ಅಯೋಧ್ಯೆ ರಾಮ ಮಂದಿರ ನಿರ್ಮಾಣ ನಿಧಿ ದುರುಪಯೋಗ ಪ್ರಕರಣ ಸಂಬಂಧ ಬಗೆದಷ್ಟೂ ಸತ್ಯ ಬಯಲಾಗುತ್ತಿದೆ. ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದಾಗ, 2025ರ ಮೇ ತಿಂಗಳಲ್ಲಿ ‘ಕಳವು ಮಾಡಿದ ಹಣ’ದ ಹಂಚಿಕೆ ಕುರಿತು ಅವರು ಚರ್ಚೆ ನಡೆಸಿರುವುದು ಪತ್ತೆಯಾಗಿದೆ ಎಂಬ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಇದರಿಂದ ನಿಧಿ ದುರುಪಯೋಗ ದೀರ್ಘಕಾಲದಿಂದ ನಡೆಯುತ್ತಿತ್ತು ಎಂಬುದು ಸ್ಪಷ್ಟವಾಗಿದೆ.
ಸದ್ಯ ಜೈಲಿನಲ್ಲಿರುವ ಆರೋಪಿಗಳ ಮೊಬೈಲ್‌ನಿಂದ ಡಿಲೀಟ್ ಮಾಡಲಾಗಿದ್ದ ಚಾಟ್‌ಗಳನ್ನು ಪೊಲೀಸರು ರಿಟ್ರೀವ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಾಟ್‌ಗಳಲ್ಲಿ ಕೋಟಿಗಟ್ಟಲೆ ಮೌಲ್ಯದ ‘ಕಳವು ಮಾಡಿದ ಹಣ’ವನ್ನು ಹಂಚಿಕೊಳ್ಳುವ ವಿಷಯದಲ್ಲಿ ಆರೋಪಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ವಿವಾದವನ್ನು ಬಗೆಹರಿಸಲು ಆರೋಪಿಗಳಲ್ಲಿ ಒಬ್ಬನಾದ ಅವಿನಾಶ್ ಶುಕ್ಲಾ ಮಧ್ಯಸ್ಥಿಕೆ ವಹಿಸಿದ್ದನು. ಗಮನಾರ್ಹವೆಂದರೆ, ಈ ಹಿಂದೆ ಪೊಲೀಸರು ಶುಕ್ಲಾನ ನಿವಾಸದಲ್ಲಿ 20 ಲಕ್ಷ ರೂಪಾಯಿ ನಗದು ಮತ್ತು ಅಮೆರಿಕನ್ ಡಾಲರ್‌ಗಳನ್ನು ವಶಪಡಿಸಿಕೊಂಡಿದ್ದರು. ಇದೇ ಆಧಾರದ ಮೇಲೆ ಜೈಲಿನಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ಏತನ್ಮಧ್ಯೆ, ಅಯೋಧ್ಯೆಯಲ್ಲಿ ವಿಧಿಸಲಾಗಿರುವ ಭದ್ರತಾ ನಿರ್ಬಂಧಗಳ ಬಗ್ಗೆ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ರಾಮ ಮಂದಿರದ ಭದ್ರತೆಯು ರಾಷ್ಟ್ರಪತಿ ಭವನ ಅಥವಾ ಪ್ರಧಾನ ಮಂತ್ರಿಯ ನಿವಾಸದ ಮಾದರಿಯಲ್ಲಿರಲಿ, ಆದರೆ ನಗರದಲ್ಲಿ ಅನಗತ್ಯ ತಡೆಗೋಡೆಗಳನ್ನು ನಿರ್ಮಿಸಿ ಜನರಿಗೆ ತೊಂದರೆ ನೀಡುವುದು ಸರಿಯಲ್ಲ” ಎಂದಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಚಂದಾ ವಿವಾದ: ಉನ್ನತ ಮಟ್ಟದ ತನಿಖೆಗೆ ಅಯೋಧ್ಯೆ ಸಂಸದ ಅವಧೇಶ್ ಪ್ರಸಾದ್ ಒತ್ತಾಯ
ಮತ್ತೊಂದೆಡೆ, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ್ ಅವರು ಟ್ರಸ್ಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ನಾನು 2004ರಲ್ಲಿಯೇ ರಾಮ ಮಂದಿರ ಟ್ರಸ್ಟ್‌ಗೆ ‘ಚಿನ್ನ ಲೇಪಿತ ರಾಮಚರಿತ ಮಾನಸ’ವನ್ನು ದೇಣಿಗೆಯಾಗಿ ನೀಡಿದ್ದೆ. ಆದರೆ, ಈವರೆಗೂ ನನಗೆ ಅದಕ್ಕೆ ಯಾವುದೇ ರಶೀದಿ ನೀಡಿಲ್ಲ” ಎಂದು ಟಿವಿ ವಾಹಿನಿಯೊಂದರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಹಲವು ಬಾರಿ ಕೇಳಿಕೊಂಡರೂ ಟ್ರಸ್ಟ್ ಪದಾಧಿಕಾರಿಗಳು ರಶೀದಿ ನೀಡಲು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.




