ಈ ವರ್ಷ ಅಸ್ಸಾಂನಲ್ಲಿ ಉಂಟಾದ ಭೀಕರ ಪ್ರವಾಹವು ರಾಜ್ಯದ ಮೇಲ್ಭಾಗದ (ಅಪ್ಪರ್ ಅಸ್ಸಾಂ) ಜಿಲ್ಲೆಗಳ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದ್ದು, ಹಲವು ಗ್ರಾಮಗಳನ್ನು ಅಕ್ಷರಶಃ ನುಂಗಿಹಾಕಿದೆ. ನೂರಾರು ಮನೆಗಳು, ಸಾವಿರಾರು ಜಾನುವಾರುಗಳು, ಕೃಷಿಭೂಮಿ ಹಾಗೂ ಜನರ ಜೀವನೋಪಾಯ ಪ್ರವಾಹದ ಹೊಡೆತಕ್ಕೆ ಕೊಚ್ಚಿಹೋಗಿದ್ದು, ಸಂತ್ರಸ್ತರು ಬದುಕನ್ನೇ ಮರುನಿರ್ಮಿಸುವ ಸವಾಲಿನ ಎದುರು ನಿಂತಿದ್ದಾರೆ.
ಜುಲೈ 19ರಂದು ನಾಗಾ ಬೆಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯ ಪರಿಣಾಮವಾಗಿ ಡಿಖೌ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿದು, ಸಾಮಾನ್ಯವಾಗಿ ಪ್ರವಾಹದ ತೀವ್ರತೆಯನ್ನು ಕಾಣದ ಅಪ್ಪರ್ ಅಸ್ಸಾಂ ಜಿಲ್ಲೆಗಳಲ್ಲಿ ಅನಿರೀಕ್ಷಿತ ಅನಾಹುತ ಸೃಷ್ಟಿಸಿವೆ. ರಾಜ್ಯದಲ್ಲಿ ಈ ವರ್ಷದ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ.
ಪ್ರವಾಹದ ತೀವ್ರತೆ ಹೆಚ್ಚಿದ್ದ ವೇಳೆ 7 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ನೀರು ಇಳಿದ ಬಳಿಕವೂ ಸುಮಾರು 3 ಲಕ್ಷ ಜನರು ಇನ್ನೂ ಪ್ರವಾಹದ ಪರಿಣಾಮ ಎದುರಿಸುತ್ತಿದ್ದಾರೆ. 1.15 ಲಕ್ಷಕ್ಕೂ ಹೆಚ್ಚು ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರೆ, ಪ್ರಸ್ತುತ 16,556 ಮಂದಿ ಇನ್ನೂ ಶಿಬಿರಗಳಲ್ಲಿದ್ದಾರೆ.


ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದ ಕೇಂದ್ರದ ಅಂತರ-ಸಚಿವಾಲಯ ತಂಡದ (IMCT) ವರದಿ ಆಧರಿಸಿ, ಪರಿಹಾರ ಮತ್ತು ಪುನರ್ವಸತಿಗಾಗಿ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಕೋರಿದ್ದಾರೆ.
‘ಉಳಿದಿರುವುದು ಮೈಮೇಲಿನ ಬಟ್ಟೆ ಮಾತ್ರ’
ಪ್ರವಾಹದ ತೀವ್ರತೆಯ ಕುರಿತು ಸಂತ್ರಸ್ತರನ್ನೇ ಮಾತನಾಡಿಸುವ ಪ್ರಯತ್ನವನ್ನು TIE ಮಾಡಿದೆ. ಶಿವಸಾಗರ್ ಜಿಲ್ಲೆಯ ನಾಜಿರಾ ಬ್ಲಾಕ್ನ ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿರುವ ನೇಪಾಳಿಖುಟಿ ಗ್ರಾಮದಲ್ಲಿ ಪ್ರವಾಹದ ಪರಿಣಾಮ ಅತ್ಯಂತ ಭೀಕರವಾಗಿದೆ. ಡಿಖೌ ನದಿಯ ಪ್ರವಾಹಕ್ಕೆ ತಮ್ಮ ಮನೆ, ದಾಖಲೆಗಳು, ಪೀಠೋಪಕರಣಗಳು, ಬಟ್ಟೆಗಳು ಹಾಗೂ 15 ಜಾನುವಾರುಗಳನ್ನು ಕಳೆದುಕೊಂಡಿರುವ ಹರಿ ಶರ್ಮಾ, “ನನ್ನ ಬಳಿ ಈಗ ಉಳಿದಿರುವುದು ಮೈಮೇಲಿನ ಈ ಬಟ್ಟೆ ಮಾತ್ರ,” ಎಂದು ಕಣ್ಣೀರಿಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಗ್ರಾಮದಾದ್ಯಂತ ಒಂದೇ ಕ್ಷಣದಲ್ಲಿ ಸುಮಾರು 1,200ಕ್ಕೂ ಹೆಚ್ಚು ಹಸು-ಕರುಗಳು ಪ್ರವಾಹದ ನೀರಿಗೆ ಕೊಚ್ಚಿಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಮೇಲ್ಛಾವಣಿಯೂ ರಕ್ಷಿಸಲಿಲ್ಲ’
ಪ್ರವಾಹದ ಅಬ್ಬರದಿಂದ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸಮಯವೇ ಸಿಗಲಿಲ್ಲ. ಅನೇಕರು ಮನೆಗಳ ಮೇಲ್ಛಾವಣಿ ಏರಿದರೂ ನೀರಿನ ಮಟ್ಟ ಅಲ್ಲಿಯವರೆಗೂ ಏರಿತ್ತು. ಮಗನನ್ನು ರಕ್ಷಿಸಲು ಯತ್ನಿಸಿದ ಕೃಷ್ಣ ಕರ್ಮಾಕರ್ ಪ್ರವಾಹದ ನೀರಿಗೆ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.
ನೀರು ಇಳಿದ ಬಳಿಕ ಗ್ರಾಮದೆಲ್ಲೆಡೆ ದಟ್ಟ ಮಣ್ಣು, ಕೊಳೆತ ಜಾನುವಾರುಗಳ ದುರ್ವಾಸನೆ ಮತ್ತು ಅವಶೇಷಗಳೇ ಕಾಣಿಸುತ್ತಿವೆ. ರಸ್ತೆ ಹಾಗೂ ಮನೆಗಳು ಮಂದ ಕೆಸರಿನಿಂದ ಆವೃತವಾಗಿದ್ದು, ಹಲವರು ತಮ್ಮ ಮನೆಗಳಿಂದ ಕೆಸರನ್ನು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕನಸಿನ ಮನೆ ಮಣ್ಣಾಯಿತು
ಅನುಪಾಲ್ ಬರುವಾ ಕುಟುಂಬವು ಕೇವಲ ಒಂದು ತಿಂಗಳ ಹಿಂದೆ ಹೊಸ ಮನೆ ನಿರ್ಮಿಸಿತ್ತು. ಆದರೆ ಪ್ರವಾಹದ ನೀರು ಆ ಮನೆಯನ್ನೂ ನಾಶಪಡಿಸಿದೆ. ಮನೆಯೊಳಗೆ ಎರಡು ಅಡಿಗೂ ಹೆಚ್ಚು ಮಣ್ಣು ತುಂಬಿಕೊಂಡಿದ್ದು, ಗೋಡೆಯ ಮೇಲೆ ಸುಮಾರು ಆರೂವರೆ ಅಡಿ ಎತ್ತರದವರೆಗೆ ನೀರು ನಿಂತಿದ್ದ ಗುರುತು ಇನ್ನೂ ಕಾಣಿಸುತ್ತಿದೆ.

“ನಮ್ಮ ಹೊಸ ಮನೆ ಸಂಪೂರ್ಣ ಹಾಳಾಗಿದೆ. ಇಲ್ಲಿ ಪ್ರತಿಯೊಬ್ಬರ ದುಃಖದ ಕಥೆಯೂ ವಿಭಿನ್ನವಾಗಿದೆ,” ಎಂದು ಬರುವಾ ಅವರ ಪತ್ನಿ ಬಂಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರವಾಹದಿಂದ ಮೃತಪಟ್ಟವರ ಕುಟುಂಬಗಳಿಗೆ ಅಸ್ಸಾಂ ಸರ್ಕಾರ ₹9 ಲಕ್ಷ ಪರಿಹಾರ ಘೋಷಿಸಿದೆ. ಶಿವಸಾಗರ್, ಚರೈದೇವ್, ಜೋರ್ಹಾಟ್ ಮತ್ತು ಗೋಲಾಘಾಟ್ ಜಿಲ್ಲೆಗಳ ತೀವ್ರ ಹಾನಿಗೊಳಗಾದ ಕುಟುಂಬಗಳಿಗೆ ಮಧ್ಯಂತರವಾಗಿ ₹15 ಸಾವಿರ ನೆರವು ನೀಡಲಾಗುತ್ತಿದೆ.
ಇದೇ ವೇಳೆ, ಶಿವಸಾಗರ್ ಮತ್ತು ಚರೈದೇವ್ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಗಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ₹1,000, ಪದವಿ ವಿದ್ಯಾರ್ಥಿಗಳಿಗೆ ₹3,000 ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ₹5,000 ಆರ್ಥಿಕ ನೆರವು ಘೋಷಿಸಲಾಗಿದೆ.
ಇದನ್ನೂ ಓದಿ: ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: 4 ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
‘ಅಡುಗೆ ಪಾತ್ರೆಯೇ ಇಲ್ಲ, ರವೆ ಕೊಟ್ಟರೆ ಏನು ಪ್ರಯೋಜನ?’
ಪರಿಹಾರ ಸಾಮಗ್ರಿಗಳ ವಿತರಣೆ ಆರಂಭವಾಗಿದ್ದರೂ, ಸಂತ್ರಸ್ತರ ಮೂಲಭೂತ ಅಗತ್ಯಗಳು ಇನ್ನೂ ಈಡೇರಿಲ್ಲ. ಆಶಾ ದೇವಿ ಎಂಬ ಮಹಿಳೆ ಪರಿಹಾರ ಕಿಟ್ನಲ್ಲಿ ಸಿಕ್ಕಿದ್ದ ರವೆ, ಬಿಸ್ಕೆಟ್, ಓಆರ್ಎಸ್, ಸೊಳ್ಳೆ ಕಾಯಿಲ್ ಹಾಗೂ ಮೇಣದಬತ್ತಿಗಳನ್ನು ತೋರಿಸುತ್ತಾ, “ನನ್ನ ಬಳಿ ಅಡುಗೆ ಮಾಡಲು ಪಾತ್ರೆಯೂ ಇಲ್ಲ, ಒಲೆಯೂ ಇಲ್ಲ. ನನಗೆ ಬೇಕಾಗಿರುವುದು ಪ್ಲಾಸ್ಟಿಕ್ ಹೊದಿಕೆ (ಟಾರ್ಪಾಲಿನ್) ಮಾತ್ರ,” ಎಂದು ನೋವು ಹಂಚಿಕೊಂಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರುವುದರಿಂದ, ಈಗಾಗಲೇ ತತ್ತರಿಸಿರುವ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. “ಇಷ್ಟು ಭೀಕರ ಪ್ರವಾಹವನ್ನು ನಮ್ಮ ತಾತಂದಿರೂ ನೋಡಿರಲಿಲ್ಲ,” ಎಂದು ಸ್ಥಳೀಯರು ಹೇಳುತ್ತಿದ್ದಾರೆ.




