ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (NDRF) ಅಡಿಯಲ್ಲಿ ಮಂಜೂರಾದ ಹಣದಲ್ಲಿ ಅರ್ಧದಷ್ಟನ್ನೂ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ ಎಂದು ಸಿಎಜಿ (Comptroller and Auditor General of India) ವರದಿ ಬಹಿರಂಗಪಡಿಸಿದೆ.
ಸಂಸತ್ತಿನಲ್ಲಿ ಮಂಡಿಸಲಾದ 2024-25ರ ಕೇಂದ್ರ ಸರ್ಕಾರದ ಲೆಕ್ಕಪತ್ರ ವರದಿಯನ್ನು ಸಿಎಪಿ ವಿಶ್ಲೇಷಿಸಿದೆ. “ತೀವ್ರ ಸ್ವರೂಪದ ಪ್ರಕೃತಿ ವಿಕೋಪಗಳಿಗಾಗಿ ಎನ್‌ಡಿಆರ್‌ಎಫ್ ಅಡಿಯಲ್ಲಿ ಒಟ್ಟು 11,474 ಕೋಟಿ ರೂ. ಮಂಜೂರಾಗಿತ್ತು. ಆದರೆ, ರಾಜ್ಯಗಳಿಗೆ ತಲುಪಿದ್ದು ಕೇವಲ 5,356 ಕೋಟಿ ರೂ. ಮಾತ್ರ. ಉಳಿದ 6,117.97 ಕೋಟಿ ರೂ. ಹಣ (53 %ಕ್ಕಿಂತ ಹೆಚ್ಚು) ಬಳಕೆಯಾಗದೆ ಉಳಿದಿದೆ” ಎಂದು ವರದಿ ಬಹಿರಂಗಪಡಿಸಿದೆ.
ಅಲ್ಲದೆ, “ರಾಷ್ಟ್ರೀಯ ವಿಪತ್ತು ಶಮನ ನಿಧಿ (NDMF) ಅಡಿಯಲ್ಲಿ ಮಂಜೂರಾಗಿದ್ದ 2,868 ಕೋಟಿ ರೂ.ಗಳಲ್ಲಿ ಕೇವಲ 719.72 ಕೋಟಿ ರೂ. ಮಾತ್ರ ರಾಜ್ಯಗಳಿಗೆ ವರ್ಗಾವಣೆಯಾಗಿದೆ. ಉಳಿದ 75% ರಷ್ಟು ಹಣವನ್ನು ಬಳಸಲಾಗಿಲ್ಲ” ಎಂಬುದನ್ನೂ ಎತ್ತಿ ತೋರಿಸಿದೆ.
“ರಾಜ್ಯಗಳಿಗೆ ನೀಡಲಾಗುವ ವಿಶೇಷ ನೆರವಿಗೆ 20,000 ಕೋಟಿ ರೂ. ನಿಗದಿಪಡಿಸಲಾಗಿದ್ದರೂ, ಕೇವಲ 3,350 ಕೋಟಿ ರೂ. ಮಾತ್ರ ವೆಚ್ಚ ಮಾಡಲಾಗಿದೆ. ಇನ್ನುಳಿದ 83% ರಷ್ಟು ಹಣ ಬಿಡುಗಡೆಯಾಗಿಲ್ಲ. ಕೇಂದ್ರದ ಬೊಕ್ಕಸದಲ್ಲೇ ಉಳಿದಿದೆ” ಎಂಬುದನ್ನು ವರದಿ ಹೊರಗೆಳೆದಿದೆ.
“ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ‘ಮುಂಗಡ ನೆರವಿನ ಸಾಲ’ವಾಗಿ ನೀಡಲು ಕಾಯ್ದಿರಿಸಲಾಗಿದ್ದ 100 ಕೋಟಿ ರೂ. ಅನುದಾನದಿಂದ ಒಂದು ಪೈಸೆಯನ್ನೂ ಬಳಸಲಾಗಿಲ್ಲ” ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಗಮನಾರ್ಹವಾಗಿ, 2022-23ರಲ್ಲಿ 67,882 ಕೋಟಿ ರೂ., 2023-24ರಲ್ಲಿ 46,012.89 ಕೋಟಿ ರೂ. ಹಾಗೂ 2024-25ರಲ್ಲಿ 36,219 ಕೋಟಿ ರೂ. ಹಣವು ರಾಜ್ಯಗಳಿಗೆ ಬಿಡುಗಡೆಯಾಗದೆ ಉಳಿದಿವೆ ಸಿಎಜಿ ಕಳವಳ ವ್ಯಕ್ತಪಡಿಸಿದೆ.
ಕೇರಳ, ಅಸ್ಸಾಂ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಪ್ರಕೃತಿ ವಿಕೋಪಗಳ ಸಮಯದಲ್ಲಿ ಕೇಂದ್ರದಿಂದ ಸೂಕ್ತ ಪರಿಹಾರ ಸಿಗದಿರುವ ಬಗ್ಗೆ ನಿರಂತರವಾಗಿ ದೂರುತ್ತಿವೆ.
2024ರಲ್ಲಿ ಭೀಕರ ಬರ ಎದುರಿಸಿದ್ದ ಕರ್ನಾಟಕ, 18,000 ಕೋಟಿ ರೂ. ಪರಿಹಾರ ಕೋರಿತ್ತು. ಆದರೆ, ಕೇಂದ್ರ ಸರ್ಕಾರ ಕೇವಲ 3,499 ಕೋಟಿ ರೂ. ಮಾತ್ರವೇ ಬಿಡುಗಡೆ ಮಾಡಿದ್ದರಿಂದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಅಂತೆಯೇ, ಮಿಚೌಂಗ್ ಚಂಡಮಾರುತದಿಂದಾದ ಹಾನಿಗೆ 37,907.21 ಕೋಟಿ ರೂ. ಪರಿಹಾರ ಕೋರಿದ್ದ ತಮಿಳುನಾಡಿಗೆ ದೊರೆತದ್ದು ಕೇಲವ 276 ಕೋಟಿ ರೂ. ಮಾತ್ರ.
ವಯನಾಡ್ ಭೂಕುಸಿತದ ಪರಿಹಾರಕ್ಕಾಗಿ ಕೇರಳ ಕೋರಿದ್ದ 2,221 ಕೋಟಿ ರೂ.ಗೆ ಪ್ರತಿಯಾಗಿ ಕೇವಲ 260.56 ಕೋಟಿ ರೂ.ಗಳನ್ನು ಕೇಂದ್ರ ಅನುಮೋದಿಸಿತ್ತು. ಹಣ ಬಿಡುಗಡೆಯಲ್ಲಿನ ಅನ್ಯಾಯವನ್ನು ಪ್ರಶ್ನಿಸಿ ಕೇರಳ ಕೂಡ ಹೈಕೋರ್ಟ್ ಮೆಟ್ಟಿಲೇರಬೇಕಾಯಿತು. ಅದೇ ರೀತಿ, ಪ್ರವಾಹದ ವೇಳೆ ಅಸ್ಸಾಂ ಕೇಳಿದ ಹಣದಲ್ಲಿ ಕೇವಲ 2.4%ರಷ್ಟು ಮಾತ್ರ ಕೇಂದ್ರದಿಂದ ಬಿಡುಗಡೆಯಾಗಿತ್ತು.
ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ ಎಸ್‌ಡಿಆರ್‌ಎಫ್ ನಿಧಿ ಸಾಲದಿದ್ದಾಗ ರಾಜ್ಯಗಳು ಸಲ್ಲಿಸುವ ವರದಿಯನ್ನಾಧರಿಸಿ, ಕೇಂದ್ರ ಸರ್ಕಾರವು ಪರಿಶೀಲನೆ ನಂತರ ಎನ್‌ಡಿಆರ್‌ಎಫ್‌ನಿಂದ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಆದರೆ, ಕೇಂದ್ರವು ನಿರಂತರವಾಗಿ ಅನುದಾನ ತಡೆಹಿಡಿಯುತ್ತಿರುವುದನ್ನು ಸಿಎಜಿ ವರದಿ ಸ್ಪಷ್ಟವಾಗಿ ಎತ್ತಿ ತೋರಿಸಿದೆ.



