ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಚನಾ ಶರೀರ ವಿಭಾಗದ ವತಿಯಿಂದ ಬುಧವಾರ ಅಂತರ-ಮಹಾವಿದ್ಯಾಲಯ ದೇಹ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆರ್.ಕೆ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಬಿ.ಎನ್.ಎಂ ನಾಗೂರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹಾಗೂ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜು ಸೇರಿದಂತೆ ನಾಲ್ಕು ಮಹಾವಿದ್ಯಾಲಯಗಳ ಒಟ್ಟು 22 ತಂಡಗಳು ಭಾಗವಹಿಸಿದ್ದವು.
ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಆಯೋಜನಾ ಕಾರ್ಯದರ್ಶಿ ಡಾ. ಶಿವಕುಮಾರ ಯರಗಲ, ಡಾ. ರಫಿಯಾಬಾನು ತಾಳಿಕೋಟೆ ಹಾಗೂ ಸಹ-ಆಯೋಜನಾ ಕಾರ್ಯದರ್ಶಿ ಉಪಸ್ಥಿತರಿದ್ದರು.
ಬಿ.ಎಲ್.ಡಿ.ಇ ಡೀಮ್ಡ್ ಟುಬಿ ಯೂನಿವರ್ಸಿಟಿಯ ರಚನಾ ಶರೀರ ವಿಭಾಗದ ಡಾ. ಆರ್.ಎಸ್ ಬುಲಗೌಡ ಹಾಗೂ ಡಾ. ಖುರೇಷಿ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆರ್.ಎಸ್ ಬುಲಗೌಡ, ದೇಹದ ವಿವಿಧ ಅಂಗಾಂಗಗಳನ್ನು ಚಿತ್ರಿಸುವ ಮೂಲಕ ವಿದ್ಯಾರ್ಥಿಗಳ ರಚನಾ ಶರೀರಶಾಸ್ತ್ರದ ಜ್ಞಾನ, ಸೃಜನಶೀಲತೆ, ತಂಡದ ಕಾರ್ಯಕ್ಷಮತೆ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಮುಂದಿನ ಕಾರ್ಯಕ್ರಮದಲ್ಲಿ ಪ್ರಕಟಿಸಿ ವಿತರಿಸಲಾಗುವುದು ಎಂದು ಕಾಲೇಜಿನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




