ಸಂಸತ್ತಿನ ಮಳೆಗಾಲದ ಅಧಿವೇಶನ ಇಂದು ಆರಂಭಗೊಂಡಿದ್ದು, ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆಯೂ ಭಾರತವು ಶೇ. 7.7ರ ಆರ್ಥಿಕ ವೃದ್ಧಿ ದರ ಕಾಯ್ದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆದರೆ, ದೇಶದಲ್ಲಿ ನೀಟ್ ಹಗರಣ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಾರ್ವಜನಿಕ ನಿಧಿಗಳ ದುರ್ಬಳಕೆಯಂತಹ ಗಂಭೀರ ಸಮಸ್ಯೆಗಳು ತಲೆಎತ್ತಿರುವ ಈ ಸಂದರ್ಭದಲ್ಲಿ, ಪ್ರಧಾನಿಯವರು ನೈಜ ಬಿಕ್ಕಟ್ಟುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಸ್ವಯಂ ಸಮರ್ಥನೆಗಿಳಿದಿದ್ದಾರೆ ಎಂದು ವಿಪಕ್ಷಗಳು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟು ಮತ್ತು ಜಾಗತಿಕ ಸವಾಲುಗಳ ನಡುವೆಯೂ ಭಾರತವು ಶೇ. 7.7ರಷ್ಟು ಬಲವಾದ ಜಿಡಿಪಿ ದರವನ್ನು ಕಾಯ್ದುಕೊಂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸಂಸತ್ ಅಧಿವೇಶನದ ಮೊದಲ ದಿನವಾದ ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, “ಜಗತ್ತಿನ ಹಲವು ಭಾಗಗಳಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಇಂಧನ ಅಗತ್ಯತೆಗಳಿಗಾಗಿ, ರಸಗೊಬ್ಬರ ಮತ್ತು ರಾಸಾಯನಿಕಗಳಿಗಾಗಿ ಇತರ ದೇಶಗಳನ್ನು ಅವಲಂಬಿಸಿರುವ ಭಾರತದಂತಹ ರಾಷ್ಟ್ರಗಳಿಗೆ ಮಧ್ಯಪ್ರಾಚ್ಯ ಬಿಕ್ಕಟ್ಟು ದೊಡ್ಡ ಸವಾಲನ್ನು ತಂದೊಡ್ಡಿದೆ. ಇಷ್ಟೆಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಭಾರತವು ಶೇ. 7.7ರ ಆರ್ಥಿಕ ವೃದ್ಧಿ ದರ (ಜಿಡಿಪಿ) ಕಾಯ್ದುಕೊಳ್ಳುವ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ” ಎಂದಿದ್ದಾರೆ.
ಸಂಸತ್ ಅಧಿವೇಶನವು ದೇಶಕ್ಕೆ ಹೊಸ ಚೈತನ್ಯ ನೀಡಲಿದೆ. ಸದನದಲ್ಲಿ ರಾಜಕೀಯ ಪಕ್ಷಗಳ ಭೇದಭಾವವಿಲ್ಲದೆ ಎಲ್ಲಾ ಹಿರಿಯ ಸಂಸದರ ಅನುಭವ ಮತ್ತು ಜ್ಞಾನದ ಅಗತ್ಯವಿದೆ. ಗದ್ದಲ-ಕೋಲಾಹಲಕ್ಕಿಂತ ಗಂಭೀರ ಚರ್ಚೆಗಳು, ಸತ್ಯಾಂಶಗಳು ಮತ್ತು ತಾರ್ಕಿಕ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು. ದೇಶದ ಯುವಕರು ಅಪಾರ ಆಕಾಂಕ್ಷೆಗಳನ್ನು ಹೊಂದಿದ್ದು, ರಾಷ್ಟ್ರದ ಪ್ರಗತಿಗಾಗಿ ರಚನಾತ್ಮಕ ಚರ್ಚೆಗಳು ಮತ್ತು ಪ್ರತಿಯೊಬ್ಬ ಸದಸ್ಯರಿಗೂ ಸದನದಲ್ಲಿ ಧ್ವನಿ ಎತ್ತುವ ಅವಕಾಶ ಸಿಗಬೇಕು ಎಂದಿದ್ದಾರೆ ಮೋದಿ.
ಆದರೆ, ಪ್ರಧಾನಮಂತ್ರಿಯವರ ಈ ಭಾಷಣ, ದೇಶದ ಜನತೆ ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳು ಮತ್ತು ಅದರ ಹಿಂದಿನ ವಾಸ್ತವವನ್ನು ಮರೆಮಾಚುವ ಯತ್ನವೇ ಆಗಿದೆ ಎನ್ನುವುದು ರಾಜಕೀಯ ವಿಶ್ಲೇಷಕರ, ದೇಶದ ಜನರ ಹಾಗೂ ವಿಪಕ್ಷಗಳ ಆರೋಪ.
ಮೋದಿಯವರು ಹೇಳುವಂತೆ ಆರ್ಥಿಕತೆ ವೇಗ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. ಖಾಸಗಿ ಹೂಡಿಕೆಗಳು ಕುಸಿದಿರುವುದು ಮತ್ತು ಯುವಕರಿಗೆ ಸೂಕ್ತ ಉದ್ಯೋಗ ಸಿಗದೆ ಹತಾಷರಾಗಿರುವುದು ಸಾಲು ಸಾಲು ಪ್ರತಿಭಟನೆಗಳಿಂದ ಸಾಬೀತಾಗುತ್ತಿದೆ. ಸಾಲದ್ದಕ್ಕೆ ಇರುವ ಉದ್ಯೋಗವನ್ನೂ ಕಳೆದುಕೊಂಡ ಕೋಟ್ಯಂತರ ನಿರುದ್ಯೋಗಿಗಳಿದ್ದಾರೆ. ಹಾಗಾದರೆ ಮೋದಿಯವರು ಹೇಳುತ್ತಿರುವ ಆರ್ಥಿಕ ಬೆಳವಣಿಗೆಯನ್ನ ಯಾವ ಮಾನದಂಡದಿಂದ ಅಳೆಯಲಾಗಿದೆ ಎಂದು ಪ್ರಶ್ನಿಸಲಾಗುತ್ತಿದೆ.
ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘NEET’ ನಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಕನಸುಗಳನ್ನು ಕಮರಿಸಿವೆ. ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಗಂಭೀರ ಹಗರಣದ ಕುರಿತು ಸ್ಪಷ್ಟ ಉತ್ತರ ನೀಡದೆ, ಜಾಗತಿಕ ಆರ್ಥಿಕ ವೃದ್ಧಿಯ ಬೆನ್ನು ತಟ್ಟಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಅಂtaರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದರೂ ಆ ಲಾಭವನ್ನು ಗ್ರಾಹಕರಿಗೆ ನೀಡದೆ ತೆರಿಗೆ ವಸೂಲಿ ಮಾಡುತ್ತಿರುವುದರಿಂದ ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ, ಜಿಡಿಪಿ dr ಮುಂದಿಟ್ಟುಕೊಂಡು ಜನರ ಕಷ್ಟಗಳನ್ನು ಮರೆಮಾಚುವ ಯತ್ನ ನಡೆಯುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಒಎನ್‌ಜಿಸಿ (ONGC) ನಂತಹ ಸಾರ್ವಜನಿಕ ವಲಯದ ಸಂಸ್ಥೆಗಳ CSR ನಿಧಿಯಿಂದ ನೂರಾರು ಕೋಟಿ ರೂ. ಹಣ ಆರ್‌ಎಸ್‌ಎಸ್ ನಂಟು ಹೊಂದಿರುವ ಸಂಸ್ಥೆಗಳಿಗೆ ಹರಿದುಬಂದಿರುವ ವರದಿಗಳು ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಕೇವಲ ಸಿಎಸ್‌ಆರ್ ನಿಧಿ ಮಾತ್ರವಲ್ಲದೆ, ಅಯೋಧ್ಯೆಯ ರಾಮ ಮಂದಿರ, ಬದರಿನಾಥ, ಕೇದಾರನಾಥ ದೇವಾಲಯಗಳ ದೇಣಿಗೆ ಲೂಟಿ ಆರೋಪ, ಕಾಣಿಕೆಗಳು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ರಾಜಕೀಯ ಹಾಗೂ ಸೈದ್ಧಾಂತಿಕ ಹಿತಾಸಕ್ತಿಗಳಿಗೆ ಬಳಸಿಕೊಳ್ಳಲಾಗುತ್ತಿರುವ ಆರೋಪದ ಬಗ್ಗೆ ಮೋದಿ ಸರ್ಕಾರ ತುಟಿ ಬಿಚ್ಚುತ್ತಿಲ್ಲ ಎಂಬ ಗಂಭೀರ ಆರೋಪಗಳಿವೆ.
ಇದರ ಜತೆಗೆ ಲೋಕಸಭೆ ಸ್ಥಾನಗಳನ್ನು ಹೆಚ್ಚಿಸುವ ‘ಕ್ಷೇತ್ರ ಮರುವಿಂಗಡಣಾ ಮಸೂದೆ’ಯನ್ನು ಸುಗಮವಾಗಿ ಅಂಗೀಕರಿಸಿಕೊಳ್ಳಲು ಕೇಂದ್ರ ಸರ್ಕಾರ ತನ್ನ ಸಂಪೂರ್ಣ ಗಮನ ಕೇಂದ್ರೀಕರಿಸಿದೆ.
ಸದ್ಯ ಅಧಿವೇಶನದಲ್ಲಿ ವಿಪಕ್ಷಗಳು ದೇಶದ ಆಂತರಿಕ ಸಮಸ್ಯೆಗಳನ್ನೇ ಪ್ರಮುಖ ಚರ್ಚೆಯ ವಿಷಯವಾಗಿಸಲು ಮುಂದಾಗಿವೆ. ಸರ್ಕಾರ ತನ್ನ ಅಜೆಂಡಾವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರೆ, ವಿಪಕ್ಷಗಳು ನಿರುದ್ಯೋಗ, ಶಿಕ್ಷಣ, ಬೆಲೆ ಏರಿಕೆ ಮತ್ತು ಆಡಳಿತ ವೈಫಲ್ಯಗಳ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗುವ ನಿರೀಕ್ಷೆಯಿದೆ. ಈ ಕಾರಣದಿಂದಾಗಿ ಈ ಬಾರಿಯ ಅಧಿವೇಶನ ಸರ್ಕಾರದ ಶಾಸನ ಕಾರ್ಯಗಳಿಗಿಂತಲೂ ರಾಜಕೀಯ ವಾಗ್ವಾದಗಳಿಗೆ ವೇದಿಕೆಯಾಗುವ ಸಾಧ್ಯತೆ ಹೆಚ್ಚಿದೆ.




