ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಶರಣಂಗೆ ಕುರುಹು
ಅಂಗದ ಕಳೆ ಲಿಂಗದಲ್ಲಿ
ಅರಿತ ಬಳಿಕ
ಅಂಗವೆಂಬ ಶಂಕೆಯಿಲ್ಲ
ನೋಡಾ ಶರಣಂಗೆ.
ಪ್ರಾಣದ ಕಳೆ ಅರಿವಿನಲ್ಲಿ
ಅರಿತ ಬಳಿಕ
ಶಬ್ದ ಸಂದಣಿಗೆ ಹಂಗಿಲ್ಲ
ನೋಡಾ!
ಶರಣ ನಡೆದಡೆ ನಿರ್ಗಮನಿ
ನುಡಿದಡೆ ನಿಶ್ಶಬ್ದಿ!
ಗುಹೇಶ್ವರನ ಶರಣಂಗೆ ಕುರುಹಿಲ್ಲ
ಕೇಳಾ ಎಲೆ ಅವ್ವಾ.
ಪದಾರ್ಥ:
ಸಂದಣಿ = ಗದ್ದಲ
ನಿರ್ಗಮನಿ = ತೆರಳು
ನಿಶ್ಶಬ್ದಿ = ಪ್ರಶಾಂತ
ಕುರುಹು = ಗುರುತು
ವಚನಾರ್ಥ:
ಇದು ಅಲ್ಲಮ ಮತ್ತು ಮುಕ್ತಾಯಕ್ಕನವರ ನಡುವೆ ನಡೆದ ಸಂವಾದದಲ್ಲಿ ಮೂಡಿ ಬಂದ ವಚನ. ಶರಣನ ವ್ಯಕ್ತಿತ್ವ ಹೇಗಿರುತ್ತದೆ ಎಂದು ಅಲ್ಲಮ ಮುಕ್ತಾಯಕ್ಕನಿಗೆ ವಿವರಿಸುವ ಸಂದರ್ಭ. ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ ಎಂಬುದು ಅಲ್ಲಮನ ಮಾತು. ಶರಣನು ತನ್ನ ಅಂಗದ ಗುರುತನ್ನು ಲಿಂಗದಲ್ಲಿ ಲೀನಗೊಳಿಸಿರುತ್ತಾನೆ. ಹಾಗಾಗಿ ಶರಣನಿಗೆ ಅಂಗವೆಂಬ ಶಂಕೆಯಿಲ್ಲ ಅಂದರೆ ದೇಹಮೋಹವಿಲ್ಲ. ಶರಣನು ತನ್ನ ಪ್ರಾಣದ ಗುರುತನ್ನು ಅರಿವಿನಲ್ಲಿ ಹರವಿರುತ್ತಾನೆ. ಹಾಗಾಗಿ ಶರಣನಲ್ಲಿ ಶಬ್ದ ಸಂದಣಿಗೆ ಹಂಗಿಲ್ಲ ಅಂದರೆ ನಾನು ಅದ ಬಲ್ಲೆ ಇದ ಬಲ್ಲೆ ಎಂಬ ಬಿಂಕ ಬಿನ್ನಾಣಗಳಿರುವುದಿಲ್ಲ. ಶರಣ ನಡೆದಡೆ ನಿರ್ಗಮನಿ. ಸದಾ ಮುನ್ನಡೆಯುವವ. ಅಂತಿಮವಾಗಿ ನಿರ್ಗಮಿಸುವವ. ಅವನಿಗೆ ಮರುಜನ್ಮವಿಲ್ಲ. ಶರಣ ನುಡಿದಡೆ ನಿಶ್ಶಬ್ದಿ. ಅಂದರೆ ಅವನು ನುಡಿವ ಮಾತುಗಳು ಅವನವಲ್ಲ. ಲಿಂಗವೇ ಅವನ ಬಾಯಿಂದ ನುಡಿಸಲ್ಪಡುವಂತಹವು. ಶರಣನಿಗೆ ತನ್ನದು ಎಂಬ ಯಾವುದೇ ಗುರುತಿಲ್ಲ. ನುಡಿಯ ಹಂಗು ನಿಮಗಿನ್ನೂ ಹಿಂಗಿಲ್ಲ, ನಡೆಯನೆಂತು ಪರರಿಗೆ ಹೇಳುವಿರಿ ಎಂದು ಅಲ್ಲಮನಂತ ಅಲ್ಲಮನಿಗೇ ಸಂವಾದದಲ್ಲಿ ಸವಾಲೆಸೆದ ದಿಟ್ಟೆ ಮುಕ್ತಾಯಕ್ಕನಿಗೆ ಅಲ್ಲಮನು ಅರಿವು ಮೂಡಿಸಲು ಮಂಡಿಸಿದ ವಚನವಿದು.
ಪದಪ್ರಯೋಗಾರ್ಥ:
ಶರಣಂಗೆ ಕುರುಹಿಲ್ಲ. ಕುರುಹು ಅಂದರೆ ಗುರುತು. ಶರಣನ ದೇಹಕ್ಕೆ ಯಾವುದೇ ಗುರುತಿಲ್ಲ. ಜೀವಕ್ಕೆ ಯಾವುದೇ ಗುರುತಿಲ್ಲ. ಆಡುವ ಮಾತುಗಳಿಗೆ ಗುರುತಿಲ್ಲ. ಅವನಾಡುವ ಮಾತುಗಳು ಅವನವಲ್ಲ. ಲಂಕೇಶರ ಪ್ರಸಿದ್ದ ನಾಟಕ “ಸಂಕ್ರಾಂತಿ”ಯಲ್ಲಿ ಒಂದು ಪ್ರಸಂಗ ಬರುತ್ತದೆ. ರುದ್ರನೆಂಬ ಶರಣನಿಗೆ ರಾಜ ಬಿಜ್ಜಳ ಕೇಳುತ್ತಾನೆ. ನೀನು ಶರಣ ಅನ್ನೋದಕ್ಕೆ ಗುರುತೇನು? ಶರಣ ಉತ್ತರಿಸುತ್ತಾನೆ. “ಎಲ್ಲ ಗುರುತನ್ನ ಕಿತ್ತೊಗೆಯೋದೆ ಶರಣತನ.” ಗುಹೇಶ್ವರನ ಶರಣಂಗೆ ಕುರುಹಿಲ್ಲ. ಒಬ್ಬ ವ್ಯಕ್ತಿಯು ಸನ್ಯಾಸ ಸ್ವೀಕರಿಸಿದಾಗ ಪೂರ್ವಾಶ್ರಮದ ಹೆಸರು ಬದಲಿಸುವುದು ಇದೇ ಕಾರಣಕ್ಕಾಗಿ. ಸನ್ಯಾಸ ಜೀವನದ ಪಥದಲ್ಲಿ ಮುಂದುವರಿದಂತೆಲ್ಲ ಆತ ಒಂದೊಂದೇ ಕುರುಹುಗಳನ್ನು ಕಿತ್ತೊಗೆಯಬೇಕು. ಸಂಪೂರ್ಣ ಶರಣನಾಗಬೇಕು. ಸ್ವಾಮಿಯಾದ ವ್ಯಕ್ತಿ ತನ್ನ ಹೆಸರಿನ ಸಹಿಯನ್ನು ಕೂಡಾ ಮಾಡುವಂತಿಲ್ಲ. ಆದರೆ ಈಗಿನ ಸ್ವಾಮಿಗಳು ಸನ್ಯಾಸಿಗಳಾದ ನಂತರ ಒಂದೊಂದೇ ಗುರುತುಗಳನ್ನು ಸಂಪಾದಿಸಿಕೊಳ್ಳುತ್ತಾರೆ. ಬಿರುದು ಬಾವಲಿಗಳನ್ನು ಗಳಿಸುತ್ತಾರೆ. ಶರಣಂಗೆ ಕುರುಹಿಲ್ಲ ಎಂದು ಅಲ್ಲಮ ಹೇಳಿರುವುದು ಅಧಿಕೃತವಾದ ಮತ್ತು ಕಾಲಾತೀತವಾದ ಮಾತು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



