ದೇಶದ ಜಿಡಿಪಿ ಬೆಳೆಯುತ್ತಿದೆ. ಇದನ್ನೇ ಕೇಂದ್ರ ಸರ್ಕಾರ ಮೋದಿ ಆಡಳಿತದಲ್ಲಿ ಆರ್ಥಿಕ ಪ್ರಗತಿ ಎಂದು ಸಾರುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂಬುದು ವಾಸ್ತವ. ನೆಹರೂ ಅವರು ಸಂಪತ್ತಿನ ವಿಕೇಂದ್ರೀಕರಣಕ್ಕೆ ಒತ್ತು ನೀಡಿದ್ದರು. ಆದರೆ ಇಂದು ದೇಶದ ಬಹುಪಾಲು ಸಂಪತ್ತು ಕೆಲವೇ ಕೆಲವು ಕಾರ್ಪೊರೇಟ್ ಉದ್ಯಮಿಗಳ ಕೈಯಲ್ಲಿದೆ.
ದೇಶದ ರಾಜಕೀಯ ಇತಿಹಾಸದಲ್ಲಿ ಸುದೀರ್ಘಾವಧಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿದೆ. ಅಂದರೆ ಒಟ್ಟು 6,130 ದಿನಗಳು. ಆದರೆ ಚುನಾಯಿತ ಸಂಸತ್ತಿನ ಅಡಿಯಲ್ಲಿ ನಿರಂತರವಾಗಿ ಆಡಳಿತ ನಡೆಸಿದ ದಿನಗಳ ಆಧಾರದಲ್ಲಿ ನೆಹರೂ ಅಧಿಕಾರಾವಧಿ ಸುಮಾರು 4,398 ದಿನಗಳು. ಈ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುರಿದಿದ್ದಾರೆ. ಪ್ರಧಾನಿ ಮೋದಿ ಜೂನ್ 10ರ ವೇಳೆಗೆ 4,399 ದಿನಗಳ ಅಧಿಕಾರಾವಧಿ ಪೂರೈಸಿದ್ದಾರೆ. ಮೋದಿ, ನೆಹರೂ ದಾಖಲೆ ಮುರಿದಿದ್ದರೂ ನೆಹರೂ ಕಾಲದ ಮೌಲ್ಯಗಳು ಮತ್ತು ಸಾಧನೆಗಳಿಗಿಂತ ದೇಶವನ್ನು ಹಿಂದೆ ತಳ್ಳಿದ್ದಾರೆ.
ಕಾಲಾವಧಿಯ ಆಚೆಗೆ ಇಬ್ಬರೂ ನಾಯಕರ ಆಡಳಿತಾವಧಿ, ಎದುರಿಸಿದ ಸವಾಲುಗಳು, ಸಾಧನೆಗಳನ್ನು ನೋಡಿದಾಗ ಇಂದಿಗೂ ನೆಹರೂ ಸಮಕ್ಕೆ ಬಂದು ನಿಲ್ಲುವ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಲ್ಲ. ಆಡಳಿತ ನಡೆಸಿದ ಕಾಲಘಟ್ಟ ಸಂಪೂರ್ಣವಾಗಿ ಭಿನ್ನವಲ್ಲವೇ, ಹಾಗಿರುವಾಗ ಹೋಲಿಕೆ ಸಲ್ಲ ಎನ್ನಬಹುದು ನೀವು. ಆದರೆ ಆಯಾ ಕಾಲದ ಸವಾಲುಗಳನ್ನು ಉಭಯ ನಾಯಕರು ಹೇಗೆ ನಿಭಾಯಿಸಿದ್ದಾರೆ, ದೇಶವನ್ನು ಯಾವೆಲ್ಲ ಮೌಲ್ಯಗಳ ಆಧಾರದಲ್ಲಿ ಮುನ್ನಡೆಸಿದ್ದಾರೆ ಎಂಬ ಮಾನದಂಡ ಮುಂದಿಡಲೇ ಬೇಕಾಗುತ್ತದೆ.
ಇದನ್ನು ಓದಿದ್ದೀರಾ? ನೆಹರೂ ನಿಂದನೆಗೆ ಅವಕಾಶ ಹುಡುಕುವ ಮೋದಿ ಮುಂದೆಯೇ ದೇಶದ ಮೊದಲ ಪ್ರಧಾನಿ ಗುಣಗಾನ ಮಾಡಿದ ವಿಯೆಟ್ನಾಂ ಅಧ್ಯಕ್ಷ!
ಜವಾಹರಲಾಲ್ ನೆಹರೂ ಕಾಲಾವಧಿ: ಶೂನ್ಯದಿಂದ ಸೃಷ್ಟಿಯ ಸವಾಲು
ನೆಹರೂ ಅವರು ಅಧಿಕಾರ ವಹಿಸಿಕೊಂಡಾಗ ದೇಶವು ಬ್ರಿಟಿಷರ ಆಡಳಿತದಿಂದ ಜರ್ಜರಿತವಾಗಿತ್ತು. ವಿಭಜನೆಯ ನೋವನ್ನು ಉಣ್ಣುತ್ತಿತ್ತು ಮತ್ತು ಅತ್ಯಂತ ಬಡತನದಲ್ಲಿತ್ತು. ದೇಶದ ವಿಭಜನೆಯಿಂದ ಉಂಟಾದ ಕೋಮು ದಂಗೆಗಳು, ಲಕ್ಷಾಂತರ ನಿರಾಶ್ರಿತರ ಪುನರ್ವಸತಿ ಮತ್ತು 500ಕ್ಕೂ ಹೆಚ್ಚು ರಾಜಸಂಸ್ಥಾನಗಳನ್ನು ದೇಶದ ಒಕ್ಕೂಟಕ್ಕೆ ಸೇರಿಸುವ ಬೃಹತ್ ಸವಾಲನ್ನು ಎದುರಿಸಿದವರು ನೆಹರೂ. ದೇಶದಲ್ಲಿ ತೀವ್ರ ಆಹಾರದ ಕೊರತೆಯಿತ್ತು. ಸಾಕ್ಷರತೆ ಮತ್ತು ಸರಾಸರಿ ಜೀವಿತಾವಧಿ ಅತ್ಯಂತ ಕಡಿಮೆಯಿತ್ತು. ಈ ಸಂಕೀರ್ಣ ಪರಿಸ್ಥಿತಿಯಲ್ಲೂ ನೆಹರೂ ಅವರು ಪ್ರಜಾಪ್ರಭುತ್ವದ ಹಾದಿಯನ್ನು ಬಿಡಲಿಲ್ಲ.
ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಿದ್ಧವಾದ ಸಂವಿಧಾನವನ್ನು ಜಾರಿಗೆ ತಂದು, ದೇಶವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪಿಸಿದರು. ದೇಶದಲ್ಲಿ ಶೇ. 80ಕ್ಕಿಂತ ಹೆಚ್ಚು ನಿರಕ್ಷರತೆ ಇದ್ದ ಕಾಲದಲ್ಲೂ, ವಯಸ್ಕ ಮತದಾನ ಪದ್ಧತಿಯ ಮೂಲಕ ಯಶಸ್ವಿಯಾಗಿ ಚುನಾವಣೆ ನಡೆಸಿ, ಜಗತ್ತೇ ಭಾರತದತ್ತ ಆಶ್ಚರ್ಯದಿಂದ ನೋಡುವಂತೆ ಮಾಡಿದರು.
ಬ್ರಿಟಿಷರು ಬಿಟ್ಟು ಹೋಗಿದ್ದ ದಿವಾಳಿ ಆರ್ಥಿಕತೆಯನ್ನು ಹಳಿಗೆ ತರಲು ಅವರು ಮಿಶ್ರ ಆರ್ಥಿಕ ನೀತಿಯನ್ನು (Mixed Economy) ಅಳವಡಿಸಿಕೊಂಡರು. ದೇಶದ ಸಂಪನ್ಮೂಲಗಳ ವ್ಯವಸ್ಥಿತ ಬಳಕೆಗೆ ಯೋಜನಾ ಆಯೋಗವನ್ನು ಸ್ಥಾಪಿಸಿದರು. ಮೊದಲ ಪಂಚವಾರ್ಷಿಕ ಯೋಜನೆ ಮೂಲಕ ಕೃಷಿ ವಲಯಕ್ಕೆ ಆದ್ಯತೆ ನೀಡಿ, ದೇಶದ ಆಹಾರ ಭದ್ರತೆಗೆ ಒತ್ತು ನೀಡಿದರು. ಎರಡನೇ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಮಹಲನೋಬಿಸ್ ಮಾದರಿಯಲ್ಲಿ ಭಾರಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದರು.
ಭಾಕ್ರಾ-ನಂಗಲ್, ದಾಮೋದರ್ ವ್ಯಾಲಿ, ಮತ್ತು ಹೀರಾಕುಡ್ ನಂತಹ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಕ್ರಾಂತಿಕಾರಿ ಮುನ್ನುಡಿ ಬರೆದರು. ಭಿಲಾಯ್, ರೂರ್ಕೆಲಾ ಮತ್ತು ದುರ್ಗಾಪುರಗಳಲ್ಲಿ ಜಾಗತಿಕ ಮಟ್ಟದ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ಬಿಇಎಲ್, ಬಿಎಚ್‌ಇಎಲ್, ಮತ್ತು ಎಚ್‌ಎಂಟಿನಂತಹ ಸಾರ್ವಜನಿಕ ವಲಯದ ಉದ್ಯಮಗಳನ್ನು (PSUs) ಆರಂಭಿಸಿ ಸ್ವಾವಲಂಬನೆಗೆ ದಾರಿಯಿಟ್ಟರು. ನೆಹರೂ ಅವರ ಕಾಲದಲ್ಲಿ IIT, IIMS, ISRO (ಆಗಿನ INCOSPAR), ಮತ್ತು AIIMS ನಂತಹ ಪ್ರಮುಖ ಸಂಸ್ಥೆಗಳಿಗೆ ಬುನಾದಿ ಹಾಕಲಾಯಿತು.
ದ್ವಿತೀಯ ಮಹಾಯುದ್ಧದ ನಂತರ ಜಗತ್ತು ಅಮೆರಿಕ ಮತ್ತು ರಷ್ಯಾ ಬಣಗಳಾಗಿ ವಿಭಜನೆಯಾಗಿದ್ದಾಗ, ದೇಶವು ಯಾವುದೇ ಬಣಕ್ಕೆ ಸೇರದೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರಬೇಕೆಂದು ನೆಹರೂ ಬಯಸಿದರು. ಅವರು ಜಾರಿಗೆ ತಂದ ‘ಪಂಚಶೀಲ ತತ್ವಗಳು’ ಮತ್ತು ‘ಅಲಿಪ್ತ ನೀತಿ’ಯು ಹೊಸದಾಗಿ ಸ್ವಾತಂತ್ರ್ಯ ಪಡೆದ ಇತರ ದೇಶಗಳಿಗೆ ಮಾದರಿಯಾಯಿತು ಮತ್ತು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಗೌರವಾನ್ವಿತ ಸ್ಥಾನವನ್ನು ತಂದುಕೊಟ್ಟಿತು.
ಮೋದಿ ಅವಧಿಯಲ್ಲಿ ಡಿಜಿಟಲ್ ಆದರೆ ಸಾಕೇ?
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಭಾರತವು ಈಗಾಗಲೇ ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಒಂದು ಮಟ್ಟದ ಸ್ಥಿರತೆಯನ್ನು ಸಾಧಿಸಿತ್ತು. ಆದರೆ ವ್ಯವಸ್ಥೆಯ ಸುಧಾರಣೆ ಮತ್ತು ಜಾಗತಿಕ ಸ್ಪರ್ಧೆ ಅವರ ನರೇಂದ್ರ ಮೋದಿ ಮುಂದಿದ್ದ ಸವಾಲು. ಇವೆಲ್ಲವುದರ ನಡುವೆ ಡಿಜಿಟಲ್ ಕ್ರಾಂತಿ ಮುನ್ನಡೆ ಬರೆಯುವುದಾಗಿ ರಂಗು ರಂಗಿನ ಮಾತುಗಳನ್ನು ಆಡಿದವರು ಪ್ರಧಾನಿ ನರೇಂದ್ರ ಮೋದಿ. ಯುಪಿಐ ತಂತ್ರಜ್ಞಾನದ ಮೂಲಕ ದೇಶವು ಜಾಗತಿಕ ಡಿಜಿಟಲ್ ಪಾವತಿಯಲ್ಲಿ ನಂ.1 ಸ್ಥಾನದಲ್ಲಿದೆ. ಆರ್ಥಿಕವಾಗಿ ದೇಶ ಮುನ್ನಡೆಯುತ್ತಿದೆ ಎಂದು ಮೋದಿ ಸರ್ಕಾರ ಹೇಳಿದರೂ ವಾಸ್ತವ ಬೇರೆಯೇ. ಎಲ್ಲ ವಸ್ತುಗಳ ಬೆಲೆ ಮೋದಿ ಅವಧಿಯಲ್ಲಿ ಗಗನಕ್ಕೇರಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ @ 12- ಮೆರೆದದ್ದೇ ಸಾಧನೆ, ಸುಳ್ಳಾಡಿದ್ದೇ ದಾಖಲೆ
ಮುಖ್ಯವಾಗಿ ಪ್ರಜಾಪ್ರಭುತ್ವ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ ಎಂಬ ಆರೋಪವನ್ನು ನಾವು ಅಲ್ಲಗಳೆಯಲಾಗದು. ನೆಹರೂ ಅವರು ಸಂಸತ್ತು, ನ್ಯಾಯಾಂಗ ಮತ್ತು ಮಾಧ್ಯಮಗಳ ಸ್ವಾಯತ್ತತೆಗೆ ಅಪಾರ ಗೌರವ ನೀಡುತ್ತಿದ್ದರು. ಆದರೆ ಇಂದು ಸಿಬಿಐ, ಇಡಿ ಮತ್ತು ಚುನಾವಣಾ ಆಯೋಗದಂತಹ ಸಾಂಸ್ಥಿಕ ವ್ಯವಸ್ಥೆಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿವೆ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಬಳಕೆಯಾಗುತ್ತಿವೆ. ಬಿಜೆಪಿಯ ವಾಷಿಂಗ್ ಮೆಷಿನ್‌ನಲ್ಲಿ ವಾಷ್ ಆದರಷ್ಟೇ ಸಿಬಿಐ, ಇಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂಬಂತಹ ಸ್ಥಿತಿಯಿದೆ. ಇನ್ನು ನೆಹರೂ ಅವರ ಭಾರತದ ಪರಿಕಲ್ಪನೆ ‘ವಿವಿಧತೆಯಲ್ಲಿ ಏಕತೆ’ಯನ್ನು ಆಧರಿಸಿತ್ತು. ಆದರೆ ಮೋದಿ ಕಾಲದಲ್ಲಿ ರಾಜಕೀಯದಲ್ಲಿ ಧ್ರುವೀಕರಣ ಹೆಚ್ಚಾಗಿದೆ. ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಮೂಡಿದೆ. ದೇಶದ ಮೂಲ ಆಶಯವಾದ ಜಾತ್ಯತೀತತೆಗೆ ಧಕ್ಕೆಯುಂಟಾಗಿದೆ.
ಇನ್ನೊಂದೆಡೆ ದೇಶದ ಜಿಡಿಪಿ ಬೆಳೆಯುತ್ತಿದೆ. ಇದನ್ನೇ ಕೇಂದ್ರ ಸರ್ಕಾರ ಮೋದಿ ಆಡಳಿತದಲ್ಲಿ ಆರ್ಥಿಕ ಪ್ರಗತಿ ಎಂದು ಸಾರುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂಬುದು ವಾಸ್ತವ. ನೆಹರೂ ಅವರು ಸಂಪತ್ತಿನ ವಿಕೇಂದ್ರೀಕರಣಕ್ಕೆ ಒತ್ತು ನೀಡಿದ್ದರು. ಆದರೆ ಇಂದು ದೇಶದ ಬಹುಪಾಲು ಸಂಪತ್ತು ಕೆಲವೇ ಕೆಲವು ಕಾರ್ಪೊರೇಟ್ ಉದ್ಯಮಿಗಳ ಕೈಯಲ್ಲಿದೆ ಎಂದು ಹಲವು ಆರ್ಥಿಕ ವಿಶ್ಲೇಷಣೆಗಳು ಹೇಳುತ್ತವೆ. ನೆಹರೂ ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯಕ್ಕೆ ಹೆಚ್ಚಿನ ಮಾನ್ಯತೆಯಿತ್ತು. ಇಂದು ಸರ್ಕಾರದ ನೀತಿಗಳನ್ನು ಟೀಕಿಸುವವರನ್ನು “ದೇಶದ್ರೋಹಿಗಳು” ಎಂದು ಬಿಂಬಿಸುವ ಪ್ರವೃತ್ತಿ ಹೆಚ್ಚಾಗಿದೆ, ಇದು ಪ್ರಜಾಪ್ರಭುತ್ವದ ಹಿನ್ನಡೆ.
ನೆಹರೂ ಅವರು ಸಮಾಜವಾದಿ ಪ್ರೇರಿತ, ಮಿಶ್ರ ಆರ್ಥಿಕತೆ ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ಒತ್ತು ನೀಡಿದವರು. ಆದರೆ ಪ್ರಧಾನಿ ಮೋದಿ ಬಂಡವಾಳಶಾಹಿ ಸ್ನೇಹಿ. ಅಂಬಾನಿ, ಅದಾನಿಗಳ ಜೇಬು ತುಂಬಿಸುವವರು. ಖಾಸಗೀಕರಣ ಮಾಡಿ ಸದ್ಯ ಏಕಸ್ವಾಮ್ಯದ ಸೃಷ್ಟಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಬಿಇಎಲ್, ಬಿಎಚ್‌ಇಎಲ್, ಮತ್ತು ಎಚ್‌ಎಂಟಿನಲ್ಲಿ ಗುತ್ತಿಗೆದಾರರನ್ನು ನೇಮಿಸಿಕೊಂಡು ಸರ್ಕಾರಿ ಹುದ್ದೆಗಳನ್ನು ಕಡಿತಗೊಳಿಸುತ್ತಿದ್ದಾರೆ.
ಇನ್ನು ನೆಹರೂ ಅವರು ಭಾರತದ ಪ್ರಜಾಪ್ರಭುತ್ವದ ಅಡಿಪಾಯವನ್ನು ನಿರ್ಮಿಸಿದ ಶಿಲ್ಪಿ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಅಡಿಪಾಯ ನಡುಗುವಂತೆ ಮಾಡಿರುವ ನಾಯಕ. ಮೋದಿ ಆಡಳಿತವು ದೇಶದ ಸಾಮಾಜಿಕ ಸಾಮರಸ್ಯ, ಮಾಧ್ಯಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಗುಣಮಟ್ಟದ ವಿಷಯದಲ್ಲಿ ದೇಶ ಹಿಂದೆ ಸರಿಯುವಂತೆ ಮಾಡಿದೆ.
ಒಬ್ಬ ನಾಗರಿಕನಾಗಿ ದೇಶದ ಪ್ರಗತಿಯನ್ನು ಕೇವಲ ರಸ್ತೆ-ಕಟ್ಟಡಗಳಿಂದ ಅಳೆಯಲಾಗದು. ಜನರ ನಡುವಿನ ಸಾಮರಸ್ಯವೂ ಮುಖ್ಯ. ಅಷ್ಟಕ್ಕೂ ಮೋದಿ ಅವಧಿಯ ರಸ್ತೆಗಳ ಸ್ಥಿತಿ ಹೇಗಿದೆ ಎಂಬುದಕ್ಕೆ ಗಂಗಾ ಎಕ್ಸ್‌ಪ್ರೆಸ್‌ವೇ ಉತ್ತಮ ಉದಾಹರಣೆ. ಏಪ್ರಿಲ್ 29 ಪ್ರಧಾನಿ ಉದ್ಘಾಟಿಸಿದ ಈ ರಸ್ತೆಯಲ್ಲಿ ತಿಂಗಳು ಕಳೆಯುವಷ್ಟರಲ್ಲಿ ದೊಡ್ಡದಾದ ಬಿರುಕುಗಳು ಕಾಣಿಸಿಕೊಂಡಿವೆ. ಇದಕ್ಕೂ ಮುನ್ನ ಪ್ರಧಾನಿಯವರು ಉದ್ಘಾಟಿಸಿದ್ದ ಮುಂಬೈನ ‘ಅಟಲ್ ಸೇತು’ ಮತ್ತು ಉತ್ತರ ಪ್ರದೇಶದ ‘ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ’ ರಸ್ತೆಗಳ ಸಂಪರ್ಕ ಮಾರ್ಗಗಳಲ್ಲೂ ಬಿರುಕು ಕಾಣಿಸಿಕೊಂಡಿತ್ತು. ಸರ್ಕಾರ ತಮ್ಮ ದುರಾಡಳಿತ ಬಹಿರಂಗವಾಗುತ್ತಿದ್ದಂತೆ ಕೋಮು ತೇಪೆ ಎಳೆಯುವಂತೆ, ಈ ಬಿರುಕುಗಳಿಗೂ ತೇಪೆ ಎಳೆದು ಮುಚ್ಚಿಹಾಕಿವೆ. ಈ ಕಳಪೆ ಕಾಮಗಾರಿಯ ರಸ್ತೆ ಇನ್ನೆಂದು ಕುಸಿಯುವುದೋ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




