ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೊಡುಗೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆರ್‌ಎಸ್‌ಎಸ್‌ನ ಒಬ್ಬ ನಾಯಕನ ಹೆಸರನ್ನಾದರೂ ಹೇಳಿ” ಎಂದು ಸವಾಲೆಸೆದಿರುವ ಖರ್ಗೆ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಯಾವುದೇ ಭಾಗವಹಿಸುವಿಕೆ ಇಲ್ಲದ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರು ಇಂದು ಕಾಂಗ್ರೆಸ್‌ಗೆ ದೇಶಭಕ್ತಿಯ ಪಾಠ ಹೇಳಿಕೊಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಖರ್ಗೆ ಭಾಷಣದ ಬಳಿಕ ವೇದಿಕೆಯಲ್ಲಿ ʼಶುದ್ಧೀಕರಣʼ ಹವನ: ಕಾಂಗ್ರೆಸ್ ಆಕ್ರೋಶ
ಕ್ವಿಟ್ ಇಂಡಿಯಾ ಚಳವಳಿಯ ಐತಿಹಾಸಿಕ ದಿನಗಳನ್ನು ಸ್ಮರಿಸುತ್ತಾ ಮಾತನಾಡಿದ ಕಾಂಗ್ರೆಸ್ ನಾಯಕರು, ಮಹಾತ್ಮ ಗಾಂಧೀಜಿಯವರ ‘ಮಾಡೂ ಇಲ್ಲವೇ ಮಡಿ’ ಕರೆಗೆ ಇಡೀ ದೇಶವೇ ಸ್ಪಂದಿಸಿ ಹೋರಾಟಕ್ಕೆ ಧುಮುಕಿದ್ದಾಗ ಆರ್‌ಎಸ್‌ಎಸ್ ಬ್ರಿಟಿಷರ ಪರವಾಗಿ ನಿಂತಿತ್ತು ಮತ್ತು ಹೋರಾಟದಿಂದ ದೂರ ಉಳಿದಿತ್ತು ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಲಕ್ಷಾಂತರ ಕಾರ್ಯಕರ್ತರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮತ್ತು ಜೈಲು ವಾಸ ಅನುಭವಿಸಿದ್ದಾರೆ, ಆದರೆ ಆರ್‌ಎಸ್‌ಎಸ್‌ನಿಂದ ಅಂತಹ ಯಾವುದೇ ಕೊಡುಗೆ ಸಿಕ್ಕಿಲ್ಲ ಎಂದು ಪ್ರತಿಪಾದಿಸಿದರು.
ಕರ್ನಾಟಕದಲ್ಲೂ ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ. ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರವೇನು ಎಂದು ಪ್ರಶ್ನಿಸಿದ್ದು, ಸೈದ್ಧಾಂತಿಕ ಚರ್ಚೆಯನ್ನು ಮತ್ತಷ್ಟು ಕಾವೇರಿಸಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್‌ನ ಈ ಸವಾಲು ಮತ್ತು ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು, ದೇಶ ಸೇವೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಆರ್‌ಎಸ್‌ಎಸ್‌ನ ಸ್ವಯಂಸೇವಕರ ಕೊಡುಗೆ ಅನನ್ಯವಾದದ್ದು ಮತ್ತು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆಯೇ ಹೊರತು ಯಾರೊಬ್ಬರ ಹೆಸರನ್ನು ಗುರುತಿಸುತ್ತಿಲ್ಲ.




