ಅಮೆರಿಕದ ಮ್ಯಾಸಚುಸೆಟ್ಸ್‌ನಲ್ಲಿ ಭಾರತೀಯ ಮೂಲದ ಯುವಕನೊಬ್ಬ ಎಐ ಬಳಸಿ ತನ್ನ ತಾಯಿ ಹಾಗೂ ಅಪ್ರಾಪ್ತ ವಯಸ್ಸಿನ ತಮ್ಮನನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಕುಟುಂಬದ ಇಬ್ಬರನ್ನು ಕೊಲೆಗೈದ ಬಳಿಕ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನನ್ನು ಕಾರಿನ ಸಮೇತ ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಆತ ಇಂಟರ್‌ನೆಟ್ ಹಾಗೂ ಚಾಟ್‌ಜಿಪಿಟಿಯನ್ನು ಬಳಸಿದ್ದ ಎಂಬ ಮಾಹಿತಿ ಹೊರಬಂದಿದೆ.
ಬೋಸ್ಟನ್‌ನಿಂದ ಸುಮಾರು 48 ಕಿಲೋಮೀಟರ್ ದೂರದಲ್ಲಿರುವ ಆಕ್ಟನ್‌ನ ಮಾರ್ತಾ ಲೇನ್‌ನಲ್ಲಿರುವ ನಿವಾಸದಲ್ಲಿ ಆಗಸ್ಟ್ 11ರಂದು ಈ ದುರ್ಘಟನೆ ನಡೆದಿದೆ. ಆಕ್ಟನ್ ನಿವಾಸಿ ಅರ್ಜುನ್ ಅರವಿಂದ್ ಆರೋಪಿಯಾಗಿದ್ದು, ಆತನ ತಾಯಿ ಸುಧಾ ವೆಂಕಟೇಶನ್ (45) ಹಾಗೂ ತಮ್ಮ ಸಿದ್ಧಾರ್ಥ್ ಅರವಿಂದ್ (14) ಮೃತಪಟ್ಟವರು.
ಪೊಲೀಸರ ಪ್ರಕಾರ, ಆಕ್ಟನ್‌ನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅರ್ಜುನ್ ಮನೆಯಲ್ಲೇ ತನ್ನ ತಾಯಿ ಮತ್ತು ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇಬ್ಬರೂ ಮೃತಪಟ್ಟ ಬಳಿಕ ಆತ ತಾಯಿಯ ಕಾರನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ಸುಮಾರು 6.30ರ ವೇಳೆಗೆ ಟ್ಯೂಷನ್ ಶಿಕ್ಷಕರೊಬ್ಬರು ಮನೆಗೆ ಬಂದಾಗ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಅವರು ಅರ್ಜುನ್‌ನ ತಂದೆಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರನ್ನು ಸಂಪರ್ಕಿಸಲು ನಡೆಸಿದ ಪ್ರಯತ್ನವೂ ವಿಫಲವಾದ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ತೆರಳಿದ ಆಕ್ಟನ್ ಪೊಲೀಸರು ಮನೆಯನ್ನು ಪರಿಶೀಲಿಸಿದಾಗ, ನೆಲಮಾಳಿಗೆಯಲ್ಲಿ ಸುಧಾ ವೆಂಕಟೇಶನ್ ಅವರ ಮೃತದೇಹ ಹಾಗೂ ಮೊದಲ ಮಹಡಿಯಲ್ಲಿ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದೆ. ಇಬ್ಬರ ದೇಹಗಳ ಮೇಲೂ ಗಾಯದ ಗುರುತುಗಳು ಕಂಡುಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: RSS ನೈಜ ಇತಿಹಾಸ ಬರೆದಿದ್ದಕ್ಕೆ ಹಳೆಯ ಕೇಸ್ ರೀ-ಓಪನ್: ಲೇಖಕ ಹಾರೋಹಳ್ಳಿ ರವೀಂದ್ರ
ಈ ನಡುವೆ ಘಟನೆ ಬಳಿಕ ಅರ್ಜುನ್ ನಾಪತ್ತೆಯಾಗಿದ್ದರಿಂದ ಆತನಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದರು. ಬುಧವಾರ ಮುಂಜಾನೆ ವೇಲ್ಯಾಂಡ್‌ನ ಪಾರ್ಕಿಂಗ್ ಪ್ರದೇಶವೊಂದರಲ್ಲಿ ತಾಯಿಯ ಕಾರು ಪತ್ತೆಯಾಗಿದ್ದು, ಅದರೊಳಗಿದ್ದ ಅರ್ಜುನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನಿಖೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವ ಮೊದಲು ಅರ್ಜುನ್ ಇಂಟರ್‌ನೆಟ್‌ನಲ್ಲಿ ಮಾಹಿತಿ ಹುಡುಕಿದ್ದ ಎನ್ನುವುದು. ಇದೇ ವೇಳೆ ಆತ ಚಾಟ್‌ಜಿಪಿಟಿಯನ್ನೂ ಬಳಸಿದ್ದ ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ ಎಂದು ವರದಿಯಾಗಿದೆ.
ಸದ್ಯ ಅರ್ಜುನ್ ವಿರುದ್ಧ ಎರಡು ಕೊಲೆ ಪ್ರಕರಣಗಳು ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.




