ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮಾಯಾವತಿ ಅವರೊಂದಿಗೆ ಒಟ್ಟಾಗಿ ಚುನಾವಣೆ ಎದುರಿಸುವ ಇರಾದೆಯನ್ನು ಆಜಾದ್ ಸಮಾಜ ಪಕ್ಷದ (ಕಾನ್ಶಿರಾಮ್) ಮುಖ್ಯಸ್ಥ ಹಾಗೂ ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಸಮಾಜದ ಜನರು ತಮ್ಮಿಬ್ಬರೂ ಒಟ್ಟಾಗಿ ಬರಬೇಕು ಎಂದು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾವು ಹಲವು ಬಾರಿ ಪ್ರಯತ್ನಿಸಿದ್ದರೂ ಯಶಸ್ವಿಯಾಗಿಲ್ಲ. ಒಂದೇ ಕೈಯಿಂದ ಚಪ್ಪಾಳೆ ಬಾರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಸಂಭಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್ ಆಜಾದ್, ಮಾಯಾವತಿ ಅವರ ಬಗ್ಗೆ ತಮಗೆ ಗೌರವವಿದೆ. ಬಹುಜನ ಸಮಾಜದ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಬಯಕೆ ತಮ್ಮಲ್ಲಿದೆ. ಮಾಯಾವತಿ ಅವರೊಂದಿಗೆ ಕೆಲಸ ಮಾಡುವ ಕುರಿತು ತಾವು ಹಲವು ಬಾರಿ ಪ್ರಯತ್ನಿಸಿದ್ದರೂ ಅದು ಫಲ ನೀಡಿಲ್ಲ. ಮೈತ್ರಿಗೆ ಎರಡೂ ಕಡೆಯಿಂದ ಒಪ್ಪಿಗೆ ಅಗತ್ಯವಾಗಿದ್ದು, ತಾವು ಮಾತ್ರ ಪ್ರಯತ್ನಿಸುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದರು.
ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬಹುಜನ ಸಮಾಜದ ಶಕ್ತಿಗಳು ಒಗ್ಗೂಡುವ ಅಗತ್ಯವಿದೆ. ತಮ್ಮ ರಾಜಕೀಯವು ಯಾವುದೇ ಒಬ್ಬ ವ್ಯಕ್ತಿಯನ್ನು ವಿರೋಧಿಸುವುದಕ್ಕಾಗಿ ಅಲ್ಲ; ಬಹುಜನ ಸಮಾಜದ ಗೌರವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ರಕ್ಷಣೆಯ ಮೇಲೆ ಕೇಂದ್ರೀಕೃತವಾಗಿದೆ ಎಂದು ಆಜಾದ್ ಹೇಳಿದರು.
ಮಾಯಾವತಿ ಅವರು ಸೋಮವಾರ ಮಾಡಿದ್ದ ಆರೋಪಗಳಿಗೂ ಚಂದ್ರಶೇಖರ್ ಆಜಾದ್ ತೀವ್ರವಾಗಿ ಪ್ರತಿಕ್ರಿಯಿಸಿದರು. 2024ರ ಲೋಕಸಭಾ ಚುನಾವಣೆಯಲ್ಲಿ ನಗೀನಾ ಮೀಸಲು ಕ್ಷೇತ್ರದಿಂದ ಆಜಾದ್ ಅವರ ಗೆಲುವು ಬಿಜೆಪಿ ನಡೆಸಿದ ಚುನಾವಣಾ ಅಕ್ರಮದ ಫಲ ಎಂದು ಮಾಯಾವತಿ ಆರೋಪಿಸಿದ್ದರು.
This video cannot be played in your browser. Open the video directly
ಬಿಜೆಪಿ ತನ್ನನ್ನು ಗೆಲ್ಲಿಸಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಆಜಾದ್, ನಗೀನಾ ಜನರು ತಮ್ಮ ಮತದ ಮೂಲಕ ನೀಡಿರುವ ಜನಾದೇಶವನ್ನು ಗೌರವಿಸಬೇಕು. ತಮ್ಮ ಗೆಲುವು ಕೇವಲ ರಾಜಕೀಯ ಜಯವಲ್ಲ, ಮತದಾರರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯ ಜವಾಬ್ದಾರಿ ಎಂದಿದ್ದಾರೆ.
ಇವಿಎಂ ಕುರಿತು ತಮಗೂ ಪ್ರಶ್ನೆಗಳಿವೆ ಎಂದು ಚಂದ್ರಶೇಖರ್ ಆಜಾದ್ ಹೇಳಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು ಮತ್ತು ಮತದಾರರಲ್ಲಿ ವಿಶ್ವಾಸ ಮೂಡಬೇಕು. ತಾವು ಕೂಡ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವಂತೆ ಒತ್ತಾಯಿಸಿರುವುದಾಗಿ ಅವರು ಹೇಳಿದರು. ಆದರೆ, ನಗೀನಾ ಮತದಾರರು ನೀಡಿರುವ ಜನಾದೇಶವನ್ನು ಯಾವುದೇ ಸಂಚಿನ ಫಲ ಎಂದು ಬಿಂಬಿಸುವುದು ತಮ್ಮನ್ನು ಆಯ್ಕೆ ಮಾಡಿದ ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮನ್ನು ಬಿಜೆಪಿ ಪರವಾಗಿ ಕೆಲಸ ಮಾಡುವ ‘ಬಿ–ಟೀಂ’ ಎಂದು ಬಿಂಬಿಸುವ ಆರೋಪಗಳನ್ನೂ ಆಜಾದ್ ತಳ್ಳಿಹಾಕಿದ್ದಾರೆ. ತಮ್ಮ ರಾಜಕೀಯ ಬೆಳವಣಿಗೆ ಯಾವುದೇ ಪಕ್ಷದ ನೆರವಿನಿಂದ ಬಂದದ್ದಲ್ಲ; ಜನರ ಹೋರಾಟ ಮತ್ತು ತಮ್ಮ ರಾಜಕೀಯ ಪ್ರಯತ್ನಗಳ ಮೂಲಕ ತಾವು ಈ ಹಂತಕ್ಕೆ ಬಂದಿದ್ದಾಗಿ ಅವರು ಹೇಳಿದ್ದಾರೆ. ಮಾಯಾವತಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳ ನಡುವೆಯೂ ಅವರ ಬಗ್ಗೆ ತಮಗೆ ಗೌರವವಿದೆ. ತಮ್ಮ ಉದ್ದೇಶ ಮಾಯಾವತಿ ಅವರನ್ನು ರಾಜಕೀಯವಾಗಿ ಎದುರಿಸುವುದಲ್ಲ. ಬದಲಾಗಿ ಬಹುಜನ ಸಮಾಜದ ರಾಜಕೀಯ ಶಕ್ತಿ ಒಂದಾಗಬೇಕು ಎಂಬುದು ತಮ್ಮ ಆಶಯ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಜಾದ್ ಸಮಾಜ ಪಕ್ಷ ಸಂಘಟನೆಯನ್ನು ಬಲಪಡಿಸುತ್ತಿದೆ. ಮೈತ್ರಿಗಾಗಿ ಯಾವುದೇ ಪಕ್ಷದ ಮನೆ ಬಾಗಿಲಿಗೆ ತೆರಳಿ ಮನವಿ ಮಾಡುವ ಬದಲು ಜನರ ನಡುವೆ ಹೋಗಿ ಪಕ್ಷವನ್ನು ಸಂಘಟಿಸುವುದಾಗಿ ಆಜಾದ್ ಹೇಳಿದ್ದಾರೆ. ಬಿಜೆಪಿ ವಿರುದ್ಧದ ಮತಗಳು ವಿಭಜನೆಯಾಗದಂತೆ ವಿವಿಧ ಸಾಮಾಜಿಕ ಮತ್ತು ರಾಜಕೀಯ ಶಕ್ತಿಗಳು ಒಗ್ಗೂಡಬೇಕೆಂಬ ಚರ್ಚೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ಆಜಾದ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ಒಟ್ಟಿನಲ್ಲಿ, ಮಾಯಾವತಿ ಅವರೊಂದಿಗೆ ಮೈತ್ರಿಗೆ ಸಿದ್ಧ ಎಂಬ ಸಂದೇಶವನ್ನು ನೀಡಿರುವ ಚಂದ್ರಶೇಖರ್ ಆಜಾದ್, ನಗೀನಾ ಗೆಲುವಿನ ಕುರಿತಾದ ಮಾಯಾವತಿ ಅವರ ಆರೋಪವನ್ನು ತಿರಸ್ಕರಿಸುವುದರ ಜೊತೆಗೆ ತಮ್ಮ ರಾಜಕೀಯ ಅಸ್ತಿತ್ವವನ್ನು ಜನಾದೇಶದ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಮೈತ್ರಿಗೆ ಎರಡೂ ಕಡೆಯ ಒಪ್ಪಿಗೆ ಅಗತ್ಯ ಎಂಬುದನ್ನು ‘ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ’ ಎಂಬ ಮಾತಿನ ಮೂಲಕ ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ತಮ್ಮನ ಮಗ ಆಕಾಶ್‌ರನ್ನು ಎರಡನೆಯ ಸಲ ಪಕ್ಷದ ಹುದ್ದೆಯಿಂದ ಕಿತ್ತು ಹಾಕಿದರು ಮಾಯಾವತಿ
ಆಜಾದ್ ಗೆಲುವಿಗೆ ಬಿಜೆಪಿ ದಾಂಧಲೆ ಕಾರಣವೇ?
2024ರ ಲೋಕಸಭಾ ಚುನಾವಣೆಯಲ್ಲಿ ನಗೀನಾ ಮೀಸಲು ಕ್ಷೇತ್ರದಿಂದ ಚಂದ್ರಶೇಖರ್ ಆಜಾದ್ ಗೆದ್ದಿರುವುದನ್ನು ಮುಂದಿಟ್ಟುಕೊಂಡು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಗಂಭೀರ ಆರೋಪ ಮಾಡಿದ್ದರು. ಬಿಎಸ್‌ಪಿಯ ಮತಬ್ಯಾಂಕ್‌ಗೆ ಹಾನಿ ಮಾಡುವ ಉದ್ದೇಶದಿಂದ ಬಿಜೆಪಿ ಸಂಚು ರೂಪಿಸಿ ಇವಿಎಂನಲ್ಲಿ ಧಾಂದಲೆ ನಡೆಸಿತು. ಆಜಾದ್ ಅವರಿಗೆ ಕ್ಷೇತ್ರದಲ್ಲಿ ಸ್ವಂತ ಜನಾಧಾರ ಇರಲಿಲ್ಲ . ನಗೀನಾದ ಬಿಎಸ್‌ಪಿ ಮತದಾರರಲ್ಲಿ ಒಂದು ವರ್ಗ ಚುನಾವಣಾ ವ್ಯವಸ್ಥೆಯ ಬಗ್ಗೆ ಅನುಮಾನಗೊಂಡು ಮತದಾನದಿಂದ ದೂರ ಉಳಿದಿದ್ದರಿಂದ ಆಜಾದ್ ಗೆಲುವಿಗೆ ದಾರಿ ಮಾಡಿಕೊಟ್ಟಿತು. ಬಿಜೆಪಿ ಮಾಡಿದ ಹುನ್ನಾರ ಚಂದ್ರಶೇಖರ್ ಆಜಾದ್ ಅವರನ್ನು ಗೆಲ್ಲಿಸಿತು ಎಂದು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇವಿಎಂ ಬದಲಿಗೆ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದರು.
ಆದರೆ, ಚಂದ್ರಶೇಖರ್ ಆಜಾದ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. 2024ರ ಚುನಾವಣೆಯಲ್ಲಿ ನಗೀನಾ ಜನತೆ ತನಗೆ 5,12,552 ಮತಗಳನ್ನು ನೀಡಿ ಆಯ್ಕೆ ಮಾಡಿದ್ದಾರೆ. ಅದು ಕೇವಲ ಚುನಾವಣಾ ಗೆಲುವಲ್ಲ, ಜನರು ಇಟ್ಟಿರುವ ನಂಬಿಕೆ ಮತ್ತು ಪ್ರೀತಿಯ ಪ್ರತೀಕ ಎಂದು ಅವರು ಹೇಳಿದ್ದಾರೆ. ಚುನಾವಣಾ ಪ್ರಕ್ರಿಯೆ ಮತ್ತು ಇವಿಎಂ ಪಾರದರ್ಶಕತೆ ಕುರಿತು ಪ್ರಶ್ನೆ ಎತ್ತುವುದು ಪ್ರತಿಯೊಬ್ಬರ ಹಕ್ಕು. ತಾವು ಕೂಡ ಚುನಾವಣೆಯಲ್ಲಿ ಗರಿಷ್ಠ ಪಾರದರ್ಶಕತೆ ಹಾಗೂ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದು ಆಜಾದ್ ಹೇಳಿದ್ದಾರೆ. ಆದರೆ, ತಮ್ಮ ಗೆಲುವನ್ನು ಬಿಜೆಪಿ ಮಾಡಿರುವ ಅಕ್ರಮದ ಫಲ ಎಂದು ಹೇಳುವುದನ್ನು ಅವರು ಒಪ್ಪಿಲ್ಲ.
2024ರ ಅಧಿಕೃತ ಫಲಿತಾಂಶದ ಪ್ರಕಾರ, ಆಜಾದ್ 5,12,552 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಓಂ ಕುಮಾರ್ 3,61,079 ಮತ ಪಡೆದಿದ್ದರು. ಆಜಾದ್ ಗೆಲುವಿನ ಅಂತರ 1,51,473 ಮತಗಳು. ಸಮಾಜವಾದಿ ಪಕ್ಷದ ಅಭ್ಯರ್ಥಿ ಮನೋಜ್ ಕುಮಾರ್ 1,02,374 ಮತ ಪಡೆದಿದ್ದರು.





