾರ್ವಜನಿಕ ಬೆಂಬಲವನ್ನು ಕ್ರೋಡೀಕರಿಸಲು ಎಎಪಿ ಮುಂದಾಗಿದೆ. ಆಗಸ್ಟ್ 1ರಂದು ನವದೆಹಲಿಯಲ್ಲಿ ‘ಇ20 ವಿರುದ್ಧ ರಾಷ್ಟ್ರೀಯ ಟೌನ್ ಹಾಲ್’ (National Town Hall against E20) ಹಮ್ಮಿಕೊಳ್ಳುವುದಾಗಿ ನಾಯಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ದೆಹಲಿಯ ‘ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ದಲ್ಲಿ ನಡೆಯಲಿರುವ ಈ ಸಭೆಯಲ್ಲಿ ವಿಷಯ ತಜ್ಞರು, ವಾಹನ ಮಾಲೀಕರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಇ20 ಇಂಧನದಿಂದ ವಾಹನಗಳಿಗೆ ಆಗುತ್ತಿರುವ ಹಾನಿ ಮತ್ತು ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ದೆಹಲಿ-ಎನ್ಸಿಆರ್ ವ್ಯಾಪ್ತಿಯ ಜನರು ನೇರವಾಗಿ ಸಭೆಗೆ ಆಗಮಿಸಬಹುದು ಮತ್ತು ದೇಶದ ಇತರ ಭಾಗಗಳ ಜನರು 8588833212 ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಆನ್ಲೈನ್ನಲ್ಲಿ ಸಭೆಯಲ್ಲಿ ಭಾಗಿಯಾಗಬಹುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಇ20 ಪೆಟ್ರೋಲ್ ಬಳಕೆಯನ್ನು ಕಡ್ಡಾಯಗೊಳಿಸದೆ ಆಯ್ಕೆಯಾಗಿಯಷ್ಟೇ ಬಿಡಬೇಕು ಎಂದು ಆಗ್ರಹಿಸಿ ಎಎಪಿ ಆರಂಭಿಸಿದ್ದ ಆನ್ಲೈನ್ ಅಭಿಯಾನಕ್ಕೆ ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ದೆಹಲಿಯ ಮಾಜಿ ಮುಖ್ಯಮಂತ್ರಿ, “ಆಗಸ್ಟ್ 1ರ ಸಭೆಯ ನಂತರ ಸಾರ್ವಜನಿಕರ ಸಹಿ ಹೊಂದಿರುವ ಅರ್ಜಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇವೆ” ಎಂದು ಹೇಳಿದ್ದಾರೆ.
ನೀಟ್ ಅಕ್ರಮದ ವಿರುದ್ಧದ ವಿದ್ಯಾರ್ಥಿ-ಯುವಜನರ ಹೋರಾಟದ ಬಗ್ಗೆ ಮಾತನಾಡಿದ ಕೇಜ್ರಿವಾಲ್, “ದೇಶದ ಯುವಜನತೆಯ ಒಗ್ಗಟ್ಟು ಅಹಂಕಾರಿ ಸರ್ಕಾರವನ್ನು ಬಾಗುವಂತೆ ಮಾಡಿದೆ. ಇ20 ವಿಷಯವೂ ದೇಶಾದ್ಯಂತ ಬೃಹತ್ ಚಳವಳಿಯಾಗಿ ಮಾರ್ಪಡುವ ಮುನ್ನವೇ ಪ್ರಧಾನಿಯವರು ಸಾರ್ವಜನಿಕರ ಕಳವಳವನ್ನು ಆಲಿಸಿ ಸಮಸ್ಯೆಯನ್ನು ಬಗೆಹರಿಸಬೇಕು” ಎಂದು ವಿನಂತಿಸಿದ್ದಾರೆ.
ಇದೇ ವೇಳೆ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮವನ್ನು ಕೇಜ್ರಿವಾಲ್ ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪರೀಕ್ಷಾ ಅಕ್ರಮ ತಡೆ ಕಾಯ್ದೆಯ ನಿಯತ್ತನ್ನು ಪ್ರಶ್ನಿಸಿದರು. “ಪರೀಕ್ಷಾ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಾಮಾಣಿಕ ಇಚ್ಛಾಶಕ್ತಿ ಸರ್ಕಾರಕ್ಕೆ ಇಲ್ಲದಿದ್ದರೆ, ಎಷ್ಟೇ ಕಠಿಣ ಕಾನೂನು ತಂದರೂ ಯಾವುದೇ ಪ್ರಯೋಜನವಿಲ್ಲ” ಎಂದು ಅವರು ಟೀಕಿಸಿದ್ದಾರೆ.
ಮತ್ತೊಂದೆಡೆ, ಪಂಜಾಬ್ನ ಶಿಕ್ಷಣ ಸಚಿವರ ರಾಜೀನಾಮೆಗೆ ಕೇಳಿಬರುತ್ತಿರುವ ಆಗ್ರಹವನ್ನು ತಳ್ಳಿಹಾಕಿದ ಕೇಜ್ರಿವಾಲ್, “ದೆಹಲಿಯಲ್ಲಿ ಕಳೆದ 10 ವರ್ಷಗಳಲ್ಲಿ ಹಾಗೂ ಪಂಜಾಬ್ನಲ್ಲಿ ಕಳೆದ 5 ವರ್ಷಗಳಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಚೋರಿಯಾಗಿಲ್ಲ. 2022 ಕ್ಕಿಂತ ಮೊದಲು ಶಿಕ್ಷಣ ಕ್ಷೇತ್ರದಲ್ಲಿ 27 ನೇ ಸ್ಥಾನದಲ್ಲಿದ್ದ ಪಂಜಾಬ್, ಇಂದು ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಈ ಅಭಿವೃದ್ಧಿಯನ್ನು ಸಹಿಸದೇ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ” ಎಂದು ಆಪ್ ಸರ್ಕಾರದ ಸಾಧನೆಯನ್ನು ಸಮರ್ಥಿಸಿಕೊಂಡಿದ್ದಾರೆ.




