ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸೋಲು ಕಂಡ ಎರಡು ದಿನಗಳ ನಂತರ ಸೂಪರ್ ಸ್ಟಾರ್ ರಜನಿಕಾಂತ್, ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಅವರನ್ನು ಚೆನ್ನೈನ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಸ್ಟ್ಯಾಲಿನ್ ಮತ್ತು ರಜನಿಕಾಂತ್ ಭೇಟಿಯಾಗಿರುವ ಚಿತ್ರ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸಿ, 108 ಸ್ಥಾನಗಳನ್ನು ಗೆದ್ದಿದೆ. ಡಿಎಂಕೆ 59 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಸಫಲವಾಗಿದೆ. ಸ್ಟ್ಯಾಲಿನ್ ತಮ್ಮ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ವಿಎಸ್ ಬಾಬು ವಿರುದ್ಧ ಸುಮಾರು 8,700 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಸದ್ಯ ಟಿವಿಕೆ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಸಿದ್ಧತೆಯಲ್ಲಿದೆ.
ಇದನ್ನು ಓದಿದ್ದೀರಾ? ತಮಿಳುನಾಡು ಚುನಾವಣೆ | ʼಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ !?ʼ : ರಜನಿಕಾಂತ್
ಇನ್ನು ಸ್ಟ್ಯಾಲಿನ್ ಒಂದು ಸ್ಥಾನವನ್ನೂ ಗೆಲ್ಲದ ಕಾರಣ, ಅವರ ಮಗ, ಮಾಜಿ ಉಪಮುಖ್ಯಮಂತ್ರಿ ಮತ್ತು ಚೆಪಾಕ್‌ನ ಪ್ರಸ್ತುತ ಶಾಸಕ ಉದಯನಿಧಿ ಸ್ಟ್ಯಾಲಿನ್ ವಿಪಕ್ಷ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.
ಈ ಎಲ್ಲ ಬೆಳವಣಿಗೆ ನಡುವೆ ರಜನಿಕಾಂತ್ ಸ್ಟ್ಯಾಲಿನ್ ಅವರನ್ನು ಭೇಟಿಯಾಗಿದ್ದಾರೆ. “ನಾನು ಕೇವಲ ನಿಮ್ಮ ಗೆಲುವಿನ ಸಮಯದಲ್ಲಿ ಮಾತ್ರವಲ್ಲ, ಕಷ್ಟದ ಸಮಯದಲ್ಲಿಯೂ ನಿಮ್ಮ ಬೆನ್ನಿಗೆ ನಿಲ್ಲುತ್ತೇನೆ” ಎಂದು ರಜನಿಕಾಂತ್ ಭರವಸೆ ನೀಡಿದ್ದಾರೆ.
1955ರಲ್ಲಿ ರಜನಿಕಾಂತ್ ಅವರು ಡಿಎಂಕೆ ಮೈತ್ರಿಕೂಟವನ್ನು ಬೆಂಬಲಿಸಿದರು. ಡಿಎಂಕೆ ಪರ ಪ್ರಚಾರ ಮಾಡಿದ್ದರು. 1998ರ ಲೋಕಸಭಾ ಚುನಾವಣೆಯಲ್ಲಿಯೂ ಡಿಎಂಕೆ ಬೆಂಬಲಕ್ಕೆ ನಿಂತಿದ್ದರು. ಅದಾದ ಬಳಿಕ 2017ರ ಡಿಸೆಂಬರ್‌ನಲ್ಲಿ ರಜನಿಕಾಂತ್ ಅಧಿಕೃತವಾಗಿ ರಾಜಕೀಯ ಪ್ರವೇಶಿಸುವುದಾಗಿ ಮತ್ತು 2021ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು.
ತಮ್ಮ ರಾಜಕೀಯದ ಸಿದ್ಧಾಂತವನ್ನು ‘ಆಧ್ಯಾತ್ಮಿಕ ರಾಜಕೀಯ’ ಎಂದು ಕರೆಯುತ್ತಿದ್ದ ರಜನಿಕಾಂತ್ ಜಾತಿ ಮತ್ತು ಧರ್ಮ ರಹಿತವಾದ ಪ್ರಾಮಾಣಿಕ, ಪಾರದರ್ಶಕ ಆಡಳಿತದ ಭರವಸೆ ನೀಡಿದ್ದರು. ರಾಜಕೀಯ ಪಕ್ಷದ ಸ್ಥಾಪನೆ ಮಾಡುವ ಉದ್ದೇಶದಿಂದ ತಮ್ಮ ಅಭಿಮಾನಿ ಸಂಘಗಳನ್ನು ಒಗ್ಗೂಡಿಸಿ ರಜನಿ ಮಕ್ಕಳ ಮಂದ್ರಂ (RMM) ಎಂಬ ಸಂಘಟನೆಯನ್ನು ರೂಪಿಸಿದರು.
ಆದರೆ 2020ರ ಡಿಸೆಂಬರ್‌ನಲ್ಲಿ ತಮ್ಮ ಆರೋಗ್ಯ ಸಮಸ್ಯೆಗಳು, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ತಾವು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಿಲ್ಲ, ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದರು. ಹಾಗೆಯೇ 2021ರ ಜುಲೈನಲ್ಲಿ ‘ರಜನಿ ಮಕ್ಕಳ ಮಂದ್ರಂ’ ಸಂಘಟನೆಯನ್ನು ರಜನಿಕಾಂತ್ ವಿಸರ್ಜಿಸಿದರು. ಭವಿಷ್ಯದಲ್ಲಿ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಸ್ಪಷ್ಟಪಡಿಸಿದರು.




