ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಟೆಲಿಗ್ರ್ಯಾಮ್ ಸಂಸ್ಥೆ ಮತ್ತು ಅದರ ಸಿಇಒ ಪಾವೆಲ್ ಡುರೊವ್ ತೀವ್ರ ಆಕ್ರೋಶ ಹೊರಹಾಕಿದ್ದು, ಭಾರತ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಈಗಾಗಲೇ ದೆಹಲಿ ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ನೇತೃತ್ವದ ಪೀಠವು ಈ ಅರ್ಜಿಯ ತುರ್ತು ವಿಚಾರಣೆಗೆ ಸಮ್ಮತಿಸಿದೆ. ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ನೇರ ವಾಗ್ದಾಳಿ ನಡೆಸಿರುವ ಪಾವೆಲ್, ಮೋದಿ ಸರ್ಕಾರದ ಈ ಕ್ರಮವು ಪೇಪರ್ ಲೀಕ್ ಮಾಡಿದ ಅಸಲಿ ಅಪರಾಧಿಗಳನ್ನು ಹಿಡಿಯುವಲ್ಲಿನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೈಗೊಂಡಿರುವ ಹತಾಶ ಯತ್ನವಾಗಿದೆ ಎಂದು ಟೀಕಿಸಿದ್ದಾರೆ. ಪರೀಕ್ಷಾ ಮಂಡಳಿಯ ಒಳಗಿನ ಲೋಪದೋಷಗಳನ್ನು ಸರಿಪಡಿಸುವ ಬದಲು, ದೇಶದಲ್ಲಿ ಶೈಕ್ಷಣಿಕ ಮತ್ತು ವೃತ್ತಿಪರ ಕೆಲಸಗಳಿಗಾಗಿ ಈ ಆ್ಯಪ್ ಬಳಸುತ್ತಿದ್ದ 15 ಕೋಟಿಗೂ ಹೆಚ್ಚು ಸಾಮಾನ್ಯ ಭಾರತೀಯ ಬಳಕೆದಾರರಿಗೆ ಸರ್ಕಾರ ಅನಗತ್ಯವಾಗಿ ತೊಂದರೆ ಕೊಟ್ಟಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, ಇಡೀ ಪ್ಲಾಟ್‌ಫಾರ್ಮ್ ಅನ್ನು ನಿಷೇಧಿಸಿರುವುದರಿಂದ ಪರೀಕ್ಷಾ ಅಕ್ರಮಗಳೇನೂ ನಿಲ್ಲುವುದಿಲ್ಲ, ಬದಲಿಗೆ ವಂಚಕರು ಬೇರೆ ಆ್ಯಪ್‌ಗಳಿಗೆ ವಲಸೆ ಹೋಗಲಿದ್ದಾರಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಪರೀಕ್ಷಾ ವಂಚನೆ ನಡೆಸುತ್ತಿದ್ದ ನೂರಾರು ಚಾನಲ್‌ಗಳನ್ನು ಭಾರತೀಯ ಸೈಬರ್ ಪೊಲೀಸರ ಕೋರಿಕೆಯ ಮೇರೆಗೆ ಈಗಾಗಲೇ ಡಿಲೀಟ್ ಮಾಡಿದ್ದರೂ, ಸರ್ಕಾರ ಇಡೀ ಆ್ಯಪ್ ಅನ್ನೇ ನಿರ್ಬಂಧಿಸಿರುವುದು ದೊಡ್ಡ ತಪ್ಪು ನಿರ್ಧಾರ ಎಂದು ಅವರು ವಾದಿಸಿದ್ದಾರೆ. ಇಂಟರ್ನೆಟ್ ಸ್ವಾತಂತ್ರ್ಯ ಪರ ಹೋರಾಡುವ ದೇಶದ ಹಲವು ಸ್ವತಂತ್ರ ಸಂಸ್ಥೆಗಳೂ ಸಹ ಸರ್ಕಾರದ ಈ ಕ್ರಮವನ್ನು “ಅಪ್ರಾಯೋಗಿಕ” ಎಂದು ಕರೆದಿದ್ದಾರೆ.
ಮೇ ತಿಂಗಳಲ್ಲಿ ನಡೆದಿದ್ದ ಮೊದಲ ಪರೀಕ್ಷೆಯ ಪೇಪರ್ ಲೀಕ್ ಆಗಿದ್ದನ್ನು ತಡೆಯಲು ಸಾಧ್ಯವಾಗದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಗೃಹ ಸಚಿವಾಲಯ, ಈಗ ಈ ಕ್ರಮಕ್ಕೆ ಮುಂದಾಗಿವೆ. ಟೆಲಿಗ್ರ್ಯಾಮ್‌ನಲ್ಲಿ ಸಕ್ರಿಯವಾಗಿದ್ದ “PAPER LEAKED NEET”, “Private Mafia” ನಂತಹ ಗ್ರೂಪ್‌ಗಳು ವಿದ್ಯಾರ್ಥಿಗಳಿಂದ ಮತ್ತು ಪೋಷಕರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದವು. ಒಂದು ಗ್ರೂಪ್ ಬ್ಯಾನ್ ಮಾಡಿದರೆ ವಂಚಕರು ಕೆಲವೇ ನಿಮಿಷಗಳಲ್ಲಿ ಮತ್ತೊಂದು ಗ್ರೂಪ್ ಸೃಷ್ಟಿಸುತ್ತಿದ್ದರು. ಹಾಗಾಗಿ ಇಡೀ ಆ್ಯಪ್ ಅನ್ನೇ ನಿಷೇಧಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: NEET ಮರುಪರೀಕ್ಷೆ | ಭಾರತದಲ್ಲಿ ಟೆಲಿಗ್ರಾಮ್ ಆ್ಯಪ್ ತಾತ್ಕಾಲಿಕ ಬ್ಯಾನ್!
ಅಲ್ಲದೆ, ಟೆಲಿಗ್ರ್ಯಾಮ್ ಆ್ಯಪ್‌ನಲ್ಲಿ ಹಳೆಯ ಪೋಸ್ಟ್‌ಗಳನ್ನು ಎಡಿಟ್ ಮಾಡಿ ಹೊಸ ಫೈಲ್ ಹಾಕಿದರೂ ಹಳೆಯ ಸಮಯವೇ (Timestamp) ತೋರಿಸುವ ತಾಂತ್ರಿಕ ವ್ಯವಸ್ಥೆ ಇದೆ. ಪರೀಕ್ಷೆ ಮುಗಿದ ನಂತರ ಅಸಲಿ ಪ್ರಶ್ನೆಪತ್ರಿಕೆಯನ್ನು ಹಳೆಯ ಪೋಸ್ಟ್‌ಗೆ ಎಡಿಟ್ ಮಾಡಿ ಸೇರಿಸಿ, ಪರೀಕ್ಷೆಗೂ ಮುನ್ನವೇ ಲೀಕ್ ಆಗಿದೆ ಎಂಬಂತೆ ಬಿಂಬಿಸಿ ವಂಚಕರು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದರು. ಈ ‘ಟೈಮ್‌ಸ್ಟ್ಯಾಂಪ್ ಫ್ರಾಡ್’ ಅನ್ನು ಹತ್ತಿಕ್ಕಲು ವಿಫಲವಾಗಿರುವ ಐಟಿ ಸಚಿವಾಲಯ, ಆ್ಯಪ್ ನಿಷೇಧಿಸುವುದರ ಜೊತೆಗೆ ಜೂನ್ 30 ರವರೆಗೆ ಭಾರತದಲ್ಲಿ ಹಳೆಯ ಸಂದೇಶಗಳನ್ನು ಎಡಿಟ್ ಮಾಡುವ ಸೌಲಭ್ಯವನ್ನೂ ಸ್ಥಗಿತಗೊಳಿಸಿದೆ.
ಈಗ ಜೂನ್ 21 ರ ಮರುಪರೀಕ್ಷೆಯ ಸಂದರ್ಭದಲ್ಲಿ ಮುಖಭಂಗದಿಂದ ಬಚಾವಾಗಲು ಹತಾಶ ಯತ್ನಗಳಿಗೆ ಕೈಹಾಕಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯವು ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಈ ತುರ್ತು ಆದೇಶ ಹೊರಡಿಸಿದ್ದು, ಪರೀಕ್ಷೆ ಮುಗಿಯುವವರೆಗೆ ದೇಶದಲ್ಲಿ ಆ್ಯಪ್ ಸಂಪೂರ್ಣ ಬಂದ್ ಆಗಲಿದೆ. ಸದ್ಯ ಈ ಕ್ರಮದ ಕುರಿತು ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಬಳಕೆದಾರರೂ ಅಸಮಾಧಾನ ಹೊರ ಹಾಕಿ, ಪೇಪರ್ ಲೀಕ್ ಮಾಫಿಯಾವನ್ನು ಬುಡಸಹಿತ ಕಿತ್ತೊಗೆಯುವ ಬದಲು ಇಡೀ ಆ್ಯಪ್ ನಿಷೇಧಿಸಿರುವುದು ಸರ್ಕಾರದ ಅಸಹಾಯಕತೆಯನ್ನು ಎದ್ದು ಕಾಣಿಸುವಂತೆ ಮಾಡಿದೆ ಎನ್ನುತ್ತಿದ್ದಾರೆ.




