ಸಮಿತಿಯ ಮೇಲೆ ಸಮಿತಿ: ಪರೀಕ್ಷಾ ಸುಧಾರಣೆಯೇ? ವಿದ್ಯಾರ್ಥಿಗಳ ಕಣ್ಣಿಗೆ ಮಣ್ಣೆರಚುವ ತಂತ್ರವೇ?

Date:

ಕಳೆದ ಕೆಲವು ವರ್ಷಗಳಲ್ಲಿ ದೇಶದ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ವಿಶ್ವಾಸಾರ್ಹತೆ ಗಂಭೀರವಾಗಿ ಕುಸಿದಿದೆ. ವಿಶೇಷವಾಗಿ ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ನೀಟ್‌ನ ಪ್ರಶ್ನೆಪತ್ರಿಕೆ ಸೋರಿಕೆ, ಗ್ರೇಸ್‌ ಮಾರ್ಕ್‌ ವಿವಾದ, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬಂದ ಅಸಾಮಾನ್ಯ ಫಲಿತಾಂಶಗಳು, ಖಾಸಗಿ ಸಂಸ್ಥೆಗಳ ಹಸ್ತಕ್ಷೇಪ ಹಾಗೂ ಪರೀಕ್ಷಾ ಮಾಫಿಯಾಗಳು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕವನ್ನು ಸೃಷ್ಟಿಸಿವೆ. ಆದ್ದರಿಂದ, ವಿದ್ಯಾರ್ಥಿಗಳ ಆಕ್ರೋಶ ಸ್ಪೋಟಗೊಂಡು ದೆಹಲಿಯ ಜಂತರ್‌ ಮಂತರ್‌ನಲ್ಲಿ ಹೊರಹೊಮ್ಮಿತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುವಂತೆ ಮಾಡಿತು. ಇದೀಗ, ಪರೀಕ್ಷಾ ಅಕ್ರಮಗಳನ್ನು ತಡೆದು, ಸುಧಾರಣೆ ತರಲು ಮೋದಿ ಸರ್ಕಾರವು ‘ನಿಲೇಕಣಿ ಸಮಿತಿ’ಯನ್ನು ರಚಿಸಿದೆ. ಆದರೆ, ಈ ಸಮಿತಿಯು ಮೋದಿ ಸರ್ಕಾರ ರಚಿಸುತ್ತಿರುವ ಸರಣಿ ಸಮಿತಿಗಳು ಒಂದು.

- Advertisement -

ಅಂದಹಾಗೆ, 2024ರಲ್ಲಿಯೂ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮದ ಕುರಿತು ದೇಶವ್ಯಾಪಿ ವಿವಾದ ಸ್ಫೋಟಗೊಂಡಿತ್ತು. ಪ್ರಶ್ನೆಪತ್ರಿಕೆ ಸೋರಿಕೆ, ಗ್ರೇಸ್ ಅಂಕಗಳ ವಿವಾದ, ಪರೀಕ್ಷಾ ಕೇಂದ್ರಗಳಲ್ಲಿನ ಅಕ್ರಮಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಕಾರ್ಯವೈಖರಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಗಲೂ, ಇದೇ ಮೋದಿ ಸರ್ಕಾರ, ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿರಚಿಸಿತ್ತು. ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳನ್ನು ಪಾರದರ್ಶಕವಾಗಿ, ಸುರಕ್ಷಿತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಗತ್ಯವಿರುವ ಬದಲಾವಣೆಗಳನ್ನು ಶಿಫಾರಸು ಮಾಡುವಂತೆ ಕೇಳಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪ್ರಜಾಪ್ರಭುತ್ವದ ಕಗ್ಗೊಲೆ: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ರಾಧಾಕೃಷ್ಣ ಸಮಿತಿ ಸಾಮಾನ್ಯ ಆಡಳಿತಾತ್ಮಕ ವರದಿ ನೀಡುವುದಕ್ಕೆ ಸೀಮಿತವಾಗಿರಲಿಲ್ಲ. ಅದು ಪರೀಕ್ಷಾ ವ್ಯವಸ್ಥೆಯಲ್ಲಿರುವ ಮೂಲಭೂತ ದುರ್ಬಲತೆಗಳನ್ನು ಗುರುತಿಸಿ, ಸಂಪೂರ್ಣ ವ್ಯವಸ್ಥೆಯ ಪುನರ್‌ರಚನೆಯನ್ನು ಸೂಚಿಸಲು ರಚಿಸಲಾಗಿತ್ತು. ಸಮಿತಿಯು ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು, ಪರೀಕ್ಷಾ ನಿರ್ವಹಣಾ ಸಂಸ್ಥೆಗಳು ಹಾಗೂ ತಾಂತ್ರಿಕ ಪರಿಣಿತರಿಂದ ಸಾವಿರಾರು ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಸಿದ್ದಪಡಿಸಿತ್ತು. 2024ರ ಅಕ್ಟೋಬರ್‌ನಲ್ಲಿ ಸುಮಾರು 185 ಪುಟಗಳ ವರದಿ ಮತ್ತು 95ಕ್ಕೂ ಹೆಚ್ಚು ಶಿಫಾರಸುಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಿತ್ತು ಎಂದು ವರದಿಗಳು ತಿಳಿಸಿವೆ.

ಸಮಿತಿ ಶಿಫಾರಸುಗಳಲ್ಲಿ ಏನಿತ್ತು?

ಸಮಿತಿಯ ಅತ್ಯಂತ ಪ್ರಮುಖ ಶಿಫಾರಸುಗಳಲ್ಲಿ ನೀಟ್ ಪರೀಕ್ಷೆಯನ್ನು ಹಂತ ಹಂತವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ ಪರಿವರ್ತಿಸುವ ಪ್ರಸ್ತಾವನೆ ಸೇರಿತ್ತು. ಕಾಗದ ಆಧಾರಿತ ಪರೀಕ್ಷಾ ಪದ್ಧತಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ಮುದ್ರಿಸುವುದು, ಸಂಗ್ರಹಿಸುವುದು, ಸಾಗಿಸುವುದು ಹಾಗೂ ಪರೀಕ್ಷಾ ಕೇಂದ್ರದಲ್ಲಿ ತೆರೆಯುವುದು ಮುಂತಾದ ಹಲವು ಹಂತಗಳಿವೆ. ಈ ಪ್ರತಿಯೊಂದು ಹಂತದಲ್ಲೂ ಮಾನವ ಹಸ್ತಕ್ಷೇಪ ಹೆಚ್ಚಿರುವುದರಿಂದ ಪ್ರಶ್ನೆಪತ್ರಿಕೆ ಸೋರಿಕೆಗೆ ಅವಕಾಶಗಳು ಸೃಷ್ಟಿಯಾಗುತ್ತವೆ. ಪ್ರಶ್ನೆಪತ್ರಿಕೆಯನ್ನು ಮುದ್ರಣಾಲಯದಿಂದ ಪರೀಕ್ಷಾ ಕೇಂದ್ರದವರೆಗೆ ಸಾಗಿಸುವ ಪ್ರಕ್ರಿಯೆಯಲ್ಲಿ ಎಷ್ಟು ಹೆಚ್ಚು ವ್ಯಕ್ತಿಗಳು ಭಾಗವಹಿಸುತ್ತಾರೋ, ಅಷ್ಟೇ ಹೆಚ್ಚು ಭದ್ರತಾ ಅಪಾಯಗಳು ಎದುರಾಗುತ್ತವೆ ಎಂದು ಸಮಿತಿ ಗುರುತಿಸಿತ್ತು.

ಪೂರ್ಣ ಪ್ರಮಾಣದ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ತಕ್ಷಣ ಜಾರಿಗೊಳಿಸಲು ದೇಶದ ಎಲ್ಲ ಭಾಗಗಳಲ್ಲೂ ಅಗತ್ಯವಿರುವ ತಾಂತ್ರಿಕ ಮೂಲಸೌಕರ್ಯ ಲಭ್ಯವಿಲ್ಲದಿದ್ದರೆ, ಮಧ್ಯಂತರವಾಗಿ ಹೈಬ್ರಿಡ್ ಮಾದರಿಯನ್ನು ಬಳಸಬಹುದು ಎಂದು ಸಮಿತಿ ಸೂಚಿಸಿತ್ತು. ಈ ಮಾದರಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಪರೀಕ್ಷೆ ಆರಂಭವಾಗುವ ಕೆಲವೇ ಸಮಯದ ಮೊದಲು ಡಿಜಿಟಲ್ ರೂಪದಲ್ಲಿ ಕೇಂದ್ರಗಳಿಗೆ ಕಳುಹಿಸಿ, ವಿದ್ಯಾರ್ಥಿಗಳು ಉತ್ತರಗಳನ್ನು ಕಾಗದದಲ್ಲಿ ದಾಖಲಿಸುವ ವ್ಯವಸ್ಥೆಯನ್ನು ರೂಪಿಸಬಹುದು. ಇದರಿಂದ ಪ್ರಶ್ನೆಪತ್ರಿಕೆ ಮುದ್ರಣ, ದೀರ್ಘಕಾಲ ಸಂಗ್ರಹ ಹಾಗೂ ಹಲವು ಹಂತಗಳ ಸಾರಿಗೆ ಅಗತ್ಯ ಕಡಿಮೆಯಾಗುತ್ತದೆ. ಪ್ರಶ್ನೆಪತ್ರಿಕೆಯನ್ನು ನಿರ್ವಹಿಸುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಾದಷ್ಟೂ ಸೋರಿಕೆಯ ಅಪಾಯವೂ ಕಡಿಮೆಯಾಗುತ್ತದೆ ಎಂಬುದು ಈ ಶಿಫಾರಸಿನ ತರ್ಕವಾಗಿತ್ತು.

ರಾಧಾಕೃಷ್ಣ ಸಮಿತಿ ಸದಸ್ಯರಾಗಿದ್ದ ಪಂಕಜ್ ಬನ್ಸಾಲ್ ಅವರು ನಂತರ ನೀಡಿದ ಸಂದರ್ಶನವೊಂದರಲ್ಲಿ, “ಕಂಪ್ಯೂಟರ್ ಆಧಾರಿತ ಪರೀಕ್ಷಾ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದರೆ, ಪರೀಕ್ಷಾ ಅಕ್ರಮಗಳಿಗೆ ಕಾರಣವಾಗಿರುವ ಬಹುಪಾಲು ಸಮಸ್ಯೆಗಳನ್ನು ತಪ್ಪಿಸಬಹುದಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದರು. ಭೌತಿಕ ಪ್ರಶ್ನೆಪತ್ರಿಕೆಯ ನಿರ್ವಹಣೆ ಮತ್ತು ಸಾಗಣೆಯೇ ಪರೀಕ್ಷಾ ಮಾಫಿಯಾಗಳ ಹಸ್ತಕ್ಷೇಪಕ್ಕೆ ಅನುಕೂಲಕರವಾದ ಅತ್ಯಂತ ದುರ್ಬಲ ಕೊಂಡಿ ಎಂಬುದು ಅವರ ನಿಲುವಾಗಿತ್ತು.

ನೀಟ್ ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸುವ ಬದಲು ಬಹುಹಂತದ ಪರೀಕ್ಷೆಯಾಗಿ ಪರಿವರ್ತಿಸುವ ಸಾಧ್ಯತೆಯನ್ನೂ ಸಮಿತಿ ಪರಿಶೀಲಿಸಿತ್ತು. ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾಗದ ಆಧಾರಿತ ಪರೀಕ್ಷೆ ನಡೆಸುವುದು ಆಡಳಿತಾತ್ಮಕವಾಗಿಯೂ ಭದ್ರತಾ ದೃಷ್ಟಿಯಿಂದಲೂ ಅತ್ಯಂತ ಅಪಾಯಕಾರಿ ಕಾರ್ಯವಾಗಿದೆ. ಜೆಇಇ ಮುಖ್ಯ ಪರೀಕ್ಷೆ ಮತ್ತು ಉನ್ನತ ಪರೀಕ್ಷೆಯ ಮಾದರಿಯಲ್ಲಿ ಮೊದಲ ಹಂತದಲ್ಲಿ ಅರ್ಹತಾ ಅಥವಾ ಪರಿಶೀಲನಾ ಪರೀಕ್ಷೆ ನಡೆಸಿ, ನಂತರ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎರಡನೇ ಹಂತದ ಪರೀಕ್ಷೆ ನಡೆಸುವ ವ್ಯವಸ್ಥೆ ರೂಪಿಸಬಹುದು ಎಂದು ಸಮಿತಿ ಸಲಹೆ ನೀಡಿತ್ತು. ಇದರಿಂದ, ಒಂದೇ ಸಮಯದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಪರೀಕ್ಷಾ ಕೇಂದ್ರಗಳ ಮೇಲಿನ ಒತ್ತಡವೂ ಇಳಿಯುತ್ತದೆ ಎಂದಿತ್ತು.

ಅಲ್ಲದೆ, ‘ಎನ್‌ಟಿಎ’ನಲ್ಲಿನ ಸಂಘಟನಾ ರಚನೆಯಲ್ಲಿಯೇ ಗಂಭೀರ ದುರ್ಬಲತೆಗಳಿವೆ ಎಂಬುದನ್ನೂ ಸಮಿತಿ ಗುರುತಿಸಿತ್ತು. ಎನ್‌ಟಿಎ ದೊಡ್ಡ ಪ್ರಮಾಣದಲ್ಲಿ ಗುತ್ತಿಗೆ ಸಿಬ್ಬಂದಿ ಮತ್ತು ಹೊರಗುತ್ತಿಗೆ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ. ಇಷ್ಟು ಮಹತ್ವದ ಪರೀಕ್ಷೆಗಳನ್ನು ನಿರ್ವಹಿಸುವ ಸಂಸ್ಥೆಯಲ್ಲಿ ಶಾಶ್ವತ, ತರಬೇತಿ ಪಡೆದ ಹಾಗೂ ನೇರ ಹೊಣೆಗಾರರಾಗಿರುವ ಸಿಬ್ಬಂದಿಯ ಕೊರತೆ ಇರುವುದು ಪರೀಕ್ಷಾ ಭದ್ರತೆಗೆ ದೊಡ್ಡ ಅಪಾಯವಾಗಿದೆ. ಆದ್ದರಿಂದ, ಎನ್‌ಟಿಎಯಲ್ಲಿ ಪ್ರತ್ಯೇಕ ತಾಂತ್ರಿಕ, ಭದ್ರತಾ, ಡೇಟಾ ನಿರ್ವಹಣೆ, ಪರೀಕ್ಷಾ ಕಾರ್ಯಾಚರಣೆ ಹಾಗೂ ವಿದ್ಯಾರ್ಥಿ ಸಹಾಯ ವಿಭಾಗಗಳನ್ನು ಸ್ಥಾಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಈ ಲೇಖನ ಓದಿದ್ದೀರಾ?: ನೀಟ್ ವೈಫಲ್ಯ- ಇಡೀ ವ್ಯವಸ್ಥೆಯ ಕುಸಿತಕ್ಕೆ ಸಾಕ್ಷಿ

ಎನ್‌ಟಿಎಗೆ ಹಿರಿಯ ಆಡಳಿತಾಧಿಕಾರಿಯ ನೇತೃತ್ವ ನೀಡಬೇಕು, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಮನ್ವಯ ವ್ಯವಸ್ಥೆಯನ್ನು ಬಲಪಡಿಸಬೇಕು, ಪರೀಕ್ಷೆಗೆ ಸಂಬಂಧಿಸಿದ ಸೂಕ್ಷ್ಮ ಕಾರ್ಯಾಚರಣೆಗಳ ಮೇಲೆ ನೇರ ಸರ್ಕಾರಿ ನಿಯಂತ್ರಣ ಹೆಚ್ಚಿಸಬೇಕು ಹಾಗೂ ಹೊರಗುತ್ತಿಗೆ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂಬ ಸಲಹೆಗಳೂ ವರದಿಯಲ್ಲಿ ಇದ್ದವು.

ಅಂತೆಯೇ, ಪರೀಕ್ಷೆಗಳನ್ನು ನಡೆಸಲು ಖಾಸಗಿ ಪರೀಕ್ಷಾ ಕೇಂದ್ರಗಳ ಬದಲು ಸರ್ಕಾರಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ನಿಯಂತ್ರಿತ ಕೇಂದ್ರಗಳನ್ನು ಹೆಚ್ಚು ಬಳಸಬೇಕು ಎಂದು ಸಮಿತಿ ಸೂಚಿಸಿತ್ತು. ಖಾಸಗಿ ಕೇಂದ್ರಗಳಲ್ಲಿ ಮೇಲ್ವಿಚಾರಣೆ ದುರ್ಬಲವಾಗಿರುವ ಸಂದರ್ಭಗಳಲ್ಲಿ ಸ್ಥಳೀಯ ಪ್ರಭಾವಿಗಳು ಅಥವಾ ಪರೀಕ್ಷಾ ಮಾಫಿಯಾಗಳು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ಸಮಿತಿಯ ಆತಂಕವಾಗಿತ್ತು.

ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ವ್ಯಕ್ತಿಯಿಂದ ಹಿಡಿದು ಪರೀಕ್ಷಾ ಕೇಂದ್ರದ ಮುಖ್ಯಸ್ಥರವರೆಗೆ ಯಾರು ಯಾವ ಹಂತದಲ್ಲಿ ಪ್ರವೇಶ ಪಡೆದಿದ್ದಾರೆ ಎಂಬುದನ್ನು ದಾಖಲಿಸುವ ಡಿಜಿಟಲ್ ವ್ಯವಸ್ಥೆ, ಬಹುಹಂತದ ದೃಢೀಕರಣ, ಸೈಬರ್ ಭದ್ರತಾ ಪರಿಶೀಲನೆ, ಡೇಟಾ ಆಡಿಟ್ ಹಾಗೂ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣ ಪತ್ತೆಹಚ್ಚುವ ವ್ಯವಸ್ಥೆಗಳನ್ನು ಜಾರಿಗೊಳಿಸುವ ಅಗತ್ಯವನ್ನೂ ಸಮಿತಿ ಒತ್ತಿಹೇಳಿತ್ತು. ಅಭ್ಯರ್ಥಿಗಳ ಗುರುತಿನ ಪರಿಶೀಲನೆ, ನಕಲಿ ಅಭ್ಯರ್ಥಿಗಳನ್ನು ತಡೆಯುವುದು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಡಿಜಿಟಲ್ ನಿಗಾವ್ಯವಸ್ಥೆಯನ್ನು ಬಲಪಡಿಸುವ ಸಲಹೆಗಳೂ ಅದರ ಭಾಗವಾಗಿದ್ದವು.

ಈ ಸಮಗ್ರ ವರದಿಯನ್ನು ಸರ್ಕಾರ ಜಾರಿಗೊಳಿಸಿತೇ?

ಇಷ್ಟೊಂದು ಸಮಗ್ರವಾದ ವರದಿ ಸರ್ಕಾರದ ಕೈಯಲ್ಲಿದ್ದರೂ, ಅದರಲ್ಲಿನ ಎಷ್ಟು ಶಿಫಾರಸುಗಳು ಜಾರಿಯಾದವು ಎಂಬುದಕ್ಕೆ ಸ್ಪಷ್ಟವಾದ ಸಾರ್ವಜನಿಕ ಉತ್ತರ ಲಭ್ಯವಿಲ್ಲ. ಇದೇ ಈಗಿನ ವಿವಾದದ ಕೇಂದ್ರಬಿಂದು. ರಾಧಾಕೃಷ್ಣ ಸಮಿತಿಯ ಭಾಗವಾಗಿದ್ದ ಪಂಕಜ್ ಬನ್ಸಾಲ್ ಅವರೇ ಎಲ್ಲ 95 ಶಿಫಾರಸುಗಳು ಸಂಪೂರ್ಣವಾಗಿ ಜಾರಿಯಾಗಿವೆಯೇ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. “ಸಮಿತಿ ಆರು ತಿಂಗಳು ಶ್ರಮವಹಿಸಿ ಸಿದ್ಧಪಡಿಸಿದ ವರದಿಯ ನಂತರವೂ ಅದೇ ರೀತಿಯ ಪರೀಕ್ಷಾ ಅಕ್ರಮಗಳು ಮರುಕಳಿಸಿರುವುದು ಸಮಿತಿ ಸದಸ್ಯರಿಗೂ ನಿರಾಶೆ ಉಂಟುಮಾಡಿದೆ” ಎಂದು ಅವರು ಹೇಳಿರುವುದು ಗಮನಾರ್ಹ.

ಸಮಿತಿ ರಚಿಸುವುದು ಸರ್ಕಾರದ ಮೊದಲ ಪ್ರತಿಕ್ರಿಯೆ. ಆದರೆ, ಸಮಿತಿ ಸಲ್ಲಿಸಿದ ವರದಿಯನ್ನು ಜಾರಿಗೊಳಿಸುವುದು ಸರ್ಕಾರದ ನಿಜವಾದ ಕರ್ತವ್ಯ. ವರದಿ ಸಲ್ಲಿಕೆಯಾದ ನಂತರ ಅದನ್ನು ಸಾರ್ವಜನಿಕವಾಗಿ ಚರ್ಚಿಸದೆ, ಶಿಫಾರಸುಗಳ ಅನುಷ್ಠಾನಕ್ಕೆ ಸ್ಪಷ್ಟ ಸಮಯಪಟ್ಟಿ ನೀಡದೆ ಹಾಗೂ ವರದಿ ಅನುಷ್ಠಾನದ ಪ್ರಗತಿ ಪರಿಶೀಲನಾ ವಿವರವನ್ನು ಜನರ ಮುಂದೆ ಇಡದೆ ಮತ್ತೊಂದು ಸಮಿತಿ ರಚಿಸಿದರೆ, ಅದು ಸಮಸ್ಯೆಯ ಪರಿಹಾರಕ್ಕಿಂತ ಸಮಸ್ಯೆಯನ್ನು ಮುಂದೂಡುವ ಪ್ರಯತ್ನವೇ ಆಗಿರುತ್ತದೆ.

2024ರ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಮೂಲಗಳನ್ನು ಸಮಿತಿ ಸ್ಪಷ್ಟವಾಗಿ ಗುರುತಿಸಿತ್ತು. ಮುದ್ರಣ, ಸಾಗಣೆ, ಸಂಗ್ರಹ, ಖಾಸಗಿ ಕೇಂದ್ರಗಳ ಬಳಕೆ, ಹೊರಗುತ್ತಿಗೆ ಸಿಬ್ಬಂದಿ, ದುರ್ಬಲ ಡೇಟಾ ಭದ್ರತೆ ಹಾಗೂ ಎನ್‌ಟಿಎಯ ಅಪೂರ್ಣ ಸಂಘಟನಾ ರಚನೆ ಪ್ರಮುಖ ಅಪಾಯಗಳಾಗಿವೆ ಎಂದು ಹೇಳಿತ್ತು. ಇವುಗಳನ್ನೇ ಸರಿಪಡಿಸದಿದ್ದರೆ ಮತ್ತೆ ಸೋರಿಕೆ ನಡೆಯಬಹುದು ಎಂಬ ಎಚ್ಚರಿಕೆಯನ್ನೂ ನೀಡಿತ್ತು. ಆದರೂ, ಈಗಲೂ ಅದೇ ಸಮಸ್ಯೆಗಳು ಮರುಕಳಿಸಿವೆ. ಇದು ಅಕ್ಷರಶಃ ಮೋದಿ ಸರ್ಕಾರದ ವೈಫಲ್ಯ.

ಸಮಿತಿ ರಚನೆ ಎಂಬ ರಾಜಕಾರಣ

ತನ್ನ ವೈಫಲ್ಯವನ್ನು ಮರೆಮಾಡಲು, ಈಗ ಮೋದಿ ಸರ್ಕಾರ ಮತ್ತೊಂದು ಪರೀಕ್ಷಾ ಸುಧಾರಣಾ ಕಾರ್ಯಪಡೆಯನ್ನು ರಚಿಸಿದೆ. ಇದರಿಂದಾಗುವ ಪ್ರಯೋಜನವೇನು ಎಂಬ ಪ್ರಶ್ನೆ ಈಗ ದೇಶದ ಮುಂದಿದೆ. ಹೊಸ ಸಮಿತಿಯ ಕಾರ್ಯವ್ಯಾಪ್ತಿ ರಾಧಾಕೃಷ್ಣ ಸಮಿತಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಹಳೆಯ ಸಮಿತಿ ನೀಡಿದ್ದ ಶಿಫಾರಸುಗಳಲ್ಲಿ ಯಾವುವನ್ನು ಜಾರಿಗೊಳಿಸಲಾಗಿದೆ, ಯಾವುವನ್ನು ತಿರಸ್ಕರಿಸಲಾಗಿದೆ, ಯಾವುವು ಇನ್ನೂ ಪ್ರಕ್ರಿಯೆಯಲ್ಲಿವೆ ಹಾಗೂ ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ಸರ್ಕಾರ ಪ್ರಕಟಿಸುವ ಅಗತ್ಯವೂ ಇದೆ.

ಸರ್ಕಾರಗಳು ಬಿಕ್ಕಟ್ಟು ಎದುರಾದಾಗ ಸಮಿತಿ ರಚಿಸುವುದು ಭಾರತದಲ್ಲಿ ಹೊಸ ಸಂಗತಿಯಲ್ಲ. ಸಾರ್ವಜನಿಕ ಆಕ್ರೋಶ ಹೆಚ್ಚಾದಾಗ ಸಮಿತಿ ಘೋಷಿಸಲಾಗುತ್ತದೆ. ಸಮಿತಿ ಹಲವು ತಿಂಗಳು ಅಧ್ಯಯನ ನಡೆಸುತ್ತದೆ. ವರದಿ ಸಲ್ಲಿಕೆಯಾಗುವಷ್ಟರಲ್ಲಿ ಸಾರ್ವಜನಿಕ ಗಮನ ಬೇರೆ ವಿಷಯಗಳತ್ತ ತಿರುಗಿರುತ್ತದೆ. ನಂತರ ವರದಿ ಸಚಿವಾಲಯದ ಕಡತಗಳಲ್ಲಿ ಉಳಿಯುತ್ತದೆ. ಮತ್ತೆ ಅದೇ ಸಮಸ್ಯೆ ಮರುಕಳಿಸಿದಾಗ ಹೊಸ ಸಮಿತಿ ರಚಿಸಲಾಗುತ್ತದೆ. ಇದು ಒಂದು ರೀತಿಯ ‘ಸಮಿತಿ ರಾಜಕಾರಣ’ ಅಥವಾ ‘ಕಮಿಟಿ ರಾಜ್’!

ಇಂತಹ ಸಮಿತಿಗಳು ಸರ್ಕಾರಕ್ಕೆ ಎರಡು ರೀತಿಯ ರಾಜಕೀಯ ಅನುಕೂಲ ಒದಗಿಸುತ್ತವೆ. ಮೊದಲನೆಯದಾಗಿ, ತಕ್ಷಣದ ಪ್ರತಿಭಟನೆ ಮತ್ತು ಆಕ್ರೋಶವನ್ನು ತಣ್ಣಗಾಗಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂಬ ಭಾವನೆ ಮೂಡಿಸುತ್ತದೆ. ಎರಡನೆಯದಾಗಿ, ಅಂತಿಮ ನಿರ್ಧಾರವನ್ನು ಕೆಲವು ತಿಂಗಳುಗಳವರೆಗೆ ಮುಂದೂಡಬಹುದು. ಈ ನಡುವೆ ಹೊಣೆಗಾರಿಕೆ, ಸಂಸ್ಥೆಯ ವೈಫಲ್ಯ ಹಾಗೂ ರಾಜಕೀಯ ಉತ್ತರದಾಯಿತ್ವದ ಪ್ರಶ್ನೆಗಳು ಹಿನ್ನೆಲೆಗೆ ಸರಿಯುತ್ತವೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ತಾತ್ಕಾಲಿಕವಾಗಿ ‘ಸಮಿತಿ ರಚಿಸಲಾಗಿದೆ’ ಎಂಬ ಉತ್ತರ ನೀಡಲಾಗುತ್ತದೆ.

ವಾಸ್ತವದಲ್ಲಿ ವಿದ್ಯಾರ್ಥಿಗಳಿಗೆ ಬೇಕಿರುವುದೇನು?

ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಹೊಸ ಸಮಿತಿಯ ಹೆಸರು ಅಥವಾ ಇನ್ನೊಂದು ದೀರ್ಘ ವರದಿ ಅಲ್ಲ. ಅವರಿಗೆ ಬೇಕಾಗಿರುವುದು ಪ್ರಶ್ನೆಪತ್ರಿಕೆ ಸೋರಿಕೆಯಾಗುವುದಿಲ್ಲ ಎಂಬ ಖಾತರಿ. ಪರೀಕ್ಷಾ ಕೇಂದ್ರದಲ್ಲಿ ಹಣ, ಪ್ರಭಾವ ಅಥವಾ ರಾಜಕೀಯ ಸಂಪರ್ಕವಿರುವವರಿಗೆ ವಿಶೇಷ ಅನುಕೂಲ ಸಿಗುವುದಿಲ್ಲ ಎಂಬ ಭರವಸೆ. ತಮ್ಮ ಪರಿಶ್ರಮದ ಅಂಕಗಳನ್ನು ಯಾರೂ ಕಸಿದುಕೊಳ್ಳುವುದಿಲ್ಲ ಎಂಬ ವಿಶ್ವಾಸ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುತ್ತದೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಹೊಣೆಗಾರಿಕೆ ನಿಗದಿಯಾಗುತ್ತದೆ ಎಂಬ ನ್ಯಾಯದ ಭರವಸೆ.

ಪರೀಕ್ಷಾ ಅಕ್ರಮಗಳ ಪರಿಣಾಮ ಕೇವಲ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗುವುದಿಲ್ಲ. ಒಂದು ಕುಟುಂಬ ತನ್ನ ಮಗುವಿನ ವೈದ್ಯಕೀಯ ಶಿಕ್ಷಣದ ಕನಸಿಗಾಗಿ ಹಲವು ವರ್ಷಗಳಿಂದ ಹಣ, ಸಮಯ ಹಾಗೂ ಶ್ರಮ ಹೂಡಿರುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೂಲಸೌಕರ್ಯದ ಕೊರತೆಯ ನಡುವೆಯೂ ಕಷ್ಟಪಟ್ಟು ಓದಿರುತ್ತಾರೆ. ಬಡ ಕುಟುಂಬದ ವಿದ್ಯಾರ್ಥಿಗಳು ದುಬಾರಿ ಕೋಚಿಂಗ್ ಪಡೆಯದೆ ಸ್ವಂತ ಶ್ರಮದಿಂದ ಪರೀಕ್ಷೆಗೆ ಸಿದ್ಧತೆ ನಡೆಸಿರುತ್ತಾರೆ. ಆದರೆ, ಪ್ರಶ್ನೆಪತ್ರಿಕೆ ಮೊದಲೇ ಹಣಕ್ಕೆ ಮಾರಾಟವಾಗಿದ್ದರೆ, ಈ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಯಾವ ಮೌಲ್ಯ ಉಳಿದೀತು?

ಈ ಕಾರಣದಿಂದ ಪರೀಕ್ಷಾ ಅಕ್ರಮವು ಕೇವಲ ಕಾನೂನು ಉಲ್ಲಂಘನೆಯಲ್ಲ. ಅದು ಸಮಾನ ಅವಕಾಶದ ಸಂವಿಧಾನಾತ್ಮಕ ತತ್ವದ ವಿರುದ್ಧದ ಅಪರಾಧ ಕೂಡ. ಹಣವಿರುವವರು ಪ್ರಶ್ನೆಪತ್ರಿಕೆ ಖರೀದಿಸಿ ಮುಂದಕ್ಕೆ ಹೋದರೆ, ಬಡ ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಹೊರತಾಗಿಯೂ ಹಿಂದೆ ಉಳಿಯುತ್ತಾರೆ. ಈ ದುರ್ಬಲ ವ್ಯವಸ್ಥೆಯಲ್ಲಿ ಪರೀಕ್ಷೆಯೇ ಪ್ರತಿಭೆಯ ಆಯ್ಕೆಯ ಸಾಧನವಾಗಿರದೆ, ವರ್ಗ ಮತ್ತು ಹಣದ ಶಕ್ತಿಯ ಸಾಧನವಾಗಿ ಬದಲಾಗುತ್ತದೆ.

ಸರ್ಕಾರಗಳು ನಿಜಕ್ಕೂ ಮಾಡಬೇಕಿರುವುದೇನು?

ಪರೀಕ್ಷಾ ಮಾಫಿಯಾಗಳನ್ನು ನಿರ್ಮೂಲನೆ ಮಾಡಲು ಕೇವಲ ತಂತ್ರಜ್ಞಾನ ಸಾಕಾಗುವುದಿಲ್ಲ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಪ್ರಶ್ನೆಪತ್ರಿಕೆಯ ಮುದ್ರಣ ಮತ್ತು ಸಾಗಣೆಯ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ, ಪ್ರಶ್ನೆಗಳನ್ನು ಸಿದ್ಧಪಡಿಸುವ ವ್ಯಕ್ತಿಯೇ ದುರುದ್ದೇಶದಿಂದ ಮಾಹಿತಿ ಸೋರಿಸಿದರೆ ಯಾವುದೇ ಎನ್‌ಕ್ರಿಪ್ಷನ್ ಸಂಪೂರ್ಣ ರಕ್ಷಣೆಯಾಗುವುದಿಲ್ಲ. ಆದ್ದರಿಂದ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರಿಗೂ ಸಂಪೂರ್ಣ ಪ್ರಶ್ನೆಪತ್ರಿಕೆ ಸಿಗದಂತೆ ಮಾಡುವ ವ್ಯವಸ್ಥೆಯ ಅಗತ್ಯವಿದೆ.

ಇದರ ಜೊತೆಗೆ, ಪರೀಕ್ಷಾ ಅಕ್ರಮ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾದರೆ ಪರಿಹಾರ ನೀಡುವ ವ್ಯವಸ್ಥೆ ರೂಪಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇವಲ ಕೆಲವು ಮಧ್ಯವರ್ತಿಗಳನ್ನು ಬಂಧಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಪ್ರಶ್ನೆ ಸಿದ್ಧಪಡಿಸುವ ಹಂತದಿಂದ ಪರೀಕ್ಷಾ ಕೇಂದ್ರದವರೆಗೆ ಇರುವ ಸಂಪೂರ್ಣ ಜಾಲವನ್ನು ತನಿಖೆಗೆ ಒಳಪಡಿಸಬೇಕು.

ಅಂತೆಯೇ, ರಾಧಾಕೃಷ್ಣ ಸಮಿತಿಯ 95 ಶಿಫಾರಸುಗಳ ಅನುಷ್ಠಾನ ಸ್ಥಿತಿಯನ್ನು ಪರಿಶೀಲಿಸಬೇಕು. ಯಾವ ಶಿಫಾರಸು ಜಾರಿಯಾಗಿದೆ, ಯಾವುದು ಭಾಗಶಃ ಜಾರಿಯಾಗಿದೆ ಹಾಗೂ ಯಾವುದು ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದನ್ನು ಸ್ಪಷ್ಟವಾಗಿ ದಾಖಲಿಸಬೇಕು. ನಂತರ, ಉಳಿದ ಶಿಫಾರಸುಗಳ ಜಾರಿಗೆ ಸಮಯಮಿತಿಯ ಕಾರ್ಯಯೋಜನೆ ರೂಪಿಸಬೇಕು. ಪ್ರತಿ ಆರು ತಿಂಗಳಿಗೆ ಜಾರಿಯ ಪ್ರಗತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ವ್ಯವಸ್ಥೆಯನ್ನೂ ಕಡ್ಡಾಯಗೊಳಿಸಬೇಕು.

ಈ ಲೇಖನ ಓದಿದ್ದೀರಾ?: ಜೆನ್‌ ಝೀಗಳನ್ನು ಅರ್ಥಮಾಡಿಕೊಳ್ಳದೆ ಬಿಜೆಪಿ ‘ಔಟ್‌ ಡೇಟೆಡ್’ ಆಗುತ್ತಿದೆಯೇ?

ಸಮಿತಿಯ ವರದಿಗಳನ್ನು ಸಾರ್ವಜನಿಕರಿಂದ ರಹಸ್ಯವಾಗಿಡಬಾರದು. ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯು ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ, ಸಮಿತಿ ಶಿಫಾರಸುಗಳು ಮತ್ತು ಅನುಷ್ಠಾನ ವರದಿಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು.

ಇದಾವುದನ್ನೂ ಮಾಡದ ಸರ್ಕಾರ, ಈಗ ಮತ್ತೊಂದು ಸಮಿತಿ ರಚಿಸಿದೆ. ಇದು, ಹಿಂದಿನ ವರದಿ ಅಪೂರ್ಣವಾಗಿತ್ತು ಎಂಬುದನ್ನು ಸೂಚಿಸುತ್ತದೆಯೇ ಅಥವಾ ಸರ್ಕಾರವೇ ಅದನ್ನು ಜಾರಿಗೊಳಿಸಲು ವಿಫಲವಾಯಿತೇ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಹಿಂದಿನ ವರದಿ ತಾಂತ್ರಿಕವಾಗಿ ದುರ್ಬಲವಾಗಿದ್ದರೆ ಸರ್ಕಾರ ಅದನ್ನು ಬಹಿರಂಗವಾಗಿ ಹೇಳಬೇಕು. ಶಿಫಾರಸುಗಳು ಪ್ರಾಯೋಗಿಕವಾಗಿರಲಿಲ್ಲವೆಂದರೆ ಕಾರಣ ನೀಡಬೇಕು. ಹಣಕಾಸು ಅಥವಾ ಮೂಲಸೌಕರ್ಯದ ಸಮಸ್ಯೆಯಿಂದ ಜಾರಿ ವಿಳಂಬವಾಗಿದ್ದರೆ ಅದನ್ನೂ ಒಪ್ಪಿಕೊಳ್ಳಬೇಕು. ಆದರೆ, ಯಾವುದೇ ವಿವರಣೆ ನೀಡದೆ ಮತ್ತೆ ಹೊಸ ಸಮಿತಿ ರಚಿಸುವುದು ಆಡಳಿತಾತ್ಮಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ತಂತ್ರವಷ್ಟೇ.

ಸದ್ಯಕ್ಕೆ, ರಾಧಾಕೃಷ್ಣ ಸಮಿತಿಯ ವರದಿ ಸರ್ಕಾರದ ಬಳಿ ಇದೆ. ಪರೀಕ್ಷಾ ವ್ಯವಸ್ಥೆಯ ದುರ್ಬಲ ಕೊಂಡಿಗಳು ಸರ್ಕಾರಕ್ಕೆ ಗೊತ್ತಿವೆ. ಪರಿಹಾರಗಳೂ ಸೂಚಿಸಲ್ಪಟ್ಟಿವೆ. ಈಗ ಸಮಸ್ಯೆ ಮಾಹಿತಿಯ ಕೊರತೆಯಲ್ಲ. ಸಮಸ್ಯೆ ರಾಜಕೀಯ ಇಚ್ಛಾಶಕ್ತಿಯ ಕೊರತೆ.

ವಿದ್ಯಾರ್ಥಿಗಳು ಸಮಿತಿಗಳು ಮತ್ತು ವರದಿಗಳನ್ನು ಕೇಳುತ್ತಿಲ್ಲ. ಅವರು ನ್ಯಾಯ ಕೇಳುತ್ತಿದ್ದಾರೆ. ಅವರು ಭರವಸೆಗಳನ್ನು ಕೇಳುತ್ತಿಲ್ಲ. ಅವರು ಭದ್ರವಾದ ಪರೀಕ್ಷಾ ವ್ಯವಸ್ಥೆಯನ್ನು ಕೇಳುತ್ತಿದ್ದಾರೆ. ಸರ್ಕಾರವು ಉತ್ತರದಾಯಿತ್ವ ನೀಡದೆ, ಹೊಸ ಸಮಿತಿ ರಚಿಸಿವುದು ತನ್ನ ವೈಫಲ್ಯವನ್ನು ಮುಚ್ಚಿಹಾಕುವ ಮತ್ತೊಂದು ಕಾಗದದ ಪರದೆಯೇ ಆಗಿರುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔಷಧ ಮಾರಾಟದಲ್ಲಿ ಲೂಟಿ! MRP-ಮಾರಾಟ ದರದ ನಡುವೆ ಇಷ್ಟೊಂದು ಅಂತರವೇಕೆ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಭಾರತದಲ್ಲಿ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮತ್ತು ಚಿಲ್ಲರೆ ವ್ಯಾಪಾರಿಗಳು...

ಅಂತಿಮ ಮತದಾರರ ಪಟ್ಟಿ ಪ್ರಕಟ: ಧಾರವಾಡ ಜಿಲ್ಲೆಯಲ್ಲಿ 13.78 ಲಕ್ಷ ಮತದಾರರು

15,151 ಯುವ ಮತದಾರರ ಮೊದಲ ಬಾರಿ ನೋಂದಣಿ, 6,305 ಹೆಸರು ಡಿಲೀಟ್,...

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಜಯಭೇರಿ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಪಶ್ಚಿಮ...

ಯುಪಿ ಚುನಾವಣೆ | ಮತದಾರರ ಮನಗೆಲ್ಲಲು ಯೋಗಿ ಸಂಪುಟದ ಮೆಗಾ ಪ್ಲ್ಯಾನ್; ಹಸು ಖರೀದಿಗೆ ಸಬ್ಸಿಡಿ, ಉಚಿತ ಕೋಳಿ ಮರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ)...