ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ. ಆದರೆ ಅದು ಏನು ಹೇಳುತ್ತದೆಯೋ ಅದನ್ನು ಅನುಸರಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ದೆಹಲಿಯ ಸಂಸತ್ ಭವನದಿಂದ ವಿಜಯ್ ಚೌಕ್‌ವರೆಗಿನ ‘ತಿರಂಗಾ ನಡಿಗೆ’ ನಂತರ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ವಿರೋಧ ಪಕ್ಷದ ನಾಯಕರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
“ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕಾಗಿ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಡುತ್ತಿವೆ. ಬಜೆಟ್ ಅಧಿವೇಶನವನ್ನು ನಡೆಯದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ₹ 50 ಲಕ್ಷ ಕೋಟಿಯ ಬಜೆಟ್ ಅನ್ನು ಕೇವಲ 12 ನಿಮಿಷಗಳಲ್ಲಿ ಅಂಗೀಕರಿಸಲಾಗಿದೆ. ಆದರೆ ಬಿಜೆಪಿಯವರು ಯಾವಾಗಲೂ ವಿರೋಧ ಪಕ್ಷಗಳಿಗೆ ಯಾವುದೇ ಆಸಕ್ತಿಯಿಲ್ಲ ಎಂದು ಆರೋಪಿಸುತ್ತಾರೆ. ಅವರು ಸದನದಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ” ಎಂದು ಖರ್ಗೆ ಹೇಳಿದರು.
‘ಸರ್ಕಾರ ನಾವು ಬೇಡಿಕೆ ಇಟ್ಟಾಗಲೆಲ್ಲ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. 52 ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ. ಹಿಂದೆಂದೂ ಇಂತಹ ಘಟನೆ ನಡೆದಿಲ್ಲ. ಸರ್ಕಾರವು ಬಜೆಟ್ ಅಧಿವೇಶನವನ್ನು ನಿಲ್ಲಿಸಲು ಯೋಜನೆ ರೂಪಿಸಿದೆ. ಈ ಧೋರಣೆಯನ್ನು ನಾವು ಖಂಡಿಸುತ್ತೇವೆ. ಇದು ಹೀಗೇ ಮುಂದುವರಿದರೆ, ಪ್ರಜಾಪ್ರಭುತ್ವವು ಕೊನೆಗೊಂಡು ನಾವು ಸರ್ವಾಧಿಕಾರದತ್ತ ಸಾಗಲಿದ್ದೇವೆ’ ಎಂದು ಅವರು ಹೇಳಿದರು.
“ಮೋದಿ ನೇತೃತ್ವದ ಸರ್ಕಾರವು ಪ್ರಜಾಸತ್ತಾತ್ಮಕ ತತ್ವಗಳನ್ನು ಅನುಸರಿಸುತ್ತಿಲ್ಲ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಕಾರ್ಯಕಲಾಪಗಳಿಗೆ ಅಡ್ಡಿಪಡಿಸುತ್ತಿದೆ. ಉದ್ಯಮಿ ಗೌತಮ್ ಅದಾನಿ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಈ ಹಿನ್ನೆಲೆಯಲ್ಲಿ, ದೇಶದ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯತ್ನಿಸುತ್ತಿದೆ” ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರು ವಾಗ್ದಾಳಿ ನಡೆಸಿದ್ದಾರೆ.
ಪ್ರತಿಪಕ್ಷಗಳ ಒತ್ತಾಯ ಕೇಂದ್ರಕ್ಕೆ ಲೆಕ್ಕಕ್ಕಿಲ್ಲ
“ಅದಾನಿ ವಿಚಾರದ ಬಗ್ಗೆ ಚರ್ಚಿಸುವಂತೆ 18 ರಿಂದ 19 ವಿಪಕ್ಷಗಳು ಒತ್ತಾಯಿಸುತ್ತಿವೆ. ಅದಾನಿ ಅವರ ಸಂಪತ್ತು ಕೇವಲ 2 ರಿಂದ 2.5 ವರ್ಷಗಳ ಅವಧಿಯಲ್ಲಿ ₹ 12 ಲಕ್ಷ ಕೋಟಿಗೆ ಹೇಗೆ ತಲುಪಿತು” ಎಂದು ಖರ್ಗೆ ಪ್ರಶ್ನಿಸಿದರು
‘ಬಿಜೆಪಿಗೆ ಬಹುಮತವಿದೆ ಎಂದಾಗಲೂ ಜಂಟಿ ಸಂಸದೀಯ ಸಮಿತಿ ತನಿಖೆಗೆ ಏಕೆ ಭಯಪಡುತ್ತೀರಿ? ಅದಾನಿ ವಿಚಾರದಲ್ಲಿ ಜೆಪಿಸಿ ತನಿಖೆಗೆ ಆದೇಶಿಸಲು ಸರಕಾರ ಏಕೆ ಒಪ್ಪುತ್ತಿಲ್ಲ. ಸಂಸತ್ತಿನಲ್ಲಿ ಅದಾನಿ ವಿಷಯದ ಬಗ್ಗೆ ಸರ್ಕಾರ ಉತ್ತರಿಸಲಿಲ್ಲ. ಬದಲಿಗೆ ಇಂಗ್ಲೆಂಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾತನಾಡಿದ್ದಕ್ಕೆ ಕ್ಷಮೆ ಯಾಚಿಸಲು ಒತ್ತಾಯಿಸಿತು. ಈ ಮೂಲಕ ಗಮನವನ್ನು ಬೇರೆಡೆಗೆ ತಿರುಗಿಸಿತು” ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.