ಪ್ರಶ್ನೆಪತ್ರಿಕೆ ಸೋರಿಕೆ, ನೀಟ್ (NEET) ಪರೀಕ್ಷೆಯಲ್ಲಿನ ಅಕ್ರಮಗಳು ಮತ್ತು ದೇಶವ್ಯಾಪಿ ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳ ಹೋರಾಟವು “ಸಾಯುವ ಹಂತದಲ್ಲಿದ್ದ ಪ್ರಜಾಪ್ರಭುತ್ವಕ್ಕೆ ಆಮ್ಲಜನಕ ನೀಡಿದೆ” ಎಂದು ಅವರು ಹೇಳಿದ್ದು, ಜನರು ಮೋದಿ-ಶಾ ಆಡಳಿತದ ಭಯವನ್ನು ಮೀರಿ ಬೀದಿಗಿಳಿದಿದ್ದಾರೆ, ಈಗ ಭಯಪಡುವ ಸರದಿ ಅವರದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಮುಖವಾಣಿ ‘ಸಾಮ್ನಾ‘ ಕಾರ್ಯನಿರ್ವಾಹಕ ಸಂಪಾದಕ ಹಾಗೂ ಸಂಸದ ಸಂಜಯ್ ರಾವತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಠಾಕ್ರೆ, ಶಿಕ್ಷಣ ಕ್ಷೇತ್ರದಲ್ಲಿನ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆಗಳು ಆಡಳಿತ ಪಕ್ಷದಷ್ಟೇ ಅಲ್ಲ, ಪ್ರತಿಪಕ್ಷದ ವೈಫಲ್ಯವನ್ನೂ ಬಯಲಿಗೆಳೆದಿವೆ. ಈ ಪ್ರತಿಭಟನೆಗಳು ಸಾಯುವ ಹಂತದಲ್ಲಿದ್ದ ಪ್ರಜಾಪ್ರಭುತ್ವಕ್ಕೆ ಆಮ್ಲಜನಕ ನೀಡಿವೆ. ಜನರಿಗೆ ಜೈಲು ಅಥವಾ ಬಂದೂಕಿನ ಭಯವೇ ಇಲ್ಲದಿರುವುದು ಆಡಳಿತ ಪಕ್ಷಕ್ಕೆ ಅಪಾಯಕಾರಿ ಸಂಕೇತ. ಜನರು ಈಗ ಭಯವನ್ನು ಮೀರಿ ನಿಂತಿದ್ದಾರೆ. ಇದುವರೆಗೆ ಸರ್ಕಾರ ಜನರ ತಲೆಯ ಮೇಲೆ ಭಯದ ಬಂದೂಕು ಇಟ್ಟುಕೊಂಡಿತ್ತು. ಆದರೆ ಈಗ ಜೀವದ ಭಯವನ್ನೂ ಲೆಕ್ಕಿಸದೆ ಜನರು ಬೀದಿಗಿಳಿಯುತ್ತಿದ್ದಾರೆ” ಎಂದು ಹೇಳಿದರು.
ಅನ್ಯಾಯದ ವಿರುದ್ಧ ಜನರು ಒಗ್ಗೂಡುವುದೇ ನಿಜವಾದ ಶಕ್ತಿ. ಜನರೇ ವಿಷ್ಣುವಿನ ನಿಜವಾದ ಅವತಾರ. ಜನರು ಒಗ್ಗೂಡಿದಾಗ ಎಷ್ಟೇ ಪ್ರಬಲ ಸರ್ಕಾರವಾಗಿದ್ದರೂ ಅದನ್ನು ಎದುರಿಸಲು ಸಾಧ್ಯವಿಲ್ಲ. ರಾಷ್ಟ್ರವೆಂದರೆ ಕೇವಲ ಭೂಮಿ, ಬೆಟ್ಟ ಅಥವಾ ಕಲ್ಲುಗಳಲ್ಲ; ರಾಷ್ಟ್ರ ಎಂದರೆ ಅದರ ಜನರು. ಪ್ರಜಾಪ್ರಭುತ್ವದಲ್ಲಿ ಜನರು ಮತ ಹಾಕುವುದು ಮಾತ್ರವಲ್ಲ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕೂ ಹೊಂದಿದ್ದಾರೆ. ಸರ್ಕಾರ ಜನರ ಆಕ್ರೋಶವನ್ನು ನಿರ್ಲಕ್ಷಿಸದೆ, ಅವರು ಏಕೆ ಕೋಪಗೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ದೇಶದಲ್ಲಿ ರಾಜಕಾರಣಿಗಳ ಮೇಲಿನ ಜನರ ವಿಶ್ವಾಸ ಕುಸಿದಿದೆ ಎಂದು ಆರೋಪಿಸಿದ ಅವರು, “ಈ ಹೋರಾಟ ಆಡಳಿತ ಪಕ್ಷದಷ್ಟೇ ಅಲ್ಲ, ಪ್ರತಿಪಕ್ಷದ ವೈಫಲ್ಯವನ್ನೂ ತೋರಿಸುತ್ತದೆ. ಕೆಲ ಸಮಯದ ಹಿಂದೆಯೇ ನಾನು ಇದನ್ನು ಹೇಳಿದ್ದೆ. ದೇಶದ ಜನರು ರಾಜಕಾರಣಿಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಜನರಿಗೆ ಕೇಂದ್ರ ಸರ್ಕಾರ ಕೇವಲ ಆಶ್ವಾಸನೆಗಳನ್ನಷ್ಟೇ ತೋರಿಸಿದೆ. ವಾಸ್ತವದಲ್ಲಿ ಏನೂ ಸಿಕ್ಕಿಲ್ಲ. ಕಳೆದ 12 ವರ್ಷಗಳಲ್ಲಿ ಜನರಲ್ಲಿ ಮೂಡಿದ್ದ ಅಸಮಾಧಾನ ಮತ್ತು ವಂಚನೆಯ ಸ್ಫೋಟವೇ ಯುವಕರ ಈ ಪ್ರತಿಭಟನೆ. ಇದು ಕೇವಲ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸೀಮಿತವಾಗಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ನೀಟ್ ಮರುಪರೀಕ್ಷೆಯಲ್ಲೂ ಅಕ್ರಮ: ಹಾವೇರಿ ವಿದ್ಯಾರ್ಥಿನಿ ಬಿಂದುಶ್ರೀ ಒಎಂಆರ್ ಪ್ರತಿ ತಿರುಚಿದ್ಯಾರು?
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಂದ ವಿದ್ಯಾರ್ಥಿಗಳು ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದ ಅವರು, “ಯುವಕರು ಯಾರಿಂದಲೂ ಉಪಕಾರ ಕೇಳುತ್ತಿಲ್ಲ; ಅವರು ನ್ಯಾಯವನ್ನು ಮಾತ್ರ ಕೇಳುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮಾತ್ರ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ವಿಶ್ವಾಸ ಹೊಂದುವಂತೆ ಶಿಕ್ಷಣ ವ್ಯವಸ್ಥೆಯನ್ನು ಪುನರ್‌ನಿರ್ಮಿಸಬೇಕು,” ಎಂದು ಒತ್ತಾಯಿಸಿದರು.
ಇದೇ ವೇಳೆ, ವಿದ್ಯಾರ್ಥಿಗಳನ್ನು ‘ಜಿರಳೆಗಳುʼ ಎಂದು ಕರೆಯುವುದು ಅವರಿಗೆ ಮಾಡುವ ಅವಮಾನ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ, ಈ ಪ್ರತಿಭಟನೆಗಳಲ್ಲಿ ಆರ್‌ಎಸ್‌ಎಸ್‌ನ ಗೈರು ಹಾಜರಿಯನ್ನೂ ಅವರು ಪ್ರಶ್ನಿಸಿದ್ದಾರೆ.





