ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯೆಲ್ ಅವರನ್ನು ನೇಮಕ ಮಾಡಲಾಗಿದೆ.
ನವೆಂಬರ್ 30ರಂದು ಹಾಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ರಜನೀಶ್ ಗೋಯಲ್ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯಾಗಿ ಸರ್ಕಾರ ನೇಮಕ ಮಾಡಿ, ನ.21ರಂದು ಸಂಜೆ ಅಧಿಕೃತ ಆದೇಶ ಹೊರಡಿಸಿದೆ.
ವಂದಿತಾ ಶರ್ಮಾ ಅವರ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಪ್ರಸ್ತುತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ ಇಲಾಖೆ)ಯಾಗಿರುವ ರಜನೀಶ್ ಗೋಯಲ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.
ಇವರ ಪತ್ನಿ ಶಾಲಿನಿ ರಜನೀಶ್ ಕೂಡ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಜನೀಶ್ ಗೋಯೆಲ್, 1986-ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ಡಿಸೆಂಬರ್ 1ರಂದು ನೂತನ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇತರ ಹಿರಿಯ ಐಎಎಸ್ ಅಧಿಕಾರಿಗಳಾದ ಅಜಯ್ ಸೇಠ್, ವಿ ಮಂಜುಳಾ ಮತ್ತು ರಾಕೇಶ್ ಸಿಂಗ್ ಅವರ ಹೆಸರುಗಳೂ ಕೂಡ ಮುಖ್ಯ ಕಾರ್ಯದರ್ಶಿ ಹುದ್ದೆಗಾಗಿ ಮುನ್ನೆಲೆಗೆ ಬಂದಿದ್ದವು. ಆದರೆ ಸರ್ಕಾರ ಗೋಯೆಲ್ ಅವರನ್ನೇ ನೇಮಕಗೊಳಿಸಿ, ಆದೇಶ ಹೊರಡಿಸಿದೆ. ಮುಂದಿನ ವರ್ಷ(2024) ಜುಲೈನಲ್ಲಿ ಗೋಯೆಲ್ ನಿವೃತ್ತಿ ಹೊಂದಲಿದ್ದಾರೆ.