ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಸ್ವಾತಂತ್ರ್ಯ ಕ್ವಿಜ್ 2026’ ಸ್ಪರ್ಧೆಯಲ್ಲಿ ವಿ.ಡಿ. ಸಾವರ್ಕರ್ ಕುರಿತು ವಿವಾದಾತ್ಮಕ ಪ್ರಶ್ನೆಯೊಂದನ್ನು ಸೇರಿಸಿದ ಆರೋಪದ ಮೇಲೆ ಕೇರಳ ಸರ್ಕಾರವು ಶಿಕ್ಷಕರೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಕುಂಬ್ಲೈ ವಿದ್ಯಾಭ್ಯಾಸ ಉಪಜಿಲ್ಲೆಯ ‘ಎ.ಯು.ಪಿ.ಎಸ್. ಪಲ್ಲತ್ತಡ್ಕ’ ಶಾಲೆಯ ಶಿಕ್ಷಕ ಗುರು ಪ್ರಸಾದ್ ಅಮಾನತಾದವರು. ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿಗಳ ತನಿಖಾ ವರದಿ ಆಧರಿಸಿ, ಸಾರ್ವಜನಿಕ ಶಿಕ್ಷಣ ನಿರ್ದೇಶಕ (DGE) ಸ್ನೇಹಿಲ್ ಕುಮಾರ್ ಸಿಂಗ್ ಈ ಅಮಾನತು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ, ಆರ್‌ಎಸ್ಎಸ್, ಹಿಂದೂ ಮಹಾಸಭಾ ಎಂದಿಗೂ ದಲಿತರ ಪರವಾಗಿ ನಿಲ್ಲುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಆಗಸ್ಟ್ 6ರಂದು ಕಾಸರಗೋಡು, ಕುಂಬ್ಲ ಮತ್ತು ಮಂಜೇಶ್ವರಂ ಶೈಕ್ಷಣಿಕ ವಲಯಗಳ ಪ್ರಾಥಮಿಕ ಶಾಲೆಗಳಲ್ಲಿ ‘ಸೋಷಿಯಲ್ ಸೈನ್ಸ್ ಕ್ಲಬ್’ ವತಿಯಿಂದ ಕ್ವಿಜ್ ಸ್ಪರ್ಧೆ ಆಯೋಜಿಸಲಾಗಿತ್ತು. ಕಿರಿಯ ಪ್ರಾಥಮಿಕ (LP) ವಿಭಾಗದ ಪ್ರಶ್ನೆಪತ್ರಿಕೆಯಲ್ಲಿ “ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾದ ಸ್ವಾತಂತ್ರ್ಯ ಹೋರಾಟಗಾರ ಯಾರು?” ಎಂಬ ಪ್ರಶ್ನೆ ಕೇಳಲಾಗಿತ್ತು. ಉತ್ತರ ಸೂಚಿಯಲ್ಲಿ (Answer Key) ‘ವಿ.ಡಿ. ಸಾವರ್ಕರ್’ ಎಂದು ನೀಡಲಾಗಿತ್ತು.
ಐತಿಹಾಸಿಕವಾಗಿ ಸಾಕ್ಷ್ಯವಿಲ್ಲದ ಹಾಗೂ ದಾರಿ ತಪ್ಪಿಸುವ ಮಾಹಿತಿಯನ್ನು ಪ್ರಶ್ನೆಪತ್ರಿಕೆಯಲ್ಲಿ ಸೇರಿಸಿರುವುದು ಗಂಭೀರ ಲೋಪ ಎಂದು ಶಿಕ್ಷಣ ಇಲಾಖೆ ಪರಿಗಣಿಸಿದೆ. ಶಿಕ್ಷಕ ಗುರು ಪ್ರಸಾದ್ ನೇತೃತ್ವದ ಶಿಕ್ಷಕರ ತಂಡವೇ ಈ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆಯು ಕೇರಳ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿಪಿಐ(ಎಂ) ಮುಖಂಡರು, ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ವಿದ್ಯಾರ್ಥಿ-ಯುವಜನ ಸಂಘಟನೆಗಳು ಶಿಕ್ಷಣ ಕ್ಷೇತ್ರದಲ್ಲಿ ‘ಸಂಘಪರಿವಾರದ ಅಜೆಂಡಾ’ ತುರುಕಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದವು.
ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರ ಕಚೇರಿಯು, “ಈ ಕ್ವಿಜ್ ಸ್ಪರ್ಧೆಯು ಶಿಕ್ಷಣ ಇಲಾಖೆ ಅಥವಾ ಸೋಷಿಯಲ್ ಸೈನ್ಸ್ ಕ್ಲಬ್‌ನ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿಸಿರಲಿಲ್ಲ. ಸ್ವತಂತ್ರವಾಗಿ ಪ್ರಶ್ನೆಪತ್ರಿಕೆ ತಯಾರಿಸಲು ಯಾರಿಗೂ ಅನುಮತಿ ನೀಡಿರಲಿಲ್ಲ” ಎಂದು ಸ್ಪಷ್ಟನೆ ನೀಡಿದೆ.




