ಸಿವಿಲ್ ದಾವೆಗಳ ರಾಜೀ ಸಂಧಾನವು ಕಡ್ಡಾಯವಾಗಿ ಲಿಖಿತ ರೂಪದಲ್ಲಿರಬೇಕು ಮತ್ತು ಅದಕ್ಕೆ ಕಕ್ಷಿದಾರರು ಅಥವಾ ಅವರ ಅಧಿಕೃತ ಪ್ರತಿನಿಧಿಗಳು ಸಹಿ ಮಾಡಿರಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಕ್ಷಿದಾರರ ಸ್ಪಷ್ಟ ಅನುಮತಿಯಿಲ್ಲದೆ ಅವರ ಪರವಾಗಿ ವಕೀಲರು ರಾಜೀ ಸಂಧಾನಕ್ಕೆ ಸಹಿ ಹಾಕುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟಿಸ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಸಿಪಿಸಿ (CPC) ಆದೇಶ 23 ನಿಯಮ 3ರ ಅನ್ವಯ, ರಾಜೀ ಸಂಧಾನವು ಕಾನೂನುಬದ್ಧವಾಗಿದೆಯೇ ಮತ್ತು ಕಕ್ಷಿದಾರರು ಸ್ವಯಂಪ್ರೇರಣೆಯಿಂದ ಅದನ್ನು ಒಪ್ಪಿದ್ದಾರೆಯೇ ಎಂಬುದನ್ನು ನ್ಯಾಯಾಲಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಪೀಠವು ಸೂಚಿಸಿದೆ.
‘ಕೃಷ್ಣ ಕುಮಾರ್ ಓಜಾ ಮತ್ತು ಜಿತೇಂದ್ರ ಚೌಧರಿ’ ನಡುವಿನ 1989ರ ಆಸ್ತಿ ವಿಭಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. 1994ರಲ್ಲಿ ನಡೆದಿದ್ದ ರಾಜೀ ಸಂಧಾನದಲ್ಲಿ 5ನೇ ಪ್ರತಿವಾದಿ ಚತುರ್ಭುಜ್ ಚೌಧರಿ ಸಹಿ ಮಾಡಿರಲಿಲ್ಲ. ಬದಲಾಗಿ, ಕಕ್ಷಿದಾರರಿಂದ ಯಾವುದೇ ವಿಶೇಷ ವಕಾಲತ್ತು ಅಥವಾ ಸ್ಪಷ್ಟ ಅನುಮತಿ ಪಡೆಯದೆ ಅವರ ಪರ ವಕೀಲರು ಒಪ್ಪಂದಕ್ಕೆ ಸಹಿ ಮಾಡಿದ್ದರು. ಈ ಪ್ರಕ್ರಿಯೆ ಕಾನೂನುಬಾಹಿರ ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಹಿಂದಿನ ರಾಜೀ ತೀರ್ಪನ್ನು ಅಮಾನ್ಯಗೊಳಿಸಿದೆ.
ವಂಚನೆ ಆರೋಪವಿರುವ ಹಾಗೂ ಆಸ್ತಿಯಂತಹ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುವ ಪ್ರಕರಣಗಳಲ್ಲಿ, ಕೇವಲ ‘ವಿಳಂಬವಾಗಿದೆ’ (ಕಾಲಮಿತಿ ಕಾಯ್ದೆ) ಎಂಬ ಕಾರಣ ನೀಡಿ ಅಕ್ರಮ ಒಪ್ಪಂದಗಳನ್ನು ರಕ್ಷಿಸಲಾಗದು ಎಂದು ನ್ಯಾಯಾಲಯ ತಿಳಿಸಿದೆ.
ಸುಮಾರು 25 ವರ್ಷಗಳ ಸುದೀರ್ಘ ವಿಳಂಬದ ನಂತರ ಈ ರಾಜೀ ಒಪ್ಪಂದವನ್ನು ಪ್ರಶ್ನಿಸಲಾಗಿದ್ದರೂ, ವಾಸ್ತವಿಕ ಸತ್ಯಾಸತ್ಯತೆ ಮತ್ತು ಆಸ್ತಿ ಹಕ್ಕುಗಳ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ಮಾನ್ಯ ಮಾಡಿದೆ. ಕಕ್ಷಿದಾರರ ಹಕ್ಕುಗಳನ್ನು ನಿರ್ಧರಿಸುವಂತಹ ವಿಚಾರಗಳಲ್ಲಿ ವಕೀಲರು ತಮ್ಮ ಸ್ವಂತ ತೀರ್ಮಾನ ಕೈಗೊಳ್ಳುವಂತಿಲ್ಲ, ಕಕ್ಷಿದಾರರ ಸೂಚನೆಯನ್ನೇ ಪಾಲಿಸುವುದು ಕಡ್ಡಾಯ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.




