ಸರ್ಕಾರಿ ಸ್ವಾಮ್ಯದ ಬುಡಕಟ್ಟು ವಸತಿ ಶಾಲೆಯಲ್ಲಿ ಊಟ ಸೇವಿಸಿದ ಬಳಿಕ 5ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿ, 100ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಕಾಕ್ಬಂಧ ವಸತಿ ಶಾಲೆಯಲ್ಲಿ ನಡೆದಿದೆ.
ಭಾನುವಾರ ಬೆಳಿಗ್ಗೆ ಮಕ್ಕಳು ಅನ್ನ-ಮೊಸರು (ಪಖಾಲಾ ಭಾಟಾ- ಬೇಯಿಸಿದ ಅನ್ನವನ್ನು ನೀರು ಮತ್ತು ಮೊಸರಿನಲ್ಲಿ ಹಾಕಿಡುವ ಒಡಿಶಾದ ಜನಪ್ರಿಯ ಮತ್ತು ಸಾಂಪ್ರದಾಯಿಕ ಊಟ) ಆಲೂಗಡ್ಡೆ ಮತ್ತು ಮಾವಿನ ಚಟ್ನಿ ಸೇವಿಸಿದ್ದಾರೆ. ಅದಾದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆ ಪೈಕಿ 67 ಮಂದಿ ಸ್ಥಿತಿ ಗಂಭೀರವಾಗಿದ್ದು, ಬರಿಪಾದದಲ್ಲಿರುವ ಪಿಎಂಆರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಊಟದಲ್ಲಿ ಹಲ್ಲಿ: ವಸತಿ ಶಾಲೆಯ ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಮಯೂರ್ಭಂಜ್ ಜಿಲ್ಲಾಧಿಕಾರಿ ಹೇಮಾ ಕಾಂತ ಸೇ, “5ನೇ ತರಗತಿಯ ವಿದ್ಯಾರ್ಥಿನಿ ರೂಪಾಲಿ ಬೆಸ್ರಾ ಎಂಬ ಬಾಲಕಿ ಸೋಮವಾರ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ” ಎಂದು ತಿಳಿಸಿದ್ದಾರೆ.
“ಸದ್ಯ 66 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 41 ವಿದ್ಯಾರ್ಥಿಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೈದ್ಯಕೀಯ ತಂಡವನ್ನು ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಇನ್ನೊಂದು ತಂಡ ಶಾಲೆಯಲ್ಲಿದೆ. ಇನ್ನೂ ಕೆಲವು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಶಾಲೆಯ ಅಧಿಕೃತ ಊಟದ ಪಟ್ಟಿಯಲ್ಲಿ ಉಲ್ಲೇಖಿಸದ ಆಹಾರವನ್ನು ನೀಡಲಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ. ಘಟನೆಗೆ ಕಾರಣರಾದ ಶಿಕ್ಷಕರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೃತರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು ವಿದ್ಯಾರ್ಥಿನಿ ಮೃತಪಟ್ಟ ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ರಸಗೋವಿಂದ್ಪುರ-ಜಲೇಶ್ವರ ರಸ್ತೆಯನ್ನು ತಡೆದು ಪ್ರತಿಭಟಿಸಿದ್ದಾರೆ. ಸದ್ಯ ಶಾಲೆಯ ಮುಖ್ಯೋಪಾಧ್ಯಾಯ ಜಯಂತ್ ಕುಮಾರ್ ಪಾಣಿಗ್ರಾಹಿ ಅವರನ್ನು ಅಮಾನತುಗೊಳಿಸಲಾಗಿದೆ. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸರ್ಕಾರ 7 ಲಕ್ಷ ರೂ. ಪರಿಹಾರ ಘೋಷಿಸಿದೆ. ಒಡಿಶಾ ವಸತಿ ಮತ್ತು ನಗರಾಭಿವೃದ್ಧಿ ಕೃಷ್ಣ ಚಂದ್ರ ಮಹಾಪಾತ್ರ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಪೋಷಕರೊಂದಿಗೆ ಮಾತನಾಡಿದ್ದಾರೆ.




