ಜಾಮೀನು ಪಡೆದು ಜೈಲಿನಿಂದ ಹೊರಬಂದ ಅತ್ಯಾಚಾರ ಆರೋಪಿ, ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಹಿಂದೂ ಯುವ ವಾಹಿನಿಯ ಮಾಜಿ ನಗರಾಧ್ಯಕ್ಷನನ್ನು ಅದ್ದೂರಿಯಾಗಿ ಸ್ವಾಗತಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಆರೋಪಿಯನ್ನು ಎತ್ತಿ ಸಂಭ್ರಮಾಚರಣೆಯ ಮೆರವಣಿಗೆಯನ್ನೂ ಮಾಡಲಾಗಿದೆ. ಇದೀಗ ಮೆರವಣಿಗೆಯ ಸಮಯದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಗಾಜಿಯಾಬಾದ್ ಪೊಲೀಸರು ಅತ್ಯಾಚಾರ ಆರೋಪಿ ಮತ್ತು ಆತನ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕಾನೂನು ವಿದ್ಯಾರ್ಥಿನಿಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಸುಶೀಲ್ ಪ್ರಜಾಪತಿ ಸುಮಾರು 8-9 ತಿಂಗಳ ಜೈಲುವಾಸದ ನಂತರ ಮೇ 17ರಂದು ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ. ಜೈಲಿನಿಂದ ಹೊರಬಂದ ತಕ್ಷಣ ಆತನ ಬೆಂಬಲಿಗರು ಆತನಿಗೆ ಹೂಮಾಲೆ ಹಾಕಿ, ಹೆಗಲ ಮೇಲೆ ಹೊತ್ತು, ಜೈಕಾರ ಕೂಗಿ ವಿಜಯೋತ್ಸವ ಮೆರವಣಿಗೆ ನಡೆಸಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ: ಜಾಮೀನಿನ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ಅದ್ದೂರಿ ಸ್ವಾಗತ
ಆತನ ಬೆಂಬಲಿಗರು ಅಜಾಗರೂಕತೆಯಿಂದ ವಾಹನಗಳನ್ನು ಓಡಿಸಿದ್ದಾರೆ. ರಸ್ತೆ ಬಂದ್ ಮಾಡಿದ್ದಾರೆ. ಈ ಮೆರವಣಿಗೆಯಿಂದಾಗಿ ಸಂಚಾರ ದಟ್ಟಣೆ ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ ಎಂಬ ಕಾರಣಕ್ಕೆ ಎಫ್‌ಐಆರ್ ದಾಖಲಾಗಿದೆ.
ಇನ್ನು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನು ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಿಡಿಯೋ ತುಣುಕುಗಳ ಮೂಲಕ ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಸೂರಿ ಸ್ಟೇಷನ್ ಹೌಸ್ ಅಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.
ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನೂ ಸ್ವಾಗತಿಸಲಾಗಿತ್ತು!
2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರಗೈದ ಮತ್ತು ಅವರ ಕುಟುಂಬದವರ ಹತ್ಯೆ ನಡೆಸಿದ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಗುಜರಾತ್ ಸರ್ಕಾರವು ತನ್ನ ಕ್ಷಮಾದಾನ ನೀತಿಯಡಿ ಅವಧಿಗೂ ಮುನ್ನವೇ ಬಿಡುಗಡೆ ಮಾಡಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಆ ಅಪರಾಧಿಗಳಿಗೆ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕರು ಸಿಹಿ ಹಂಚಿ, ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದ್ದರು. ಅಪರಾಧಿಗಳು “ಉತ್ತಮ ಸಂಸ್ಕಾರ ಹೊಂದಿರುವ ಬ್ರಾಹ್ಮಣರು” ಎಂದು ಸಮಿತಿಯಲ್ಲಿದ್ದ ಬಿಜೆಪಿ ಶಾಸಕರೊಬ್ಬರು ಹೇಳಿದ್ದರು. ಈ ಘಟನೆಯು ದೇಶಾದ್ಯಂತ ಭಾರಿ ಆಕ್ರೋಶ ಮತ್ತು ವ್ಯಾಪಕ ಟೀಕೆಗೆ ಕಾರಣವಾಗಿತ್ತು.
ಇನ್ನು 2024ರ ಜನವರಿಯಲ್ಲಿ ರಾಜ್ಯದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಲಾಡ್ಜ್ ಒಂದರಲ್ಲಿದ್ದ ಮುಸ್ಲಿಂ ಮಹಿಳೆ ಮತ್ತು ಹಿಂದೂ ಪುರುಷನ ಮೇಲೆ ಅನೈತಿಕ ಪೊಲೀಸ್‌ಗಿರಿ ನಡೆಸಿ, ಬಳಿಕ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಕಿಡಿಗೇಡಿಗಳಿಗೂ ಜಾಮೀನು ಮಂಜೂರು ಆದಾಗ ಮೆರವಣಿಗೆ ಮೂಲಕ ಸ್ವಾಗತಿಸಲಾಗಿತ್ತು. ಈ ಅತ್ಯಾಚಾರಿಗಳ ಬೆಂಬಲಿಗರು ಅವರನ್ನು ಹಿಂದೂಪರ ಹೋರಾಟಗಾರರು ಎಂದು ಕರೆದು 25ಕ್ಕೂ ಹೆಚ್ಚು ಕಾರು ಮತ್ತು ಬೈಕ್‌ಗಳ ಭಾರಿ ಮೆರವಣಿಗೆಯನ್ನು ಆಯೋಜಿಸಿದ್ದರು. ಈ ಸಂಬಂಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಫ್‌ಐಆರ್ ದಾಖಲಿಸಲಾಗಿತ್ತು.




