ನಾರ್ವೆಯ ಪ್ರಮುಖ ಪತ್ರಿಕೆಯೊಂದು ಬುಧವಾರ ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿದೆ. ಅದರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾವಾಡಿಗನಂತೆ ಚಿತ್ರಿಸಲಾಗಿದ್ದು, ‘ಕುತಂತ್ರಿ’ ಎಂದು ಕರೆಯಲಾಗಿದೆ. ಈ ಕಾರ್ಟೂನ್ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಜೊತೆಗೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೆಲವು ಮಾಧ್ಯಮಗಳು ಭಾರತವನ್ನು ಚಿತ್ರಿಸುವ ಶೈಲಿಯ ಬಗ್ಗೆಯೂ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ನಾರ್ವೆಯ ದಿನಪತ್ರಿಕೆ ‘ಆಫ್ಟೆನ್‌ಪೋಸ್ಟನ್’ ಪ್ರಕಟಿಸಿರುವ ವ್ಯಂಗ್ಯಚಿತ್ರದಲ್ಲಿ, ಮೋದಿಯವರು ಹಾವಿನ ಆಕಾರದಲ್ಲಿರುವ ಇಂಧನ ಪಂಪ್‌ನ ಪೈಪ್ ಎದುರು ಪುಂಗಿ ಊದುತ್ತಿರುವಂತೆ ಚಿತ್ರಿಸಲಾಗಿದೆ. ಅಲ್ಲದೆ, ಆ ಚಿತ್ರವನ್ನು ‘ಒಬ್ಬ ಕುತಂತ್ರಿ ಮತ್ತು ಸ್ವಲ್ಪ ಕಿರಿಕಿರಿಯುಂಟುಮಾಡುವ ವ್ಯಕ್ತಿ’ ಎಂಬ ಶೀರ್ಷಿಕೆಯುಳ್ಳ ಲೇಖನದೊಂದಿಗೆ ಪ್ರಕಟಿಸಲಾಗಿದೆ.
ನಾರ್ವೆಯಲ್ಲಿ ಪ್ರಧಾನಿ ಮೋದಿಯವರ ಮಾಧ್ಯಮ ಸಂವಾದದ ಕುರಿತು ಚರ್ಚೆಗಳು ನಡೆಯುತ್ತಿವೆ. ಸೋಮವಾರ, ನಾರ್ವೆಯಲ್ಲಿ ನಡೆದ ಮೋದಿ ಮತ್ತು ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರು ಪತ್ರಿಕಾ ಬ್ರೀಫಿಂಗ್ ನಡೆಸಿದ್ದರು. ಆ ವೇಳೆ, ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಅವರು ಮೋದಿ ಅವರನ್ನು ಪ್ರಶ್ನಿಸಲು ಪ್ರಯತ್ನಿಸಿದ್ದರು. ಆದರೆ, ಮೋದಿ ಪ್ರತಿಕ್ರಿಯಿಸಿರಲಿಲ್ಲ. ಆ ಸಂಭಾಷಣೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆ ನಂತರ, ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಆದರೆ, ಅಲ್ಲಿಯೂ ಲಿಂಗ್ ಅವರ ಪ್ರಶ್ನೆಗಳಿಗೆ ಸಚಿವಾಲಯದ ಅಧಿಕಾರಿಗಳು ಸರಿಯಾಗಿ ಉತ್ತರಿಸಲಿಲ್ಲ ಎಂದು ಹೇಳಲಾಗಿದೆ.
ಇದೆಲ್ಲದರ ನಡುವೆಯೇ ಈ ವ್ಯಂಗ್ಯಚಿತ್ರ ಪ್ರಕಟವಾಗಿದೆ. ಆ ಕಾರ್ಟೂನ್‌ಗೆ ಭಾರತದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪತ್ರಿಕೆಯು ವಸಾಹತುಶಾಹಿ ಕಾಲದ ಹಳಸಲು ರೂಢಿಗತ ನಂಬಿಕೆಗಳನ್ನು ಅವಲಂಬಿಸಿದೆ ಮತ್ತು ಭಾರತದ ಕುರಿತು ವಿಕೃತ ಚಿತ್ರಣವನ್ನು ಪ್ರಸ್ತುತಪಡಿಸಿದೆ ಎಂದು ವಿಮರ್ಶಕರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ನಾರ್ವೆಯಲ್ಲಿ ಭಾರತಕ್ಕೆ ಮತ್ತೆ ಮುಜುಗರ; ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ಹೊರಬಂದ ಮೋದಿ
ಕೆಲವು ವಿಮರ್ಶಕರು ವ್ಯಂಗ್ಯಚಿತ್ರವನ್ನು ಜನಾಂಗೀಯ ದ್ವೇಷದ ಪ್ರದರ್ಶನ ಎಂದು ಬಣ್ಣಿಸಿದ್ದಾರೆ. ಭಾರತವನ್ನು ‘ಹಾವು ಮತ್ತು ಹಾವಾಡಿಗರ ನಾಡು’ ಎಂದು ಬಿಂಬಿಸುವ ಸುದೀರ್ಘ ವಸಾಹತುಶಾಹಿ ಕಾಲದ ರೂಢಿಗತ ಕಲ್ಪನೆಗಳ ಮುಂದುವರಿಕೆಯಾಗಿ ಈ ಕಾರ್ಟೂನ್ ರೂಪುಗೊಂಡಿದೆ ಎಂದು ಕಿಡಿಕಾರಿದ್ದಾರೆ.
ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ಐತಿಹಾಸಿಕವಾಗಿ ಭಾರತ ಮತ್ತು ಅದರ ಜನರನ್ನು ಗುರುತಿಸಲು ಹಾವಾಡಿಗನ ಚಿತ್ರವನ್ನು ಸಂಕೇತವಾಗಿ ಬಳಸುತ್ತಾ ಬಂದಿವೆ. ಈ ಹಿಂದೆ, 2022ರ ಅಕ್ಟೋಬರ್‌ನಲ್ಲಿ ಸ್ಪ್ಯಾನಿಷ್ ಪತ್ರಿಕೆ ‘ಲಾ ವಂಗಾರ್ಡಿಯಾ’ ಭಾರತದ ಆರ್ಥಿಕ ಬೆಳವಣಿಗೆಯನ್ನು ಚಿತ್ರಿಸುವಾಗ ಹಾವಾಡಿಗನ ರೇಖಾಚಿತ್ರವನ್ನು ಬಳಸಿತ್ತು ಮತ್ತು ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.
ಗಮನಾರ್ಹ ಸಂಗತಿ ಎಂದರೆ, ಪ್ರಸ್ತುತ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದರೆ, ಭಾರತವು 154 ರಿಂದ 157ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಈ ಇಡೀ ಚರ್ಚೆಯು ಜಾಗತಿಕ ಮಟ್ಟದಲ್ಲಿ ತೀವ್ರ ಗಮನ ಸೆಳೆದಿದೆ.



