ಯುದ್ಧಭೂಮಿಯಲ್ಲಿ ಯೋಧನೊಬ್ಬ ಅಂಗಾಂಗಗಳನ್ನ ಕಳೆದುಕೊಂಡರೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಅದೇ ಗಾಯಕ್ಕೆ ಕೇಂದ್ರ ಸರ್ಕಾರ ನೀಡುವ ಪರಿಹಾರವನ್ನೂ ಆದಾಯವೆಂದು ಪರಿಗಣಿಸಿ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ದೇಶ ಮೊದಲು, ಸೈನಿಕರ ತ್ಯಾಗಕ್ಕೆ ದೇಶ ಸದಾ ಋಣಿ ಎಂದು ಭಾಷಣಗಳಲ್ಲಿ ಬೊಬ್ಬೆ ಹೊಡೆಯುವ ಪ್ರಧಾನಿ ಮೋದಿ ಸರ್ಕಾರದ ಹುಸಿ ದೇಶಭಕ್ತಿ ಬಟಾಬಯಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ, ಯುದ್ಧದಲ್ಲಿ ಕಾಲು ಕಳೆದುಕೊಂಡು ಮರಳಿದ ಮಾಜಿ ಯೋಧರೊಬ್ಬರ ಪತ್ನಿ ಮಾತನಾಡಿ, ತಮ್ಮ ಪತಿಯ ಅಂಗವೈಕಲ್ಯ ಪಿಂಚಣಿಗೂ ತೆರಿಗೆ ಪಾವತಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಮಾಜಿ ಸೈನಿಕರ ಸಂಘಟನೆಗಳೂ ಕೇಂದ್ರದ ತೆರಿಗೆ ನೀತಿಯನ್ನು ಪ್ರಶ್ನಿಸಿವೆ.
2026ರ ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಆದಾಯ ತೆರಿಗೆ ತಿದ್ದುಪಡಿಗಳ ಪ್ರಕಾರ, ಸೇವೆಯ ವೇಳೆ ಅಂಗವೈಕಲ್ಯಕ್ಕೆ ಒಳಗಾದರೂ ಸೇವೆಯನ್ನು ಮುಂದುವರಿಸಿ ನಂತರ ಸಾಮಾನ್ಯ ನಿವೃತ್ತಿ ಹೊಂದುವ ಸೈನಿಕರ ಅಂಗವೈಕಲ್ಯ ಪಿಂಚಣಿಗೆ ಆದಾಯ ತೆರಿಗೆ ವಿನಾಯಿತಿ ಅನ್ವಯವಾಗುವುದಿಲ್ಲ. ಆದರೆ ಗಾಯದ ಕಾರಣದಿಂದಲೇ ವೈದ್ಯಕೀಯ ಆಧಾರದ ಮೇಲೆ ಸೇವೆಯಿಂದ ಬಿಡುಗಡೆಯಾದ (Invalided Out) ಯೋಧರಿಗೆ ಈ ವಿನಾಯಿತಿ ಮುಂದುವರಿಯಲಿದೆ. ಇದೇ ವಿಚಾರಕ್ಕೆ ಮಾಜಿ ಸೈನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ದೇಶಕ್ಕಾಗಿ ದೇಹದ ಒಂದು ಅಂಗವನ್ನೇ ಕಳೆದುಕೊಂಡ ವ್ಯಕ್ತಿಗೆ ನೀಡುವ ಅಂಗವೈಕಲ್ಯ ಪಿಂಚಣಿ ಆದಾಯವೇ, ಅಥವಾ ಪರಿಹಾರವೇ? ಅದು ಪರಿಹಾರವಾಗಿದ್ದರೆ ಅದರ ಮೇಲೆ ತೆರಿಗೆ ವಿಧಿಸುವುದು ನ್ಯಾಯವೇ? ಸರ್ಕಾರ ತನ್ನ ನಿರ್ಧಾರಕ್ಕೆ ಕಾನೂನು ಮತ್ತು ತೆರಿಗೆ ವ್ಯವಸ್ಥೆಯ ಸಮರ್ಥನೆ ನೀಡುತ್ತಿದೆ ಎನ್ನುವುದು ಅವರ ವಾದ.
ಇನ್ನೊಂದೆಡೆ ಹೊಸ ಆದಾಯ ತೆರಿಗೆ ಕಾನೂನಿನ ಜಾರಿಯಿಂದ ವಿನಾಯಿತಿಗಳನ್ನು ಮರುಪರಿಶೀಲಿಸಲಾಗುತ್ತಿದೆ ಮತ್ತು ವಿಷಯವು ನ್ಯಾಯಾಂಗದ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ಜಾರಿಕೊಳ್ಳಲು ಪ್ರಯತ್ನಿಸುತ್ತಿದೆ.
ಈ ಚರ್ಚೆ ಕೇವಲ ತೆರಿಗೆ ನೀತಿಯ ಸುತ್ತ ಮಾತ್ರ ಸೀಮಿತವಾಗಿಲ್ಲ. ದೇಶಭಕ್ತಿಯ ನಿಜವಾದ ಅರ್ಥವೇನು ಎಂಬ ಪ್ರಶ್ನೆಯನ್ನೂ ಅದು ಮುಂದಿಟ್ಟಿದೆ. ಗಡಿಯಲ್ಲಿ ಸೈನಿಕನ ತ್ಯಾಗವನ್ನು ಕೊಂಡಾಡುವ ರಾಷ್ಟ್ರ, ಆತ ಸೇವೆಯಿಂದ ಮರಳಿದ ನಂತರ ಅವನ ಜೀವನದ ಭದ್ರತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ರಾಜಕೀಯ ಭಾಷಣಗಳಲ್ಲಿ ಯೋಧರ ಹೆಸರನ್ನು ಉಲ್ಲೇಖಿಸುವುದು ಸುಲಭ. ಆದರೆ ದೇಶಕ್ಕಾಗಿ ಶಾಶ್ವತ ಗಾಯಗಳನ್ನು ಹೊತ್ತವರ ಬದುಕಿಗೆ ಸಂಬಂಧಿಸಿದ ನೀತಿಗಳು ರೂಪುಗೊಳ್ಳುವಾಗಲೇ ಅಧಿಕಾರಸ್ಥರು ಆದ್ಯತೆಗಳೇನು ಅವರ ದೇಶಭಕ್ತಿ ಎಂಥದ್ದು ಎಂಬುದು ಸ್ಪಷ್ಟವಾಗುತ್ತವೆ. ಈ ಕಾರಣಕ್ಕಾಗಿಯೇ ಅಂಗವೈಕಲ್ಯ ಪಿಂಚಣಿಯ ಮೇಲಿನ ತೆರಿಗೆ ವಿವಾದವು ಕೇವಲ ಹಣಕಾಸಿನ ವಿಷಯವಾಗಿರದೆ, ರಾಷ್ಟ್ರ ತನ್ನ ಯೋಧರ ತ್ಯಾಗವನ್ನು ಯಾವ ಮಟ್ಟಿಗೆ ಗೌರವಿಸುತ್ತದೆ ಎಂಬ ನೈತಿಕ ಚರ್ಚೆಯಾಗಿಯೂ ರೂಪುಗೊಂಡಿದೆ. ಈ ಹಿನ್ನೆಲೆ ಮಾಜಿ ಸೈನಿಕರು, ಸೈನಿಕ ಸಂಘಟನೆಗಳೂ ಸೇರಿಂದತೆ ಸಾರ್ವಜನಿಕರು ಕೇಂದ್ರ ಸರ್ಕಾರವನ್ನು, ಪ್ರಧಾನಿ ಮೋದಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿವಾದ ಈಗ ಸಾಮಾಜಿಕ ಜಾಲತಾಣಗಳನ್ನೂ ಮೀರಿ ರಾಜಕೀಯ ಚರ್ಚೆಯ ವಿಷಯವಾಗಿದೆ. ಮಾಜಿ ಸೈನಿಕರ ಸಂಘಟನೆಗಳು, ರಕ್ಷಣಾ ತಜ್ಞರು ಹಾಗೂ ಹಲವಾರು ನಿವೃತ್ತ ಸೇನಾ ಅಧಿಕಾರಿಗಳು, ಅಂಗವೈಕಲ್ಯ ಪಿಂಚಣಿ ಒಂದು ಪರಿಹಾರ (Compensation), ಆದಾಯ (Income) ಅಲ್ಲ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ದೇಶಸೇವೆಯ ವೇಳೆ ಸಂಭವಿಸಿದ ಶಾಶ್ವತ ದೈಹಿಕ ನಷ್ಟಕ್ಕೆ ನೀಡುವ ಪರಿಹಾರವನ್ನು ತೆರಿಗೆ ವ್ಯಾಪ್ತಿಗೆ ತರುವುದು ನ್ಯಾಯಸಮ್ಮತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕ್ಯಾಮೆರಾ ಆ್ಯಂಗಲ್ ಅಲ್ಲ, ಹೃದಯದ ಆ್ಯಂಗಲ್ ಬದಲಿಸಿ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಟಾಂಗ್
ಈ ಮಧ್ಯೆ ಮಾಜಿ ಸೈನಿಕರ ಸಂಘಟನೆಗಳು ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿವೆ. ಸರ್ಕಾರ ಯೋಧರ ತ್ಯಾಗವನ್ನು ರಾಜಕೀಯ ಭಾಷಣಗಳಲ್ಲಿ ಮಾತ್ರ ಕೊಂಡಾಡದೆ, ನೀತಿ ರೂಪಿಸುವಾಗಲೂ ಅದೇ ಗೌರವವನ್ನು ತೋರಬೇಕು ಎಂದು ಆಗ್ರಹಿಸಿವೆ.
ಒಂದು ರಾಷ್ಟ್ರ ತನ್ನ ಯೋಧರನ್ನು ಗೌರವಿಸುವುದು ವಿಜಯೋತ್ಸವಗಳಲ್ಲೋ ಅಥವಾ ಭಾಷಣಗಳಲ್ಲೋ ಅಲ್ಲ; ಅವರು ಸಮವಸ್ತ್ರ ಬಿಚ್ಚಿಟ್ಟ ನಂತರವೂ ಅವರ ಬದುಕಿನ ಬಗ್ಗೆ ತೆಗೆದುಕೊಳ್ಳುವ ನೀತಿ ನಿರ್ಧಾರಗಳಲ್ಲಿ. ಅವರಿಗೆ ಕೊಡುವ ಗೌರವದಲ್ಲಿ. ಗಡಿಯಲ್ಲಿ ಕಳೆದುಕೊಂಡ ಅಂಗಕ್ಕೆ ನೀಡುವ ಪರಿಹಾರವನ್ನು ಆದಾಯವೆಂದು ಪರಿಗಣಿಸುವುದು ಅಮಾನವೀಯ. ಹಾಗಾದರೆ ಒಬ್ಬ ದೇಶ ಕಾಯುವ ಯೋಧ ತನ್ನ ಅಂಗಾಂಗ ಕಳೆದುಕೊಳ್ಳುವುದು ಸಂಪಾದನೆಯೇ? ಅಥವಾ ದೇಶದ ಕೃತಜ್ಞತೆಯ ಸಂಕೇತವೇ? ಈ ಪ್ರಶ್ನೆಗೆ ಉತ್ತರವನ್ನು ಮೋದಿಯವರೇ ನೀಡಬೇಕು. ರಾಷ್ಟ್ರಭಕ್ತಿಯನ್ನು ಯೋಧನ ತ್ಯಾಗ ಬಲಿದಾನಗಳ ಜೊತೆಗೆ, ಅವರ ಜೀವನದ ಬಗ್ಗೆ ಸರ್ಕಾರ ತೋರಿಸುವ ಸಂವೇದನಾಶೀಲತೆಯಲ್ಲಿ ಅಳೆಯಬೇಕು.




