ಕಾಂಗ್ರೆಸ್‌ನ ತತ್ವವು ದಿವಂಗತ ಗಾಯಕ ಝುಬಿನ್ ಗರ್ಗ್ ಅವರ ತತ್ವಶಾಸ್ತ್ರವನ್ನು ಹೋಲುತ್ತದೆ. ಅವರು ತಮ್ಮ ಇಡೀ ಜೀವನವನ್ನು ಅಸ್ಸಾಂ ಅನ್ನು ಒಗ್ಗೂಡಿಸಲು ಶ್ರಮಿಸಿದ್ದಾರೆ. ಝುಬಿನ್ ಗರ್ಗ್‌ರಂತೆ ಕಾಂಗ್ರೆಸ್ ಜನರನ್ನು ಒಗ್ಗೂಡಿಸಲು ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.
ಅಸ್ಸಾಂನ ಬಿಸ್ವಾನಾಥ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ. ಕಾಂಗ್ರೆಸ್ ರಾಜ್ಯದಲ್ಲಿ ಸರ್ಕಾರ ರಚಿಸಿದ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರು ಕ್ಷಮೆ ಕೇಳಿದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಗಾಯಕ ಝುಬಿನ್ ಗರ್ಗ್ ಸಾವು ಪ್ರಕರಣ: ಅಸ್ಸಾಂ ಡಿಎಸ್‌ಪಿ ಬಂಧನ
“ಝುಬಿನ್ ಗರ್ಗ್ ಅಸ್ಸಾಂ ಜನರನ್ನು ಒಗ್ಗೂಡಿಸಲು ತಮ್ಮ ಇಡೀ ಜೀವನ ಶ್ರಮಿಸಿದರು. ಅವರು ಯಾರೊಂದಿಗೂ ಎಂದಿಗೂ ಕೆಟ್ಟದಾಗಿ ವರ್ತಿಸಲಿಲ್ಲ. ಕಾಂಗ್ರೆಸ್ ತತ್ವಶಾಸ್ತ್ರವೂ ಹಾಗೆಯೇ, ದ್ವೇಷದ ವಿರುದ್ಧ ಪ್ರೀತಿಯನ್ನು ಹರಡುವುದು. ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಜನರು ಮತ್ತು ಸಮುದಾಯಗಳ ವಿರುದ್ಧ ದ್ವೇಷವನ್ನು ಹರಡುತ್ತಿದೆ” ಎಂದು ದೂರಿದರು.
ಝುಬಿನ್ ಗರ್ಗ್ ಸಾವಿನಲ್ಲಿ ರಾಜಕೀಯ
ಝುಬಿನ್ ಗರ್ಗ್ ಅವರು 2025ರ ಸೆಪ್ಟೆಂಬರ್ 19ರಂದು ಸಿಂಗಾಪುರದ ಲಾಜರಸ್ ದ್ವೀಪದ ಬಳಿ ಸಮುದ್ರದಲ್ಲಿ ಈಜುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿ ನಿಧನರಾದರು. ಸಿಂಗಾಪುರ ಪೊಲೀಸರು ನೀಡಿದ ಅಂತಿಮ ವರದಿಯ ಪ್ರಕಾರ, ಝುಬಿನ್ ಮದ್ಯಪಾನ ಮಾಡಿದ್ದರು. ಲೈಫ್ ಜಾಕೆಟ್ ಧರಿಸಲು ನಿರಾಕರಿಸಿದ್ದರು. ಈಜುವಾಗ ಪ್ರಜ್ಞೆ ತಪ್ಪಿದ್ದರಿಂದ ಅವರು ಮುಳುಗಿ ಸಾವನ್ನಪ್ಪಿದ್ದಾರೆ.
ಸಿಂಗಾಪುರ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ಕರೆದರೆ ಅಸ್ಸಾಂ ಸರ್ಕಾರವು ಇದನ್ನು ಯೋಜಿತ ಕೊಲೆ ಎಂದು ಶಂಕಿಸಿ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂನಲ್ಲಿ ಝುಬಿನ್ ಅವರ ಮ್ಯಾನೇಜರ್ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ದುರಂತದಲ್ಲಿ ಮರೆಯಾಗಿ ಜನಸಾಗರವ ಸೆಳೆದ ಈ ಹಾಡುಗಾರ ಯಾರು?
ಝುಬಿನ್ ಸಾವು ಅಸ್ಸಾಂನಲ್ಲಿ ದೊಡ್ಡ ರಾಜಕೀಯ ವಿಷಯವಾಗಿದೆ. ವಿಪಕ್ಷಗಳು ಸರ್ಕಾರದ ತನಿಖೆಯನ್ನು ಪ್ರಶ್ನಿಸುತ್ತಿದ್ದರೆ, ಸಿಎಂ ಹಿಮಂತ ಬಿಸ್ವಾ ಶರ್ಮಾ ಝುಬಿನ್‌ಗೆ ನ್ಯಾಯ ಕೊಡುವುದಾಗಿ ಹೇಳಿದ್ದಾರೆ. ಆದರೆ ಈವರೆಗೂ ತನಿಖೆ ಪೂರ್ಣವಾಗಿಲ್ಲ. ಈ ವಿಚಾರದಲ್ಲಿ ಸರ್ಕಾರವನ್ನು ವಿಪಕ್ಷಗಳು ತರಾಟಗೆ ತೆಗೆದುಕೊಂಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ (CAA) ವಿರುದ್ಧದ ಹೋರಾಟದ ಮುಂಚೂಣಿಯಲ್ಲಿದ್ದವರು ಝುಬಿನ್. “ನಾನು ಸತ್ತರೂ ಅಸ್ಸಾಂನಲ್ಲಿ ಸಿಎಎ ಜಾರಿಯಾಗಲು ಬಿಡಲ್ಲ” ಎಂದು ಘೋಷಿಸಿದ್ದರು.




