ರೈತ,ಕಾರ್ಮಿಕ ವಿರೋಧಿ ರಾಜ್ಯ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಲು ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಪರ್ಯಾಯ ಜನಪರ ನೀತಿಗಳಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನ. 26 ರಿಂದ 72 ಗಂಟೆಗಳ ಬೃಹತ್ ರೈತ, ಕಾರ್ಮಿಕರ ರಾಜ ಭವನ ಚಲೋ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ತಿಳಿಸಿದೆ.
ಯಾದಗಿರಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಐಯುಟಿಯುಸಿ ಯಾದಗಿರಿ ಜಿಲ್ಲಾಧ್ಯಕ್ಷೆ ಡಿ. ಉಮಾದೇವಿ ಮಾತನಾಡಿ, “ಸ್ವಾತಂತ್ರ‍್ಯ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಆಕ್ರಮಣ ವಿರೋಧಿಸಿ ಜಾತ್ಯಾತೀತ, ಪ್ರಜಾಪ್ರಭುತ್ವ ಗಣತಂತ್ರದ ಸಂವಿಧಾನ ರಕ್ಷಣೆಗಾಗಿ, ಐತಿಹಾಸಿಕ ದೆಹಲಿ ರೈತ ಹೋರಾಟ ಹಾಗೂ ಕಾರ್ಮಿಕರ ಅಖಿಲ ಭಾರತ ಹರತಾಳದ ನೆನಪಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಬೃಹತ್ ರಾಜಭವನ್ ಚಲೋ- ಮಹಾಧರಣಿ ಹಮ್ಮಿಕೊಂಡಿದ್ದು ಸಹಸ್ರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದ್ದಾರೆ.
“2014 ರಿಂದಲೂ ದೇಶದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಕ್ರಮಣಕಾರಿಯಾಗಿ ರೂಪಿಸುತ್ತಿರುವ ಕಾರ್ಪೊರೇಟ್ ಬಂಡವಾಳಪರ ನವ ಉದಾರವಾದಿ ನೀತಿಗಳು ದೇಶದ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ ಸಾಮಾನ್ಯ ಜನತೆಯ ಮೇಲೆ ಜಿಎಸ್ ಟಿ ಹೊರೆ ವಿಧಿಸಿದೆ. ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸೇವೆಗಳ ಬಳಕೆಗೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರಿಂದ ಎಲ್ಲಾ ಅಗತ್ಯ ಸರಕುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಇದರಿಂದ ಜನತೆ ತತ್ತರಿಸುವಂತಾಗಿದೆ” ಎಂದು ಕಿಡಿಕಾರಿದರು.
“ಸರ್ಕಾರದ ಇಂತಹ ಜನ ವಿರೋಧಿ ಕ್ರಮಗಳು ಕಾರ್ಪೊರೇಟ್ ವರ್ಗದ ಸಂಪತ್ತು ಮತ್ತು ಆದಾಯವನ್ನು ಗಣನೀಯವಾಗಿ ಹೆಚ್ಚಿಸಿದ್ದರೆ, ಶೋಷಿತ ಜನ ಸಮೂಹದ ಜೀವನ ಮಟ್ಟವನ್ನು ದಾರಿದ್ರ್ಯಕ್ಕೆ ತಳ್ಳಲ್ಪಟ್ಟಿದೆ. ರಾಷ್ಟ್ರೀಯ ಆದಾಯದಲ್ಲಿ ಭಾರತದ ಅತ್ಯಂತ ಮೇಲ್ತರದ ಶೇ.1 ರಷ್ಟು ಜನ ಶೇ.40.5 ರಷ್ಟು ಒಡೆತನ ಹೊಂದಿದ್ದರೆ, ಶೇ.50 ರಷ್ಟು ಸಾಮಾನ್ಯ ಜನರ ಒಡೆತನ ಶೇ.3ಕ್ಕೆ ಕುಸಿದಿದೆ. ನಿರುದ್ಯೋಗ, ಬಡತನ, ಹಸಿವು, ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆ ಹೆಚ್ಚಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ರೈತ-ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು:
“ದೆಹಲಿಯಲ್ಲಿ ಸತತ 13 ತಿಂಗಳ ಕಾಲ ರೈತರು ಐತಿಹಾಸಿಕ ಹೋರಾಟ ನಡೆಸಿದ ಪರಿಣಾಮ ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಿತು. ಆದರೂ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿ ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಈ ಧೋರಣೆಗಳು ರೈತಾಪಿ ವರ್ಗವನ್ನು ಸಾಲದ
ಸುಳಿಗೆ ಸಿಲುಕಿಸಿ ಕೃಷಿಯಿಂದ ಹೊರ ದೂಡಲಾಗುತ್ತಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಕೃಷಿ ಆರ್ಥಿಕತೆ ಬಿಕ್ಕಟ್ಟಿನಲ್ಲಿ ಸಾಗುತ್ತಿದೆ” ಎಂದು ದೂರಿದರು.
“ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ಕಾರ್ಪೊರೇಟ್ ಬಂಡವಾಳಪರ ನಾಲ್ಕು ಸಂಹಿತೆಗಳಾಗಿ ರೂಪಿಸಿ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಲು ಹಾಗೂ ಬಂಡವಾಳಗಾರರ ಲಾಭವನ್ನು ಹೆಚ್ಚಿಸಲು ಶ್ರಮದ ಶೋಷಣೆಗೆ ಅನುವುಗೊಳಿಸಿದೆ. ಬಹುದೊಡ್ಡ ಸಂಖ್ಯೆಯ ಕೃಷಿ ಕೂಲಿಕಾರರು, ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆಯಿಲ್ಲದೆ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ರಾಜ್ಯದ ನೂತನ ಕಾಂಗ್ರೇಸ್ ಸರ್ಕಾರ ಕೇಂದ್ರ ಸರ್ಕಾರದ ಹಾದಿಯಲ್ಲಿ ಸಾಗದೇ, ರೈತ-ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು. ಜನಪರ ಪರ್ಯಾಯ ನೀತಿಗಳಿಗಾಗಿ ರೈತರ, ಕಾರ್ಮಿಕರ, ಕೂಲಿಕಾರರ, ದಲಿತರ, ಮಹಿಳೆಯರ,
ಅಲ್ಪಸಂಖ್ಯಾತರ, ಆದಿವಾಸಿಗಳ ರಕ್ಷಣೆಗೆ ತನ್ನ ಇಚ್ಚಾಶಕ್ತಿ ಪ್ರದರ್ಶಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಡಿ. 23 ರಂದು ಬೆಂಗಳೂರಿನಲ್ಲಿ ರೈತ ಸಮಾವೇಶ: ರೈತರ ಸಂಪೂರ್ಣ ಸಾಲ ಮನ್ನಾ ಘೋಷಣೆಗೆ ಆಗ್ರಹ
ಪತ್ರಿಕಾ ಗೋಷ್ಠಿಯಲ್ಲಿ ಎಐಕೆಕೆಎಂಎಸ್. ಕ.ಪ್ರಾ.ರೈ.ಸಂಘ ಕ.ಪ್ರಾ.ಕೃ.ಕು.ಸಂ, ಎಐಟಿಯುಸಿ ಸಂಘಟನೆಗಳ ಪ್ರಮುಖರಾದ ಶರಣಗೌಡ ಗೂಗಲ್ , ಚನ್ನಪ್ಪ ಆನೆಗುಂದಿ, ದಾವಲಸಾಬ್ ನದಾಫ್, ದೇವಿಂದ್ರಪ್ಪ ಪತ್ತಾರ್ ಇದ್ದರು.