ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮೇಘಾಲಯ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಂಡರ್-23 ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹೇಮಂತ್ ರಾಯ್ ಮತ್ತು ಮಾಜಿ ಸಹಾಯಕ ವ್ಯವಸ್ಥಾಪಕ ಸಂಜಯ್ ಮೊಂಡಲ್ ಮೇಲೆ ಆಜೀವ ನಿಷೇಧ ಹೇರಿದೆ.
ಕಳೆದ ವರ್ಷ ತ್ರಿಪುರಾದ ಅಗರ್ತಲಾದಲ್ಲಿ ತಂಡ ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ತಂಡದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಇದೀಗ ತನಿಖೆ ನಡೆಸಿ ಮೇಘಾಲಯ ರಾಜ್ಯ ಮಹಿಳಾ ಆಯೋಗದ (ಎಂಎಸ್‌ಸಿಡಬ್ಲ್ಯೂ) ಆದೇಶದ ಮೇರೆಗೆ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ವಿಜಯಪುರ | ಬೆಟ್ಟಿಂಗ್ ಆ್ಯಪ್‌ಗಳನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗೆ ಮನವಿ
ಕಳೆದ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಎರಡು ಬಾರಿ ದೂರು ದಾಖಲಾಗಿತ್ತು. ಈ ದೂರುಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲರಾದ ಕಾರಣ ಎಂಸಿಎ ತನ್ನ ಗೌರವ ಕಾರ್ಯದರ್ಶಿ ರಯೋನಾಲ್ಡ್ ಖಾರ್ಕಮ್ನಿ ಅವರನ್ನು ಮುಂದಿನ ಆದೇಶದವರೆಗೆ ಅಮಾನತುಗೊಳಿಸಿದೆ.
ಎಂಸಿಎ ಗೌರವ ಕಾರ್ಯದರ್ಶಿ ದೂರಿಗೆ ಯಾವುದೇ ಪ್ರತಿಕ್ರಿಯಿಸಿದ ಕಾರಣ ಮಹಿಳೆಯರು ಎಂಎಸ್‌ಸಿಡಬ್ಲ್ಯೂ ಮತ್ತು ಆಯೋಗಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆಯ ನಂತರ, ಇಬ್ಬರಿಗೂ ಆಜೀವ ನಿಷೇಧ ವಿಧಿಸಲಾಗಿದೆ.
ದೂರುಗಳು ಬಂದಿದ್ದರೂ ತನಿಖೆಯನ್ನು ಪ್ರಾರಂಭಿಸಲು ಅಥವಾ ಕ್ರಿಕೆಟಿಗರನ್ನು ರಕ್ಷಿಸಲು ವಿಫಲವಾದ ಕಾರಣಕ್ಕಾಗಿ ಆಯೋಗವು ಎಂಸಿಎಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿಯಲ್ಲಿ ಅಗತ್ಯವಿರುವಂತೆ ಎಂಸಿಎ ಆಂತರಿಕ ದೂರು ಸಮಿತಿಯನ್ನು ಹೊಂದಿರಲಿಲ್ಲ ಎಂಬುದೂ ಈ ವೇಳೆ ಬಹಿರಂಗವಾಗಿತ್ತು.
ಆಯೋಗದ ತರಾಟೆ ಬಳಿಕ ಎಂಸಿಎ ಕ್ರಮಕ್ಕೆ ಮುಂದಾಗಿದೆ. “ತಮ್ಮ ರಾಜ್ಯವನ್ನು ಪ್ರತಿನಿಧಿಸುವ ಯುವ ಮಹಿಳಾ ಕ್ರಿಕೆಟಿಗರು ಮುಖ್ಯ ತರಬೇತುದಾರರ ಮೇಲೆ ಇಟ್ಟಿರುವ ನಂಬಿಕೆಯು ಕ್ರೀಡೆಯಲ್ಲಿ ಅತ್ಯಂತ ಪವಿತ್ರವಾದ ವಿಶ್ವಾಸಾರ್ಹ ಸಂಬಂಧಗಳಲ್ಲಿ ಒಂದು. ನೀವು ಆ ನಂಬಿಕೆಯನ್ನು ಕಳೆದುಕೊಂಡಿದ್ದೀರಿ” ಎಂದು ಮುಖ್ಯ ತರಬೇತುದಾರರನ್ನು ವಜಾಗೊಳಿಸಿದೆ.



