ತನ್ನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ತನ್ನ ಪಾಲುದಾರನನ್ನು ಉನ್ನತ ಕಾನೂನು ಸಂಸ್ಥೆಯೊಂದು ವಜಾಗೊಳಿಸಿದೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಜಾಗೊಳಿಸಲಾಗಿದೆ ಎಂದು ಕಾನೂನು ಸಂಸ್ಥೆಯ ಹಿರಿಯ ನಾಯಕತ್ವವು ದೃಢಪಡಿಸಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ಮಗಳ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಫೆಬ್ರವರಿ 2ರಂದು ತಾಯಿ ತನ್ನ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ತನ್ನ ಪತಿ, ಮಗುವಿನ ತಂದೆ ತಮ್ಮ ಆರು ವರ್ಷದ ಮಗಳ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಾರೆ. ಮಗು ಅವರೊಂದಿಗೆ ಒಂಟಿಯಾಗಿರುವಾಗ ತನ್ನ ಖಾಸಗಿ ಭಾಗಗಳನ್ನು ಸ್ಪರ್ಶಿಸುವಂತೆ ಬಲವಂತ ಮಾಡಿದ್ದಾರೆ. ಈ ರೀತಿಯಾಗಿ ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ಐದು ವರ್ಷದ ಮಗಳ ಮೇಲೆ ತಂದೆಯಿಂದಲೇ ಲೈಂಗಿಕ ದೌರ್ಜನ್ಯ!
ಇನ್ನು ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ಮುಂಬೈನ ವಿಶೇಷ ಪೋಕ್ಸೊ ನ್ಯಾಯಾಲಯ ಮೆಟ್ಟಿಲೇರಿದ್ದಾನೆ. ಆರೋಪಿಯ ಪತ್ನಿ ಈ ಅರ್ಜಿಯನ್ನು ವಿರೋಧಿಸಿದ್ದು ಆರೋಪಗಳ ಗಂಭೀರತೆಯನ್ನು ಒತ್ತಿ ಹೇಳಿದ್ದಾರೆ.
ಆರೋಪಿಯು ಕಾನೂನು ವೃತ್ತಿಪರ ಮತ್ತು ಮಗುವಿನ ತಂದೆ ಇಬ್ಬರೂ ಆಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ಕಾನೂನು ಪ್ರಕ್ರಿಯೆಯನ್ನು ಹಳಿತಪ್ಪಿಸಲು ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಪತ್ನಿ ಆರೋಪಿಸಿದ್ದಾರೆ.
ಹಾಗೆಯೇ ಸಂತ್ರಸ್ತ ಬಾಲಕಿ ಇನ್ನೂ ಸಣ್ಣ ವಯಸ್ಸಿನವಳು. ತನಗೆ ಏನು ಮಾಡಲಾಗಿದೆ ಎಂಬುದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಆರೋಪಿಯ ಪತ್ನಿ, ಸಂತ್ರಸ್ತ ಬಾಲಕಿಯ ತಾಯಿ ಹೇಳಿದ್ದಾರೆ.
ಮಾರ್ಚ್ 16ರಂದು, ನ್ಯಾಯಾಲಯವು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಹಾಗೆಯೇ ತನಿಖೆ ಮುಂದುವರೆಸಲು ಸೂಚಿಸಿದೆ. ಹಾಗೆಯೇ ದಂಪತಿಯ ನಡುವೆ ಇರುವ ವೈವಾಹಿಹ ಮನಸ್ತಾಪಗಳನ್ನೂ ಕೋರ್ಟ್ ಗಮನಿಸಿದೆ.
ಇನ್ನು ವಕೀಲ ರಂಜೀತ್ ಸಾಂಗ್ಲೆ ಮೂಲಕ ಮಗುವಿನ ತಾಯಿ ಜಾಮೀನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಶೀಘ್ರದಲ್ಲೇ ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಮಧ್ಯಪ್ರವೇಶಿಸಿದ ನಂತರವೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅದಕ್ಕೂ ಮುನ್ನ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಲ್ಲ ಎಂದು ತಾಯಿ ದೂರಿದ್ದಾರೆ.
“ನನ್ನ ಪತಿ ಬೇರೆ ಬೇರೆ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಹಲವಾರು ಸ್ಪಷ್ಟ ವಿಡಿಯೋ ರೆಕಾರ್ಡಿಂಗ್‌ಗಳನ್ನು ಹೊಂದಿರುವ ಪೆನ್‌ಡ್ರೈವ್ ನನಗೆ ಸಿಕ್ಕಿದೆ. ಅದನ್ನು ಪ್ರಶ್ನಿಸಿದಾಗ ಅದು ಮದುವೆಗೂ ಹಿಂದಿನದ್ದು ಎಂದು ಹೇಳಿಕೊಂಡಿದ್ದರು. ಆದರೆ ಅವರು ಈಗ ಕಾರ್ಯನಿರ್ವಹಿಸುತ್ತಿರುವ ಕಾನೂನು ಸಂಸ್ಥೆಯ ಸಹೋದ್ಯೋಗಿಯೊಂದಿಗಿರುವ ವಿಡಿಯೋ ಕೂಡಾ ಅದರಲ್ಲಿದೆ. ನಾನು ಆಘಾತಕ್ಕೊಳಗಾಗಿ ಅವರಿಂದ ಬೇರ್ಪಡಲು ನಿರ್ಧರಿಸಿದೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.




