ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ, ಅವರು ಭಾಷಣ ಮಾಡಿದ ವೇದಿಕೆಯಲ್ಲಿ ‘ಶುದ್ಧೀಕರಣ’ ಹವನ ನಡೆಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವ ರಾಜ್ಯ ಕಾಂಗ್ರೆಸ್ ಘಟಕ, ಈ ಘಟನೆ ಜಾತಿ ಆಧಾರಿತ ತಾರತಮ್ಯ, ಅಸ್ಪೃಶ್ಯತೆಯ ಮನೋಭಾವ ಮತ್ತು ಮಾನವ ಘನತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕಾಂಗ್ರೆಸ್ ಹೇಳಿದೆ. ಖರ್ಗೆ ಅವರು ದಲಿತ ನಾಯಕ ಎಂಬ ಕಾರಣಕ್ಕೆ ಅವರು ಮಾತನಾಡಿದ ವೇದಿಕೆಯನ್ನು ‘ಶುದ್ಧೀಕರಿಸುವ’ ಅಗತ್ಯ ಏಕೆ ಬಂತು ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಪ್ರಶ್ನಿಸಿದೆ.
ಜಾತಿಯ ಕಾರಣಕ್ಕಾಗಿ ವ್ಯಕ್ತಿಯೊಬ್ಬರು ಸ್ಪರ್ಶಿಸಿದ ಸ್ಥಳವನ್ನು ‘ಅಪವಿತ್ರ’ ಎಂದು ಪರಿಗಣಿಸಿ ಶುದ್ಧೀಕರಣ ನಡೆಸುವ ಮನೋಭಾವ ಅಸ್ಪೃಶ್ಯತೆಯ ಪ್ರತಿಬಿಂಬವೇ ಎಂಬುದನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಭಾರತದ ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯನ್ನು ರದ್ದುಗೊಳಿಸಿದ್ದು, ಅದರ ಯಾವುದೇ ರೂಪದ ಆಚರಣೆಯನ್ನು ನಿಷೇಧಿಸಿದೆ. ಹೀಗಾಗಿ ಜಾತಿಯ ಆಧಾರದ ಮೇಲೆ ಯಾರನ್ನಾದರೂ ಕೀಳಾಗಿ ಕಾಣುವುದು, ಅವಮಾನಿಸುವುದು ಅಥವಾ ‘ಅಪವಿತ್ರ’ ಎಂದು ಪರಿಗಣಿಸುವುದು ಸಂವಿಧಾನದ ಸಮಾನತೆ ಮತ್ತು ಮಾನವ ಘನತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಮಹಾತ್ಮ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಪೆರಿಯಾರ್ ಇ.ವಿ. ರಾಮಸ್ವಾಮಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಸಾಮಾಜಿಕ ಸುಧಾರಕರು ಜಾತಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ನಡೆಸಿದ ಹೋರಾಟವನ್ನು ಕಾಂಗ್ರೆಸ್ ನೆನಪಿಸಿದೆ.
ಜಾತಿ ತಾರತಮ್ಯವನ್ನು ಸಂಪೂರ್ಣವಾಗಿ ವಿರೋಧಿಸುತ್ತೀರಾ? ಅಸ್ಪೃಶ್ಯತೆಯ ಪ್ರತಿಯೊಂದು ರೂಪವನ್ನೂ ಖಂಡಿಸುತ್ತೀರಾ? ಖರ್ಗೆ ಅವರು ಭಾಷಣ ಮಾಡಿದ ಬಳಿಕ ವೇದಿಕೆಯಲ್ಲಿ ‘ಶುದ್ಧೀಕರಣ’ ನಡೆಸಲಾಗಿದೆ ಎಂಬ ವರದಿಯನ್ನು ಖಂಡಿಸುತ್ತೀರಾ? ಜಾತಿಯ ಆಧಾರದ ಮೇಲೆ ಅಸ್ಪೃಶ್ಯತೆ ಆಚರಿಸಿರುವುದು ಸಾಬೀತಾದರೆ ಕಾನೂನು ಕ್ರಮಕ್ಕೆ ಬೆಂಬಲಿಸುತ್ತೀರಾ? ಸಂವಿಧಾನದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯ ಮೌಲ್ಯಗಳಿಗೆ ಬದ್ಧರಾಗಿದ್ದೀರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಘಟನೆ ಕುರಿತು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೌನವಾಗಿರುವುದೇಕೆ ಎಂಬ ಪ್ರಶ್ನೆಯನ್ನೂ ಕಾಂಗ್ರೆಸ್ ಮುಂದಿಟ್ಟಿದೆ. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತುವುದು ಯಾವುದೇ ಧರ್ಮ ಅಥವಾ ಧಾರ್ಮಿಕ ಆಚರಣೆಯ ವಿರುದ್ಧದ ಹೋರಾಟವಲ್ಲ. ಬದಲಾಗಿ, ಮಾನವ ಘನತೆ ಮತ್ತು ಸಂವಿಧಾನದ ರಕ್ಷಣೆಯ ಹೋರಾಟ ಎಂದು ಅದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ 21% ಮತದಾರರ ಹೆಸರು ಡಿಲೀಟ್ ಆಗುವ ಆತಂಕ; ಕಾಂಗ್ರೆಸ್ ನಾಯಕರಿಗೆ ಸಿಎಂ ರೇವಂತ್ ರೆಡ್ಡಿ ಎಚ್ಚರಿಕೆ
ಜಾತಿಯ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸುವ ಭಾರತವನ್ನು ತಾವು ಬಯಸುವುದಿಲ್ಲ. ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಸಂವಿಧಾನಾತ್ಮಕ ಮೌಲ್ಯಗಳನ್ನು ಆಧರಿಸಿದ ಭಾರತವನ್ನು ಬಯಸುತ್ತೇವೆ. “ಯಾರೂ ಮೇಲಲ್ಲ. ಯಾರೂ ಕೀಳಲ್ಲ. ಯಾರೂ ಅಸ್ಪೃಶ್ಯರಲ್ಲ. ಪ್ರತಿಯೊಬ್ಬ ಭಾರತೀಯನೂ ಸಮಾನ” ಎಂದು ಕಾಂಗ್ರೆಸ್ ಹೇಳಿದೆ.
ಜಾತಿ ತಾರತಮ್ಯವು ಕೇವಲ ಒಂದು ಸಮುದಾಯದ ಸಮಸ್ಯೆಯಲ್ಲ. ಅದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಮಾನವೀಯತೆಯ ಪ್ರಶ್ನೆಯಾಗಿದೆ. ಹೀಗಾಗಿ ಜಾತಿಯ ಹೆಸರಿನಲ್ಲಿ ನಡೆಯುವ ಅವಮಾನ, ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು ಎಂದು ಕಾಂಗ್ರೆಸ್ ಕರೆ ನೀಡಿದೆ. “ಜಾತಿ ತಾರತಮ್ಯಕ್ಕೆ ಜಾಗವಿಲ್ಲ, ಅಸ್ಪೃಶ್ಯತೆಗೆ ಜಾಗವಿಲ್ಲ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ. ಸಂವಿಧಾನವೇ ನಮ್ಮ ಶಕ್ತಿ” ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.




