ಅತ್ಯಾಚಾರ ಆರೋಪಿ ಮತ್ತು ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಬಂಧನ ಮಾಡಲಾಗಿದ್ದು ಸದ್ಯ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಈ ನಡುವೆ ಹಲವಾರು ಮಂದಿ ದೂರು ನೀಡಲು ಮುಂದೆ ಬಂದಿದ್ದಾರೆ. ಕಳೆದ ಐದು ದಿನಗಳಲ್ಲಿ ಮಾಹಿತಿ ನೀಡುವ ಉದ್ದೇಶದಿಂದ ಅಥವಾ ತಮ್ಮ ಮೇಲೂ ಅತ್ಯಾಚಾರ ನಡೆದಿದೆ ಎಂದು ದೂರು ನೀಡಲು 50ಕ್ಕೂ ಹೆಚ್ಚು ಮಂದಿ ಕರೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ನೇಮಿಸಿದ ಎಸ್‌ಐಟಿ ಈ ಹಿಂದೆ ಖರತ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಅಥವಾ ದೂರು ನೀಡಲು ಸಹಾಯವಾಣಿಯನ್ನು ಪ್ರಕಟಿಸಿದೆ. ಲೈಂಗಿಕ ದೌರ್ಜನ್ಯ, ಸುಲಿಗೆ ಸೇರಿದಂತೆ ಹಲವಾರು ದೂರುಗಳು ಸದ್ಯ ಖರತ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಎಂಟು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಪ್ರತಿ ದಿನ ಸರಾಸರಿ 15-20 ಕರೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗೋವಾದಲ್ಲೊಬ್ಬ ‘ಪ್ರಜ್ವಲ್ ರೇವಣ್ಣ’ – ಬಿಜೆಪಿ ಕೌನ್ಸಿಲರ್‌ನ 20 ವರ್ಷದ ಮಗನ ಕಾಮತೃಷೆಗೆ ಬಾಲಕಿಯರ ಬಲಿ
ಅಶೋಕ್ ಖರತ್ ನಾಸಿಕ್ ಜಿಲ್ಲೆಯ ಸಿನ್ನಾರ್‌ನಲ್ಲಿರುವ ದೇವಾಲಯ ಟ್ರಸ್ಟ್‌ನ ಮುಖ್ಯಸ್ಥರಾಗಿದ್ದು, ಹಲವಾರು ರಾಜಕೀಯ ನಾಯಕರು ಅವರನ್ನು ಭೇಟಿ ಮಾಡಿದ್ದರು. ಮಾರ್ಚ್ 18ರಂದು 35 ವರ್ಷದ ಮಹಿಳೆಯೊಬ್ಬರು ಮೂರು ವರ್ಷಗಳ ಅವಧಿಯಲ್ಲಿ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಈ ಸ್ವಯಂ ಘೋಷಿತ ದೇವಮಾನವನ ಬಂಧನ ಮಾಡಲಾಗಿದೆ. ಈ ಬಂಧನದ ಬಳಿಕ ಅಶೋಕ್ ವಿರುದ್ಧ ಹಲವಾರು ಅತ್ಯಾಚಾರ ದೂರುಗಳು ದಾಖಲಾಗಿವೆ.
ವಿಧಿವಿಜ್ಞಾನ ತಂಡದೊಂದಿಗೆ ಶುಕ್ರವಾರ ಎಸ್‌ಐಟಿ ನಾಸಿಕ್‌ನಲ್ಲಿರುವ ಖರತ್ ಕಚೇರಿಗೆ ಭೇಟಿ ನೀಡಿದೆ. ಪೊಲೀಸ್ ಅಧಿಕಾರಿಗಳ ತಂಡವು ಕಚೇರಿಯಿಂದ ಹಲವಾರು ದಾಖಲೆಗಳು, ಡೈರಿ ಮತ್ತು ಕಾಗದಪತ್ರಗಳನ್ನು ವಶಪಡಿಸಿಕೊಂಡಿದೆ. ಹಾಗೆಯೇ ನಾಸಿಕ್ ಜಿಲ್ಲಾಡಳಿತವು ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯೂ ಆಗಿರುವ ಖರತ್ ಶಸ್ತ್ರಾಸ್ತ್ರ ಪರವಾನಗಿಯನ್ನು ಅಮಾನತುಗೊಳಿಸಿದೆ.




