ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರನ್ನು 60 ದಿನಗಳ ಕಾಲ ʻಗೃಹಬಂಧನʼದಲ್ಲಿ ಇರಿಸುವಂತೆ ಲೇಹ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 4ರಂದು ಹಿಲ್ ಕೌನ್ಸಿಲ್ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಚುನಾವಣೆಯನ್ನು ವಿರೋಧಿಸಿ ಲಡಾಖ್‌ನ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಚಳಿಗಾಲದಲ್ಲಿ ಲಡಾಖ್‌ನಲ್ಲಿ ವಲಸೆ ಸರ್ವೆಸಾಮಾನ್ಯವಾಗಿದ್ದು, ಇದರಿಂದಾಗಿ ಅನೇಕ ಮತದಾರರು ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಸ್ಥಾಳೀಯ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟಿಸುತ್ತಿದ್ದರು. ಈ ಪ್ರತಿಭಟನೆಯನ್ನು ಬೆಂಬಲಿಸಿ ವಾಂಗ್‌ಚುಕ್ ಅವರು ಉಪವಾಸ ಆರಂಭಿಸಿದ್ದರು. ಪ್ರತಿಭಟನಾ ಸ್ಥಳದಿಂದ ಅವರನ್ನು ಶನಿವಾರ ಬಲವಂತವಾಗಿ ಎಬ್ಬಿಸಲಾಗಿತ್ತು. ಇದೀಗ, ಅವರನ್ನು ಗೃಹಬಂಧನದಲ್ಲಿ ಇರಲಿಸಲು ಆದೇಶಿಸಲಾಗಿದೆ.
ಪ್ರತಿಭಟನೆ ತೀವ್ರಗೊಳ್ಳದಂತೆ ಮುನ್ನೆಚರಿಕೆಯ ಕ್ರಮವಾಗಿ ವಾಂಗ್‌ಚುಕ್ ಅವರ ವಿರುದ್ಧ ನಿರ್ಬಂಧದ ಆದೇಶಗಳನ್ನು ಜಾರಿಗೊಳಿಸಬೇಕೆಂದು ಲೇಹ್ ಪೊಲೀಸ್ ವರಿಷ್ಠಾಧಿಕಾರಿಗಳು ಸಲ್ಲಿಸಿದ್ದ ವರದಿಯ ಆಧಾರದ ಮೇಲೆ ಲೇಹ್‌ನ ಮ್ಯಾಜಿಸ್ಟ್ರೇಟ್ ಈ ಆದೇಶ ಹೊರಡಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ಅವರ ಸಂಚಾರವನ್ನು ನಿರ್ಬಂಧಿಸಲು ಆದೇಶಿಸಿದ್ದಾರೆ. ಡಿಸೆಂಬರ್ 4ರಂದು ನಡೆಯಲಿರುವ ಚುನಾವಣೆಯ ಮತದಾನ ಮತ್ತು ಫಲಿತಾಂಶ ಪ್ರಕಟವಾಗುವವರೆಗೂ ವಾಂಗ್‌ಚುಕ್ ಅವರಿಗೆ ಗೃಹ ಬಂಧನ ಚಾಲ್ತಿಯಲ್ಲಿರಲಿದೆ.
ಅಂದಹಾಗೆ, ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಪ್ರಕ್ರಿಯೆ ಇದಾಗಿದೆ. 8 ಮಂಡಳಿಗಳಲ್ಲಿ ಒಟ್ಟು 100 ಕ್ಷೇತ್ರಗಳಿದ್ದು, ಅವುಗಳಲ್ಲಿ 36 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಚುನಾವಣಾ ವೇಳಾಪಟ್ಟಿಯ ಪ್ರಕಾರ, ನವೆಂಬರ್ 17 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್ 20 ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಡಿಸೆಂಬರ್ 8ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಲಡಾಖ್‌ನ ಮುಖ್ಯ ಕಾರ್ಯದರ್ಶಿ ಆಶಿಶ್ ಕುಂದ್ರಾ ಅವರು ಚಳಿಗಾಲದಲ್ಲಿ ಚುನಾವಣೆ ನಡೆಸುವ ತೀರ್ಮಾನವನ್ನು ಸಮರ್ಥಿಸಿಕೊಂಡರು. ಚುನಾಯಿತ ಮಂಡಳಿಗಳ ರಚನೆಯನ್ನು ಮತ್ತಷ್ಟು ವಿಳಂಬ ಮಾಡದೆ ಪೂರ್ಣಗೊಳಿಸುವ ಅಗತ್ಯವನ್ನು ಹೇಳುತ್ತಾ, ಹೊಸದಾಗಿ ಆಯ್ಕೆಯಾಗುವ ಮಂಡಳಿಗಳಿಗೆ ಮುಂದಿನ ಆರ್ಥಿಕ ವರ್ಷದ ಬಜೆಟ್ ಸಿದ್ದಪಡಿಸಲು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳು ಲಭ್ಯವಾಗಲಿವೆ ಎಂದರು.
ಹವಾಮಾನ ಪರಿಸ್ಥಿತಿಗಳು ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಲು ಅಡ್ಡಿಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು. ಮತಗಟ್ಟೆಗಳಲ್ಲಿ ಹೀಟರ್‌ಗಳ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ಸಾಲುಗಳು ಸೇರಿದಂತೆ ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಪುನರ್‌ರಚನೆಯಾದ ಮಂಡಳಿಗಳ ಅಧಿಕಾರಗಳ ಕುರಿತು ಸ್ಪಷ್ಟನೆ ನೀಡಿದ ಮುಖ್ಯ ಕಾರ್ಯದರ್ಶಿ, ಹೊಸದಾಗಿ ಆಯ್ಕೆಯಾಗುವ ಕೌನ್ಸಿಲ್‌ಗಳು ತಮ್ಮ ಹಿಂದಿನ ಶಾಸನಬದ್ದ ಅಧಿಕಾರಗಳನ್ನು ಉಳಿಸಿಕೊಳ್ಳಲಿವೆ. ಇದರ ಜೊತೆಗೆ, 73ನೇ ಸಂವಿಧಾನ ತಿದ್ದುಪಡಿಯಡಿ ಜಿಲ್ಲಾ ಮಟ್ಟದ ಪಂಚಾಯತ್ ಸಂಸ್ಥೆಗಳಿಗೆ ಕಲ್ಪಿಸಲಾಗಿರುವ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯೂ ನಡೆಯುತ್ತಿದೆ. ಲಡಾಖ್‌ನಲ್ಲಿ ಒಟ್ಟು 192 ಪಂಚಾಯಿತಿಗಳಿದ್ದು, ಈ ಪೈಕಿ 55 ಸರಪಂಚ್‌ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 137 ಸರಪಂಚ್ ಸ್ಥಾನಗಳಿಗೆ ಮತದಾನ ನಡೆಯಲಿದೆ.
ಲೇಹ್ ನಗರಸಭೆಯಲ್ಲಿ 21 ವಾರ್ಡ್‌ಗಳಿದ್ದು, 42 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾರ್ಗಿಲ್ ನಗರಸಭೆಯಲ್ಲಿ 17 ವಾರ್ಡ್‌ಗಳಿದ್ದು, ಈ ಪೈಕಿ ನಾಲ್ಕು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು. ಕಳೆದ ಮೂರು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಈಗ ಪಂಚಾಯಿತಿಗಳ ಜೊತೆಗೆ ಎಂಟು ಹೊಸ ಜಿಲ್ಲಾ ಮಂಡಳಿಗಳು ರಚನೆಯಾಗಲಿವೆ ಎಂದು ಕುಂದ್ರಾ ಹೇಳಿದ್ದಾರೆ. ಜಿಲ್ಲೆಗಳ ಜನಸಂಖ್ಯೆ ಮತ್ತು ಅಧಿಸೂಚಿತ LAHDC ನಿಯಮಗಳಿಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಣೆ ಪ್ರಕ್ರಿಯೆ ನಡೆಸಲಾಗಿದೆ ಎಂದು ಕುಂದ್ರಾ ಹೇಳಿದ್ದಾರೆ.
ಚಳಿಗಾಲದ ಕಠಿಣ ಹವಾಮಾನದ ಅವಧಿಯಲ್ಲಿ ಚುನಾವಣೆ ನಡೆಸುವ ನಿರ್ಧಾರ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ ಲಡಾಖ್‌ನ ಹಲವು ರಾಜಕೀಯ ಹಾಗೂ ನಾಗರಿಕ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಚುನಾವಣಾ ವೇಳಾಪಟ್ಟಿಯನ್ನು ವಿರೋಧಿಸಿ ಕಾರ್ಗಿಲ್‌ನಲ್ಲಿ ಸಂಪೂರ್ಣ ಬಂದ್ ಆಚರಿಸಲಾಗಿತ್ತು. ಲೇಹ್‌ನ ಲಡಾಖ್ ಬೌದ್ದ ಸಂಘಟನೆಯ ಪಂಚಾಯಿತಿ ಮತ್ತು ನಗರಸಭೆ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.
ಆದರೆ, ಆಡಳಿತವನ್ನು ಬಲಪಡಿಸಲು ಮತ್ತು ಹೊಸದಾಗಿ ರಚನೆಯಾಗಿರುವ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸ್ಥಾಪಿಸಲು ಚುನಾಯಿತ ಸಂಸ್ಥೆಗಳ ರಚನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಅಗತ್ಯ ಎಂದು ಆಡಳಿತ ಸಮರ್ಥಿಸಿಕೊಂಡಿದೆ.



