ಜೂನ್ 24ರ ಬುಧವಾರದಂದು ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಮಾರುತಗಳು ಅತ್ಯಂತ ಸಕ್ರಿಯವಾಗಿರಲಿವೆ. ಪರಿಣಾಮವಾಗಿ ದೇಶದ ಹಲವು ರಾಜ್ಯಗಳಲ್ಲಿ, ವಿಶೇಷವಾಗಿ ಪಶ್ಚಿಮ ಕರಾವಳಿ ತೀರ ಪ್ರದೇಶ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿಯೂ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ ಹೆಚ್ಚಿರಲಿದೆ ಎಂದು ಹೇಳಿದೆ.
ಮಂಗಳವಾರ ರಾತ್ರಿ, ಮುಂಬೈ ನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನೂ ಒಂದು ವಾರಗಳ ಕಾಲ ಮುಂಬೈ ಮತ್ತು ಹಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಅಂತೆಯೇ, ಹಲವು ರಾಜ್ಯಗಳಲ್ಲಿ ಮಂಗಳವಾರದಿಂದ ಮುಂಗಾರು ಮಳೆ ಆರಂಭವಾಗಿದೆ. ಆದಾಗ್ಯೂ ದೇಶದ ಕೆಲವು ಭಾಗಗಳಲ್ಲಿ ತಾಪಮಾನದ ಏರಿಕೆ ಇನ್ನು ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇನ್ನು, ದಕ್ಷಿಣ ಭಾರತದಲ್ಲಿ ಮುಂಗಾರು ಮಾರುತಗಳು ದಿನದಿಂದ ದಿನಕ್ಕೆ ಮತ್ತಷ್ಟು ಬಲಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ಕೇರಳ ಹಾಗೂ ತೆಲಂಗಾಣ ರಾಜ್ಯಗಳಾದ್ಯಂತ ವ್ಯಾಪಕವಾದ ಮಳೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಮುಂಗಾರು ಮಳೆ ದೇಶದ ಇತರ ಭಾಗಗಳಿಗೂ ಮತ್ತಷ್ಟು ಚುರುಕಾಗಿ ವಿಸ್ತರಿಸಲಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.
ಕರ್ನಾಟಕದಲ್ಲಿ ಮುಂಗಾರು ಮಳೆ ಕೊಂಚ ದುರ್ಬಲವಾಗಿದ್ದರೂ, ಬುಧವಾರದಿಂದ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಚುರುಕಾಗಲಿದೆ. ವಿಶೇಷವಾಗಿ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ಹೇಳಿದೆ. ಆರೆಂಜ್ ಅಲರ್ಟ್ ಘೋಷಿಸಿದೆ.
ಅಂತೆಯೇ, ಮಲೆನಾಡು ಭಾಗದ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ, ಜೊತೆಗೆ, ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳಲ್ಲೂ ಮುಂಗಾರು ಮಳೆ ಚುರುಕಾಗಿದೆ ಎಂದು ಇಲಾಖೆ ತಿಳಿಸಿದೆ.
ಇನ್ನು, ರಾಜ್ಯ ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ.



