ತಾಲಿಬಾನ್ ಆಡಳಿತಕ್ಕೆ 5 ವರ್ಷ: ನಿರೀಕ್ಷೆಗಳ ಧ್ವಂಸ, ಪ್ರತ್ಯೇಕತೆಯ ಕತ್ತಲಿನಲ್ಲಿ ಅಫ್ಘಾನಿಸ್ತಾನ

Date:

ತೆರಿಗೆ ಸಂಗ್ರಹ, ಗಡಿ ವ್ಯಾಪಾರ ಹಾಗೂ ಕೆಲವು ಮೂಲಸೌಕರ್ಯ ಯೋಜನೆಗಳಲ್ಲಿ ಆಡಳಿತದ ಹಿಡಿತ ಬಲವಾಗಿದೆ. ಆರ್ಥಿಕತೆಯಲ್ಲಿಯೂ ಆರಂಭದ ಭಾರೀ ಕುಸಿತದ ನಂತರ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಆದರೆ, ಅಫ್ಘಾನಿಸ್ತಾನದ ಅರ್ಧ ಜನಸಂಖ್ಯೆಯಾಗಿರುವ ಮಹಿಳೆಯರು ಮತ್ತು ಬಾಲಕಿಯರನ್ನು ಸಾರ್ವಜನಿಕ ಬದುಕಿನಿಂದ ವ್ಯವಸ್ಥಿತವಾಗಿ ಹೊರಗಟ್ಟಲಾಗಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ, ಉದ್ಯೋಗ, ಸಂಚಾರ, ರಾಜಕೀಯ ಪಾಲ್ಗೊಳ್ಳುವಿಕೆ, ಅಭಿವ್ಯಕ್ತಿ ಸೇರಿದಂತೆ ಒಂದೊಂದೇ ಬಾಗಿಲುಗಳನ್ನು ಮುಚ್ಚಲಾಗಿದೆ.

- Advertisement -

2021ರ ಆಗಸ್ಟ್ 15ರಂದು ತಾಲಿಬಾನ್ ಪಡೆಗಳು ಕಾಬೂಲ್ ಪ್ರವೇಶಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ, ಅಫ್ಘಾನಿಸ್ತಾನದ ಇಡೀ ಚಿತ್ರಣವೇ ಬದಲಾಯಿತು. ಆಡಳಿತವು ತಾಲಿಬಾನ್ ವಶವಾಗುತ್ತಿದ್ದಂತೆಯೇ ಅಂದಿನ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದರು. ಅಂದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗಳು ಕರಾಳ ಅಧ್ಯಾಯಕ್ಕೆ ಸಂಕೇತವಾಗಿದ್ದವು. ಹಾರುವ ವಿಮಾನದ ಚಕ್ರಗಳಿಗೆ ಅಂಟಿಕೊಂಡಾದರೂ ಸರಿ, ದೇಶ ಬಿಟ್ಟು ಓಡಿಹೋಗಲು ಯತ್ನಿಸಿದ ಜನರಿಂದ ಹಿಡಿದು, ಮನೆಗಳಲ್ಲಿ ತಮ್ಮ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸುಟ್ಟುಹಾಕಿದ ಮಹಿಳೆಯರವರೆಗೆ—ಪ್ರತಿಯೊಂದು ಘಟನೆಯೂ ತಾಲಿಬಾನ್ ಆಡಳಿತದ ಕುರಿತ ತೀವ್ರ ಆತಂಕವನ್ನು ಚಿತ್ರಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಮಾತ್ರವಲ್ಲ, ಕಳೆದ ಎರಡು ದಶಕಗಳಿಂದ ಅಮೆರಿಕ ಮತ್ತು ನ್ಯಾಟೋ ಪಡೆಗಳ ಹಸ್ತಕ್ಷೇಪದಿಂದ ಅಫ್ಘಾನ್ನಲ್ಲಿ ನೆಲೆಗೊಂಡಿದ್ದ ಪ್ರಜಾಪ್ರಭುತ್ವದ ಪ್ರಯೋಗಗಳು, ಮಹಿಳೆಯರ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕಂಡಿದ್ದ ಪ್ರಗತಿ, ರೂಪುಗೊಳ್ಳುತ್ತಿದ್ದ ಸ್ವತಂತ್ರ ಮಾಧ್ಯಮ ವಾತಾವರಣ ಹಾಗೂ ಮಧ್ಯಮ ವರ್ಗದ ಕನಸುಗಳು – ಎಲ್ಲವೂ ಕೆಲವೇ ಗಂಟೆಗಳಲ್ಲಿ ಕತ್ತಲಿಗೆ ಜಾರಿದವು.

ಈಗ, ತಾಲಿಬಾನ್‌ನ ಭೀಕರ ಆಡಳಿತವು ಐದು ವರ್ಷಗಳನ್ನು ಪೂರೈಸಿದೆ. ತಾಲಿಬಾನ್ ತನ್ನ ದ್ವಿತೀಯ ಹಂತದ ಆಡಳಿತವನ್ನು ಆರಂಭಿಸಿ ಬರೋಬ್ಬರಿ 1,826 ದಿನಗಳು ಕಳೆದಿವೆ. ಈ ಐದು ವರ್ಷಗಳಲ್ಲಿ ತಾಲಿಬಾನ್ ಬದಲಾಗಲಿದೆ ಮತ್ತು ನಾಗರಿಕರ ಹಕ್ಕುಗಳನ್ನು ಗೌರವಿಸಲಿದೆ ಎಂಬ ಆರಂಭಿಕ ನಿರೀಕ್ಷೆಗಳು ಸಂಪೂರ್ಣವಾಗಿ ಸುಳ್ಳಾಗಿವೆ. ಆದಾಗ್ಯೂ, ಹಲವು ವರ್ಷಗಳ ನಿರಂತರ ಯುದ್ಧದಿಂದ ಬಳಲಿದ್ದ ದೇಶದ ಕೆಲವು ಭಾಗಗಳಲ್ಲಿ ಭದ್ರತೆ ಸುಧಾರಿಸಿದೆ. ತೆರಿಗೆ ಸಂಗ್ರಹ, ಗಡಿ ವ್ಯಾಪಾರ ಹಾಗೂ ಕೆಲವು ಮೂಲಸೌಕರ್ಯ ಯೋಜನೆಗಳಲ್ಲಿ ಆಡಳಿತದ ಹಿಡಿತ ಬಲವಾಗಿದೆ. ಆರ್ಥಿಕತೆಯಲ್ಲಿಯೂ ಆರಂಭದ ಭಾರೀ ಕುಸಿತದ ನಂತರ ಸ್ವಲ್ಪ ಚೇತರಿಕೆ ಕಾಣುತ್ತಿದೆ.

ಆದರೆ, ಇದೇ ಅವಧಿಯಲ್ಲಿ ಅಫ್ಘಾನಿಸ್ತಾನದ ಅರ್ಧ ಜನಸಂಖ್ಯೆಯಾಗಿರುವ ಮಹಿಳೆಯರು ಮತ್ತು ಬಾಲಕಿಯರನ್ನು ಸಾರ್ವಜನಿಕ ಬದುಕಿನಿಂದ ವ್ಯವಸ್ಥಿತವಾಗಿ ಹೊರಗಟ್ಟಲಾಗಿದೆ. ಹೆಣ್ಣುಮಕ್ಕಳಿಗೆ ಶಿಕ್ಷಣ, ಉದ್ಯೋಗ, ಸಂಚಾರ, ರಾಜಕೀಯ ಪಾಲ್ಗೊಳ್ಳುವಿಕೆ, ಅಭಿವ್ಯಕ್ತಿ ಸೇರಿದಂತೆ ಒಂದೊಂದೇ ಬಾಗಿಲುಗಳನ್ನು ಮುಚ್ಚಲಾಗಿದೆ.

ಮಹಿಳೆಯರನ್ನು ಸಾರ್ವಜನಿಕ ಬದುಕಿನಿಂದ ಅಳಿಸುವ ವ್ಯವಸ್ಥೆ ಮತ್ತು ಲಿಂಗ ಆಧಾರಿತ ಭೇದ

ತಾಲಿಬಾನ್ ಆಡಳಿತದ ಐದು ವರ್ಷಗಳ ಅತ್ಯಂತ ಗಂಭೀರ ಮತ್ತು ಕರಾಳ ಪರಿಣಾಮ ಬಿದ್ದಿರುವುದು ಮಹಿಳೆಯರು ಮತ್ತು ಬಾಲಕಿಯರ ಬದುಕಿನ ಮೇಲೆ. 2021ರಿಂದ ಇಲ್ಲಿಯವರೆಗೆ ತಾಲಿಬಾನ್ ಸರ್ಕಾರವು ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು 160ಕ್ಕೂ ಹೆಚ್ಚು ನಿಷೇಧಾಜ್ಞೆಗಳನ್ನು ಹೊರಡಿಸಿದೆ.

2026ರ ಆರಂಭದ ಯುನೆಸ್ಕೊ ಮತ್ತು ಯುನಿಸೆಫ್ ದತ್ತಾಂಶದ ಪ್ರಕಾರ ಸುಮಾರು 22 ಲಕ್ಷ ಕಿಶೋರಿಯರು ಪ್ರೌಢಶಿಕ್ಷಣದಿಂದ ಹೊರಗಿದ್ದಾರೆ. ಅಫ್ಘಾನಿಸ್ತಾನ ಇಂದು ಬಾಲಕಿಯರು ಮತ್ತು ಮಹಿಳೆಯರಿಗೆ ಪ್ರೌಢ ಹಾಗೂ ಉನ್ನತ ಶಿಕ್ಷಣವನ್ನು ವ್ಯವಸ್ಥಿತವಾಗಿ ನಿಷೇಧಿಸಿರುವ ವಿಶ್ವದ ಏಕೈಕ ದೇಶವಾಗಿದೆ. ಸಾರ್ವಜನಿಕ ಉದ್ಯಾನವನಗಳು, ಜಿಮ್‌ಗಳು ಮತ್ತು ಸೌಂದರ್ಯ ವರ್ಧಕ ಕೇಂದ್ರಗಳಿಗೆ ಮಹಿಳೆಯರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಯಾಣ, ಉಡುಪು, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದು ಹಾಗೂ ತಮ್ಮ ಪುರುಷ ಸಂಬಂಧಿಗಳಿಲ್ಲದೆ ಹೊರ ಹೋಗುವುದು – ಎಲ್ಲ ವಿಚಾರಗಳಲ್ಲಿಯೂ ಮಹಿಳೆಯರ ಮೇಲೆ ನಿಯಂತ್ರಣ ಹೇರಲಾಗಿದೆ. ಪರಿಣಾಮವಾಗಿ, ಬಹುಸಂಖ್ಯಾತ ಮಹಿಳೆಯರು ಪುರುಷರ ಅನುಮತಿ ಇಲ್ಲದೆ, ಹೊರಹೋಗಲು ಸಾಧ್ಯವೇ ಆಗುತ್ತಿಲ್ಲ. ಮಾತ್ರವಲ್ಲ, ಸುಮಾರು 50%ರಷ್ಟು ಮಹಿಳೆಯರು ತಿಂಗಳಿಗೆ ಒಂದೆರಡು ಬಾರಿಯಷ್ಟೇ ಮನೆಯಿಂದ ಹೊರಬರುತ್ತಿದ್ದಾರೆ.

ಇದು ಕೇವಲ ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕಿನ ಪ್ರಶ್ನೆ ಒಂದೆಡೆಯಾದರೆ, ಮತ್ತೊಂದೆಡೆ ವೈದ್ಯರು, ಶಿಕ್ಷಕರು, ನರ್ಸ್‌ಗಳು, ವಿಜ್ಞಾನಿಗಳು, ಪತ್ರಕರ್ತರು, ಉದ್ಯಮಿಗಳು ಹಾಗೂ ಆಡಳಿತದಲ್ಲಿ ಮುಂಚೂಣಿಯಲ್ಲಿದ್ದ ಅರ್ಧ ಭಾಗವನ್ನೇ ಅಫ್ಘಾನ್‌ ನಾಲ್ಕು ಗೋಡೆಗಳ ನಡುವೆ ಕೂಡಿಹಾಕಿದೆ. ವಿಶೇಷವಾಗಿ ಮಹಿಳಾ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಕೊರತೆಯು ಈಗಾಗಲೇ ಮಹಿಳಾ ಆರೋಗ್ಯದ ಮೇಲೆ ವಿನಾಶಕಾರಿ ಪರಿಣಾಮ ಬೀರಲು ಆರಂಭಿಸಿದೆ. ಭವಿಷ್ಯದಲ್ಲಿ ಇದರ ಭೀಕರತೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ.

kabul 1

ಅನೇಕ ಸಂಪ್ರದಾಯಬದ್ಧ ಅಫ್ಘಾನ್ ಕುಟುಂಬಗಳಲ್ಲಿ ಪುರುಷ ವೈದ್ಯರನ್ನು ಮಹಿಳೆಯರು ಭೇಟಿಯಾಗುವುದು ಸಾಮಾಜಿಕವಾಗಿ ಸುಲಭವಲ್ಲ. ಆದರೆ, ಮಹಿಳೆಯರಿಗೆ ವೈದ್ಯಕೀಯ ಶಿಕ್ಷಣವೇ ಇಲ್ಲದಂತಾದರೆ ಮುಂದಿನ ದಶಕದಲ್ಲಿ ಮಹಿಳಾ ವೈದ್ಯರು ಎಲ್ಲಿಂದ ಬರಬೇಕು ಎನ್ನುವುದು ತಾಲಿಬಾನ್ ನೀತಿಯೊಳಗಿನ ಮೂಲಭೂತ ವಿರೋಧಾಭಾಸವಾಗಿದೆ.

ಯುಎನ್ ವುಮನ್ ಅಧ್ಯಯನಗಳು ಮಹಿಳೆಯರ ಸಾಮಾಜಿಕ ಪ್ರತ್ಯೇಕತೆ ತೀವ್ರವಾಗುತ್ತಿರುವುದನ್ನೂ ಸೂಚಿಸುತ್ತವೆ. ಶಿಕ್ಷಣವೂ ಇಲ್ಲ, ಉದ್ಯೋಗವೂ ಇಲ್ಲ, ಸ್ವತಂತ್ರವಾಗಿ ಹೊರಹೋಗುವ ಅವಕಾಶವೂ ಇಲ್ಲದ ಪರಿಸ್ಥಿತಿಯು ಮಹಿಳೆಯರಲ್ಲಿ ಆತಂಕ, ಖಿನ್ನತೆ ಹಾಗೂ ಭವಿಷ್ಯದ ಕುರಿತ ನಿರಾಶೆಯನ್ನು ಹೆಚ್ಚಿಸುತ್ತಿದೆ. ಮಾನಸಿಕ ಆರೋಗ್ಯದ ಈ ತೀವ್ರ ಬಿಕ್ಕಟ್ಟನ್ನು ಕಂಡ ತಜ್ಞರು ಈ ಪರಿಸ್ಥಿತಿಯನ್ನು ಲಿಂಗ ಆಧಾರಿತ ವರ್ಣಭೇದ ಮತ್ತು ಇಡೀ ದೇಶವೇ ಮಹಿಳೆಯರ ಪಾಲಿನ ಜೈಲು ಎಂದು ಬಣ್ಣಿಸಿದ್ದಾರೆ.

ಇದರ ಅತ್ಯಂತ ಅಪಾಯಕಾರಿ ಪರಿಣಾಮ ಮತ್ತೊಂದಿದೆ; ಹೊಸ ತಲೆಮಾರಿನ ಬಾಲಕಿಯರಿಗೆ ಸ್ವತಂತ್ರವಾಗಿ ಬದುಕುವ ಮಹಿಳೆಯರ ಮಾದರಿಗಳೇ ಕಾಣದಂತಾಗುತ್ತಿದೆ. ದೇಶದಲ್ಲಿ ಶಿಕ್ಷಕಿ ಇಲ್ಲ, ಮಹಿಳಾ ನ್ಯಾಯಾಧೀಶೆ ಇಲ್ಲ, ಮಹಿಳಾ ರಾಜಕಾರಣಿ ಇಲ್ಲ, ಟಿವಿಯಲ್ಲಿ ಮಹಿಳಾ ನಿರೂಪಕಿಯರ ಸಂಖ್ಯೆ ಕುಸಿಯುತ್ತಿದೆ ಹಾಗೂ ಕಚೇರಿಗಳಲ್ಲಿ ಮಹಿಳೆಯರು ಕಾಣುತ್ತಿಲ್ಲ. ಹೀಗೆ ಒಂದು ಪೀಳಿಗೆಯ ಸ್ಮೃತಿಯಿಂದಲೇ ಮಹಿಳೆಯ ಸಾರ್ವಜನಿಕ ಅಸ್ತಿತ್ವವನ್ನು ಅಳಿಸುವ ಕೆಲಸ ನಡೆಯುತ್ತಿದೆ.

ಯುದ್ಧ ಕಡಿಮೆಯಾಗಿದೆ; ಆದರೆ ಭಯ ಮಾಯವಾಗಿಲ್ಲ

ತಾಲಿಬಾನ್‌ಗಳು ತಮ್ಮ ಪ್ರಮುಖ ಸಾಧನೆಯಾಗಿ ಅಫ್ಘಾನ್‌ನಲ್ಲಿ ಭದ್ರತೆಯನ್ನು ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ತಾಲಿಬಾನ್ ಆಡಳಿತದಲ್ಲಿ ಯುದ್ಧ ಕಡಿಮೆಯಾಗಿರುವುದು ದಿಟ. 2001ರಿಂದ 2021ರವರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್, ಅಮೆರಿಕ-ನ್ಯಾಟೊ ಪಡೆಗಳು, ಅಫ್ಘಾನ್ ಸೇನೆ, ಸ್ಥಳೀಯ ಸಶಸ್ತ್ರ ಗುಂಪುಗಳು ಹಾಗೂ ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಅನೇಕ ಶಕ್ತಿಗಳ ನಡುವೆ ನಿರಂತರ ಯುದ್ಧ ನಡೆಯುತ್ತಿತ್ತು. ರಸ್ತೆ ಬಾಂಬ್‌ಗಳು, ವಾಯುದಾಳಿಗಳು, ಆತ್ಮಹತ್ಯಾದಾಳಿಗಳು ಹಾಗೂ ರಾತ್ರಿ ಸೇನಾ ಕಾರ್ಯಾಚರಣೆಗಳು ಗ್ರಾಮೀಣ ಜನಜೀವನವನ್ನು ನಾಶಮಾಡಿದ್ದವು.

ಆದರೆ, 2021ರ ನಂತರ ಯುದ್ಧಗಳು ಕಡಿಮೆಯಾಗಿವೆ. ಹಲವು ಗ್ರಾಮೀಣ ಪ್ರದೇಶಗಳಲ್ಲಿ ಜನರು ಈಗ ಹಿಂದೆ ಸಾಧ್ಯವಾಗದಷ್ಟು ಮುಕ್ತವಾಗಿ ರಸ್ತೆಯಲ್ಲಿ ಸಂಚರಿಸಬಹುದಾದ ವಾತಾವರಣ ಇದೆ.

image 167

ಆದರೆ, ಯುದ್ಧದ ಅಂತ್ಯವನ್ನು ಸಂಪೂರ್ಣ ಭದ್ರತೆ ಎಂದು ಕರೆಯಲಾಗುವುದಿಲ್ಲ. ಐಎಸ್ಐಎಸ್-ಖೋರಾಸಾನ್ ಇನ್ನೂ ಅಫ್ಘಾನಿಸ್ತಾನ ಮತ್ತು ಅದರಾಚೆಗೂ ದಾಳಿ ನಡೆಸುವ ಸಾಮರ್ಥ್ಯ ಮತ್ತು ಉದ್ದೇಶ ಹೊಂದಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಅಲ್ಪಸಂಖ್ಯಾತ ಶಿಯಾ ಹಜಾರಾಗಳು ಸೇರಿದಂತೆ ಕೆಲವು ಸಮುದಾಯಗಳು ಉಗ್ರ ದಾಳಿಗಳ ಅಪಾಯ ಎದುರಿಸುತ್ತಿವೆ. ತಾಲಿಬಾನ್ ವಿರೋಧಿ ಸಶಸ್ತ್ರ ಪ್ರತಿರೋಧವೂ ಕೆಲವು ಪ್ರದೇಶಗಳಲ್ಲಿ ಮುಂದುವರಿದಿದೆ.

ಇದಕ್ಕಿಂತ ಮುಖ್ಯವಾಗಿ, ಹಳೆಯ ಯುದ್ಧದ ಭಯದ ಜಾಗವನ್ನು ಈಗ ರಾಜ್ಯದ ಮೇಲ್ವಿಚಾರಣೆ ಮತ್ತು ಶಿಕ್ಷೆಯ ಭಯ ಆಕ್ರಮಿಸಿಕೊಂಡಿದೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಹಿಂದಿನ ಸರ್ಕಾರದ ನೌಕರರು ಹಾಗೂ ತಾಲಿಬಾನ್ ನೀತಿಗಳನ್ನು ಟೀಕಿಸುವವರು ಬಂಧನ ಅಥವಾ ಪ್ರತೀಕಾರದ ಭಯದಲ್ಲಿದ್ದಾರೆ. ಅಂತರರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಯಾದ ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್’, ತಾಲಿಬಾನ್‌ನ ನಿರ್ಬಂಧಗಳನ್ನು ಉಲ್ಲಂಘಿಸಿದವರನ್ನೂ ಮತ್ತು ಟೀಕಾಕಾರರನ್ನೂ ಅನಿಯಮಿತವಾಗಿ ಬಂಧಿಸುವ ಪ್ರಕರಣಗಳು ಹೆಗ್ಗಿಲ್ಲದೆ ನಡೆಯುತ್ತಿವೆ ಎಂಬುದನ್ನು ಬೆಟ್ಟು ಮಾಡಿದೆ.

ಹೀಗಾಗಿ ಅಫ್ಘಾನಿಸ್ತಾನದ ಪ್ರಶ್ನೆ ಈಗ ಗುಂಡು ಹೊಡೆಯಲಾಗುತ್ತಿದೆಯೇ ಎಂಬುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಮನುಷ್ಯನಿಗೆ ತನ್ನ ಅಭಿಪ್ರಾಯ ಹೇಳುವ ಹಕ್ಕಿದೆಯೇ ಮತ್ತು ತನ್ನ ಜೀವನವನ್ನು ತಾನೇ ಆಯ್ಕೆಮಾಡುವ ಅವಕಾಶವಿದೆಯೇ ಎಂಬುದೂ ಭದ್ರತೆಯ ಭಾಗವೇ ಆಗಿದೆ.

ಆರ್ಥಿಕತೆ ಕುಸಿದು ಚೇತರಿಕೆ ಕಾಣುತ್ತಿದೆ – ಆದರೆ, ಜನರ ಬದುಕು ಜರ್ಜರಿತವಾಗಿದೆ

2021ಕ್ಕಿಂತ ಮೊದಲು ಅಫ್ಘಾನಿಸ್ತಾನದ 75%ರಷ್ಟು ಸಾರ್ವಜನಿಕ ವೆಚ್ಚಗಳು ಅಂತಾರಾಷ್ಟ್ರೀಯ ನೆರವಿನಿಂದಲೇ ನಡೆಯುತ್ತಿದ್ದವು. ಆದರೆ, 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಕೂಡಲೇ ಜಾಗತಿಕ ಸಮುದಾಯವು ಆರ್ಥಿಕ ನೆರವನ್ನು ಕಡಿತಗೊಳಿಸಿತು. ಅಭಿವೃದ್ಧಿ ನೆರವು ಬಹುತೇಕ ನಿಂತು ಹೋಯತು, ಅಂತರರಾಷ್ಟ್ರೀಯ ಬ್ಯಾಂಕಿಂಗ್ ಸಂಪರ್ಕಗಳು ಕಡಿತಗೊಂಡವು. ಅಫ್ಘಾನ್ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿತು.

ಅಮೆರಿಕದ ಬ್ಯಾಂಕುಗಳಲ್ಲಿದ್ದ ಅಫ್ಘಾನಿಸ್ತಾನದ ಕೇಂದ್ರೀಯ ಬ್ಯಾಂಕ್‌ನ ಸುಮಾರು 7 ಬಿಲಿಯನ್ ಡಾಲರ್, ಅಂದರೆ ಅಂದಾಜು 58,000 ಕೋಟಿ ರೂಪಾಯಿ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಅಮೆರಿಕ ಸರ್ಕಾರ ತಡೆಹಿಡಿದಿದೆ. ಇದರಲ್ಲಿ 3.5 ಬಿಲಿಯನ್ ಡಾಲರ್ ನಿಧಿಯನ್ನು ಸ್ವಿಟ್ಜರ್‌ಲ್ಯಾಂಡ್‌ ಮೂಲದ ಅಫ್ಘಾನ್ ಫಂಡ್‌ಗೆ ವರ್ಗಾಯಿಸಲಾಗಿದ್ದು, ತಾಲಿಬಾನ್‌ಗೆ ಇದರ ಮೇಲಿನ ಸಂಪೂರ್ಣ ನಿಯಂತ್ರಣವನ್ನು ನಿರಾಕರಿಸಲಾಗಿದೆ.

ತಾಲಿಬಾನ್ ಆಡಳಿತದ 5ನೇ ವರ್ಷದಲ್ಲಿ ಆಫ್ಘಾನ್‌ ಆರ್ಥಿಕತೆಯ ಚಿತ್ರಣ ಸ್ವಲ್ಪ ಬದಲಾಗಿದೆ. ತಾಲಿಬಾನ್ ಸರ್ಕಾರ ಕಸ್ಟಮ್ಸ್ ಮತ್ತು ತೆರಿಗೆ ಸಂಗ್ರಹವನ್ನು ಬಲಪಡಿಸಿದೆ. ಗಡಿಭಾಗದ ಕೆಲವು ಭ್ರಷ್ಟ ವ್ಯವಸ್ಥೆಗಳನ್ನು ಕಡಿತಗೊಳಿಸಿದ್ದಾಗಿ ವ್ಯಾಪಾರಿಗಳು ಹೇಳುತ್ತಾರೆ. 2025ರಲ್ಲಿ ಆರ್ಥಿಕ ಚಟುವಟಿಕೆ ಸುಮಾರು 4.8%ರಷ್ಟು ಏರಿಕೆ ಕಂಡಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಅಂತೆಯೇ, 2026ರ ಮೇ ತಿಂಗಳಲ್ಲಿ ದೇಶೀಯ ಆದಾಯ ಸಂಗ್ರಹ 22 ಬಿಲಿಯನ್‌ಗೆ ಏರಿಕೆ ಕಂಡಿದೆ.

ಅಲ್ಲದೆ, ಪ್ರಾಕೃತಿಕ ಸಂಪನ್ಮೂಲಗಳ ಗಣಿಗಾರಿಕೆಯನ್ನು ಚೀನಾ ಸೇರಿದಂತೆ ಕೆಲವು ವಿದೇಶಿ ಕಂಪನಿಗಳಿಗೆ ಗುತ್ತಿಗೆ ನೀಡುವ ಮೂಲಕ ದೇಶದ ಕರೆನ್ಸಿ ಮೌಲ್ಯವನ್ನು ಸ್ಥಿರಗೊಳಿಸುವಲ್ಲಿ ತಾಲಿಬಾನ್ ಯಶಸ್ವಿಯಾಗಿದೆ.

ಆದರೆ, ಇಲ್ಲಿ ದೊಡ್ಡ ವೈರುಧ್ಯವೂ ಇದೆ. ದೇಶಕ್ಕೆ ಲಕ್ಷಾಂತರ ನಿರಾಶ್ರಿತರು ಹಿಂದಿರುಗಿರುವುದರಿಂದ ಜನಸಂಖ್ಯೆ ಆರ್ಥಿಕತೆಗಿಂತ ವೇಗವಾಗಿ ಬೆಳೆದಿದೆ. ವಿಶ್ವಬ್ಯಾಂಕ್ ಅಂದಾಜಿನ ಪ್ರಕಾರ 2025ರಲ್ಲಿ ತಲಾ ಜಿಡಿಪಿ ಸುಮಾರು 5.6% ಕುಸಿದಿದೆ. ಉದ್ಯೋಗ ಸೃಷ್ಟಿಯೂ ಜನಸಂಖ್ಯೆಗೆ ತಕ್ಕಂತೆ ಇಲ್ಲ. ಬ್ಯಾಂಕಿಂಗ್ ವ್ಯವಸ್ಥೆಯೂ ದುರ್ಬಲವಾಗಿದೆ. ವಿದೇಶಿ ಹೂಡಿಕೆದಾರರು ನಿರ್ಬಂಧಗಳು ಮತ್ತು ಕಾನೂನು ಅನಿಶ್ಚಿತತೆಯಿಂದಾಗಿ ಹೂಡಿಕೆಗೆ ಮುಂದಾಗುತ್ತಿಲ್ಲ. ಮಹಿಳೆಯರನ್ನು ದೊಡ್ಡ ಪ್ರಮಾಣದಲ್ಲಿ ಕೆಲಸದಿಂದ ಹೊರಗಿಟ್ಟಿರುವುದು ಮತ್ತೊಂದು ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ.

ಮಾನವೀಯ ಬಿಕ್ಕಟ್ಟು – 2.19 ಕೋಟಿ ಜನರಿಗೆ ನೆರವಿನ ಅಗತ್ಯ

ಅಫ್ಘಾನ್‌ನ ಆರ್ಥಿಕ ಬೆಳವಣಿಗೆಯನ್ನು ಅಂಕಿ-ಅಂಶಗಳು ಸೂಚಿಸುತ್ತಿದ್ದರೂ, ಮಾನವೀಯ ಸಂಕಷ್ಟವನ್ನು ಕಡೆಗಣಿಸಲು ಸಾಧ್ಯವಿಲ್ಲ. 2026ರಲ್ಲಿ ಸುಮಾರು 2.19 ಕೋಟಿ ಜನರು (ದೇಶದ 45% ಮಂದಿ) ಮಾನವೀಯ ಮತ್ತು ಆಹಾರ ನೆರವಿನ ಅಗತ್ಯದಲ್ಲಿದ್ದಾರೆ. ಇವರಲ್ಲಿ, 1.07 ಕೋಟಿ ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ವಿಶ್ವಸಂಸ್ಥೆಯ OCHA ಅಂದಾಜಿಸಿದೆ. ದೇಶದ 65%ರಷ್ಟು ಮಹಿಳೆಯರು ಮತ್ತು 55%ರಷ್ಟು ಪುರುಷರು ತಮ್ಮ ಜೀವನಮಟ್ಟ 2021ಕ್ಕಿಂತ ತೀವ್ರವಾಗಿ ಹದಗೆಟ್ಟಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಬಡ ಕುಟುಂಬಗಳು ದಿನನಿತ್ಯದ ಊಟಕ್ಕೆ ಏನು ಮಾಡಬೇಕು ಎಂಬ ಚಿಂತೆಯಲ್ಲಿವೆ.

ಆಹಾರ ಅಭದ್ರತೆ, ಬರ, ಪ್ರವಾಹ, ಭೂಕಂಪ, ಉದ್ಯೋಗ ಕೊರತೆ, ಆರೋಗ್ಯ ಸೇವೆಗಳ ದುರ್ಬಲತೆ ಹಾಗೂ ವಿದೇಶಿ ನೆರವಿನ ಕಡಿತ ಒಂದರ ಮೇಲೊಂದರಂತೆ ಹೊಡೆತ ಬೀಳುತ್ತಿವೆ. ಪರಿಸ್ಥಿತಿಯನ್ನು ತೀವ್ರಗೊಳಿಸುತ್ತಿವೆ. 2026ರ ಮೇ ಅಂತ್ಯದ ವೇಳೆಗೆ ವಿಶ್ವಸಂಸ್ಥೆಯ 1.71 ಬಿಲಿಯನ್ ಡಾಲರ್ ಮಾನವೀಯ ನೆರವು ಯೋಜನೆಗೆ ಕೇವಲ 269 ಮಿಲಿಯನ್ ಡಾಲರ್ ಮಾತ್ರ ಲಭ್ಯವಾಗಿತ್ತು.

ನಿರಾಶ್ರಿತರ ಬಿಕ್ಕಟ್ಟು ಮತ್ತು ಲಕ್ಷಾಂತರ ಜನರ ವಾಪಸಾತಿ

2025-26ರಲ್ಲಿ ನಿರಾಶ್ರಿತರ ಬೃಹತ್ ವಾಪಸಾತಿಯು ಅಫ್ಘಾನಿಸ್ತಾನದ ಸಂಕಷ್ಟಕ್ಕೆ ಮತ್ತೊಂದು ಕಾರಣವಾಗಿದೆ. ಪಾಕಿಸ್ತಾನ ಮತ್ತು ಇರಾನ್ ದಶಕಗಳಿಂದ ಲಕ್ಷಾಂತರ ಅಫ್ಘಾನರಿಗೆ ಆಶ್ರಯ ನೀಡಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳು ದೊಡ್ಡ ಪ್ರಮಾಣದಲ್ಲಿ ಅಫ್ಘಾನರನ್ನು ಬಲವಂತವಾಗಿ ವಾಪಸ್‌ ಕಳಿಸುತ್ತಿವೆ. 2026ರ ಆಗಸ್ಟ್ 1ರವರೆಗೆ 10.8ಲಕ್ಷಕ್ಕೂ ಹೆಚ್ಚು ಜನರು ಅಫ್ಘಾನಿಸ್ತಾನಕ್ಕೆ ಹಿಂದಿರುಗಿದ್ದಾರೆ. ಅವರಲ್ಲಿ ಸುಮಾರು 4.13 ಲಕ್ಷ ಜನರನ್ನು ನೇರವಾಗಿ ಗಡೀಪಾರು ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ನಿರಾಶ್ರಿತರಾಗಿದ್ದಾರೆ. ಪರಿಣಾಮ, ನಗರಗಳ ಬಾಡಿಗೆ, ಉದ್ಯೋಗ ಮಾರುಕಟ್ಟೆ, ಆರೋಗ್ಯ ವ್ಯವಸ್ಥೆ ಹಾಗೂ ಆಹಾರ ಪೂರೈಕೆಯ ಮೇಲೆ ವಿಪರೀತ ಒತ್ತಡ ಹೆಚ್ಚುತ್ತಿದೆ.

ಮತ್ತೊಂದೆಡೆ ಬ್ರಿಟನ್, ಕೆನಡಾ, ಅಮೆರಿಕ ಹಾಗೂ ಯುರೋಪ್ ಒಕ್ಕೂಟದ ದೇಶಗಳಿಗೆ ತೆರಳಿರುವ ಅಫ್ಘಾನ್ ನಿರಾಶ್ರಿತರು, ವಿಶೇಷವಾಗಿ ಹಿಂದೆ ಪಾಶ್ಚಿಮಾತ್ಯ ಪಡೆಗಳಿಗೆ ಭಾಷಾಂತರಕಾರರಾಗಿ ಮತ್ತು ಸರ್ಕಾರಿ ನೌಕರರಾಗಿ ಕೆಲಸ ಮಾಡಿದವರು ತೀವ್ರ ಸ್ವರೂಪದ ಮಾನಸಿಕ ಆಘಾತ (PTSD), ನಿರುದ್ಯೋಗ ಹಾಗೂ ಭಾಷಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೇವಲ ಜೀವ ಉಳಿಸಿಕೊಳ್ಳಲು ಸ್ವದೇಶ, ಸ್ವಂತ ಬಿಸಿನೆಸ್, ವೃತ್ತಿ ಹಾಗೂ ಶೈಕ್ಷಣಿಕ ಅರ್ಹತೆಗಳನ್ನು ತೊರೆದು ಹೊಸ ದೇಶಗಳಲ್ಲಿ ಹೊಲಿಗೆ, ಕ್ಲೀನಿಂಗ್ ಅಥವಾ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಇದೇ ವೇಳೆ ಜರ್ಮನಿಯಂತಹ ಯುರೋಪ್ ದೇಶಗಳು ಅಕ್ರಮವಾಗಿ ನೆಲೆಸಿರುವ ಅಫ್ಘಾನ್ ನಾಗರಿಕರನ್ನು ಮತ್ತೆ ಅಫ್ಘಾನಿಸ್ತಾನಕ್ಕೇ ಗಡೀಪಾರು ಮಾಡಲು ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿರುವುದು ನಿರಾಶ್ರಿತರಲ್ಲಿ ಆತಂಕ ಮೂಡಿಸಿದೆ.

ಮಾಧ್ಯಮ ಸ್ವಾತಂತ್ರ್ಯದ ಹತೋಟಿ ಮತ್ತು ಮೌನ

2001-2021ರ ಅಫ್ಘಾನಿಸ್ತಾನದ ಕೆಲವೇ ದೊಡ್ಡ ಸಾಧನೆಗಳಲ್ಲಿ ಸ್ವತಂತ್ರ ಮಾಧ್ಯಮ ಕ್ಷೇತ್ರವೂ ಒಂದಾಗಿತ್ತು. ನೂರಾರು ರೇಡಿಯೊ ಕೇಂದ್ರಗಳು, ಸುದ್ದಿವಾಹಿನಿಗಳು, ಪತ್ರಿಕೆಗಳು ಹುಟ್ಟಿಕೊಂಡಿದ್ದವು. ಮಹಿಳೆಯರು ಹಲವು ಪತ್ರಿಕೆಗಳಲ್ಲಿ ವರದಿಗಾರರು, ನಿರೂಪಕರು ಹಾಗೂ ಸಂಪಾದಕರು ಆಗಿದ್ದರು.

ಆದರೆ, 2021ರ ನಂತರ ಆ ವಾತಾವರಣ ಬಹಳ ಬದಲಾಗಿದೆ. ಆರ್ಥಿಕ ಸಂಕಷ್ಟದಿಂದ ಅನೇಕ ಮಾಧ್ಯಮ ಸಂಸ್ಥೆಗಳು ಮುಚ್ಚಿವೆ. ಮಹಿಳಾ ಪತ್ರಕರ್ತೆಯರಿಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಅವರ ಕೆಲಸದ ಅವಕಾಶ ಕಸಿದುಕೊಳ್ಳಲಾಗಿದೆ. ಕೆಲವು ವಿಷಯಗಳನ್ನು ವರದಿ ಮಾಡುವುದರ ಮೇಲೆ ನಿರ್ಬಂಧಗಳು ಹೆಚ್ಚಿವೆ. ಪತ್ರಕರ್ತರ ಅನಿಯಮಿತ ಬಂಧನ, ಕಿರುಕುಳ ಹಾಗೂ ವಿಚಾರಣೆಗಳು ಸ್ವಯಂ-ಸೆನ್ಸಾರ್‌ಗೆ ಕಾರಣವಾಗಿವೆ. ಇದರ ಪರಿಣಾಮ ಸುದ್ದಿಗಾರರು ವರದಿ ಮಾಡುವ ಮುನ್ನ ಇದು ಸತ್ಯವೇ ಎಂದು ಮಾತ್ರ ಕೇಳುವುದಿಲ್ಲ, ಬದಲಿಗೆ ‘ಇದನ್ನು ಪ್ರಕಟಿಸಿದರೆ ನನಗೆ ಏನಾಗಬಹುದು’ ಎಂದು ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ.

ಇದೆಲ್ಲದರ ನಡುವೆ, ತಾಲಿಬಾನ್ ಸರ್ಕಾರವು ತನ್ನ ಅಧಿಕಾರಿಗಳು ಮತ್ತು ನೌಕರರು ಸ್ಮಾರ್ಟ್‌ಫೋನ್ ಬಳಸುವುದನ್ನು ನಿಷೇಧಿಸಿದೆ.

ತಾಲಿಬಾನ್‌ಗೆ ಜಗತ್ತಿನ ಮಾನ್ಯತೆ

ದೇಶದೊಳಗೆ ಮಾನವ ಹಕ್ಕುಗಳ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದ್ದರೂ ಹೊರಜಗತ್ತಿನಲ್ಲಿ ತಾಲಿಬಾನ್‌ನ ರಾಜತಾಂತ್ರಿಕ ಏಕಾಂಗಿತನ ನಿಧಾನವಾಗಿ ಅಳಿಯುತ್ತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ನಿಯಂತ್ರಿಸುತ್ತಿದೆ ಎಂಬ ವಾಸ್ತವವನ್ನು ಐದು ವರ್ಷಗಳ ನಂತರ ಅನೇಕ ರಾಷ್ಟ್ರಗಳು ಒಪ್ಪಿಕೊಳ್ಳಬೇಕಾಗಿದೆ.

ಈಗಾಗಲೇ, ತಾಲಿಬಾನ್ ನೇತೃತ್ವದ ‘ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ’ಕ್ಕೆ ರಷ್ಯಾ ಅಧಿಕೃತ ರಾಜತಾಂತ್ರಿಕ ಮಾನ್ಯತೆ ನೀಡಿದೆ. ಪಾಶ್ಚಿಮಾತ್ಯ ದೇಶಗಳು ಮಾನವ ಹಕ್ಕುಗಳ, ವಿಶೇಷವಾಗಿ ಮಹಿಳೆಯರ ಹಕ್ಕುಗಳ ಸುಧಾರಣೆಯಾಗದ ಹೊರತು ಮಾನ್ಯತೆ ನೀಡುವುದಿಲ್ಲ ಎಂದು ಖಡಕ್ಕಾಗಿ ಹೇಳಿವೆ.

ಆದರೆ ಚೀನಾ, ಭಾರತ, ಇರಾನ್, ಉಜ್ಬೇಕಿಸ್ತಾನ್, ತುರ್ಕಮೇನಿಸ್ತಾನ್, ಕತಾರ್, ಯುಎಇ, ಸೌದಿ ಅರೇಬಿಯಾ, ಟರ್ಕಿ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳು ವ್ಯಾಪಾರ, ಗಡಿ ಭದ್ರತೆ, ಉಗ್ರವಾದ ವಿರೋಧ, ಖನಿಜ ಸಂಪತ್ತು ಮತ್ತು ಸಂಪರ್ಕ ಯೋಜನೆಗಳ ಕಾರಣದಿಂದ ತಾಲಿಬಾನ್‌ ಜೊತೆ ಸಂಪರ್ಕ ಹೆಚ್ಚಿಸಿವೆ.

ಅಫ್ಘಾನಿಸ್ತಾನದ ಲಿಥಿಯಂ, ತಾಮ್ರ ಹಾಗೂ ಇತರ ಖನಿಜ ಸಂಪತ್ತು ಹೂಡಿಕೆದಾರರ ಗಮನ ಸೆಳೆಯುತ್ತದೆ. ಜೊತೆಗೆ, ಮಧ್ಯ ಏಷ್ಯಾದ ಹಲವು ರಾಷ್ಟ್ರಗಳಿಗೆ ಅರಬ್ಬೀ ಸಮುದ್ರಕ್ಕೆ ಸಂಪರ್ಕಿಸಲು ಅಫ್ಘಾನ್ ಆಧಾರವಾಗಿದೆ. ಅಂತೆಯೇ, ಭಾರತಕ್ಕೆ ಮಧ್ಯ ಏಷ್ಯಾದ ಪ್ರಮುಖ ರಾಷ್ಟ್ರಗಳೊಂದಿಗೆ ಸಂಪರ್ಕ ಬೆಳೆಸುವ ಆಸಕ್ತಿ ಹೊಂದಿದ್ದು, ಅಫ್ಘಾನ್‌ ಜೊತೆಗೂ ಸಂಬಂಧವನ್ನು ವಿಸ್ತರಿಸುತ್ತಿದೆ. ಭಾರತವು ಮಾನವೀಯ ನೆರವು ಹಾಗೂ ಪ್ರಾದೇಶಿಕ ಭದ್ರತೆ ಹೆಸರಿನಲ್ಲಿ ತಾಲಿಬಾನ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದೆ. ಮಾತ್ರವಲ್ಲ, ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ತಾಲಿಬಾನ್ ಮೇಲಿನ ಕೆಲವು ಪ್ರವಾಸ ನಿಷೇಧ ದಿಗ್ಬಂಧನಗಳನ್ನು ಮರುಪರಿಶೀಲಿಸುವಂತೆ ಭಾರತ ಒತ್ತಾಯಿಸಿದೆ.

ಹೀಗಾಗಿ ತಾಲಿಬಾನ್ ಜೊತೆ ಮಾತನಾಡಬಾರದು ಎಂಬ 2021ರ ಹಿಂದಿನ ನಿಲುವು ಕ್ರಮೇಣ ಕಡಿಮೆಯಾಗುತ್ತಿದೆ. ಮಾತನಾಡದೆ ಸಮಸ್ಯೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಹಂತಕ್ಕೆ ಬಂದಿದೆ. ಆದರೆ, ತಾಲಿಬಾನ್‌ ಜೊತೆಗೆ ಸಂಪರ್ಕ ಸಾಧಿಸುತ್ತಿರುವ ಯಾವುದೇ ರಾಷ್ಟ್ರವು ಅಲ್ಲಿನ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡದೇ ಇರುವುದು ಅಪಾಯಕಾರಿಯಾಗಿದೆ. ಆದ್ದರಿಂದಲೇ, ಇತ್ತೀಚೆಗಷ್ಟೇ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯಲ್ಲಿಯೂ ತಾಲಿಬಾನ್ ಜೊತೆಗಿನ ರಾಜತಾಂತ್ರಿಕ ಸಂಪರ್ಕಗಳು ಮಹಿಳೆಯರ ಹಕ್ಕು ಮತ್ತು ಗೌರವದ ಬೆಲೆ ತೆರುವಿಕೆಯೊಂದಿಗೆ ಆಗಬಾರದು ಎಂದು ಎಚ್ಚರಿಸಲಾಗಿತ್ತು.

ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ನೆರಳು

ತಾಲಿಬಾನ್ ಮಹಿಳೆಯರ ಮೇಲೆ ಹೇರಿರುವ ವ್ಯವಸ್ಥಿತ ನಿರ್ಬಂಧಗಳು ಕೇವಲ ರಾಜಕೀಯ ಟೀಕೆಯ ಮಟ್ಟದಲ್ಲೇ ಉಳಿದಿಲ್ಲ. 2025ರ ಜುಲೈ 8ರಂದು ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯವು (ICC) ಮಹಿಳೆಯರು ಮತ್ತು ಬಾಲಕಿಯರ ವಿರುದ್ಧ ಲಿಂಗ ಆಧಾರಿತ ಹಿಂಸೆಯನ್ನು ಮಾನವತೆಯ ವಿರುದ್ಧದ ಅಪರಾಧವೆಂದು ಹೇಳಿತು. ತಾಲಿಬಾನ್‌ನ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂದ್ಜಾದಾ ಮತ್ತು ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಕೀಂ ಹಕ್ಕಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸಿತು.

ಇದರಿಂದಲೂ ತಾಲಿಬಾನ್‌ನ ಯಾವುದೇ ನೀತಿಗಳಲ್ಲಿ ಬದಲಾವಣೆಗಳು ಕಂಡಿಲ್ಲ. ಆದರೆ, ಮಹಿಳೆಯರ ಮೇಲಿನ ಈ ವ್ಯವಸ್ಥಿತ ದಮನವನ್ನು ಜಗತ್ತು ಕೇವಲ ಸ್ಥಳೀಯ ಸಂಸ್ಕೃತಿ ಅಥವಾ ಧಾರ್ಮಿಕ ನೀತಿ ಎಂದು ಪರಿಗಣಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಐದು ವರ್ಷಗಳ ನಂತರ ಮೌನಕ್ಕೆ ಶರಣಾಗುತ್ತಿರುವ ಜಗತ್ತು

ತಾಲಿಬಾನ್‌ನ ಎರಡನೇ ಆಡಳಿತದಲ್ಲಿ ‘ಅಫ್ಘಾನಿಸ್ತಾನಕ್ಕೆ ಹಿಂದೆಗಿಂತ ಹೆಚ್ಚು ಆಡಳಿತಾತ್ಮಕ ಸ್ಥಿರತೆ ದೊರೆತಿದೆ. ಆದರೆ ಅದರ ಸಮಾಜವು ಹಿಂದೆಗಿಂತ ಕಡಿಮೆ ಸ್ವಾತಂತ್ರ್ಯವನ್ನು ಕಾಣುತ್ತಿದೆ’ ಎಂಬ ರೀತಿಯಲ್ಲಿದೆ.

ಅಫ್ಘಾನ್‌ ಮೇಲೆ ತಾಲಿಬಾನ್‌ ನಿಯಂತ್ರಣ ಬಲವಾಗಿದೆ. ತಕ್ಷಣ ಅದನ್ನು ಕೆಡವಬಲ್ಲ ರಾಜಕೀಯ ಅಥವಾ ಸೈನಿಕ ಪರ್ಯಾಯ ಕಾಣುತ್ತಿಲ್ಲ. ತೆರಿಗೆ ಸಂಗ್ರಹ ನಡೆಯುತ್ತಿದೆ, ವ್ಯಾಪಾರ ನಡೆಯುತ್ತಿದೆ, ಕೆಲವು ರಸ್ತೆಗಳು ಮತ್ತು ಕಾಲುವೆಗಳ ಕೆಲಸ ನಡೆಯುತ್ತಿದೆ ಹಾಗೂ ರಾಜತಾಂತ್ರಿಕ ಸಂಪರ್ಕವೂ ಹೆಚ್ಚುತ್ತಿದೆ.

ಆದರೆ, ಮಾನವ ಪರಿಸ್ಥಿತಿಗಳು ಗಂಭೀರವಾಗಿವೆ; ಒಬ್ಬ ಬಾಲಕಿಗೆ ಶಾಲೆಗೆ ಹೋಗಬಹುದೇ, ಒಬ್ಬ ಮಹಿಳೆಗೆ ತನ್ನ ಜೀವನವನ್ನು ತಾನೇ ನಿರ್ಧರಿಸಬಹುದೇ, ಒಬ್ಬ ಪತ್ರಕರ್ತನಿಗೆ ಅಧಿಕಾರವನ್ನು ಪ್ರಶ್ನಿಸಬಹುದೇ, ಒಬ್ಬ ಯುವಕನಿಗೆ ಗೌರವಯುತ ಉದ್ಯೋಗ ಸಿಗಬಹುದೇ, ಒಬ್ಬ ನಿರಾಶ್ರಿತನು ವಾಪಸ್ಸಾದಾಗ ಬದುಕು ಕಟ್ಟಿಕೊಳ್ಳಬಹುದೇ ಹಾಗೂ ಒಬ್ಬ ಅಲ್ಪಸಂಖ್ಯಾತ ನಾಗರಿಕನು ಭಯವಿಲ್ಲದೆ ಬದುಕಬಹುದೇ ಎನ್ನುವ ಈ ಪ್ರಶ್ನೆಗಳಿಗೆ ಅಲ್ಲಿ ಉತ್ತರಗಳೇ ಇಲ್ಲದಂತಾಗಿದೆ.

ಅಫ್ಘಾನಿಸ್ತಾನದ ದೊಡ್ಡ ದುರಂತವೆಂದರೆ; ಕಳೆದ ನಾಲ್ಕು ದಶಕಗಳಲ್ಲಿ ಅದರ ಜನರನ್ನು ವಿಭಿನ್ನ ಶಕ್ತಿಗಳು ಪದೇಪದೇ ಪ್ರಯೋಗದ ವಸ್ತುವನ್ನಾಗಿ ಮಾಡಿಕೊಂಡಿವೆ. ಸೋವಿಯತ್ ಆಕ್ರಮಣ, ಮುಜಾಹಿದೀನ್ ಯುದ್ಧ, ಮೊದಲ ತಾಲಿಬಾನ್ ಆಡಳಿತ, ಅಮೆರಿಕ-ನ್ಯಾಟೊ ಯುದ್ಧ, ಭ್ರಷ್ಟ ಪಾಶ್ಚಾತ್ಯ ಬೆಂಬಲಿತ ಸರ್ಕಾರ ಹಾಗೂ ಈಗ ಮತ್ತೊಮ್ಮೆ ತಾಲಿಬಾನ್ ಆಡಳಿತ – ಪ್ರತಿ ಹಂತದಲ್ಲೂ ಸಾಮಾನ್ಯ ಅಫ್ಘಾನರು ಬೆಲೆ ತೆತ್ತಿದ್ದಾರೆ.

ಅಫ್ಘಾನ್ ಮಾನವ ಹಕ್ಕುಗಳ ಹೋರಾಟಗಾರ್ತಿ ಬೆಲ್ಕಿಸ್ ಅಹ್ಮದಿ ಹೇಳುವಂತೆ, “ಇಂದು ಅಫ್ಘಾನಿಸ್ತಾನ ಎದುರಿಸುತ್ತಿರುವ ಅತಿದೊಡ್ಡ ಅಪಾಯವೆಂದರೆ 2 ಕೋಟಿ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ಅಳಿಸಿಹಾಕುತ್ತಿರುವುದಲ್ಲ, ಬದಲಾಗಿ ಇಡೀ ಜಗತ್ತು ಈ ಕ್ರೂರ ಸತ್ಯದೊಂದಿಗೆ ನಿಧಾನವಾಗಿ ಹೊಂದಿಕೊಂಡು ಜೀವಿಸಲು ಕಲಿಯುತ್ತಿರುವುದು.”

ರಸ್ತೆಯಲ್ಲಿ ಬಂದೂಕು ಹಿಡಿದು ಶಾಂತಿ ಸ್ಥಾಪಿಸಬಹುದು, ಆದರೆ ಶಾಲೆ ಮುಚ್ಚಿ ಜ್ಞಾನವನ್ನು ನಿರ್ಮಿಸಲಾಗುವುದಿಲ್ಲ. ಮಹಿಳೆಯನ್ನು ಮನೆಯೊಳಗೆ ಬಂಧಿಸಿ ಆರ್ಥಿಕತೆಯನ್ನು ಬೆಳೆಸಲಾಗುವುದಿಲ್ಲ. ಪತ್ರಕರ್ತನನ್ನು ಮೌನಗೊಳಿಸಿ ಜವಾಬ್ದಾರಿಯುತ ಆಡಳಿತ ಕಟ್ಟಲಾಗುವುದಿಲ್ಲ. ಜಗತ್ತಿನಿಂದ ಮಾನ್ಯತೆ ಕೇಳುತ್ತಲೇ ತನ್ನದೇ ಜನಸಂಖ್ಯೆಯ ಅರ್ಧ ಭಾಗದ ಮಾನವೀಯ ಅಸ್ತಿತ್ವವನ್ನು ನಿರಾಕರಿಸಲಾಗುವುದಿಲ್ಲ. ಈ ವಾಸ್ತವ ತಾಲಿಬಾನ್‌ಗೆ ಅರ್ಥವಾದಂತಿಲ್ಲ, ಜಗತ್ತಿಗೆ ಇವುಗಳ ಅಗತ್ಯವಿಲ್ಲ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ...