ನಸುಕಿನ ವೇಳೆ ನಿರ್ಜನ ರಸ್ತೆಗಳಲ್ಲಿ ಮಹಿಳೆಯ ವೇಷ ಧರಿಸಿ ನೆರವಿಗಾಗಿ ಕೈಬೀಸಿ ವಾಹನ ಸವಾರರನ್ನು ನಿಲ್ಲಿಸಿ, ಪೊದೆಗಳಲ್ಲಿ ಅಡಗಿದ್ದ ಸಹಚರರೊಂದಿಗೆ ಸೇರಿ ದರೋಡೆ ಮಾಡುತ್ತಿದ್ದ ವಿಚಿತ್ರ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ವೇಷ ತೊಡುತ್ತಿದ್ದ ಮೋನು ಅಲಿಯಾಸ್ ಚೈನೀಸ್ (28) ಹಾಗೂ ಆತನ ಸಹಚರ ಸಾಗರ್ ಶರ್ಮಾ (26) ಎಂಬುವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಯಮುನಾ ಖಾದರ್ ಸುತ್ತಮುತ್ತಲಿನ ನಿರ್ಜನ ರಸ್ತೆಗಳಲ್ಲಿ ಅಸಮಯದಲ್ಲಿ ಒಂಟಿಯಾಗಿ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿಸಲು ಮೋನು ಈ ವಂಚನೆಯ ತಂತ್ರ ರೂಪಿಸಿದ್ದ. ಮಹಿಳೆಯ ಉಡುಪು ಧರಿಸಿ ರಸ್ತೆ ಬದಿ ನಿಂತು, ಸಂಕಷ್ಟದಲ್ಲಿರುವಂತೆ ನಟಿಸಿ ಹಾದುಹೋಗುವ ವಾಹನ ಸವಾರರಿಗೆ ನೆರವಿಗಾಗಿ ಸನ್ನೆ ಮಾಡುತ್ತಿದ್ದ” ಎಂದು ಅಧಿಕಾರಿ ವಿವರಿಸಿದ್ದಾರೆ. ಮಹಿಳೆಯ ವೇಷದ ಮೂಲಕ ಪ್ರಯಾಣಿಕರ ಅನುಕಂಪ ಮತ್ತು ನಂಬಿಕೆ ಗಳಿಸಿ, ಅವರ ಎಚ್ಚರಿಕೆ ತಪ್ಪಿಸುವುದು ಗ್ಯಾಂಗ್‌ನ ಉದ್ದೇಶವಾಗಿತ್ತು.
ಅನುಮಾನವಿಲ್ಲದ ಸವಾರರು ನೆರವು ನೀಡಲು ವಾಹನ ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆಯೇ ಮೋನು ಅವರನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದ. ತಕ್ಷಣವೇ ಸಮೀಪದ ಪೊದೆಗಳಲ್ಲಿ ಅಥವಾ ಮರೆಯಲ್ಲಿ ಅಡಗಿದ್ದ ಆತನ ಸಹಚರರು ಹೊರಬಂದು, ಸವಾರರ ಬಳಿಯಿದ್ದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು.
ನವೆಂಬರ್ 18ರ ನಸುಕಿನ 4.05ರ ಸುಮಾರಿಗೆ ವರದಿಯಾದ ದರೋಡೆ ಪ್ರಕರಣದಿಂದ ಈ ಕೃತ್ಯದ ಶೈಲಿ ಬೆಳಕಿಗೆ ಬಂದಿದೆ. ಸಿಗ್ನೇಚರ್ ಸೇತುವೆಯಿಂದ ಬುರಾರಿಯ ಅಶೋಕ್ ವಿಹಾರ್ ಕಡೆಗೆ ಪ್ಲೈವುಡ್ ಸಾಗಿಸುತ್ತಿದ್ದ ಟೆಂಪೊ ಚಾಲಕರೊಬ್ಬರು ನಸುಕಿನ 4ರಿಂದ 5 ಗಂಟೆಯ ನಡುವೆ ಈ ಮಾರ್ಗದಲ್ಲಿ ಸಾಗುತ್ತಿದ್ದಾಗ, ಮಹಿಳೆಯೊಬ್ಬರು ಸಹಾಯಕ್ಕಾಗಿ ಕೈಬೀಸುವುದನ್ನು ಕಂಡು ವಾಹನ ನಿಲ್ಲಿಸಿದ್ದರು. ಚಾಲಕ ಕೆಳಗಿಳಿಯುತ್ತಿದ್ದಂತೆ ವೇಷಧಾರಿ ಅವರನ್ನು ಹಿಡಿದುಕೊಂಡರೆ, ಮತ್ತೊಬ್ಬ ಹಿಂದಿನಿಂದ ಕತ್ತು ಹಿಸುಕಿದನು. ಬಳಿಕ ಇನ್ನಿಬ್ಬರು ಸೇರಿಕೊಂಡು ಚಾಲಕನ ಮೊಬೈಲ್ ಫೋನ್, ₹2,500 ನಗದು ಹಾಗೂ ಮೂರು ಕೀಗಳನ್ನು ಕಸಿದುಕೊಂಡಿದ್ದರು.
ಹೇಗೋ ತಪ್ಪಿಸಿಕೊಂಡ ಚಾಲಕ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ನ್ಯೂ ಉಸ್ಮಾನ್‌ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರ ತಂಡವು ಲಭ್ಯವಾದ ಸುಳಿವುಗಳ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಿ ಮೋನು ಮತ್ತು ಸಾಗರ್‌ನನ್ನು ಬಂಧಿಸಿತು. ಆರೋಪಿಗಳಿಂದ ಕಳವಾಗಿದ್ದ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬಾ ಶ್ಯಾಮ್ ಗಿರಿ ಮಂದಿರದ ಬಳಿ ನಡೆದಿದ್ದ ಮತ್ತೊಂದು ದರೋಡೆ ಪ್ರಕರಣದಲ್ಲೂ ತಮ್ಮ ಪಾತ್ರವಿರುವುದನ್ನು ಬಾಯ್ಬಿಟ್ಟಿದ್ದಾರೆ. ಆ ಕೃತ್ಯಕ್ಕೂ ಇದೇ ತಂತ್ರವನ್ನು ಬಳಸಲಾಗಿದ್ದು, ಆರೋಪಿಗಳ ಬಂಧನದಿಂದ ನ್ಯೂ ಉಸ್ಮಾನ್‌ಪುರ ಮತ್ತು ಶಾಸ್ತ್ರಿ ಪಾರ್ಕ್‌ನ ಎರಡು ದರೋಡೆ ಪ್ರಕರಣಗಳು ಭೇದಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಮೋನು ವಿರುದ್ಧ ಕೊಲೆ ಯತ್ನ, ದರೋಡೆ, ಸುಲಿಗೆ, ಕಳವು ಮತ್ತು ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಈ ಹಿಂದೆ 13 ಪ್ರಕರಣಗಳು ದಾಖಲಾಗಿವೆ. ಸಾಗರ್ ವಿರುದ್ಧ ದರೋಡೆ, ಸುಲಿಗೆ, ಕಳವು ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆಯ 5 ಪ್ರಕರಣಗಳಿವೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಗ್ಯಾಂಗ್‌ನ ಇತರ ಸಹಚರರ ಪಾತ್ರ ಹಾಗೂ ಇದೇ ಮಾದರಿಯಲ್ಲಿ ಇನ್ನಷ್ಟು ದರೋಡೆ ನಡೆಸಲಾಗಿದೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.



