ಕಳೆದ 12 ವರ್ಷಗಳಿಂದ ಬಾಲಿವುಡ್‌ನಲ್ಲಿ ನಟನಾಗಿ ಸಣ್ಣ-ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಹೇಮಂತ್ ಮೋದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೇಮಂತ್ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿದ್ದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. 2014ರಲ್ಲಿ ಪೆರೋಲ್‌ನಲ್ಲಿ ಹೊರ ಬಂದು ತಲೆಮರೆಸಿಕೊಂಡಿದ್ದರು. ಕಳೆದ 12 ವರ್ಷಗಳಲ್ಲಿ ತನ್ನ ಗುರುತುಗಳನ್ನು ಬದಲಾಯಿಸಿಕೊಂಡು ಮುಂಬೈಗೆ ತೆರಳಿ 40 ಕ್ಕೂ ಹೆಚ್ಚು ಸಿನಿಮಾಗಳು, ಧಾರಾವಾಹಿಗಳು ಮತ್ತು ನಾಟಕಗಳಲ್ಲಿ ನಟಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹೇಮಂತ್ ಮೋದಿ ಬಾಲಿವುಡ್‌ನ ಪ್ರಮುಖ ನಟರೊಂದಿಗೆ ಪರದೆ ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ಅಮೀರ್ ಖಾನ್ ನಟಿಸಿದ “ಥಗ್ಸ್ ಆಫ್ ಹಿಂದೂಸ್ತಾನ್” ಮತ್ತು ರಣವೀರ್ ಸಿಂಗ್ ನಟಿಸಿದ “ಜಯೇಶ್‌ಭಾಯ್ ಜೋರ್ದಾರ್”ನಂತಹ ಚಿತ್ರಗಳಲ್ಲಿ ನಟಿಸಿದ್ದರು. ಗುಜರಾತಿ ಸಿನಿಮಾ, ರಂಗಭೂಮಿ, ವೆಬ್ ಸರಣಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಗುಜರಾತ್‌ನ ಹಿತು ಕನೋಡಿಯಾ ಮತ್ತು ಹಿತೇನ್ ಕುಮಾರ್‌ನಂತಹ ಜನಪ್ರಿಯ ವ್ಯಕ್ತಿಗಳೊಂದಿಗೆ ಪಾತ್ರ ನಿರ್ವಹಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ; ಝಡ್ ಭದ್ರತೆ ಕೋರಿದ ಬಿಹಾರ ಸಂಸದ ಪಪ್ಪು ಯಾದವ್
2005ರಲ್ಲಿ ರಸ್ತೆಯಲ್ಲಿ ಏಣಿ ಇಡುವ ವಿಚಾರದಲ್ಲಿ ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ನಡೆದ ಜಗಳದಲ್ಲಿ ಕೊಲೆ ನಡೆದಿತ್ತು. ಹೇಮಂತ್ ಮೋದಿ, ಅವರ ಸಹೋದರ ಸಚಿನ್ ಮೋದಿ ಮತ್ತು ಐವರು ಸ್ನೇಹಿತರು ಗಲಾಟೆ ವೇಳೆ ನರೇಂದ್ರ ಕಾಂಬ್ಳೆ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಕಾಂಬ್ಳೆ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಹೇಮಂತ್ ಮೋದಿಗೆ 2008ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
2014ರಲ್ಲಿ 30 ದಿನಗಳ ಪೆರೋಲ್‌ನಲ್ಲಿ ಬಿಡುಗಡೆಯಾದ ಹೇಮಂತ್, ಗುಜರಾತ್‌ನಿಂದ ಪಲಾಯನ ಮಾಡಿ ಸ್ಪಂದನ್ ಮೋದಿ ಮತ್ತು ಟ್ವಿಂಕಲ್ ಡೇವ್ ಸೇರಿದಂತೆ ವಿಭಿನ್ನ ಗುರುತುಗಳೊಂದಿಗೆ ಮುಂಬೈನಲ್ಲಿ ವಾಸವಿದ್ದರು. ಹಾಗೆಯೇ ಆಗಾಗ ಯಾರಿಗೂ ತಿಳಿಯದಂತೆ ಅಹಮದಾಬಾದ್‌ಗೆ ಭೇಟಿ ನೀಡುತ್ತಿದ್ದಾರೆ. ಸಿನಿಮಾದಲ್ಲಿರುವ ವ್ಯಕ್ತಿಯೇ ಹೇಮಂತ್ ಮೋದಿ ಎಂಬ ಮಾಹಿತಿ ತಿಳಿದ ಪೊಲೀಸರು ಹೇಮಂತ್ ಅಹಮದಾಬಾದ್‌ಗೆ ಬರುವುದನ್ನು ಕಾಯುತ್ತಿದ್ದರು. ಇತ್ತೀಚೆಗೆ ಹೇಮಂತ್ ಗುಜರಾತ್‌ಗೆ ಭೇಟಿ ನೀಡಿದಾಗ ಪೊಲೀಸರು ಬಂಧಿಸಿದ್ದಾರೆ.




