ಮದುವೆಯಾಗುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಮಾನವ ಹಕ್ಕಾಗಿದೆ. ವಿಚ್ಛೇದನದ ನಂತರ ಮರುಮದುವೆಯಾಗಲು ವರ್ಷಗಟ್ಟಲೆ ಕಾಯುವಂತೆ ಮಾಡುವುದು ಸರಿಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ, ಪುನರ್ವಿವಾಹಕ್ಕೆ ಎದುರಾಗುವ ಕಾನೂನು ಅಡೆತಡೆಗಳನ್ನು ನಿವಾರಿಸಲು 1955ರ ಹಿಂದೂ ವಿವಾಹ ಕಾಯಿದೆಗೆ ಸೂಕ್ತ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸಲಹೆ ನೀಡಿದೆ.
2001ರಲ್ಲಿ ವಿವಾಹವಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದರು. ಗಂಡನ ಕ್ರೂರತೆ ಮತ್ತು ತನಗೆ ಮಾಡಿದ ನಿರ್ಲಕ್ಷ್ಯವನ್ನು ಪ್ರಶ್ನಿಸಿ ಪತ್ನಿ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕುಟುಂಬ ನ್ಯಾಯಾಲಯ 2021ರ ಮಾರ್ಚ್ 3ರಂದು ಪತ್ನಿಗೆ ವಿಚ್ಛೇದನ ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಪತಿ ಮದ್ರಾಸ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಜಾರಿ ನಿರ್ದೇಶನಾಲಯ ವಿರುದ್ಧ ಮದ್ರಾಸ್ ಹೈಕೋರ್ಟ್ ತರಾಟೆ
ಆದರೆ ಹೈಕೋರ್ಟ್‌ನಲ್ಲಿ ಯಾವುದೇ ಮಧ್ಯಂತರ ತಡೆಯಾಜ್ಞೆ ಸಿಗಲಿಲ್ಲ. ಆದ್ದರಿಂದ 2021ರ ಆಗಸ್ಟ್‌ನಲ್ಲಿ ಮಹಿಳೆ ಎರಡನೇ ಮದುವೆಯಾದರು. ನಂತರ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆದರೆ 2026ರ ಮಾರ್ಚ್‌ನಲ್ಲಿ ಆ ಅರ್ಜಿಯನ್ನು ಮತ್ತೆ ಮರುಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು. ಆಗ ಪತ್ನಿ ಈಗಾಗಲೇ ಮರುಮದುವೆಯಾಗಿರುವುದನ್ನು ಗಮನಿಸಿದ ಪೀಠವು ಈ ಅರ್ಜಿ ತನ್ನ ಅರ್ಥ ಕಳೆದುಕೊಂಡಿದೆ ಎಂದು ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಜಿ ಆರ್ ಸ್ವಾಮಿನಾಥನ್ ಮತ್ತು ಎಂ.ಡಿ. ಸುಮಾತಿ ಅವರಿದ್ದ ದ್ವಿಪೀಠವು ಈ ವಿಚಾರಣೆ ನಡೆಸಿ ಪ್ರಮುಖ ನಿರ್ದೇಶನ ನೀಡಿದೆ. ಮದುವೆಯಾಗುವ ಹಕ್ಕು ಎಂಬುದು ಮಾನವ ಹಕ್ಕಾಗಿದೆ.
“ಮದುವೆಯಾಗುವ ಹಕ್ಕು ಎಂಬುದು ಮಾನವ ಹಕ್ಕಾಗಿದೆ. ವಿಚ್ಛೇದನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ ವಿಚ್ಛೇದನ ಪಡೆದ ವ್ಯಕ್ತಿಯು ವರ್ಷಗಟ್ಟಲೆ ಮರುಮದುವೆಯಾಗದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು” ಎಂದು ಪೀಠ ಹೇಳಿದೆ.
ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 15ಕ್ಕೆ ತಿದ್ದುಪಡಿ ತರಬೇಕು. ಕೇವಲ ಮೇಲ್ಮನವಿ ಸಲ್ಲಿಸಿದರೆ ಸಾಲದು; ಮೇಲ್ಮನವಿ ಸಲ್ಲಿಸಿದ ಎರಡು ತಿಂಗಳ ಒಳಗಾಗಿ ವಿಚ್ಛೇದನ ಆದೇಶಕ್ಕೆ ‘ಮಧ್ಯಂತರ ತಡೆಯಾಜ್ಞೆ’ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ತಡೆಯಾಜ್ಞೆ ಇಲ್ಲದಿದ್ದರೆ ಮೇಲ್ಮನವಿ ಬಾಕಿ ಇದ್ದರೂ ಮರುಮದುವೆಗೆ ಅವಕಾಶವಿರಬೇಕು. ಇಲ್ಲದಿದ್ದರೆ ವರ್ಷಗಟ್ಟಲೆ ಎಳೆಯುವ ಕಾನೂನು ಪ್ರಕ್ರಿಯೆಯಿಂದಾಗಿ ವ್ಯಕ್ತಿಯ ಜೀವನದ ಪ್ರಮುಖ ನಿರ್ಧಾರಗಳು ಅನಿಶ್ಚಿತತೆಯಲ್ಲಿರುತ್ತವೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಕಾನೂನಿಗೆ ತಿದ್ದುಪಡಿ ತರುವುದು ಸಂಸತ್ತಿನ ವ್ಯಾಪ್ತಿಗೆ ಸೇರಿದ್ದಾಗಿದ್ದು, ಹೈಕೋರ್ಟ್ ಈ ಕುರಿತು ಶಾಸಕಾಂಗಕ್ಕೆ ಶಿಫಾರಸು ನೀಡಿದೆ.




