ಸಾಮಾಜಿಕ ಜಾಲತಾಣ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡ ವ್ಯಂಗ್ಯಚಿತ್ರವೊಂದಕ್ಕೆ ಸಂಬಂಧಿಸಿದಂತೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಅದಾನಿ ಸಮೂಹ) ಜಾರಿ ಮಾಡಿರುವ ಕಾನೂನು ನೋಟಿಸ್‌ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ‘ಹೋ, ಅದು ನಿಮ್ಮ ಮಡಿಲೇ?’ ಎಂದು ವ್ಯಂಗ್ಯವಾಡಿದ್ದಾರೆ.
ನವೆಂಬರ್ 17ರಂದು ಸಂಸದೆ ಮಹುವಾ ಮೊಯಿತ್ರಾ ತಮ್ಮ ಎಕ್ಸ್ ಖಾತೆಯಲ್ಲಿ ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದಾನಿ ಎಂಟರ್‌ಪ್ರೈಸಸ್ ಅಧ್ಯಕ್ಷರಂತೆ ಚಿತ್ರಿಸಲಾದ ವ್ಯಕ್ತಿಯ ಮಡಿಲಲ್ಲಿ ಕುಳಿತಿರುವಂತೆ ತೋರಿಸಲಾಗಿತ್ತು. “ಯಾರದ್ದೋ ಮಡಿಲಲ್ಲಿ ಕುಳಿತುಕೊಳ್ಳುವುದು… ಒಂದು ಸಾಂಸ್ಕೃತಿಕ ಆಘಾತ” ಎಂಬ ಶೀರ್ಷಿಕೆಯನ್ನು ಆ ಪೋಸ್ಟ್‌ಗೆ ನೀಡಲಾಗಿತ್ತು.
ಇದನ್ನೂ ಓದಿ: ‘ನೀವು ಎದ್ದು ನಿಲ್ಲುವಿರಿ’: ಉಮರ್ ಖಾಲಿದ್‌ಗಾಗಿ ಕವಿತೆ ಬರೆದ ಸಂಸದೆ ಮಹುವಾ ಮೊಯಿತ್ರಾ
ನವೆಂಬರ್ 19ರಂದು ಅದಾನಿ ಸಮೂಹದ ಪರವಾಗಿ ಕಾನೂನು ಸಂಸ್ಥೆ ಕಳುಹಿಸಿರುವ ನೋಟಿಸ್‌ನಲ್ಲಿ, ಈ ಪೋಸ್ಟ್ ಕೇವಲ ಹಾಸ್ಯವಲ್ಲ ಅಥವಾ ಸರ್ಕಾರಿ ನೀತಿಗಳ ಮೇಲಿನ ನ್ಯಾಯಸಮ್ಮತ ಟೀಕೆಯೂ ಅಲ್ಲ ಎಂದು ಆಕ್ಷೇಪಿಸಲಾಗಿದೆ. ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳಿಲ್ಲದೆ ಪ್ರಧಾನಮಂತ್ರಿಗಳ ಕಚೇರಿಯ ಮೇಲೆ ಸಂಸ್ಥೆಯ ಅಧ್ಯಕ್ಷರು ಅನಗತ್ಯ ಪ್ರಭಾವ ಬೀರುತ್ತಿದ್ದಾರೆ ಎಂಬ ಮಾನಹಾನಿಕರ ಚಿತ್ರಣವನ್ನು ಹರಡಲು ಉದ್ದೇಶಪೂರ್ವಕವಾಗಿ ಈ ಪೋಸ್ಟ್ ಮಾಡಲಾಗಿದೆ ಎಂದು ದೂರಲಾಗಿದೆ.
ನೋಟಿಸ್ ತಲುಪಿದ 24 ಗಂಟೆಗಳ ಒಳಗಾಗಿ ವಿವಾದಾತ್ಮಕ ಪೋಸ್ಟ್ ಅನ್ನು ತಕ್ಷಣವೇ ಅಳಿಸಬೇಕು, ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು ಮತ್ತು ಸಂಬಂಧಿತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಂರಕ್ಷಿಸಿಡಬೇಕು ಎಂದು ಸೂಚಿಸಲಾಗಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಈ ಲೀಗಲ್ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಮಹುವಾ ಮೊಯಿತ್ರಾ, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ ಅದಾನಿ ಸಮೂಹವನ್ನು ಕುಟುಕಿದ್ದಾರೆ. “ನಾನು ಹಂಚಿಕೊಂಡ ಕಾರ್ಟೂನ್ ‘ಜಿ-ಭಾಯ್’ (G-Bhai-ಗೌತಮ್ ಅದಾನಿ ಭಾಯ್) ಅವರಿಗೆ ಇಷ್ಟವಾಗಲಿಲ್ಲ, ಅದಕ್ಕೆ ನನಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಆದರೆ ಜಿ-ಭಾಯ್, ಅವರು (ಪ್ರಧಾನಿ ಮೋದಿ) ಕುಳಿತಿರುವುದು ನಿಮ್ಮದೇ ಮಡಿಲಲ್ಲಿಯೇ? ಓ ಮೈ ಗಾಡ್!” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ಏನಿದು ಸಾಂಸ್ಕೃತಿಕ ಆಘಾತ ಪದಪುಂಜದ ಕತೆ?
ಮಹುವಾ ಮೊಯಿತ್ರಾ ಅವರು ತಮ್ಮ ವ್ಯಂಗ್ಯಚಿತ್ರದ ಪೋಸ್ಟ್‌ನಲ್ಲಿ ಬಳಸಿದ ಸಾಂಸ್ಕೃತಿಕ ಆಘಾತ (Cultural shock) ಎಂಬ ಪದಪುಂಜವು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಹೇಳಿಕೆಯೊಂದಕ್ಕೆ ನೇರವಾಗಿ ಸಂಬಂಧಿಸಿದೆ. ಜುಲೈ ಕೊನೆಯಲ್ಲಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ (ಪೇಪರ್ ಲೀಕ್) ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.
ಈ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಹಾಗೂ ನಿಂದನಾತ್ಮಕ ಪದಗಳನ್ನು ಬಳಸಿದ್ದರು ಎಂದು ಆರೋಪ ಮಾಡಲಾಗಿದೆ. 11 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆಗಸ್ಟ್ 1, 2026ರಂದು ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದರು.
“ಜಂತರ್ ಮಂತರ್‌ನಲ್ಲಿ ನಡೆದ ಘಟನೆಯನ್ನು ದೇಶ ಮತ್ತು ಜಗತ್ತು ನೋಡಿದೆ. ಕೆಲವು ದಾರಿತಪ್ಪಿದ ಮಕ್ಕಳು ನಾಗರಿಕ ಸಮಾಜಕ್ಕೆ ಒಪ್ಪದಂತಹ ಅತ್ಯಂತ ಕೀಳು ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ. ನನ್ನನ್ನು ಮತ್ತು ನನ್ನ ದಿವಂಗತ ತಾಯಿಯನ್ನೂ ನಿಂದಿಸಲಾಗಿದೆ. ನಮ್ಮ ಹೆಣ್ಣುಮಕ್ಕಳು ಇಂತಹ ಭಾಷೆ ಬಳಸುವುದನ್ನು ನೋಡುವುದು ಒಂದು ‘ಸಾಂಸ್ಕೃತಿಕ ಆಘಾತ’ ತಂದಿದೆ. ಆದರೂ, ಅವರನ್ನು ಶಿಕ್ಷಿಸುವ ಬದಲು ಕ್ಷಮಿಸಿ ಸರಿದಾರಿಗೆ ತರುವುದು ನಮ್ಮ ಕರ್ತವ್ಯ” ಎಂದು ಹೇಳಿದ್ದರು.
ಆಗಸ್ಟ್ 23ರಂದು ಪುಣೆಯ ವಿದ್ಯಾರ್ಥಿ ಸಮಾವೇಶದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿಯವರ ಈ ಹೇಳಿಕೆಯನ್ನು ಟೀಕಿಸಿದ್ದರು. “ಹುಡುಗರು ಬೈದಾಗ ಸುಮ್ಮನಿರುವ ಪ್ರಧಾನಿ, ಹುಡುಗಿಯರು ಬೈದರೆ ಮಾತ್ರ ‘ಸಾಂಸ್ಕೃತಿಕ ಆಘಾತ’ ಎನ್ನುತ್ತಾರೆ. ಇದು ಪಿತೃಪ್ರಧಾನ ಮನಸ್ಥಿತಿ” ಎಂದು ಆರೋಪಿಸಿದ್ದರು. ಇದೇ “ಸಾಂಸ್ಕೃತಿಕ ಆಘಾತ” ಎಂಬ ಪದವನ್ನು ಅಸ್ತ್ರವಾಗಿ ಬಳಸಿಕೊಂಡ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾರ್ಟೂನ್ ಹಂಚಿಕೊಂಡಿದ್ದರು. ಈಗ ಮತ್ತೆ ಅದೇ ಕಾರ್ಟೂನ್ ಜತೆಗೆ ಅದಾನಿ ಸಂಸ್ಥೆಯ ನೋಟಿಸ್ ಹಂಚಿಕೊಂಡು ಮೊಯಿತ್ರಾ ಅದಾನಿ ಸಂಸ್ಥೆಗೆ ತಿರುಗೇಟು ನೀಡಿದ್ದಾರೆ.



