ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ (NEET) ಸಿದ್ಧತೆಯಲ್ಲಿ ತೊಡಗಿದ್ದ 23 ವರ್ಷದ ಯುವತಿಯೊಬ್ಬಳು ಡೆಹ್ರಾಡೂನ್‌ನ ಚಂದ್ರಬನಿ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ವರದಿಯಾಗಿದೆ. ಮೃತಳನ್ನು ರಿಯಾ ಕುಮಾರಿ ಎಂದು ಗುರುತಿಸಲಾಗಿದ್ದು,
ಘಟನಾ ಸ್ಥಳದಲ್ಲಿ ‘ಅಪ್ಪ-ಅಮ್ಮ, ಐ ಲವ್ ಯು’ (Mom and Dad, I love you) ಎಂದು ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ರಿಯಾ ಸೋಮವಾರ ತಡರಾತ್ರಿಯವರೆಗೆ ತನ್ನ ಕೋಣೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರ ಬೆಳಿಗ್ಗೆ 10:30ರ ಸುಮಾರಿಗೆ ತಾಯಿ ಉಪಾಹಾರಕ್ಕಾಗಿ ಕರೆದಾಗ ಆಕೆ ಕೋಣೆಯ ಬಾಗಿಲು ತೆರೆಯಲಿಲ್ಲ. ಎಷ್ಟೇ ಕೂಗಿದರೂ ಒಳಗಿನಿಂದ ಪ್ರತಿಕ್ರಿಯೆ ಬಾರದಿದ್ದಾಗ, ಆತಂಕಗೊಂಡ ಪೋಷಕರು ಬಾಗಿಲು ಮುರಿದು ಒಳನುಗ್ಗಿದ್ದಾರೆ. ಈ ವೇಳೆ ರಿಯಾ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣವೇ ಪಟೇಲ್ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ರಿಯಾ ಓದಿನಲ್ಲಿ ಅತ್ಯಂತ ಚಾಣಾಕ್ಷ ವಿದ್ಯಾರ್ಥಿನಿಯಾಗಿದ್ದಳು. 12ನೇ ತರಗತಿಯಲ್ಲಿ ಶೇ. 96.7ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಟಾಪರ್ ಆಗಿದ್ದಳು. ಆದರೆ, ನಿರೀಕ್ಷಿತ ಯಶಸ್ಸು ಸಿಗದ ಕಾರಣ ಆಕೆ ತೀವ್ರ ಹತಾಶೆಗೆ ಒಳಗಾಗಿದ್ದಳು. ಇದರ ಜೊತೆಗೆ, ಇತ್ತೀಚೆಗೆ ರದ್ದಾಗಿದ್ದ ನೀಟ್ ಪರೀಕ್ಷೆ ಹಾಗೂ ಮರುಪರೀಕ್ಷೆಯ ಆತಂಕವೂ ಆಕೆಯ ಮೇಲೆ ತೀವ್ರ ಮಾನಸಿಕ ಒತ್ತಡ ಹೇರಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಫಿಫಾ 2026: ಆಕರ್ಷಕ ಗೋಲು ಬಾರಿಸಿದರೂ ರೆಫರಿಗಳು ಅದನ್ನು ತಿರಸ್ಕರಿಸುವುದೇಕೆ?
ಈ ಕುರಿತು ಮಾಹಿತಿ ನೀಡಿದ ಸರ್ಕಲ್ ಆಫೀಸರ್ ಅಂಕಿತ್ ಕಂಡಾರಿ, ‘ಸ್ಥಳದಲ್ಲಿ ಕೇವಲ ನಾಲ್ಕೈದು ಸಾಲುಗಳಿರುವ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ಯುವತಿ “ಅಪ್ಪ-ಅಮ್ಮ, ಐ ಲವ್ ಯು. ಐ ಆಮ್ ಸಾರಿ. ನನ್ನ ಸಾವಿಗೆ ಯಾರೂ ಕಾರಣರಲ್ಲ, ನನ್ನ ಅಸಮರ್ಥತೆಯೇ ಇದಕ್ಕೆ ಕಾರಣ. ನಾನು ಇತರರಿಗೆ ಹೊರೆಯಾಗಿದ್ದೇನೆ” ಎಂದು ಬರೆದುಕೊಂಡಿದ್ದಾಳೆ. ಸೋಮವಾರ ರಾತ್ರಿ ಕುಟುಂಬಸ್ಥರೊಂದಿಗೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲೂ ಆಕೆ ಪಾಲ್ಗೊಂಡಿದ್ದಳು. ಆಕೆಯ ವರ್ತನೆಯಲ್ಲಿ ಯಾವುದೇ ರೀತಿಯ ಖಿನ್ನತೆಯ ಲಕ್ಷಣಗಳು ಪೋಷಕರಿಗೆ ಕಂಡುಬಂದಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಪಟೇಲ್ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




