ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಮತ್ತು ಚಂದಾ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ವಿವಾದ ತೀವ್ರಗೊಂಡಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಫೈಜಾಬಾದ್ (ಅಯೋಧ್ಯೆ) ಕ್ಷೇತ್ರದ ಸಂಸದ ಅವಧೇಶ್ ಪ್ರಸಾದ್, “ಇದು ಕೋಟ್ಯಂತರ ಭಕ್ತರ ಆಸ್ತೆ ಮತ್ತು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಉನ್ನತ ಮಟ್ಟದ ತನಿಖೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.
ರಾಮಮಂದಿರದಲ್ಲಿ ಭಕ್ತರು ಸಮರ್ಪಿಸಿದ ದಾನದ ಹಣದ ಕುರಿತು ಕೇಳಿಬರುತ್ತಿರುವ ಆರೋಪಗಳು ತೀವ್ರ ಕಳವಳಕಾರಿಯಾಗಿವೆ. ಈ ಇಡೀ ಪ್ರಕರಣವು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಒಂದು ವೇಳೆ ಈ ಆರೋಪಗಳು ನಿಜವೆಂದು ಸಾಬೀತಾದರೆ, ಇದು ಕೇವಲ ಆರ್ಥಿಕ ಹಗರಣ ಮಾತ್ರವಲ್ಲ, ಕೋಟ್ಯಂತರ ರಾಮಭಕ್ತರ ನಂಬಿಕೆಗೆ ಬಗೆದ ವಿಶ್ವಾಸ ದ್ರೋಹ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ತನಿಖೆ ಪೂರ್ಣಗೊಳ್ಳುವವರೆಗೆ ರಾಮಮಂದಿರ ಟ್ರಸ್ಟ್‌ನ ಜವಾಬ್ದಾರಿಯುತ ಪದಾಧಿಕಾರಿಗಳನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಬೇಕು. ಈ ವಿಷಯ ಸಾರ್ವಜನಿಕವಾಗಿ ಬಯಲಿಗೆ ಬಂದು ಇಷ್ಟು ದಿನಗಳಾಗಿದ್ದರೂ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಜನರ ಮನಸ್ಸಿನಲ್ಲಿ ಹಲವು ಅನುಮಾನಗಳು ಮೂಡಲು ಕಾರಣವಾಗಿದೆ” ಎಂದಿದ್ದಾರೆ.
“ಉತ್ತರ ಪ್ರದೇಶ ಸರ್ಕಾರ ರಚಿಸಿರುವ SIT ತನಿಖೆಯಿಂದ ನಮಗೆ ನ್ಯಾಯ ಸಿಗುವ ಯಾವುದೇ ಭರವಸೆ ಇಲ್ಲ. ಈ ವಿಷಯ ಕೇವಲ ಉತ್ತರ ಪ್ರದೇಶ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಮಮಂದಿರವು ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ. ಆದ್ದರಿಂದ ಇದರ ತನಿಖೆಯು ಅತ್ಯುನ್ನತ ಮಟ್ಟದಲ್ಲಿಯೇ ನಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ದುರುಪಯೋಗ: ಎಸ್‌ಐಟಿ ರಚನೆ, ಉದ್ಯೋಗಿ ಬಂಧನ
ತನಿಖೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳಲು ಹಾಗೂ ಭಕ್ತರಲ್ಲಿ ವಿಶ್ವಾಸವನ್ನು ಮರುಸ್ಥಾಪಿಸಲು ಈ ಇಡೀ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ಸಮಿತಿಗೆ ವಹಿಸಬೇಕು ಎಂದು ಸಂಸದ ಅವಧೇಶ್ ಪ್ರಸಾದ್ ಒತ್ತಾಯಿಸಿದ್ದಾರೆ.




